ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗವೆ ನಿಮ್ಮ ನೆನೆವ ಮನಕ್ಕೆ ಹೊನ್ನ ತೋರಿ, ನಿಮ್ಮ ನೋಡುವ ನೋಟಕ್ಕೆ ಹೆಣ್ಣ ತೋರಿ, ನಿಮ್ಮ ಪೂಜಿಸುವ ಕೈಗೆ ಮಣ್ಣ ತೋರಿ, ಮತ್ತೆ ಗಣಂಗಳ ಸಾಕ್ಷಿಯಾಗಿದ್ದುದ ತಿಳಿದು ಅವರಿಗೆ ಅಂಜಿ ಮನದ ಕೊನೆಯಲ್ಲಿ ಮಂತ್ರರೂಪಾಗಿ ನಿಂದ ಕಾರಣ ಹೊನ್ನಿನ ನೆನಹು ಕೆಟ್ಟಿತ್ತು ನೋಡಾ ! ಪರಶಿವಮೂರ್ತಿಯ ಮುದ್ದುಮೊಗದ ತುಟಿಯಲ್ಲಿ ಹುಟ್ಟಿದ ಓಂಕಾರನಾದಾಮೃತವ ಚುಂಬನವ ಮಾಡಲಿಕ್ಕೆ ಹೆಣ್ಣಿನ ನೋಟ ಕೆಟ್ಟಿತ್ತು. ಕರಕಮಲ ಗದ್ದುಗೆಯ ಮಾಡಿದ ಕಾರಣ ಮಣ್ಣಿನ ಧಾವತಿ ಬಿಟ್ಟುಹೋಯಿತ್ತು. ಇಂತು ಮಾಡಿದಿರಿ ಲಿಂಗವೆ, ಮತ್ತೆ ನಿಮ್ಮ ಬೇಡಿದಡೆ ಅಷ್ಟೈಶ್ವರ್ಯ ಚತುರ್ವಿಧಪದಗಳನು ಕೊಡುವಿರಿ. ಇವೆಲ್ಲ ಅಲ್ಪಸುಖ, ತಾಮಸಕಿಕ್ಕುವವು. ಮತ್ತೆ ನಮ್ಮ ಗಣಂಗಳ ಮನೆಯಲ್ಲಿ ಕೇಡಿಲ್ಲದಂತಹ ನಿತ್ಯವಾದ ವಸ್ತು ಅಷ್ಟೈಶ್ವರ್ಯಗಳುಂಟು, ನಿದ್ಥಿ ನಿಧಾನಗಳುಂಟು, ಇದಕ್ಕೆ ನಾವು ನೀವು ಬೇಡಿಕೊಂಬುವ ಬನ್ನಿರಿ. ಅವರಿರುವ ಸ್ಥಲವ ತೋರಿಕೊಡಿ ಎಲೆ ಲಿಂಗವೆ. ಅವರು ಎಲ್ಲಿ ಐದಾರೆಯೆಂದಡೆ : ಏಳುಪ್ಪರಿಗೆಯೊಳಗಿಪ್ಪರು. ಅವರ ನಾಮವ ಪೇಳ್ವೆನು - ಪಶ್ಚಿಮಚಕ್ರದಲ್ಲಿ ನಿರಂಜನ ಜಂಗಮವು, ಗುರು-ಹಿರಿಯರು ಅಸಂಖ್ಯಾತ ಮಹಾಗಣಂಗಳು ಸಹವಾಗಿಪ್ಪರು. ಅವರ ಮಧ್ಯದಲ್ಲಿ ನೀವೆ ನಾವಾಗಿ ಬೇಡಿಕೊಂಬೆವು. ಬೇಡಿಕೊಂಡ ಮೇಲೆ ಅವರು ಕೊಟ್ಟ ವಸ್ತುವ ಹೇಳಿಹೆನು ಕೇಳಿರೆ ಲಿಂಗವೆ. ಅವು ಯಾವುವೆಂದಡೆ : ಜೀವಾತ್ಮ ಅಂತರಾತ್ಮ ಪರಮಾತ್ಮರೆಂಬ ಆತ್ಮತ್ರಯರು, ಹೇಮಾದ್ರಿ ರಜತಾದ್ರಿ ಮಂದರಾದ್ರಿಯೆಂಬ ಮೇರುಗಳ ಸೆಜ್ಜೆಯ ಮಾಡಿ, ವಾಯುವನೆ ಶಿವದಾರವ ಮಾಡಿ, ತನುತ್ರಯವನೆ ವಸ್ತ್ರವ ಮಾಡಿ, ಇವುಗಳನೆ ಅವರು ನಮಗೆ ಕೊಟ್ಟರು. ಅಲ್ಲದೆ ಪರಸ್ತ್ರೀಯರ ಅಪ್ಪದ ಹಾಗೆ ನಿಃಕಾಮವೆಂಬ ಉಡುಗೊರೆಯ ಮಾಡಿ ಕಟ್ಟಿನಲ್ಲಿಟ್ಟರು. ಕುಶಬ್ದವ ಕೇಳದ ಹಾಗೆ ಬಲದ ಕರ್ಣದಲ್ಲಿ ಷಡಕ್ಷರವೆಂಬ ವಸ್ತುವ ಮಾಡಿಯಿಟ್ಟರು. ಪಂಚಾಂಗುಲಿಗೆ ಪಂಚಾಕ್ಷರವೆ ಐದುಂಗುರವ ಮಾಡಿಯಿಟ್ಟರು. ನೂರೆಂಟು ನಾಮ ಹರಗÀಣ ಕೊರಳಲಿ ಹಾಕಿದರು. ಆಪತ್ತಿಗೆ ಅಂಜಬೇಡೆಂದು ವಿಭೂತಿಧೂಳನ ಧಾರಣವಮಾಡಿ ಜೋಡಂಗಿಯ ಮಾಡಿ ತೊಡಿಸಿದರು. ಗಣಂಗಳು ಹೋದ ಹಾದಿಯನೆ ಮುಂಡಾಸವ ಮಾಡಿ ತಲೆಗೆ ಸುತ್ತಿದರು. ಆವ ಕಂಟಕವು ಬಾರದ ಹಾಗೆ ಗಣಂಗಳ ಪಾದಧೂಳನವ ಸೆಲ್ಲೆಯ ಮಾಡಿ ಹೊದಿಸಿದರು. ಭಕ್ತಿಯೆಂಬ ನಿಧಾನವ ಕೊಟ್ಟು, ಭಾವದಲ್ಲಿ ಬಚ್ಚಿಟ್ಟುಕೊಳ್ಳಿರಿ ಎಂದರು. ಅಷ್ಟಾವರಣವೆ ನಿದ್ಥಿನಿಧಾನವೆಂದು ಹೇಳಿದರು. ಇವೆಲ್ಲ ವಸ್ತುಗಳ ನಿಮ್ಮ ನೋಡಿ ಕೊಟ್ಟರಲ್ಲದೆ ಬೇರಿಲ್ಲ. ನಿಮ್ಮ ದಾಸಾನುದಾಸಯೆಂದು ನಿಮ್ಮೊಡವೆಯ ನಿಮಗೊಪ್ಪಿಸು ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಅಯ್ಯ ಲಿಂಗಾಂಗ ಸಮರಸ ಹೇಗುಂಟೆಂದರೆ: ಸುಚಿತ್ತಕಮಲ ಮೊದಲಾಗಿ ಆಯಾಯ ಕರಸ್ಥಲದಲ್ಲಿ ಮೂರ್ತಗೊಂಡಿರುವ ಸುಜ್ಞಾನಜಂಗಮ ಸ್ವರೂಪನಾದ ಇಷ್ಟ ಮಹಾಲಿಂಗದ ಗರ್ಭದಲ್ಲಿ ತನ್ನಂಗವ ಬಿಟ್ಟು; ಎರಡು ನೇತ್ರ ಒಂದಾದ ಲಲಾಟನೇತ್ರದಲ್ಲಿ ಇಷ್ಟಲಿಂಗವನು ಮುಳುಗಿಸುವುದೀಗ ಲಿಂಗಾಂಗಸಂಗಸಮರಸವು ನೋಡಾ. ಆ ಇಷ್ಟ ಮಹಾಲಿಂಗ ನೇತ್ರದರ್ಪಣದಲ್ಲಿ ಪ್ರತಿಬಿಂಬವಾಗಿ ಮನೋನೇತ್ರಕ್ಕೆ ಒಂದೆರಡಾಗಿ ಕಾಣಲ್ಪಡುವುದೀಗ ಪ್ರಾಣಲಿಂಗವು. ಆ ಪ್ರಾಣಲಿಂಗಹಸ್ತಂಗಳೆಂಬ ಎರಡರಲ್ಲಿ ನೇತ್ರದ್ವಯವೆಂಬ ಕುಚಂಗಳೆರಡ ಹಿಡಿವುದೀಗ ಲಿಂಗಾಂಗಸಂಗಸಮರಸವು [ನೋಡಾ] ರೂಪು ರೇಖೆವಿಭ್ರಮ ವಿಲಾಸಕಳಾಲಾವಣ್ಯಸ್ವರೂಪವಾದ ಹರಶಿವ ಬ್ರಹ್ಮಮೂರ್ತಿಯ ಮುದ್ದು ಮುಖದ ಆಧಾರದಲ್ಲಿ ಓಂಕಾರನಾದಾಮೃತವ ತಾ ಚುಂಬನ ಮಾಡಲ್ಕೆ ಚಿತ್‍ಶಕ್ತಿಸ್ವರೂಪಮಪ್ಪ ತನ್ನ ಮುದ್ದುಮುಖದ ಆಧಾರದಲ್ಲಿ ಹುಟ್ಟಿದ ನಕಾರಾದಿ ಪಂಚಪ್ರಣಮಂಗಳು ಆ ಪಂಚಬ್ರಹ್ಮ ಚುಂಬನವ ಮಾಡಲ್ಕೆ ಇದು ಲಿಂಗಾಂಗ ಸಮರಸವು. ಇದು ಶರಣಸತಿ ಲಿಂಗಪತಿ ನ್ಯಾಯವು. ಇದು ಶ್ರೀ (ತ್ರಿ?)ತನುವ ಲಿಂಗಕ್ಕರ್ಪಿಸುವ ಕ್ರಮವು. ತನ್ನಲ್ಲಿ ತನ್ನ ತೋರಿ ನನ್ನಲ್ಲಿ ನನ್ನ ತೋರಿದನಾಗಿ ನಾನು ನೀನೆಂಬುದಿಲ್ಲ ನೀನು ನಾನೆಂಬುದಿಲ್ಲ, ತಾನೆ ತಾನಾದುದು. ಬಯಲು ಬಯಲು ಕೂಡಿದ ಹಾಗೆ, ಮಾತು ಮಾತ ಕಲಿವ ಹಾಗೆ ಪರಶಿವಲಿಂಗದಲ್ಲಿ ನಿಜದೃಷ್ಟಿ ಕರಿಗೊಂಡ ಮೇಲೆ ಗುಹ್ಯಕ್ಕೆ ಗುಹ್ಯ ಗೋಪ್ಯಕ್ಕೆ ಗೋಪ್ಯ ರಹಸ್ಯಕ್ಕೆ ರಹಸ್ಯ. ಇದ ಗುಹೇಶ್ವರನೆ ಬಲ್ಲನಲ್ಲದೆ, ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಾ ?
--------------
ಅಲ್ಲಮಪ್ರಭುದೇವರು
-->