ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾ ಯೋನಿಯಲ್ಲಿ ತಿರುಗಿ ಬಂದನಾಗಿ ಗುರುವಲ್ಲ. ನಾನಾ ಶಿಲೆಯಲ್ಲಿ ರೂಹಿಟ್ಟು ಬಂದುದಾಗಿ ಲಿಂಗವಲ್ಲ. ನಾನಾ ಯಾಚಕ ವಿಕಾರದಿಂದ ತಿರುಗುವನಾಗಿ ಜಂಗಮವಲ್ಲ. ಜನನರಹಿತ ಗುರು, ಅವತಾರರಹಿತ ಲಿಂಗ, ಮರಣರಹಿತ ಜಂಗಮ. ಹೀಗಲ್ಲದೆ ತ್ರಿವಿಧವ ಕಳೆಯಬಾರದು. ತ್ರಿವಿಧಕ್ಕೆ ತ್ರಿವಿಧವನಿತ್ತು, ಗುರುವಿನ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಲಿಂಗದ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಜಂಗಮದ ಹಂಗ ಮರೆಯಬೇಕು. ಮೂರರೊಳಗಾದ ಆರು ಕೊಟ್ಟು, ಐದನಿರಿಸಿಕೊಂಡು, ಇಪ್ಪತ್ತೈದರ ಲೆಕ್ಕದಲ್ಲಿರಿಸಿ, ಐವತ್ತೊಂದು ಬಿಂದುವಿನಲ್ಲಿ ಹೊಂದಿಸಿ, ಓಂಕಾರವಪ್ಪ ಪ್ರಣಮವ ಪರಿಣಾಮಿಸಿ, ವ್ಯಾಪಾರದ ಲತೆಯ ಬಳ್ಳಿಯ ಬೇರ ಕಿತ್ತು, ಪರ್ವಿ ಪ್ರಕಾರದಿಂದ ಉರ್ವಿಯ ಸುತ್ತಿಮುತ್ತಿ ಬೆಳೆದ ಚಿತ್ತಬಿದಿರಿನ ನಡುವಿದ್ದ ಹುತ್ತದ ಬಹುಮುಖದ ಸರ್ಪನ ಹಿಡಿದು, ಕಾಳೋರಗನಂ ಬೇರು ಮಾಡಿ, ಲೀಲೆಗೆ ಹೊರಗಾಗಿ ಭಾಳಲೋಚನನಂ ಕೀಳುಮಾಡಿ, ಬಾಲೆಯರ ಬಣ್ಣಕ್ಕೆ ಸೋಲದೆ, ಕಾಳುಶರೀರವೆಂಬ ಒತ್ತರಂಗೊಳ್ಳದೆ, ಗತಿ ಮತಿ ಗುಣ ಸಂಸರ್ಗ ವಿಪಿನ ಕಂಟಕಕ್ಕೊಳಗಾಗದೆ, ಪಿಂಡಪ್ರಾಣದ ವಾಯುಸಂಚಾರಕ್ಕೀಡುಮಾಡದೆ, ಅರಿದೆನೆಂಬುದಕ್ಕೆ ಕುರುಹಿಲ್ಲದೆ, ಕುರುಹಿಗೆ ಅವಧಿಗೊಡಲಿಲ್ಲದೆ, ಹುಸಿ ಮಸಿಯ ಮಣಿಮಾಡದಲ್ಲಿ ಒರಗದೆ, ಪರಿಣಾಮವೇ ಪಥ್ಯವಾಗಿ, ಅಂತರಂಗಶುದ್ಧಿ ಪರಿಪೂರ್ಣವಾಗಿ ನಿಂದು, ಸಂಸಾರಕ್ಕೆ ಸಿಕ್ಕದೆ, ನಿಂದ ನಿಜ ತಾನಾಗಿ ಲಿಂಗೈಕ್ಯವು. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗದಲ್ಲಿ ನಿರ್ಲೇಪವಾ[ದುದೇ] ಶರಣಸ್ಥಲ.
--------------
ಮೋಳಿಗೆ ಮಾರಯ್ಯ
ಆ ಪರಬ್ರಹ್ಮವೆ ಓಂಕಾರವಪ್ಪ ಪ್ರಣವಸ್ವರೂಪು, ಪರಮಾತ್ಮನೆನಿಸಿ ಪರಶಿವನಾಮದಿಂ ಪರಶಕ್ತಿಸಂಯುಕ್ತವಾಗಿ, ಆಕಾರ ಉಕಾರ ಮಕಾರವೆಂಬ ಬೀಜಾಕ್ಷರಂಗಳಿಂ ನಾದಬಿಂದುಕಳೆಯಾಗಿ, ದಶನಾಡಿ ದಶವಾಯು ದಶವಿಧೇಂದ್ರಿಯ ಸಪ್ತಧಾತು ಷಡುಚಕ್ರ ಷಡುವರ್ಗ ಪಂಚಭೂತ ಚತುರಂತಃಕರಣ, ತ್ರಿದೋಷಪ್ರಕೃತಿ, ತ್ರಯಾವಸ್ಥೆ, ಸತ್ವ ರಜ ತಮ, ಅಂಗ ಪ್ರಾಣ, ಅರಿವು ಭಾವ ಜ್ಞಾನ, ಮೊದಲಾದ ಬಾಹತ್ತರ ವಿನಿಯೋಗಮಂ ತಿಳಿದು ಭೂಲೋಕ ಭುವರ್ಲೋಕ ಸ್ವರ್ಲೋಕ ಮಹರ್ಲೋಕ ಜನಲೋಕ ತಪೋಲೋಕ, ಸತ್ಯಲೋಕ, ಅತಳ, ವಿತಳ, ಸುತಳ, ಮಹಾತಳ, ರಸಾತಳ, ತಳಾತಳ, ಪಾತಾಳಂಗಳೊಳಗಾದ ಚತುರ್ದಶಭುವನಂಗಳೊಳಹೊರಗೆ ಅಂತರ್ಗತ ಬಹಿರ್ಗತವಾಗಿ, ನಾದಮಂ ತೋರಿ ಭರ್ಗೋದೇವನೆಂಬ ನಾಮಮಂ ತಳೆದು ಊಧ್ರ್ವರೇತುವೆನಿಸಿ, ವಿಶ್ವತೋಮುಖ, ವಿಶ್ವತಶ್ಚಕ್ಷು, ವಿಶ್ವತೋ ಬಾಹು, ವಿಶ್ವತಃಪಾದದಿಂ ವಿಶ್ವಗರ್ಭೀಕೃತವಾಗಿ, ಉತ್ಪತ್ತ್ಯಸ್ಥಿತಿಲಯಂಗಳನೆಣಿಕೆಗೆಯ್ಯದೆ ದೇವತಾಂತರದಿಂ ಮಾನಸಾಂತರವನನುಕರಿಸಿ, ಮಾನಸದಲ್ಲಿ ರವಿಕೋಟಿತೇಜದಿಂ ಸಕಲಪಾಪಾಂಧಕೂಪಮಂ ತೊಳೆದು ಸುರಕ್ಷಿತದಿಂ ಪ[ರಾ] ಪಶ್ಯಂತಿ ಸುಮಧ್ಯ ವೈಖರಿಯೆಂಬ ಚತುರ್ವಿಧದಿಂ ದುರಿತ ದುರ್ಮದ ಕಾಲಮೂಲಾದಿಮೂಲಮಂ ಬಗೆಗೊಳ್ಳದೆ, ಚಿತ್ಸುಧಾಮೃತವೆ ಅಂಗವಾಗಿ ಚಿದರ್ಕಪ್ರಭಾಕರವೆ ಪ್ರಾಣವಾಗಿ, ಸೌರಾಷ್ಟ್ರ ಸೋಮೇಶ್ವರನಿಂತಿಂತು ಕರ್ತನು-ಭರ್ತನು ತಾನೆ ಆಗಿ, ಪರಮಸ್ವಯಂಭೂ ಸ್ವತಃಸಿದ್ಧದಿಂ ಸಚ್ಚಿದಾನಂದಸ್ವರೂಪದಿಂ ನಿತ್ಯಪರಿಪೂರ್ಣತ್ವದಿಂದೆಡದೆರಹಿಲ್ಲದಿರ್ಪನಯ್ಯಾ.
--------------
ಆದಯ್ಯ
-->