ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೂಷಕನವನೊಬ್ಬ ದೇಶವ ಕೊಟ್ಟಡೆ, ಆಸೆಮಾಡಿ ಅವನ ಹೊರೆಯಲಿರಬೇಡ. ಮಾದಾರ ಶಿವಭಕ್ತನಾದಡೆ, ಆತನ ಹೊರೆಯಲು ಭೃತ್ಯನಾಗಿಪ್ಪುದು ಕರ ಲೇಸಯ್ಯಾ, ತೊತ್ತಾಗಿಪ್ಪುದು ಕರ ಲೇಸಯ್ಯಾ. ಕಾಡ ಸೊಪ್ಪು ತಂದು ಓಡಿನಲ್ಲಿ ಹುರಿದಿಟ್ಟು, ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ. 136
--------------
ಬಸವಣ್ಣ
ಘಟಕುಂಭದಲ್ಲಿ ಜೀವನೆಂಬ ಜೇಗಟೆ ಬಂದಿತ್ತು. ದೃಷ್ಟವ ಇಷ್ಟದಲ್ಲಿ ಕುಟ್ಟಲಾಗಿ, ಮೊಳೆ ಮುರಿದು ಒಡಲೊಡೆಯಿತ್ತು. ಅಂಗದ ಅಗ್ನಿಯಲ್ಲಿ ಬೇಯಿಸಿ, ಮೂರುಸಂಗವಡೆದ ಮಡಕೆಯ ಓಡಿನಲ್ಲಿ ಶ್ರುತ ದೃಷ್ಟ ಅನುಮಾನವೆಂಬ ಕೋಲಿನಲ್ಲಿ ಕಡೆಯಲಾಗಿ, ರಸ ಒಳಗಾಗಿ ಹಿಪ್ಪಿ ಹೊರಗಾಯಿತ್ತು, ಆ ಸುಧೆಯ ತುಂಬಿ ತಂದೆ. ಒಮ್ಮೆಗೆ ಕೊಂಡಲ್ಲಿ ಬ್ರಹ್ಮಕಲ್ಪವ ಕೆಡಿಸಿತ್ತು. ಮತ್ತೊಮ್ಮೆ ಕೊಂಡಲ್ಲಿ ವಿಷ್ಣುವಿನ ಗೊತ್ತ ಕಿತ್ತಿತ್ತು. ಮೂರೆಂದು ಮೊದಲ ಹಾಗವ ಮೀರಿದ ರುದ್ರನ ಅಗಡವ ಕಿತ್ತಿತ್ತು. ಅರೆದು ಕೊಂಡಲ್ಲಿ ಸುಧೆ, ಮರೆದು ಕೊಂಡಲ್ಲಿ ಸುರೆಯಾಗಿ, ಅರುಹಿರಿಯರ ಮರವೆಯ ಮಾಡಿತ್ತು. ನಾ ತಂದ ಬೆವಹಾರವ ಅಹವರೆಲ್ಲರೂ ಕೊಳ್ಳಿ, ಧಮೇಶ್ವರಲಿಂಗವನರಿಯಬಲ್ಲಡೆ.
--------------
ಹೆಂಡದ ಮಾರಯ್ಯ
ಎಲೆ ಕರುಣಿ, ಜನನಿಯ ಜಠರಕ್ಕೆ ತರಬೇಡವಯ್ಯ. ತಂದರೆ ಮುಂದೆ ತಾಪತ್ರಯಕ್ಕೊಳಗಾದ ತರಳೆಯ ದುಃಖದ ಬಿನ್ನಪವ ಕೇಳಯ್ಯ. ಆಚಾರಲಿಂಗಸ್ವರೂಪವಾದ ಘ್ರಾಣ, ಗುರುಲಿಂಗಸ್ವರೂಪವಾದ ಜಿಹ್ವೆ, ಶಿವಲಿಂಗಸ್ವರೂಪವಾದ ನೇತ್ರ, ಜಂಗಮಲಿಂಗಸ್ವರೂಪವಾದ ತ್ವಕ್ಕು, ಪ್ರಸಾದಲಿಂಗಸ್ವರೂಪವಾದ ಶ್ರೋತ್ರ, ಮಹಾಲಿಂಗಸ್ವರೂಪವಾದ ಪ್ರಾಣ, ಪಂಚಬ್ರಹ್ಮ ಸ್ವರೂಪವಾದ ತನು, ಇಂತಿವೆಲ್ಲವು ಕೂಡಿ ಪರಬ್ರಹ್ಮಸ್ವರೂಪ ತಾನೆಯಾಗಿ, ಆನೆಯ ರೂಪತಾಳಿ ಕೇರಿಯ ನುಸುಳುವ ಹಂದಿಯಂತೆ, ಮೆಟ್ಟುಗುಳಿಯೊತ್ತಿನ ಉಚ್ಚೆಯ ಬಚ್ಚಲೆಂಬ ಹೆಬ್ಬಾಗಿಲ ದಿಡ್ಡಿಯಲ್ಲಿ, ಎಂತು ನುಸುಳುವೆನಯ್ಯ?. ಹೇಸಿ ಹೇಡಿಗೊಂಡೆನಯ್ಯ, ನೊಂದೆನಯ್ಯ, ಬೆಂದೆನಯ್ಯ. ಬೇಗೆವರಿದು ನಿಂದುರಿದೆನಯ್ಯ. ಎನ್ನ ಮೊರೆಯ ಕೇಳಯ್ಯ ಮಹಾಲಿಂಗವೇ. ಎನ್ನ ಭವಕ್ಕೆ ನೂಂಕಬೇಡಯ್ಯ. ನಾನು ಅನಾದಿಯಲ್ಲಿ ಭೋಗಕ್ಕಾಸೆಯ ಮಾಡಿದ ಫಲದಿಂದ, ಅಂದಿಂದ ಇಂದು ಪರಿಯಂತರ ನಾನಾ ಯೋನಿಯಲ್ಲಿ ಬಂದು, ನಾಯಿಯುಣ್ಣದ ಓಡಿನಲ್ಲಿ ಉಂಡು, ನರಗೋಟಲೆಗೊಂಡೆನಯ್ಯ. ಎನಗೆ ಹೊನ್ನು ಬೇಡ, ಹೆಣ್ಣು ಬೇಡ, ಮಣ್ಣು ಬೇಡ, ಫಲವು ಬೇಡ, ಪದವು ಬೇಡ ನಿಮ್ಮ ಶ್ರೀಪಾದವನೊಡಗೂಡಲೂಬೇಡ, ಎನಗೆ ಪುರುಷಾಕಾರವೂ ಬೇಡವಯ್ಯ. ಎನ್ನ ಮನ ಒಪ್ಪಿ, ಪಂಚೈವರು ಸಾಕ್ಷಿಯಾಗಿ, ನುಡಿಯುತ್ತಿಪ್ಪೆನಯ್ಯಾ. ನಿಮ್ಮಾಣೆ, ಎನಗೊಂದ ಕರುಣಿಸಯ್ಯ ತಂದೆ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ ಇಂತಪ್ಪ ಶಿವಶರಣರ ಮನೆಯ ಬಾಗಿಲ ಕಾವ ಶುನಕನ ಮಾಡಿ ಎನ್ನ ನೀ ನಿಲಿಸಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಸದಮಲಭಕ್ತಿಯಿಂದ ಭಕ್ತನು ನಮಸ್ಕರಿಸಿ ಎನ್ನ ಕೈವಿಡಿದು ತನ್ನ ಮಠಕ್ಕೆ ಕರೆದೊಯ್ದು ತಾನು ಪಟ್ಟಗದ್ದುಗೆಯ ಮೇಲೆ ಕುಳಿತು ಚಿನ್ನದ ಪರಿಯಾಣದಲ್ಲಿ ಪಂಚಾಮೃತವನುಣ್ಣುತ ಎನ್ನ ಕದವಿನ ಮರೆಯಲ್ಲಿ ಕುಳ್ಳಿರಿಸಿ ಒಡೆದ ಓಡಿನಲ್ಲಿ ಅಂಬಲಿಯನೆರೆಯಲು ಎಲೆ ದೇವ ಎನ್ನ ಮನದಲ್ಲಿ ನೊಂದೆನಾದೊಡೆ ನಾನು ಕರಪಾತ್ರನಲ್ಲ ಅಪಾತ್ರನು. ಅದೇನು ಕಾರಣವೆಂದೊಡೆ ನಾನು ಮೂರಾರುತಿಂಗಳು ಜನನಿಯ ಜಠರವೆಂಬ ಸೆರೆಮನೆಯಲ್ಲಿ ಸಿಕ್ಕಿರುವಾಗ ಎನಗೆ ಸದಾಕಾಲ ಉಣಲಿಟ್ಟು ಸಲಹಿದವ ನೀನೋ? ಅವನೋ? ಆ ಸೆರೆಮನೆಯಿಂದ ಎನ್ನ ಕೈವಿಡಿದು ಕರೆತಂದು ಶಿವಲಾಂಛನಮಂ ಕರುಣದಿಂದಿತ್ತು ಮತ್ರ್ಯಲೋಕದಲ್ಲಿ ಎನ್ನಂ ಪೂಜ್ಯನ ಮಾಡಿದಾತ ನೀನೋ? ಅವನೋ?. ಇದು ಕಾರಣ- ಇಕ್ಕುವಾತ ಅವನೆಂಬುದು ಎನ್ನಲಿಲ್ಲ. ಎಚ್ಚವನಿದ್ದಂತೆ ಅಂಬಿಗೆ ಮುನಿವರೇ ಅಯ್ಯ? ನಾನು ಉಂಡುಟ್ಟು ಸುಖಿಯಾದರೆ ನಿನ್ನ ಹಾಡುವೆ. ನಾನು ಹಸಿದು ನೊಂದೆನಾದರೆ ನಿನ್ನಂ ಬೈವೆನಲ್ಲದೆ ಮಾನವರ ಹಂಗು ಎನಗೇತಕಯ್ಯಾ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
-->