ಅಥವಾ

ಒಟ್ಟು 15 ಕಡೆಗಳಲ್ಲಿ , 1 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುನಿಸ ಮುನಿದಡೆ ಶ್ರೀಗಂಧದ ಮುರಡಿನ ಹಾಂಗಿರಬೇಕವ್ವಾ. ತೆಗೆದಪ್ಪಿದಡೆ ಚಂದನ ಶೀತಾಳದ ಹಾಂಗಾಗಬೇಕವ್ವಾ. ಹೋಗುವಲ್ಲಿ ಮೈಯೆಲ್ಲಾ ಕೈಯಾಗಿ ಹೆಣಗುತ್ತಿರಬೇಕವ್ವಾ. ಮಹಾಲಿಂಗ ಗಜೇಶ್ವರನ ನೆರೆವ ಭರದಿಂದ ನೊಂದಂಕದ ಮೇಲೆ ಬಿದ್ದ ಹಾಂಗಿರಬೇಕವ್ವಾ.
--------------
ಗಜೇಶ ಮಸಣಯ್ಯ
ರಿಪುಗಳ ಕಾಳಗ ಕೊಳುಗುಳದನುಭಾವ ಅತಿಶಯದ ಬಾಣ ತಾಗಿದುದಕೆ ಹೋಗಿ ನಿಂದ ಮುಮ್ಮರಿಯಂತೆ ಜಗಕ್ಕೆಲ್ಲಾ ಕನ್ನಡಿಗೆ ನೋಡಾ! ಮಹಾಲಿಂಗ ಗಜೇಶ್ವರನ ಅರಿಯನೆ ಬಲ್ಲ ಕನ್ನಡಿಗೆ ಮರದೊಡಕು.
--------------
ಗಜೇಶ ಮಸಣಯ್ಯ
ಚಂದ್ರಮನ ಕಂಡು ಮಂಡೆಯ ಬಿಟ್ಟು ಏಳು ಬಂಧವ ತೋರಿ ಬೆದರಿಸಿದನವ್ವಾ. ಮಗಳ ಕುಂಕುಮ ತಿಲಕವ ಕಂಡು ನಿನ್ನ ನೊಸಲಲ್ಲಿ ಎಸೆಯಬಂದ ಕಾಮ ಕೈಮರೆದನವ್ವಾ. ಸಟ್ಟುಪದಿಯ ಸಂಗ ಮಹಾಲಿಂಗ ಗಜೇಶ್ವರನ ಸಂಪಗೆಯ ವನಕ್ಕೆ ಬಂದು ಶರಣೆನ್ನು ಮಗಳೆ.
--------------
ಗಜೇಶ ಮಸಣಯ್ಯ
ಎಲೆ ಎಲೆ ತಾಯೆ ನೋಡವ್ವಾ! ಇರುಳು ತೊಳಲುವ ಜಕ್ಕವಕ್ಕಿಯಂತೆ ಹಲಬುತ್ತಿದ್ದೆ ನೋಡವ್ವಾ! ಮಾಗಿಯ ಕೋಗಿಲೆಯಂತೆ ಮೂಗಿಯಾಗಿದ್ದೆ ನೋಡವ್ವಾ! ಮಹಾಲಿಂಗ ಗಜೇಶ್ವರನ ಅನುಭಾವಸಂಬಂದ್ಥಿಗಳ ಬರವೆನ್ನ ಪ್ರಾಣದ ಬರವು ನೋಡವ್ವಾ
--------------
ಗಜೇಶ ಮಸಣಯ್ಯ
ದೇಶಾಖಿಯಲ್ಲದ ರಾಗ, ಉಪ್ಪಿಲ್ಲದ ಊಟ ಸಪ್ಪೆ ಕಾಣಿರೋ ಅಯ್ಯಾ, ಮಿಕ್ಕಿನ ರಾಗ. ಶಿವನಲ್ಲದ ದೈವಫಲವಿಲ್ಲ ಕಾಣಿರೊ ಅಯ್ಯಾ. ಮಿಕ್ಕಿನ ತುಂಬುರ ನಾರದರು ಶಿವನ ಕೇಳಿಸುವ ರಾಗ, ಮಹಾಲಿಂಗ ಗಜೇಶ್ವರನ ನಚ್ಚಿನ ರಾಗ.
--------------
ಗಜೇಶ ಮಸಣಯ್ಯ
ಪದುಮ ಪಜ್ಜಳ ವರ್ಣ ನೈದಿಲೆಯಾಗಿರ್ದಳವ್ವೆ ತುಂಬಿ ಮುತ್ತನುಗುಳದಂತೆ; ಕಂಗಳು ಕಂಕಣವಾಗಿ ಚಂದ್ರಬಿಂಬವಾಗಹದಂತೆ ಅವಗವಿಸಿಕೊಂಡಿರ್ದ ಬಂಗಾರಕ್ಕೆರಗಿದ ರತ್ನದಂತೆ ಆನೊಂದೆ ಗ್ರಾಹಯಾಗಿರ್ದೆನವ್ವಾ ಅಖಂಡಿತನಾಗಿ ಮಹಾಲಿಂಗ ಗಜೇಶ್ವರನ ಅನುಭಾವಕ್ಕೆಸುಖಿಯಾಗಿ.
--------------
ಗಜೇಶ ಮಸಣಯ್ಯ
ಇರುಳಿನ ಜಕ್ಕವಕ್ಕಿಯಂತೆ ಅಗಲಿ ಹಲುಬುತಿರೆ ಇರುಳಿನ ತಾವರೆಯಂತೆ ಮುಖ ಬಾಡಿ, ಇರುಳಿನ ನೆಯ್ದಿಲಂತೆ ಕಣ್ಣಮುಚ್ಚದೆ, ಇರುಳಿನ ಸಮುದ್ರದಂತೆ ಘನವಾಗಿ, ಸಲೆ ಉಮ್ಮಳಿಸಿ ಸಂಜೆವರಿದು ಮಹಾಲಿಂಗ ಗಜೇಶ್ವರನ ಬರವಿಂಗೆ ಬೆಳಗಾಯಿತು.
--------------
ಗಜೇಶ ಮಸಣಯ್ಯ
ಆತನ ಬೆರಸಿದ ಕೂಟವನೇನೆಂದು ಹೇಳುವೆನವ್ವಾ, ಹೇಳಲೂಬಾರದು, ಕೇಳಲೂಬಾರದು; ಏನ ಹೇಳುವೆನವ್ವಾ, ಶಿಖಿ ಕರ್ಪೂರ ಬೆರಸಿದಂತೆ. ಮಹಾಲಿಂಗ ಗಜೇಶ್ವರನ ಕೂಡಿದ ಕೂಟವ ಹೇಳಲು ಬಾರದವ್ವಾ.
--------------
ಗಜೇಶ ಮಸಣಯ್ಯ
ಮೂಗಿನ ಕಪ್ಪು ಪ್ರಣತೆಯ ಕತ್ತಲೆ ಜ್ಯೋತಿಯೆಂಬರು. ವಿವರಣೆ ಹೋಗದೆಂತೂ ರಸದ ರುದ್ರಾಕ್ಷಿ ಸ್ಫಟಿಕದ ಧಾರಂಬೊ. ಮಾಣಿಕ್ಯ ಸ್ವಯಂಜ್ಯೋತಿ ಜ್ಞಾನದ ಪ್ರಭೆ. ಮಹಾಲಿಂಗ ಗಜೇಶ್ವರನ ನೆನೆವ ಮನವು ಕಮಳ ತಳವೆಳಕು ಭೋ.
--------------
ಗಜೇಶ ಮಸಣಯ್ಯ
ಕಾಮಗಂಜಿ ಚಂದ್ರನ ಮರೆಹೊಗಲು ರಾಹು ಕಂಡಂತಾದಳವ್ವೆ. ಹಾವೆಂದರಿಯದೆ ನೇವಳವೆಂದರಿಯದೆ ಕ್ಷಣ ನಾಗಭೂಷಣೆಯಾಗಿರ್ದಳವ್ವೆ ಮಹಾಲಿಂಗ ಗಜೇಶ್ವರನ ನೆರೆವ ಭರದಿಂದ ಕಳಕ್ಕೆ ಬಂದ ಮೃಗದಂತಿದ್ದಳವ್ವೆ.
--------------
ಗಜೇಶ ಮಸಣಯ್ಯ
ಉದರವ ತಾಗಿದ ಮಾತು ಅಧರದಲ್ಲಿ ಬೀಸರವೋದೀತೆಂದು ಅಧರವ ಮುಚ್ಚಿಕೊಂಡಿರ್ದಳವ್ವೆ. ಕಂಗಳ ಮುಚ್ಚಿಕೊಂಡಿರ್ದಳವ್ವೆ. ಪರಿಮಳ ಬೀಸರವೋದೀತೆಂದು ಆಳಿಗೆ ಬುದ್ಧಿಯ ಹೇಳಿದಳವ್ವೆ. ಮನ ಬೀಸರವೋದೀತೆಂದು ದಿನಕರನ ಕಾವಲಕೊಟ್ಟಳವ್ವೆ, ಇಂದು ನಮ್ಮ ಮಹಾಲಿಂಗ ಗಜೇಶ್ವರನ ನೆರೆವಭರದಿಂದ.
--------------
ಗಜೇಶ ಮಸಣಯ್ಯ
ಹೊನ್ನು ಕೊಡನ ಹೊಮ್ಮಿನ ಹಮ್ಮಿನ ಕಳಯ ಪುಳಕದಲ್ಲಿ ತಾರಕಿ ತಾರಕಿ ತಳಿತಂತೆ ಅಂಗಸಂಗದಲ್ಲಿದ್ದಳವ್ವೆ. ಬಂದ ಭರವಿನ ನಿಂದ ಚಂದದ ಹೊಸಹೂವ ಮುಡಿದಳವ್ವೆ. ಅಡವಿಯಲಾದ ಮರನಡಿಯಲಿದ್ದ ಬಿಸಿಲ ಬಯಸಿದಳವ್ವೆ. ಇಂದು ಮಹಾಲಿಂಗ ಗಜೇಶ್ವರನ ನೆರೆವ ಭರದಲ್ಲಿ, ಕಳಕೆ ಬಂದ ಮೃಗದಂತೆ ತನ್ನ ತಾ ಮರೆದಿರ್ದಳವ್ವೆ.
--------------
ಗಜೇಶ ಮಸಣಯ್ಯ
ಒಳಗೆ ಶೋಧಿಸಿ, ಹೊರಗ ಧವಳಿಸಿ ಭಾವದಿಂದ ಗುಡಿತೋರಣವ ಕಟ್ಟಿದೆನಯ್ಯಾ. ಲಿಂಗ ಬಾರಯ್ಯಾ, ಎನ್ನ ದೇವಾ ಬಾರಯ್ಯಾ. ಅಂತರಂಗದ ಪರಂಜ್ಯೋತಿಯನಿದಿರುಗೊಂಬೆನೆನ್ನ ಮಹಾಲಿಂಗ ಗಜೇಶ್ವರನ
--------------
ಗಜೇಶ ಮಸಣಯ್ಯ
ಋತುಕಾಲ ತಪ್ಪಿದ ಕೋಗಿಲೆಯಂತೆ ನುಡಿಯದಂತಿರ್ದಳಲ್ಲಾ! ಪರಿಮಳ ತಪ್ಪಿದ ಭ್ರಮರನಂತೆ ಸುಳಿಸುಳಿಗೊಳುತಿರ್ದಳಲ್ಲಾ! ಫಲವು ತಪ್ಪಿದ ಬಂಜೆ ಬನದೊಳಗಣ ಅರಗಿಳಿಯಂತಿರ್ದಳಲ್ಲಾ! ಧುರಭಾರದ ಜವ್ವನದಲ್ಲಿ ತೋರಣದೆಲೆಯಂತೆ ಮಹಾಲಿಂಗ ಗಜೇಶ್ವರನ ನೆರೆವ ಭರದಿಂದ ಅಳಿಕಾವೃದ್ಧೆಯಾಗಿರ್ದಳಲ್ಲಾ!
--------------
ಗಜೇಶ ಮಸಣಯ್ಯ
ಒಲಿದವರ ಕೊಲುವಡೆ ಮಸೆದ ಕೂರಲಗೇಕೆ? ಅವರನೊಲ್ಲೆನೆಂದಡೆ ಸಾಲದೆ? ಮಹಾಲಿಂಗ ಗಜೇಶ್ವರನ ಶರಣರನಗಲಿದಡೆ ತುಪ್ಪದಲ್ಲಿ ಕಿಚ್ಚ ನಂದಿಸಿದಂತಾದೆನವ್ವಾ!
--------------
ಗಜೇಶ ಮಸಣಯ್ಯ
-->