ಅಥವಾ

ಒಟ್ಟು 17 ಕಡೆಗಳಲ್ಲಿ , 2 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವನೆ, ನೀನು ಗುರುವಾದೆ ಲಿಂಗವಾದೆ ಜಂಗಮವಾದೆ ಭಕ್ತನಾದೆ. ಗುರುವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಗುರುವಿಂಗೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆತ ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಗುರುವು ತನ್ನೊಳಡಗಿದ. ಲಿಂಗವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಲಿಂಗಕ್ಕೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆತ ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಲಿಂಗವು ಭಕ್ತನೊಳಡಗಿದ. ಜಂಗಮವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆ ಜಂಗಮವು ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಜಂಗಮವು ಭಕ್ತನೊಳಡಗಿದ. ಇಂತಡಗುವರೆ ಹಿರಿಯರು; ಇಂತಡಗುವರೆ ಗುರುವರು; ಇಂತಡಗುವರೆ ಮಹಿಮರು; ಇವರಿಗೆ ಭಾಜನವೊಂದೆ ಭೋಜನವೊಂದೆ. ಈ ನಾಲ್ಕು ಒಂದಾದ ಘನಕ್ಕೆ ಪರಿಯಾಣಬೇರೆಂಬ ಶಾಸ್ತ್ರದ ಸೂತಕಿಗಳನೆನಗೆ ತೋರದಿರಯ್ಯಾ, ಮಸಣಯ್ಯಪ್ರಿಯ ಗಜೇಶ್ವರಾ.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಪರಂಜ್ಯೋತಿ ಗುರುವಿನಿಂದ ತನಗೆ ಲಿಂಗಾನುಗ್ರಹ ಪ್ರಣವ ಪಂಚಾಕ್ಷರಿ ಅಳವಟ್ಟಿರಲು, ಅದ ಕಂಡು ಮತ್ತೊಬ್ಬ ಗುರುಕರುಣವಾದಾತ ಬರಲು, ಆ ಲಿಂಗಾನುಗ್ರಹ ಪ್ರಣವಪಂಚಾಕ್ಷರಿಯನಾತಂಗೀಯಲು ಆತಂಗೆ ತಾನು ಗುರುವೆನಬಹುದೆ ? ಎನ್ನಬಾರದು. ಆತನೂ ತಾನೂ ಆ ಪರಂಜ್ಯೋತಿಯ ಆಣತಿವಿಡಿದವರಾಗಿ, ಇಬ್ಬರೂ ದಾಯಾದರು. ಆ ಪರಂಜ್ಯೋತಿಯಲ್ಲಿಯೆ ಅಡಗಿದರಾಗಿ, ಗುರುವಿಂಗೆಯೂ ಶಿಷ್ಯಂಗೆಯೂ ಲಿಂಗಕ್ಕೂ ಭೇದವಿಲ್ಲ, ಮಸಣಯ್ಯಪ್ರಿಯ ಗಜೇಶ್ವರಾ.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ? ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ? ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ? ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು, ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ? ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು, ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ ? ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು, ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ? ಇದು ಕಾರಣ, ಪರಂಜ್ಯೋತಿ ಪರಮಕರುಣಿ ಪರಮಶಾಂತನೆಂಬ ಲಿಂಗವು ಕೋಪದ ಮುನಿಸನರಿದಡೆ ಕಾಣಬಹುದು, ಮರೆದಡೆ ಕಾಣಬಾರದು. ಅರಿವಿಂದ ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಭಕ್ತನ ಮಠಕ್ಕೆ ಜಂಗಮ ಬಂದು, ಆ ಭಕ್ತ ಮಾಡಿದಂತೆ ಭಕ್ತಿಯ ಮಾಡಿಸಿಕೊಂಡು, ಕ್ಷಮಿಸಬಲ್ಲಡೆ ಜಂಗಮ; ಆ ಕ್ಷಮೆಯೊಳಗೆ ಮಗ್ನನಾಗಬಲ್ಲಡೆ ಭಕ್ತ. ಉಪಾಧಿಯಾಗಿ ಹೇಳಿ ಮಾಡಿಸಿಕೊಂಬನ್ನಬರ ಭೂತಪ್ರಾಣಿ: ಬಂದ ಪರಿಯಲ್ಲಿ ಪರಿಣಾಮಿಸಬಲ್ಲಡೆ ಲಿಂಗಪ್ರಾಣಿ. ಬೇಡಿದಲ್ಲದೆ ಮಾಡೇನೆಂಬೆನ್ನಕ್ಕರ ಫಲದಾಯಕ; ಬಂದ ಜಂಗಮದ ಇಂಗಿತಾಕಾರವರಿದು ಬೇಡದ ಮುನ್ನವೆ ಮಾಡಬಲ್ಲಡೆ ಭಕ್ತನೆಂಬೆನು; ಬೇಡದ ಮುನ್ನವೆ ಮಾಡುವ ಭಕ್ತನು, ಬೇಡದೆ ಮಾಡಿಸಿಕೊಂಬ ಜಂಗಮವು, ಇಂತೀ ಎರಡರ ಸಮ್ಮೇಳ ಸನ್ನಿಧಿಯಲ್ಲಿರ್ದು ನಾನು ಸುಖಿಯಾದೆನು ಕಾಣಾ ಮಹಾಲಿಂಗ ಗಜೇಶ್ವರಾ.
--------------
ಗಜೇಶ ಮಸಣಯ್ಯ
ಅರಳಿದ ಪುಷ್ಪ, ಪರಿಮಳಿಸದಿಹುದೆ ಅಯ್ಯಾ? ತುಂಬಿದ ಸಾಗರ, ತೆರೆನೊರೆಗಳಾಡದಿಹುದೆ ಅಯ್ಯಾ? ಆಕಾಶವ ಮುಟ್ಟುವವ, ಅಟ್ಟಗೋಲ ಹಿಡಿವನೆ ಅಯ್ಯಾ? ಪರದಲ್ಲಿ ಪರಿಣಾಮಿಯಾದ ಶರಣ, ಕರ್ಮ ಪೂಜೆ ಫಲವನತಿಗಳೆಯದಿಹನೆ ಮಹಾಲಿಂಗ ಗಜೇಶ್ವರಾ.
--------------
ಗಜೇಶ ಮಸಣಯ್ಯ
ಎನ್ನ ಕರಸ್ಥಲವೇ ಬಸವಣ್ಣನಯ್ಯಾ. ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯಾ. ಎನ್ನ ಭಾವಸ್ಥಲವೇ ಪ್ರಭುದೇವರಯ್ಯಾ. ಇಂತೆನ್ನ ಕರ ಮನ ಭಾವಂಗಳಲ್ಲಿ ಇಷ್ಟ ಪ್ರಾಣ ಭಾವಂಗಳು ತಲ್ಲೀಯವಾಗಿ ಮಹಾಲಿಂಗ ಗಜೇಶ್ವರಾ, ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲಿ ಕಂಡು ಪರಮಸುಖಿಯಾಗಿರ್ದೆನು.
--------------
ಗಜೇಶ ಮಸಣಯ್ಯ
ದೇವರ ನೆನೆದು ಮುಕ್ತರಾದೆವೆಂಬ ಯುಕ್ತಿಶೂನ್ಯರ ಮಾತ ಕೇಳಲಾಗದು. ಅದೇನು ಕಾರಣವೆಂದಡೆ: ದೇವರ ನೆನೆವಂಗೆ ದೇವರುಂಟೆ? ದೂರ ದೂರದಲ್ಲಿದ್ದವರ ನೆನೆವರಲ್ಲದೆ ಸಮೀಪದಲ್ಲಿದ್ದವರ ನೆನೆವವರಿಲ್ಲ. ಇದನರಿದು ನೀನೆನ್ನೊಳಗಡಗಿ ನಾ ನಿನ್ನ ನೆನೆಯಲಿಲ್ಲ; ನೀನೆನಗೆ ಮುಕ್ತಿಯನೀಯಲಿಲ್ಲ. ನೀನಾನೆಂದೆನಲಿಲ್ಲ ಮಹಾಲಿಂಗ ಗಜೇಶ್ವರಾ.
--------------
ಗಜೇಶ ಮಸಣಯ್ಯ
ಗುರುವಿಂಗೆ ಗುರುವಾಗಿ ಎನಗೆ ಗುರುವಾದನಯ್ಯಾ ಬಸವಣ್ಣನು. ಲಿಂಗಕ್ಕೆ ಲಿಂಗವಾಗಿ ಎನಗೆ ಲಿಂಗವಾದನಯ್ಯಾ ಚೆನ್ನಬಸವಣ್ಣನು. ಜಂಗಮಕ್ಕೆ ಜಂಗಮವಾಗಿ ಎನಗೆ ಜಂಗಮವಾದನಯ್ಯಾ ಪ್ರಭುದೇವರು. ಪ್ರಸಾದಕ್ಕೆ ಪ್ರಸಾದವಾಗಿ ಎನಗೆ ಪ್ರಸಾದವಾದನಯ್ಯಾ ಮರುಳಶಂಕರದೇವರು. ಬಸವಣ್ಣನಿಂದ ಶುದ್ಭಪ್ರಸಾದಿಯಾದೆನು. ಚೆನ್ನಬಸವಣ್ಣನಿಂದ ಸಿದ್ಧಪ್ರಸಾದಿಯಾದೆನು. ಪ್ರಭುದೇವರಿಂದ ಪ್ರಸಿದ್ಧಪ್ರಸಾದಿಯಾದೆನು. ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು. ಇಂತೀ ಚತುರ್ವಿಧವೆನ್ನ ಸರ್ವಾಂಗದಲ್ಲಿ ಕರಿಗೊಂಡು ಎಡದೆರಹಿಲ್ಲದೆ ಪರಿಪೂರ್ಣವಾಯಿತ್ತು. ಮಸಣಯ್ಯಪ್ರಿಯ ಗಜೇಶ್ವರಾ, ನಿಮ್ಮ ಶರಣರ ಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಗುರುಕೊಟ್ಟ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಪ್ರಣವಪಂಚಾಕ್ಷರಿಯ ಅನ್ಯರಿಗೆ ಕೊಡಬಹುದೆ ? ಕೊಡಬಾರದು. ಆ ಗುರುವಿಂಗೆ ಕೊಡಬೇಕು; ಆ ಗುರುವಲ್ಲದೆ ಈಸಿಕೊಳ್ಳಲರಿಯನಾಗಿ, ಇಂತಲ್ಲದೆ ಗುರುಸಂಬಂಧಕ್ಕೆ ಬೆರೆವ ಗುರುದ್ರೋಹಿಯನೇನೆಂಬೆ ಮಸಣಯ್ಯಪ್ರಿಯ ಗಜೇಶ್ವರಾ !
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಅಹುದು ಅಹುದು ಲಿಂಗವಿಲ್ಲದ ಶಿಷ್ಯನ ಅರಿಯಿಸಬಲ್ಲ ಗುರುವು ಲಿಂಗವಿಲ್ಲದ ಗುರುವು. ಲಿಂಗವಿಲ್ಲದೆ ಇದ್ದ ಗುರುವನರಿಯಬಲ್ಲ ಶಿಷ್ಯ, ಶಿಷ್ಯನನರಿಯಬಲ್ಲ ಗುರು, ಇವರಿಬ್ಬರ ಭೇದವ ನೀನೆ ಬಲ್ಲೆ ಮಸಣಯ್ಯಪ್ರಿಯ ಗಜೇಶ್ವರಾ.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಅಹುದಹುದು, ಲಿಂಗವಿಲ್ಲದೆ ಶಿಷ್ಯನನರಿಯಬಲ್ಲ ಗುರು, ಲಿಂಗವಿಲ್ಲದೆ ಗುರುವನರಿಯಬಲ್ಲ ಶಿಷ್ಯ. ಗುರುವನರಿಯಬಲ್ಲ ಶಿಷ್ಯ, ಶಿಷ್ಯನನರಿಯಬಲ್ಲ ಗುರು, ಇವರಿಬ್ಬರ ಭೇದವ ನೀನೆ ಬಲ್ಲೆ ಗಜೇಶ್ವರಾ.
--------------
ಗಜೇಶ ಮಸಣಯ್ಯ
ಅಂಗದಮೇಲಣ ಲಿಂಗವು ಲಿಂಗವಲ್ಲ; ಮನದಮೇಲಣ ಲಿಂಗವು ಲಿಂಗವಲ್ಲ; ಭಾವದಮೇಲಣ ಲಿಂಗವು ಲಿಂಗವಲ್ಲ. ಅಂಗದಮೇಲಣ ಲಿಂಗ ವ್ಯವಹಾರ; ಮನದಮೇಲಣ ಲಿಂಗ ಸಂಕಲ್ಪ; ಭಾವದಮೇಲಣ ಲಿಂಗ ಭ್ರಾಂತುತತ್ವ. ಆಳಿನ ಆಳು ಅರಸನಪ್ಪನೆ, ಆಳನಾಳುವನರಸಲ್ಲದೆ ? ಅಂಗ ಪ್ರಾಣ ಭಾವಂಗಳನೊಳಕೊಂಡಿರ್ಪುದೆ ಲಿಂಗ ಕಾಣಾ, ಮಸಣಯ್ಯಪ್ರಿಯ ಗಜೇಶ್ವರಾ.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಅಷ್ಟವಿಧಾರ್ಚನೆ ಷೋಡಶೋಪಚಾರ ಬಾಹ್ಯಕ್ರೀಯಲ್ಲಿ ಲಿಂಗವುಂಟೆ? `ಸ್ವಯಮಾತ್ಮ ಪರೋಲಿಂಗ' ವೆಂದುಲಿವ ಬೀದಿಯ ಭಂಡರ ಮಾತ ಕೇಳಲಾಗದು. ತಿಲಕುಸುಮ ಪರಿಮಳದಂತೆ ಒಳ ಹೊರಗು ಪರಿಪೂರ್ಣ ಮಹಾಲಿಂಗ ಗಜೇಶ್ವರಾ.
--------------
ಗಜೇಶ ಮಸಣಯ್ಯ
ಎನ್ನನರಿಯಿಸದಿರುವೆ, ಎನ್ನನರಿಯಿಸು ನಿನ್ನನರಿಯಿಸಬೇಡ. ಎನ್ನನರಿಯದವ ನಿನ್ನನರಿಯ. ಎನ್ನನರಿಯಿಸದೆ ನಿನ್ನನರಿಯಿಸಿದಡೆ, ನೀನೆನಗೆ ಗುರುವಲ್ಲ, ನಾ ನಿನಗೆ ಶಿಷ್ಯನಲ್ಲ. ಎನ್ನನರಿಯಿಸಿದಡೆ ನೀನೆನಗೆ ಗುರು; ನಾ ನಿನಗೆ ಶಿಷ್ಯ, ಮಸಣಯ್ಯಪ್ರಿಯ ಗಜೇಶ್ವರಾ.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಪರದಿಂದಲಾಯಿತ್ತು ಪರಶಕ್ತಿ. ಪರಶಕ್ತಿಯಿಂದಲೊದಗಿದ ಭೂತಂಗಳು, ಭೂತಂಗಳಿಂದಲೊದಗಿದ ಅಂಗ, ಅಂಗಕ್ಕಾದ ಕರಣೇಂದ್ರಿಯಂಗಳು, ಇಂದ್ರಿಯಂಗಳಿಂದಲೊದಗಿದ ವಿಷಯಂಗಳು. ಆ ವಿಷಯಂಗಳ ಪರಮುಖಕ್ಕೆ ತಾ ಶಕ್ತಿಯಾಗಿ ಭೋಗಿಸಬಲ್ಲಡೆ, ಆತ ನಿರ್ಲೇಪ ಮಸಣಯ್ಯಪ್ರಿಯ ಗಜೇಶ್ವರಾ.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಇನ್ನಷ್ಟು ... -->