ಅಥವಾ

ಒಟ್ಟು 10 ಕಡೆಗಳಲ್ಲಿ , 7 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಾಟಿ ಗುಂಡು ಬಂಧನ ಕಲಕೇತ ಯಾಚಕ ಪಗುಡಿ ಪರಿಹಾಸಕಂಗಳಿಂದ ಬೇಡಿ ತಂದು ಗುರುಲಿಂಗಜಂಗಮಕ್ಕೆ ಮಾಡಿಹೆನೆನಬಹುದೆ? ಮಾಡುವ ಠಾವಿನಲ್ಲಿ, ಮಾಡಿಸಿಕೊಂಬವರಾರೆಂದು ತಾನರಿದ ಮತ್ತೆ ಅಲ್ಲಿ ಬೇಡಬಹುದೆ ? ಭಕ್ತಿಯ ಮಾಡಿಹೆನೆಂದು ಕಾಡಬಹುದೆ ತಾ ? ತಾ ದಾಸೋಹಿಯಾದ ಮತ್ತೆ ಅಲ್ಲಿಗೆ ತಾ ದಾಸನಾಗಿ ಸಲ್ಲೀಲೆಯಿಂ ಪ್ರಸಾದವ ಕೊಂಡು ಅಲ್ಲಿ ಇಲ್ಲಿ ಎಲ್ಲಿಯೂ ತಾನಾಗಿ ಇರಬೇಕಲ್ಲದೆ, ಅಲ್ಲಿ ಮಾಡಿಹೆನೆಂದು ಎಲ್ಲರ ಬೇಡುವ ಕಲ್ಲೆದೆಯವನನೊಲ್ಲ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಬೆಟ್ಟದ ಮೇಲಣ ಗುಂಡು, ಬೆಟ್ಟವ ನುಂಗಿತ್ತು. ಸೃಷ್ಟಿಯ ಮೇಲಣ ಜಗ, ಪೃಥ್ವಿಯ ನುಂಗಿತ್ತು. ಹಸುವಿನ ಗರ್ಭದ ವತ್ಸ, ಹಸುವ ನುಂಗಿತ್ತು. ಹೆಸರಿಡುವುದಿನ್ನೇನೊ ? ಕಣ್ಣೊಳಗಣ ಎರಳೆ ಬಣ್ಣವ ನುಂಗಿದ ಮತ್ತೆ ಬಣ್ಣಿಸಿ ಪೂಜಿಸಿಕೊಂಬುದಿನ್ನೇನೊ ? ಕಣ್ಣಾವಗಾಲದ ಹೊಳೆಯಲ್ಲಿ ಮುಳುಗಿ ಚೆನ್ನುಗೆಟ್ಟಿರಲ್ಲಾ. ಅಣ್ಣಗಳೆಲ್ಲರೂ ಮುಕ್ಕಣ್ಣನ ಪೂಜಿಸಿ ಮೂರುಬಟ್ಟೆಯ ಸುತ್ತಿ, ಊರ ಹೊಕ್ಕು ಆರೈದಿರಯ್ಯಾ, ನೀವಾರಾಧಿಸುವ ಲಿಂಗವ. ಆ ಲಿಂಗದಲ್ಲಿ ಲೀಯವಾದರೆ ಸಂಗಕ್ಕೆ ಒಳಗಾದರು. ನಮ್ಮ ನಿಸ್ಸಂಗಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ದಿಕ್ಕುಗೆಟ್ಟೆನಯ್ಯಾ.
--------------
ಮೋಳಿಗೆ ಮಾರಯ್ಯ
ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು, ತೇಲಲೀಯದು ಗುಂಡು, ಮುಳುಗಲೀಯದು ಬೆಂಡು, ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ, ಕೂಡಲಸಂಗಯ್ಯಾ.
--------------
ಬಸವಣ್ಣ
ಉತ್ತರಕ್ಕೆ ನುಡಿವನ್ನಬರ ನಾನು ಚಿತ್ತದ ಕಲೆಯವನಲ್ಲ. ಮದಮತ್ಸರಕ್ಕೆ ಹೋರುವನ್ನಬರ ನಾನು ಕರಣೇಂದ್ರಿಯಂಗಳಿಗೆ ಹುತ್ತದ ಮೊತ್ತದವನಲ್ಲ. ಮತ್ತೆ ಸಮಯದಲ್ಲಿ ಹೊತ್ತು ಹೋರಿಹೆನೆಂದಡೆ ನಾನು ಸಂಸಾರದ ಕತ್ತಲೆಯವನಲ್ಲ. ಎನ್ನ ನಿಶ್ಚಯದ ಗುಂಡು, ಎನ್ನ ಬಚ್ಚಬರಿಯ ಬಯಲಬೆಳಗು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಲೀಲೆಗೆ ಹೊರಗಾದ ಲಿಂಗವೆ ಬಾರಯ್ಯಾ, ಎನ್ನ ಅಂಗದೊಳಗಾಗು. ಶ್ರುತ ದೃಷ್ಟ ಅನುಮಾನದಲ್ಲಿ ನೋಡುವವರಿಗೆಲ್ಲಕ್ಕೂ ಅತೀತವಾಗು. ಆಗೆಂಬುದಕ್ಕೆ ಮುನ್ನವೆ ಆ ಗುಂಡು ಕಾಯದ ಕರಸ್ಥಲದಲ್ಲಿ ನಿರ್ಭಾವವಾಗಿ, ಕಾಯವಡಗಿ, ಭಾವವೆಂಬ ಬಯಲಾಯಿತ್ತು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬುದಕ್ಕೆಮುನ್ನವೆ.
--------------
ಘಟ್ಟಿವಾಳಯ್ಯ
ಅಂಗವೆಂಬ ವಾಕುಳದ ಕುಂಭದಲ್ಲಿ ತೋರಿ ಅಡಗುವ ಮರೀಚಿಕಾ ಜಲವ ತುಂಬಿದಂತೆ. ಚಿತ್ತ ಸಾಳಿವನವೆಂಬ ತಂಡುಲ ತೊಳೆಯದೆ, ಥಳಿಸದೆ, ಕುಂಭದೊಳಗೆ ಹಾಕಿ ವಾಯುವಿನ ದೂಮ್ರದಿಂದ ಬೇಯಿಸಿ ಅದು ಬೆಂದುದಿಲ್ಲ. ಅದು ಮೂರು ಗುಂಡಿನ ಗುಣದಿಂದ ಗುಂಡಿನ ಚಂದ ತುಂಬಿಹ ಮಡಕೆಯಂತೆ. ಮತ್ತೊಂದರ ಇರವು ತಿರುಗುವ ಚಕ್ರದಗೊಂದಣದಂದದ ದ್ವಂದ್ವವ, ಹಿಂಗಿ ನಿಂದ ಕುಂದಿನಿರವು, ಕೂರಲಗಿನ ಬಾಯ ಧಾರೆಯಂತೆ ಉಭಯವ ಕೂಡಿಕೊಂಡು ನಿಂದ ಗುಂಡು. ಇದು ಬೇಯದು, ಮಡಕೆಯನೊಡೆ, ಜಲವ ತಡಹು, ತಂಡುಲವ ಚೆಲ್ಲು, ಮಾರುತನ ಬೆಂಕಿಯ ಕೆಡಿಸು, ಓಗರದೂಟದ ಬಿಡು, ಭವಸಾಗರದ ಸಾಧನೆಯನೆ ಗೈ, ಕಾಹುರದ ಕಮ್ಮಟವ ಪರರುವ ಬೋಧಿಸುವ ರಸನವ ಕೀಳು, ಕಿತ್ತ ಮತ್ತೆ ಇನ್ನರಿ. ಸಕಲೇಂದ್ರಿಯದ ಹುತ್ತದ ಹಾವ ಹಾಡಿ. ಮೊತ್ತದ ಮನೆ ವಿಕಾರದ ಚಿತ್ತದ ಹುಲಿಯ ಮುರಿ. ಭಕ್ತಿಗೆ ಸಹ ಕರ್ತುವ ಚಿತ್ತದಲ್ಲಿ ಅಚ್ಚೊತ್ತಿದಂತಿರು. ಸಚ್ಚಿದಾನಂದ ಹೃದಯಪೂರಿತನಾಗಿ ಬೆಚ್ಚಂತಿರು. ವಿರಳವಿಲ್ಲದೆ ಅವಿರಳನಾಗಿ ಎನಗೊಂದು ತೊಡುಗೆಯಿಲ್ಲ, ನಿನ್ನಡಿಯಲ್ಲಿ ಅಡಗಿದೆನಾಗಿ ನಿನ್ನ ಒಡಗೂಡುವ ಕಡೆಯಾವುದು? ಎನ್ನ ಕಾಯಕದ ಬಿಡುವಾವುದು? ಅಂದಾಡಿದ ಮಾತಿನ ಕಡಿವೆಂಗೆ ಬಂದ ಮೊಡತದ ನಗೆಯ ಕಾಯಕ ಸಂದಿತ್ತು. ನಿನ್ನಯ ಕೂಪಳ ಬಯಲಾಗಿ ಅಜಾತನೆ ಸಲಹು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಆರು ವರ್ಣದ ಬೇರು ಮೂರು ವರ್ಣದ ಉದಕ, ರವೆ ತೋರಬಾರದ ಕಲ್ಲು, ಇಂತಿವ ಮೀರಬಾರದ ಗುಂಡು. ಇಂತಿವ ಭೇದಿಸಿ ಅರೆಯಲಾಗಿ ಸವೆಯಿತ್ತು ಮದ್ದು , ವಿಶ್ವಾಸವೆಂಬ ತಟ್ಟೆಯಲ್ಲಿ. ಭಕ್ತಂಗೆ ಮೂರು, ಮಾಹೇಶ್ವರಂಗೆ ನಾಲ್ಕು, ಪ್ರಸಾದಿಗೆ ಐದು, ಪ್ರಾಣಲಿಂಗಿಗೆ ಆರು, ಶರಣಂಗೆ ಎಂಟು, ಐಕ್ಯಂಗೆ ಹತ್ತು ಇಂತೀ ಕ್ರಮದಲ್ಲಿ ಕೊಂಡ ಮತ್ತೆ , ಮೂರು ನಾಲ್ಕುಗೂಡಿ, ಆರು ಎಂಟುಗೂಡಿ, ಎಂಟುಹತ್ತುಗೂಡಿ ನಷ್ಟವಾದ ಮತ್ತೆ , ರೋಗದ ಕಟ್ಟು ತೊಟ್ಟು ಬಿಟ್ಟಿತು. ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನರಿಯಲಾಗಿ.
--------------
ವೈದ್ಯ ಸಂಗಣ್ಣ
ನಿಜ ಹೃದಯಾಂಬುಜದಲ್ಲಿ ನಿರಾಳ ಪ್ರಣಮ ಪೀಠವಾಗಿರ್ಪನೊರ್ವ ಆಗೋಚರ ಶಿವಯೋಗಿಯು. ಆತನೆರಡು ಗುಂಡು ಹೊಸೆದಡೆ ಗೋಚರನಪ್ಪ ಕಾಣಾ, ನಿಜಗುಣಲಿಂಗ ಸಾಕ್ಷಿಯಾಗಿ, ಸಿದ್ಧರಾಮಯ್ಯ.
--------------
ನಿಜಗುಣಯೋಗಿ
ಭಕ್ತಿಯೆಂಬ ಭಾಂಡದಲ್ಲಿ ಸತ್ಯವೆಂಬ ಅಕ್ಕಿಯ ಹೊಯಿದು ನಿರ್ಮಲವೆಂಬ ಉದಕವ ಸಂಬಂಧಿಸಿ ತ್ರಿಗುಣವೆಂಬ ಮೂರು ಒಲೆಯ ಗುಂಡು ಆತುರದ ಸೌದೆ, ಸುಡದ ಬೆಂಕಿಯಲ್ಲಿ ಉರುಹಲಾಗಿ, ಓಗರ ಬೆಂದಿತ್ತು, ಇಕ್ಕುವರಿಲ್ಲ, ಉಂಬವರ ಕಾಣೆ, ಆತುವವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
-->