ಅಥವಾ

ಒಟ್ಟು 21 ಕಡೆಗಳಲ್ಲಿ , 1 ವಚನಕಾರರು , 21 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡುವಲ್ಲಿ ನೆರೆ ಶೃಂಗಾರವಲ್ಲದೆ, ಕೂಡುವಲ್ಲಿ ಉಂಟೆ ? ನುಡಿವಲ್ಲಿ ಮಾತಿನ ಬಲುಮೆಯಲ್ಲದೆ, ಸಂಸಾರವ ಸಾಧನವ ಮಾಡುವಲ್ಲಿ ಮುಟ್ಟದಿಪ್ಪುದುಂಟೆ ? ನಡೆ ನುಡಿ ಸಿದ್ಧಾಂತವಾದ ಶರಣಂಗೆ ಪಡಿಪುಚ್ಚವಿಲ್ಲ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ರಸ ಉಂಬಲ್ಲಿ, ಗಂಧ ವಾಸಿಸುವಲ್ಲಿ, ರೂಪು ನಿರೀಕ್ಷಣೆಯಲ್ಲಿ, ಶಬ್ದ ಗೋಚರದಲ್ಲಿ, ಸ್ಪರ್ಶ ತ್ವಕ್ಕಿನಲ್ಲಿ, ಪಂಚಪುಟ ಭೇದಂಗಳಲ್ಲಿ, ಅಷ್ಟಗುಣ ಮದಂಗಳ ಪಟ್ಟಣದ, ಷೋಡಶದ ರೂಡ್ಥಿಯ ಷಡ್ಚಕ್ರದ ಆಧಾರದ, ಪಂಚವಿಂಶತಿಯ ನಿಳೆಯದ ಸಂಚಾರದ, ನವಕವಾಟದ, ತ್ರಿಶಕ್ತಿ ಸಂಪದದ, ತ್ರಿಗುಣಾತ್ಮನ ತ್ರಿಗುಣ ಓಹರಿಯಲ್ಲಿ ಬಳಸಿಪ್ಪ ಬಂಧದಲ್ಲಿ ಮಗ್ನವಾಗದೆ, ಜಾಗ್ರ [ಸ್ವಪ್ನ] ಸುಷುಪ್ತಿ ತ್ರಿವಿಧ ಘಟಪಟಲ ತತ್ವನಿರಸನ ನಿರ್ವಿಕಾರನಾಗಿ, ಇಂತಿವರಲ್ಲಿ ಅವಘಾನವಾಗಿ ಮುಳುಗದೆ, ನೀರನಿರಿದ ಕೈದಿನಂತೆ ಕಲೆದೋರದೆ, ಆವ ಸುಖಂಗಳಲ್ಲಿ ಅಬ್ಥಿನ್ನವಾಗಿ, ಜಲದೊಳಗಣ ಶಿಲೆ, ಶಿಲೆಯೊಳಗಣ ವಹ್ನಿ ಸುಳುಹುದೋರದ ತೆರ, ಮಥನಕ್ಕೆ ಕಂಡು, ಕಾಣದಡಗಿಪ್ಪ ತೆರ, ಲಿಂಗಾಂಗಿಯ ಇರವು. ಇದು ಸಿದ್ಧವಾಗಬೇಕು, ಶರೀರದ ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿವುದಕ್ಕೆ. ಇದೇ ಅಂಜನಸಿದ್ಧಿ.
--------------
ಮನುಮುನಿ ಗುಮ್ಮಟದೇವ
ಇಕ್ಷುದಂಡದ ತುದಿಯ ಸುಳಿಯಲ್ಲಿ ಹುಟ್ಟಿತೊಂದು ಗಿಳಿ, ರಟ್ಟೆ ಮೂರು, ಕಾಲೊಂದು, ಬಾಯಿ ಎರಡಾಗಿ. ಮುಚ್ಚಿದ ಕಣ್ಣು, ಮೂಗಿನ ಕೆಂಪು, ಮೈಯ ರಕ್ತವರ್ಣ, ತುಪ್ಪುಳು ಕಪ್ಪು, ಕಾಲು ಹಳದಿ, ಬಾಯಿ ಬೆಳ್ಳಗೆ ಹಾರಾಡುವ ಬಯಲರೂಪು, ತೋರದ ಆಗರದಲ್ಲಿ ಹಾರಿಹೋಯಿತ್ತು. ಆತ್ಮನೆಂಬ ರಾಮ, ಪಂಜರವಿಲ್ಲದೆ ಹೋಯಿತ್ತು, ಗುಡಿಯೊಡೆಯ ಗುಮ್ಮಟನಾಥನಲ್ಲಿ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಅರಿದೆಹೆನೆಂದು ಭಾವಿಸುವನ್ನಕ್ಕ, ಶರೀರವಳಿದ ಮತ್ತೆ, ಅರಿವುದೇನು ? ಸಕಲಭೋಗಂಗಳಲ್ಲಿ ಇದ್ದು ಬೆರಸಿ, ಮಗ್ನವಾಗದೆ ಗೇರಿನ ಫಲದಂತೆ ಇರು. ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿವುದಕ್ಕೆ.
--------------
ಮನುಮುನಿ ಗುಮ್ಮಟದೇವ
ಅಮೃತದ ಗುಟಿಕೆಯ ಮರೆದು, ಅಂಬಲಿಯನರಸುವನಂತೆ, ಶಂಬರವೈರಿ ತನ್ನಲ್ಲಿ ಇದ್ದು, ಕುಜಾತಿಯ ಬೆಂಬಳಿಯಲ್ಲಿ ಹೋಹವಂಗೆ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ, ಅವರಿಗೆ ಇಲ್ಲಾ ಎಂದೆ.
--------------
ಮನುಮುನಿ ಗುಮ್ಮಟದೇವ
ಕಣ್ಣೆಂಬ ಹರುಗೋಲದಲ್ಲಿ ಮಾರ ಅಂಬಿಗನಾಗಿ, ಮಥನದ ಹೊಳೆಯಲ್ಲಿ ರಸದ ಕೋಲನಿಕ್ಕಿ ಒತ್ತಲಾಗಿ, ಮಸಕಿತ್ತು ಹರುಗೋಲು. ದೆಸೆಗೆ ಹೋಗಲಾರದು, ತಡಿಗೆ ಸಾಗದು, ಮಡುವಿನಲ್ಲಿ ಮರಳಿತ್ತು. ಇದಕಂಜಿ ನಡುಗಿದೆ, ಹರುಗೋಲ ಕಂಡು, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿಯದೆ.
--------------
ಮನುಮುನಿ ಗುಮ್ಮಟದೇವ
ಪ್ರಾಣ ತುಡುಕಿಗೆ ಬಂದಲ್ಲಿ, ಕೊರಳ ಹಿಡಿದು ಅವುಕಿ ಕೊಂದರೆಂಬ ಅಪಕೀರ್ತಿಯೇಕೆ ? ಬೀಳುವ ಪಾದುಕವ ತಳ್ಳಿ ಘನವ ಹೊರಲೇಕೆ ? ಬೇವ ಮನೆಗೆ ಕೊಳ್ಳಿಯ ಹಾಕಿ ದುರ್ಜನವ ಹೊರುವನಂತೆ, ಅರಿಯದವನ ಅರಿಯರೆಂದು ಬಿರುದು ಮಾಡುವನ ಅರಿವು, ಹರಿ[ದ] ಹರುಗೋಲವನೇರಿದಂತೆ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗಾ.
--------------
ಮನುಮುನಿ ಗುಮ್ಮಟದೇವ
ಅಂಬುಧಿಯಲ್ಲಿ ಅಂಬಿಗ ಮನೆಯ ಮಾಡಿ, ಕುಂಭಿನಿಯಲ್ಲಿ ಇರಲೊಲ್ಲದೆ, ಹರುಗೋಲ ಬೆಂಬಳಿಯಲ್ಲಿ ಬದುಕಿಹೆನೆಂದು [ಹೋದಡೆ] ಹರುಗೋಲು ತುಂಬಿ, ಮಂದಿ ಸಂದಣಿಸಿತ್ತು. [ಗ]ಣಿಯ ಹಿಡಿದು ಒತ್ತುವುದಕ್ಕೆ ಠಾವಿಲ್ಲದೆ, ಅಂಬಿಗ ಹಿಂಗಿದ. ಹೆರೆಸಾರಿ ಹರುಗೋಲು ಅಂಬುಧಿಯಲ್ಲಿ ಮುಳುಗಿತ್ತು, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿಯದೆ.
--------------
ಮನುಮುನಿ ಗುಮ್ಮಟದೇವ
ನಾನೊಂದು ಗಿಳಿಯ ಕಂಡೆ, ಬೆಕ್ಕಿನ ಬಾಧೆ ಘನ. ತಾ ಕೋಲಿನಲ್ಲಿದ್ದಡೆ ಶಯನಕ್ಕೆ ಆಸೆಯಿಲ್ಲ. ಪಂಜರಕ್ಕೆ ಸಂದ ಕೂಡುವ ಸಂಗದವನಿಲ್ಲ. ಕೊರೆಯ ಕೂಳನಿಕ್ಕುವುದಕ್ಕೆ ಅಡಿಗರಟವಿಲ್ಲ. ಗಿಳಿಯ ಹಿಡಿದು ನಾ ಕೆಟ್ಟೆ. ಹಕ್ಕಿಯ ಹಂಬಲಿಲ್ಲ, ಗುಡಿಯೊಡೆಯ ಗುಮ್ಮಟನಾಥ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಬಂದವನಿವನಾರು, ಕಂಬಳಿಯ ಕಂಥೆಯ ತೊಟ್ಟು, ಆಪ್ಯಾಯನ ಹಿಂಗದ ಕರಕರ್ಪರವ ಹಿಡಿದು, ದೆಸೆವರಿವ ದಶದಂಡವ ಹಿಡಿದು, ಮನೆ ಮನ ಮಂದಿರದ ಬಾಗಿಲಲ್ಲಿ ನಿಂದು, ಇಂದ್ರಿಯಂಗಳೆಂಬ ತೃಷ್ಣೆ ಭಿಕ್ಷವಂ ಬೇಡಿ, ಬೇಡಿದ ದನಿಯ ಕೇಳಿ ಎದ್ದವೈದು ನಾಯಿ. ಹಮ್ಮಿ ಕಚ್ಚಿತ್ತು ಕಾಲ, ಮತ್ತೊಂದಡರಿ ಅಂಗವ ಹಿಡಿಯಿತ್ತು. ಮತ್ತೊಂದು ಒಡಗೂಡಿ ಕೈಯ ಕಚ್ಚಿತ್ತು. ಮತ್ತೊಂದು ಬೆರಸಿ, ನಾಸಿಕವ ಓಸರವಿಲ್ಲದೆ ಹಿಡಿಯಿತ್ತು. ಮತ್ತೊಂದು ಭಿಕ್ಷೆಗೆ ತಪ್ಪದೆ ಬಾಯ ಹಿಡಿಯಿತ್ತು. ಭಿಕ್ಷದಾಟ ತಪ್ಪಿತ್ತು, ಕಂಬಳಿಯಣ್ಣ ಕಂಬಳಿಯಲ್ಲಿ ಅಳಿದ. ಇದಕಿನ್ನು ಬೆಂಬಳಿಯ ಹೇಳಾ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವೆ.
--------------
ಮನುಮುನಿ ಗುಮ್ಮಟದೇವ
ಘಟದಲ್ಲಿ ಆತ್ಮ ದಿಟಕರಿಸುವುದಿಲ್ಲವೆಂದು ಅರಿದ ಮತ್ತೆ, ಕುಟಿಲದ ರಸವಾದದ ಮಾತಿನ ಮಾಲೆಯೇಕೆ ? ಆಗುಚೇಗೆಯನರಿದು ಬೋಧಿಸಲೇಕೆ, ಭೋಗಂಗಳಿಗಾಗಿ ? ಇದು ಮರುತನ ಇದಿರಿನ ದೀಪ, ಸುರಚಾಪದ ಬಣ್ಣ, ಶರೀರದ ಅಳಿವು. ಸಾಕಾರದಲ್ಲಿ ಇದ್ದು, ನಿರಾಕಾರವನರಿ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವ.
--------------
ಮನುಮುನಿ ಗುಮ್ಮಟದೇವ
ಕಾಲನ ಗೆದ್ದೆಹೆನೆಂದು ಮಾಡಿ ಬೇಡದ ನಿತ್ಯಾರ್ಚನೆ. ಘಟಲಿಂಗಕ್ಕೆ ಹೊತ್ತಿನ ಗೊತ್ತಿನ ಕಟ್ಟುಂಟೆ ? ಕತ್ತಲೆಯ ಮನೆಯಲ್ಲಿ ಕುಳಿತು ಸಕ್ಕರೆಯ ಮೆದ್ದಡೆ, ಕತ್ತಲೆಗೆ ಅಂಜಿ ಮೆತ್ತನಾಯಿತ್ತೆ ಸಕ್ಕರೆಯ ಮಧುರ ? ಚಿತ್ತದ ಪ್ರಕೃತಿ ಹಿಂಗಿ, ನಿಶ್ಚಯ ನಿಜ ನೆಮ್ಮುಗೆಯಲ್ಲಿ ಮಾಡುವಡೆ, ಚಿತ್ತದಲ್ಲಿ ಅಚ್ಚೊತ್ತಿದಂತೆಯಿಪ್ಪ ಹೊತ್ತಿನ ಗಡಿಯವನಲ್ಲ. ಚಿತ್ತಜಹರ ಗುಡಿಯೊಡೆಯ ಗುಮ್ಮಟನ ಅಗಮ್ಯೇಶ್ವರಲಿಂಗ ಕಟ್ಟುಗೊತ್ತಿನೊಳಗಲ್ಲ.
--------------
ಮನುಮುನಿ ಗುಮ್ಮಟದೇವ
ಮದನನ ಚಾಪ, ಮನ್ಮಥನ ಗಂಧ, ಚದುರರ ಮಾತು, ಸಂಪಲಿಯಗನ್ನ, ಇರಿಯದ ವೀರ, ವಸ್ತುವಿನಲ್ಲಿ ಕರಿಗೊಳ್ಳದವನ ವಾಚ, ಅಜನ ಕೊರಳ ಸೂತೆಯಂತೆ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ನೋಡುವ ಮುಕುರ ತಾನಾಡಿದಂತೆ. ಕೂಡಿದ ಸಂಗ, ಪುನರಪಿ ತುರೀಯಕ್ಕೆ ಏರದಂತೆ, ಹಂದೆ, ಕಲಿಯಲ್ಲಿ ನೊಂದು, ಚೌಭಟ ಅಂಗಕ್ಕೆ ಹೋರದಂತೆ, ಕರಣಂಗಳಲ್ಲಿ ಹಿಂಡಿ ಹಿಳಿದು ಹಿಪ್ಪೆಯಾಗಿ ನೊಂದು, ಲಿಂಗದ ಸಂಗಕ್ಕೆ ಹಿಂಗಲಾರೆ. ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವ ಒಡಗೂಡುವ ಠಾವ ಹೇಳಾ.
--------------
ಮನುಮುನಿ ಗುಮ್ಮಟದೇವ
ಆಲೆಯ ಮನೆಯಲ್ಲಿ ಅಕ್ಕಿಯ ಹೊಯಿದು, ಕೋಣೆಯಲ್ಲಿ ಕೂಳನರಸುವನಂತೆ, ತನ್ನ ಮಾತಿನ ಗೆಲ್ಲ ಸೋಲಕ್ಕೆ ದೇವತಾಭಾವವ ಅಲ್ಲ ಅಹುದೆಂದು ಹೋರುವನ ಸೊಲ್ಲು, ಕಾಲುವಳ್ಳವ ಮುಚ್ಚಿದ ಮತ್ಸ್ಯದಂತೆ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಇನ್ನಷ್ಟು ... -->