ಅಥವಾ

ಒಟ್ಟು 13 ಕಡೆಗಳಲ್ಲಿ , 5 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಗಸಂಯೋಗವೆಂಬ ಪಟ್ಟಣದಲ್ಲಿ ಒಂದು ಲಿಂಗದ ಗುಡಿಯ ಕಂಡೆನಯ್ಯ. ಆ ಗುಡಿಯೊಳಗೆ ಒಬ್ಬ ಪೂಜಿತ ರೂಪನ ಕಂಡೆನಯ್ಯ. ಆ ಪೂಜಿತನ ಪಂಚಮುಖದ ಸರ್ಪ ನುಂಗಿ, ಆ ಸರ್ಪನ ಕೋಳಿ ನುಂಗಿ, ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತತ್ ತ್ವಂ ಅಸಿಯೆಂಬ ತ್ರಿವಿಧಭೇದಂಗಳಲ್ಲಿ ತ್ರಿವಿಧಮಯನಾಗಿ, ತ್ರಿಗುಣಾತ್ಮನಾಗಿ, ತ್ರಿಶಕ್ತಿಪತಿಯಾಗಿ ಗತಿಯ ತೋರಿಹೆನೆಂದು ಪ್ರತಿರೂಪಾದೆ. ಎಳ್ಳಿನೊಳಗಣ ಎಣ್ಣೆ, ಕಲ್ಲಿನೊಳಗಣ ಬೆಂಕಿ, ಬೆಲ್ಲದೊಳಗಣ ಮಧುರ, ಅಲ್ಲಿಯೆ ಅಡಗಿ ಮಥನದಿಂದಲ್ಲದೆ ತೋರದವೊಲು ಅಲ್ಲಿಯೆ ಅಡಗಿದೆ ಗುಡಿಯೊಳಗೆ, ಗುಮ್ಮಟನಾಥನ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಎನ್ನೊಡಲೊಳಗೆ ತೋರಿ ತೋರಿ ಅಡಗುವ ನಿಮ್ಮ ಬೆಡಗು ಬಿನ್ನಾಣವ ತಿಳಿಯಬಾರದು. ಭಕ್ತಕಾಯ ಮಮಕಾಯ ಭಕ್ತಪ್ರಾಣ ಮಮಪ್ರಾಣವೆಂಬ ನಿಮ್ಮ ನುಡಿ ಸೂಚಿಸುತ್ತದೆ. ಇದು ಕಾರಣ, ಎನ್ನ ತನುವೆಂಬ ಗುಡಿಯೊಳಗೆ ಮನೋಮೂರ್ತಿಲಿಂಗವಾಗಿ ಇನಕೋಟಿ ಪ್ರಭೆಯನೊಳಕೊಂಡು ಹೆರೆಹಿಂಗದೆ ನಿರಂತರ ಬೆಳಗುತ್ತಿರಬೇಕಯ್ಯಾ ನೀವು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಒಂದು ಗುಡಿಯೊಳಗೆ ಮೂರು ಲಿಂಗವ ಕಂಡೆನಯ್ಯ. ನವಗೃಹಂಗಳ ಮೀರಿ ನಿಂದಿರುವ ಪುರುಷನ ಕಂಡು ಎನ್ನ ಮನದ ಭ್ರಾಂತು ಹಿಂಗಿತು ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅರಿದು ಬಲ್ಲವನಾದಡೆ ಮುರಿ ಕಾಲ, ಉಡುಗು ಕೈಯ, ಶಿರವ ಕಡಿ, ಬಿಡು ಮೂರ. ಸಡಗರಿಸು ಗುಡಿಯ ಕಂಬವ, ಅರಿದು ನೋಡು. ಅಡಗಿ ಗುಡಿಯೊಳಗೆ ಒಡಗೂಡು ಅಗಮ್ಯೇಶ್ವರಲಿಂಗವ.
--------------
ಮನುಮುನಿ ಗುಮ್ಮಟದೇವ
ಕೊಳ್ಳಿಯ ಬೆಳಕಿನಲ್ಲಿ ಕುಳಿತು, ಒಡ್ಡದ ತಳಿಗೆಯಲಿ ಅಂಬಲಿಯನಿಕ್ಕಿಕೊಂಡು, ಸುರಿದು ಕೈದೊಳೆದು ಮುರಿದ ಗುಡಿಯೊಳಗೆ, ಹರಿದ ತಟ್ಟೆಯ ಮೇಲೆ ಹರಿದ ಬೊಂತೆಯ ಹಾಸಿಕೊಂಡು, ಕೆಡದಿಹಂಗೊಬ್ಬ ಮಗ ಹುಟ್ಟಿ, ಸಿರಿವಂತನಾದಡೆ, ಇಳಿಯ ಬಿಟ್ಟು ಕಳೆಯದಿಹನೆ ಹಿಂದಣ ಕಷ್ಟದರಿದ್ರವ ? ಬಂಡಿಯ ಹಿಡಿದಾತನ ತಂದೆಯ ತಲೆ ಹೋಹುದುಯೆಂದು ಪಿತರಾಚಾರವೆಂದು ವೃಥಾ ಸಾವನೆ ? ಕಂದ ಜಾಣನಾದಡೆ ತಮ್ಮ ತಂದೆಯಂತಹನೆ ? ವಿಷಯದಿಂ ಬಂದ ದೈವಂಗಳಿಗೆ ಅನು ಎಂದೂ ಎರಗೆ, ಸೊಡ್ಡಳಂಗಲ್ಲದೆ.
--------------
ಸೊಡ್ಡಳ ಬಾಚರಸ
ಹಾವು ಹಲ್ಲಿ ಮಾರ್ಜಾಲ ಇವ ಹಾಯಿಸಿ ಕಂಡೆಹೆನೆಂಬುದರಿಂದ ಕಡೆಯೆ, ಲಿಂಗವ ಹಿಡಿದಿದ್ದ ಸಾಕಾರ ಅಂಗನ ಇರವು ? ಮುಂದೆ ಬಹುದ ಹೇಳಿಹೆನೆಂದು ವಿಹಂಗನನೆಬ್ಬಿಸಿ, ಹೋಹರ ಕಂಡು ನಂಬುವರಿಂದ ಕಡೆಯೆ, ಲಿಂಗವ ಹಿಡಿದ ಅಂಗ ? ಛೀ, ಸಾಕು ಸುಡು. ಇವರಿಗೆ ಲಿಂಗ ಕೊಟ್ಟ ದರುಶನ[ವ], ಭಂಡನ ಕಂಡು ಅಡಗಿದ ಗುಡಿಯೊಳಗೆ, ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಒಡಲೆಂಬ ಗುಡಿಯೊಳಗೆ ಒಡೆದು ಮೂಡಿದ ಲಿಂಗವಿರ್ದೆಡೆಯ ನೋಡಲೆಂದು ಹೋದರೆ ನೋಡುವ ನೋಟವೆಲ್ಲ ತಾನೆಯಾಗಿತ್ತು. ಈ ಬೆಡಗು ಬಿನ್ನಾಣದ ಲಿಂಗವ ತುಡುಕಿ ಹಿಡಿದು ಕೊಳಬಲ್ಲಾತ ಮೃಡನಲ್ಲದೆ ಮಾನವನಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ತಾನೇ ಬೇರಿಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ತನುವೆಂಬ ಗುಡಿಯೊಳಗೆ, ಮನವೆಂಬ ಸಿಂಹಾಸನವನಿಕ್ಕಿ, ಘನಮಹಾಲಿಂಗವ ಮೂರ್ತಿಗೊಳಿಸಿ, ಸಕಲ ಕರಣಂಗಳಿಂದೆ ಪೂಜೋಪಚಾರವ ಶೃಂಗರಿಸಬಲ್ಲರೆ ಘನಕ್ಕೆ ಘನಮಹಿಮನೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಐದು ಎಲೆಯ ಮಂಟಪದ ಮೇಲೆ ಒಂದು ಲಿಂಗದ ಗುಡಿಯ ಕಂಡೆನಯ್ಯ. ಆ ಗುಡಿಯೊಳಗೆ ಒಬ್ಬ ಸತಿಯಳು ನಿಂದು ತನ್ನ ಸುಳುವಿನ ಭೇದವ ತಾನೇ ನೋಡುತಿರ್ಪಳು ನೋಡಾ ! ಮೇಲಿಂದ ಒಬ್ಬ ಪುರುಷನು ಆ ಸತಿಯಳ ಕೈವಿಡಿದು ನಿರ್ವಯಲಾದನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವಿಶ್ವತೋಬ್ರಹ್ಮಾಂಡವನೊಳಕೊಂಡು ಇರ್ದ ಲಿಂಗವ ನೋಡಹೋಗದಮುನ್ನ ಅದು ಎನ್ನನೊಳಗೊಂಡಿತ್ತಯ್ಯ. ಅದಕ್ಕೆ ಮುಖ ಒಂದು, ಅಂಗ ಮೂರು, ಹಸ್ತಂಗಳಾರು, ಪಾದ ಮೂವತ್ತಾರು. ಒಂಬತ್ತು ಬಾಗಿಲ ಗುಡಿಯೊಳಗೆ ಪೂಜೆಗೊಂಬ ಲಿಂಗವನು ಅಂಗಕರಣವನುಳಿದು ಲಿಂಗಕಿರಣವಾದವರಿಂಗೆ ಕಾಣಬಪ್ಪುದಯ್ಯ, ಅಂಗಕರಣವಿರ್ದು ಲಿಂಗಕಿರಣವಿಲ್ಲದವರಿಂಗೆ ದೂರವಾಗಿಪ್ಪುದಯ್ಯ ಆ ಲಿಂಗವು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಷ್ಟಭೂಮಿಯ ಮಧ್ಯದಲ್ಲಿ ಹುಟ್ಟಿತೊಂದು ಬೆಟ್ಟ. ತಳಸೂಜಿಯ ಮೊನೆಯಗಲ ಹಣೆ ಲೆಕ್ಕಕ್ಕೆ ಬಾರದ ವಿಸ್ತೀರ್ಣ. ಆ ವಿಸ್ತೀರ್ಣದಲ್ಲಿ ಹುಟ್ಟಿದರು ಮೂವರು ಮಕ್ಕಳು: ಒಬ್ಬ ಹೇಮವರ್ಣ, ಒಬ್ಬ ಕಪೋತವರ್ಣ, ಒಬ್ಬ ಶ್ವೇತ ವರ್ಣ. ಈ ಮೂವರು ಮಕ್ಕಳ ತಾಯಿ: ಒಬ್ಬಳಿಗೆ ಬಾಯಿಲ್ಲ, ಒಬ್ಬಳಿಗೆ ನಾಲಗೆಯಿಲ್ಲ, ಒಬ್ಬಳಿಗೆ ಹಲ್ಲಿಲ್ಲ. ಇಂತೀ ಮೂವರು ಕೂಡಿ ಮಾತಾಡುತ್ತಿದ್ದರು. ಮಾತಾಡುವುದ ಕಂಡು, ಇದೇತರ ಮಾತೆಂದು ಅಡಗಿದ ಗುಡಿಯೊಳಗೆ. ಅಡಗಿದ, ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಒಂಬತ್ತು ತಲೆಯ ಮೇಲೆ ಶಂಭುಲಿಂಗದ ಗುಡಿಯ ಕಂಡೆನಯ್ಯ. ಆ ಗುಡಿಯೊಳಗೆ ಒಬ್ಬ ಸತಿಯಳು ತನ್ನ ಸುಳುವ ತಾನೆ ತೋರುತಿರ್ಪಳು ನೋಡಾ ! ಒಬ್ಬ ಮಾನವನು ಸುಳುವಿನ ಭೇದವನರಿತು ನೆನವೆಂಬ ಸತಿಯಳ ಕೂಡಿಕೊಂಡು ಆ ಗುಡಿಯ ಪೊಕ್ಕು ಲಿಂಗಾರ್ಚನೆಯ ಮಾಡುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->