ಅಥವಾ

ಒಟ್ಟು 12 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಗಳ ಕತ್ತಲೆಯ ಕೆಡಿಸಿದ ರವಿಯ ಚಂದದಂತಾಯಿತ್ತೆನ್ನಗುರುವಿನುಪದೇಶ. ಕನ್ನಡಿ ರವಿಯ ತನ್ನೊಳಗೆ ಇರಿಸಿದಂತಾಯಿತ್ತೆನ್ನ ಗುರುವಿನುಪದೇಶ. ಜಲದ ನಿರ್ಮಳ ಗಗನವನೊಳಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ. ಚಂದ್ರಕಾಂತದ ಶಿಲೆಯ ಬಂದು ಚಂದ್ರಮ ಸೋಂಕಿದಂತಾಯಿತ್ತೆನ್ನ ಗುರುವಿನುಪದೇಶ. ಕೊಡನೊಳಗಣ ಬಯಲ ಹಂಚಿಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ. ಇದು ಕಾರಣ, ದರ್ಪಣಕೆ ದರ್ಪಣವ ತೋರಿದಂತಾಯಿತ್ತೆನ್ನ ಗುರುವಿನುಪದೇಶ. ಮಹಾಘನ ಸದ್ಗುರು ಸಿದ್ಧಸೋಮನಾಥನೆಂಬ ಲಿಂಗದಂತಾಯಿತ್ತೆನ್ನ ಗುರುವಿನುಪದೇಶ.
--------------
ಅಮುಗಿದೇವಯ್ಯ
ಇನನ ಕಂಡ ತಮದಂತಾಯಿತ್ತೆನ್ನ ಗುರುವಿನುಪದೇಶ, ವಾಯುವಿನ ಕೈಯ ಸೊಡರಿನಂತಾಯಿತ್ತೆನ್ನ ಗುರುವಿನುಪದೇಶ, ಉರಿಯ ಮುಖದೊಳಗಿಪ್ಪ ಕರ್ಪುರದಂತಾಯಿತ್ತೆನ್ನ ಗುರುವಿನುಪದೇಶ. ಮಹಾಘನ ಸೌರಾಷ್ಟ್ರ ಸೋಮೇಶ್ವರನ ಸದ್ಗುರುವೆನ್ನ ಕರಸ್ಥಲಕ್ಕೆ ಕೃಪೆಮಾಡಿದ ಕಾರಣ ಸಕಲಪ್ರಪಂಚು ಬಿಟ್ಟೋಡಿತ್ತು.
--------------
ಅಜಗಣ್ಣ ತಂದೆ
ಬಯಲೊಳೆರಗಿದ ಸಿಡಿಲಿನಂತಾಯಿತ್ತೆನ್ನ ಗುರುವಿನುಪದೇಶ. ಮಿಂಚಿನ ಪ್ರಭೆಯ ಸಂಚದಂತಾಯಿತ್ತೆನ್ನ ಗುರುವಿನುಪದೇಶ. ಸ್ಫಟಿಕದ ಘಟದೊಳಗಣ ಜ್ಯೋತಿಯಂತಾಯಿತ್ತೆನ್ನ ಗುರುವಿನುಪದೇಶ ಮಹಾಲಿಂಗ ವೀರರಾಮೇಶ್ವರನಂತಾಯಿತ್ತೆನ್ನ ಗುರುವಿನುಪದೇಶವೆನಗಯ್ಯಾ.
--------------
ವೈನಿಪುರದ ಸಂಗಮೇಶ್ವರ
-->