ಅಥವಾ

ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಲನಾರಣ್ಯದೊಳಗೆ ಎದ್ದಲ್ಲಿ; ದೂ(ಧು?)ರದೆಡೆಯಲಾರನೂ ಕಾಣೆವು, ಸಂಗ್ರಾಮಧೀರರೆಲ್ಲರೂ ನೆಲೆಗೆಟ್ಟರಾಗಿ ! ಮಾಯಾಮಂಜಿನ ಕೋಟೆಗೆ, ರಂಜನೆಯ ಕೊತ್ತಳ, ಅಂಜನೆಯ ಕಟ್ಟಳೆ. ಗುಹೇಶ್ವರನು ಶರಣ ಐಕ್ಯಸ್ಥಲವ ಮೆಟ್ಟಲೊಡನೆ, ಸರ್ವವೂ ಸಾಧ್ಯವಾಯಿತ್ತು.
--------------
ಅಲ್ಲಮಪ್ರಭುದೇವರು
ಸತ್ತು ಹುಟ್ಟಿ ಕೆಟ್ಟವರೆಲ್ಲರು, ದೇವಲೋಕಕ್ಕೆ ಹೋದರೆಂಬ ಬಾಲಭಾಷೆಯ ಕೇಳಲಾಗದು. ಸಾಯದ ಮುನ್ನ ಸ್ವಯವನರಿದಡೆ ದೇವನೊಲಿವ ನಮ್ಮ ಗುಹೇಶ್ವರನು
--------------
ಅಲ್ಲಮಪ್ರಭುದೇವರು
ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ. ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ. ಆಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ. ಪುಷ್ಪದ ನೇಮವ ಹಿಡಿದಾತ ತುಂಬಿಯಾಗಿ ಹುಟ್ಟುವ ... ಇವು ಷಡುಸ್ಥಲಕ್ಕೆ ಹೊರಗು. ನಿಜಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ಒಕ್ಕು ಮಿಕ್ಕುದ ಕೊಂಬ ನಿಶ್ಚಲಪ್ರಸಾದಿ ನೀ ಕೇಳಾ. ಒಕ್ಕುದಾವುದು? ಮಿಕ್ಕುದಾವುದು? ಬಲ್ಲಡೆ ನೀ ಹೇಳಾ. ಒಕ್ಕು ಹೋಹುದು ಕಾಯ, ಮಿಕ್ಕು ಹೋಹುದು ಪ್ರಾಣ. ಇದು ತಕ್ಕುದೆಂದರಿದು, ಕೊಳಬಲ್ಲಡೆ ಸಿಕ್ಕುವನು ನಮ್ಮ ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ಪಾತಾಳದಿಂದತ್ತ ಮಾತ ಬಲ್ಲವರಿಲ್ಲ, ಗಗನದಿಂದ ಮೇಲೆ ಅನುಭಾವ ತಾನಿಲ್ಲ. ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ; ಹೊರಗಣ ಹೊರಗನು ಅರಿಯಬಲ್ಲವರಿಲ್ಲ. ಹಿಂದಣ ಹಿಂದನು, ಮುಂದಣ ಮುಂದನು, ತಂದು ತೋರಿದ ನಮ್ಮ ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ಕುರೂಪಿ ಸುರೂಪಿಯ ನೆನೆದಡೆ ಸುರೂಪಿಯಪ್ಪನೆ ? ಆ ಸುರೂಪಿ ಕುರೂಪಿಯ ನೆನೆದಡೆ ಕುರೂಪಿಯಪ್ಪನೆ ? ಧನವುಳ್ಳವರ ನೆನೆದಡೆ ದರಿದ್ರ (ದಾರಿದ್ರ್ಯ ?) ಹೋಹುದೆ ? ಪುರಾತರನು ನೆನೆದು ಕೃತಾರ್ಥರಾದೆವೆಂಬರು, ತಮ್ಮಲ್ಲಿ ಭಕ್ತಿ ನಿಷೆ*ಯಿಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ಅಹುದಹುದು, ಭಕ್ತಿಭಾವದ ಭಜನೆ ಎಂತಿರ್ದುದಂತೆ ಅಂತರಂಗದಲ್ಲಿ ಅರಿವು. ಆ ಅಂತರಂಗದ ಅರಿವಿಂಗೆ ಆಚಾರವೆ ಕಾಯ. ಆಚಾರವೆಂಬ ಕಾಯವಿಲ್ಲದಡೆ ಅರಿವಿಂಗೆ ಆಶ್ರಯವಿಲ್ಲ. ಅರಿವು ಆಚಾರದಲ್ಲಿ ಸಮವೇಧಿಸಿದ ಲಿಂಗೈಕ್ಯನ ಕ್ರಿಯಾಬದ್ಧನೆಂದು ನುಡಿದಡೆ ಪಂಚಮಹಾಪಾತಕ. ನಿನ್ನ ಅರಿವಿಂಗೆ ಆಚಾರವಾಗಿ, ಆಚಾರಕ್ಕೆ ಆಳಾಗಿ ನಮ್ಮ ಗುಹೇಶ್ವರನು ನಿನ್ನ ಕೈವಶಕ್ಕೆ ಒಳಗಾದನು ನಿನ್ನ ಸುಖಸಮಾಧಿಯ ತೋರು, ಬಾರಾ ಸಿದ್ಧರಾಮಯ್ಯ
--------------
ಅಲ್ಲಮಪ್ರಭುದೇವರು
``ಅಣೋರಣೀಯಾನ್ ಮಹತೋ ಮಹೀಯಾನ್'' ಎಂಬ ಶ್ರುತಿ ಹುಸಿ. ಲಿಂಗವಿದ್ದಠಾವಿಂಗ್ಞೆ(ಠಾವಿನಲ್ಲಿ?) ಪ್ರಳಯವುಂಟೆ? ಭಕ್ತರ ಭಾವದಲ್ಲಿರ್ಪನಲ್ಲದೆ, ಮತ್ತೆಲ್ಲಿಯೂ ಇಲ್ಲ ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ಮಣ್ಣಿಲ್ಲದ ಹಾಳಿನ ಮೇಲೆ ಕಣ್ಣಿಲ್ಲದ ಕುರುಡನೊಂದು ರತ್ನವ ಕಂಡ. ಕೈಯಿಲ್ಲದವ ತಕ್ಕೊಂಡ, ಕೊರಳಿಲ್ಲದವ ಧರಿಸಿಕೊಂಡ. ಗಂಡನಿಲ್ಲದ ಬಾಲೆ ಆರು ಮಕ್ಕಳ ಹಡೆದು, ಗುಹೇಶ್ವರನೆಂಬಂತರತೊಟ್ಟಿಲ ಕಟ್ಟಿ, ತಾಯಿಯೆದ್ದು ಆಡುವಾಗ ಮಗನೆದ್ದು ಮೊಲೆಯ ಕೊಡುತಿರ್ದ. ಆದ ಕಂಡು ಬೆರಗಾದ ನಮ್ಮ ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ಅಂಡಜವಳಯವಿಲ್ಲದ ಮುನ್ನ, ದ್ವೀಪಂಗಳೇಳೂ ಇಲ್ಲದ ಮುನ್ನ, ರವಿಚಂದ್ರರಿಲ್ಲದ ಮುನ್ನ, ತ್ರಿದೇವತೆಗಳಿಲ್ಲದ ಮುನ್ನ, ಗುಹೇಶ್ವರನು ಉಲುಹಡಗಿರ್ದನಂದು ಅನಂತಕಾಲ !
--------------
ಅಲ್ಲಮಪ್ರಭುದೇವರು
ಅಂಗದೊಳಗೆ ಲಿಂಗ ಲಿಂಗದೊಳಗೆ ಅಂಗ ! ಅಂಗವಿಲ್ಲದೆ ಬೇರೆ ಸಂಗವಿಲ್ಲ ಕಾಣಿರೆ. ಅದೆಂತೆಂದಡೆ; ``ಲಿಂಗಸ್ಥಲಂ ಶಿವಃ ಸಾಕ್ಷಾತ್ ಜೀವಾತ್ಮಾಂಗಸ್ಥಲಂ ಭವೇತ್ ಲಿಂಗಾಂಗಸ್ಥಲಯೋರೈಕ್ಯಂ ಶಿವಜೀವೈಕ್ಯಮೇವಹಿ '' ಎಂದುದಾಗಿ. ಲಿಂಗವಿದ್ದೆಡೆಯ ನೀವು ತಿಳಿದು ನೋಡಿ ಕೂಡಿಕೊಳ್ಳಿ. ಕಾಯವಳಿಯದ ಮುನ್ನವೆ ಕೂಡಿಕೊಳ್ಳಬಲ್ಲಡೆ, ಗುಹೇಶ್ವರನು ಬೇರಿಲ್ಲ ಕಾಣಿರೆ.
--------------
ಅಲ್ಲಮಪ್ರಭುದೇವರು
-->