ಅಥವಾ

ಒಟ್ಟು 14 ಕಡೆಗಳಲ್ಲಿ , 1 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾನು ಜಂಗೆಯಲ್ಲಿ ಹುಟ್ಟಿ ಜಂಗಮವೆನಿಸಿಕೊಳಬಹುದೆ ? ಆಠಾವು ಹಿಂಗಿದಡೆ ಭಂಗಿತನು ಕಂಡಾ. ಅಂತರಂಗದಲೊದಗೂದನರಿಯರು ಗುಹೇಶ್ವರನೆಂಬುದು ಮೀರಿದ ಘನವು
--------------
ಅಲ್ಲಮಪ್ರಭುದೇವರು
ಸತ್ಯವೂ ಇಲ್ಲ, ಅಸತ್ಯವೂ ಇಲ್ಲ, ಸಹಜವೂ ಇಲ್ಲ, ಅಸಹಜವೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ. `ಇಲ್ಲ' `ಇಲ್ಲ' ಎಂಬುದು ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು !
--------------
ಅಲ್ಲಮಪ್ರಭುದೇವರು
ಉದಕದೊಳಗಣ ಕಿಚ್ಚು ನನೆಯಿತ್ತು, ಕಿಚ್ಚಿನೊಳಗಣ ತೇಜ ಬೆಂದಿತ್ತು;_ತಿಳಿದು ನೋಡಾ ಅದೇನೊ ಅದೆಂತೊ ? ಸಂಬಂಧಿಗಳು ತಿಳಿಯರು ನೋಡಾ. ಬೆಳಗಿನೊಳಗಣ ಕತ್ತಲೆಯಡಗಿತ್ತು; ಗುಹೇಶ್ವರನೆಂಬುದು ಅಲ್ಲಿಯೆ ಲಿಂಗೈಕ್ಯವು.
--------------
ಅಲ್ಲಮಪ್ರಭುದೇವರು
ಈಶ್ವರ ನುಡಿದ ನುಡಿಯನರಿದೆಹೆವೆಂದು, ಬೀಸರವೋದರು ಅಣ್ಣಗಳೆಲ್ಲಾ. ಪ್ರಾಣಲಿಂಗವೆಂಬರಯ್ಯಾ. ಮನ ಘನವೆಂದರಿಯದೆ ಮರುಳುಗೊಂಡರು. ಈಶ್ವರನನರಿದಡೆ ತಾ ಶಿವನು. ಗುಹೇಶ್ವರನೆಂಬುದು ಬೇರಿಲ್ಲ.
--------------
ಅಲ್ಲಮಪ್ರಭುದೇವರು
ನರರು ಸುರರು ಕಿನ್ನರರು ಮೊದಲಾದವರೆಲ್ಲರೂ ಪಿಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ, ನಾನವರ ರೂಹಿಸಿ ಬಲ್ಲೆನೆ ಅಯ್ಯಾ ? ದೇವಗಣ ರುದ್ರಗಣ ಪ್ರಮಥಗಣ ಮೊದಲಾದವರೆಲ್ಲರೂ ಬ್ರಹ್ಮಾಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ ನಾನವರ ಭಾವಿಸಿ ಬಲ್ಲೆನೆ ಅಯ್ಯಾ ? ಸತ್ಯರು ನಿತ್ಯರು ಮುಕ್ತರು ಮಹಾಮಹಿಮರೆಲ್ಲರು ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ ನಾನವರ ಅರಿದು ಬಲ್ಲೆನೆ ಅಯ್ಯಾ ? ಇಂತೀ ತ್ರಿಭಾಂಡವನೊಳಕೊಂಡ ಅಖಂಡಿತ ಪರಿಪೂರ್ಣವಪ್ಪ ಭಾಂಡವೆ, ತನ್ನ ಇರವೆಂದರಿದ ನಿಜಲಿಂಗೈಕ್ಯನ_ಉಪಮಿಸಲಿಲ್ಲ, ಉಪಮಿಸಲಿಲ್ಲಾಗಿ ರೂಹಿಸಲಿಲ್ಲ, ರೂಹಿಸಲಿಲ್ಲಾಗಿ ಭಾವಿಸಲಿಲ್ಲ, ಭಾವಿಸಲಿಲ್ಲಾಗಿ ಅರಿಯಲಿಲ್ಲ ! ಅರಿಯಲಿಲ್ಲದ ಅರಿವೆ ತಾನಾಗಿ, ಗುಹೇಶ್ವರನೆಂಬುದು ಬೇರಿಲ್ಲ.
--------------
ಅಲ್ಲಮಪ್ರಭುದೇವರು
ನಾನೆಂಬುದು ಪ್ರಮಾಣ, ನೀನೆಂಬುದು ಪ್ರಮಾಣ. ಸ್ವಯವೆಂಬುದು ಪ್ರಮಾಣ, ಪರವೆಂಬುದು ಪ್ರಮಾಣ. ಪ್ರಮಾಣವೆಂಬುದು ಪ್ರಮಾಣ, ಗುಹೇಶ್ವರನೆಂಬುದು ಅಪ್ರಮಾಣ !
--------------
ಅಲ್ಲಮಪ್ರಭುದೇವರು
ಮುಟ್ಟದ ಮುನ್ನ ನರರು, ಸುರರು, ಕಿನ್ನರರು ಮೊದಲಾದವರೆಲ್ಲರೂ ಪಿಂಡವೆಂಬ ಭಾಂಡದಲ್ಲಿ ಅಡಗಿದರಾಗಿ ನಾನವರ ರೂಪಿಸಬಲ್ಲೆ. ದೇವಗಣ ಪ್ರಮಥಗಣ, ರುದ್ರಗಣಂಗಳೆಂಬವರೆಲ್ಲರೂ ಬ್ರಹ್ಮಾಂಡವೆಂಬ ಭಾಂಡದಲ್ಲಿ ಅಡಗಿದರಾಗಿ, ನಾನವರ ಭಾವಿಸಬಲ್ಲೆ. ಸತ್ಯರು, ನಿತ್ಯರು, ಮುಕ್ತರೆಂಬ ಮಹಾಮಹಿಮರೆಲ್ಲರೂ ಚಿದ್ಭಾಂಡವೆಂಬ ಭಾಂಡದಲ್ಲಿ ಅಡಗಿದರಾಗಿ, ನಾನವರನರಿದು ಬಲ್ಲೆ. ಇಂತೀ ತ್ರಿಭಾಂಡವನೊಳಕೊಂಡ ಆ ಅಖಂಡಿತದಿರವೆ ತಾನೆಂದರಿದ ಲಿಂಗೈಕ್ಯನ ರೂಹಿಸಲಿಲ್ಲಾಗಿ, ಭಾವಿಸಲಿಲ್ಲಾಗಿ, ಅರಿಯಲಿಲ್ಲ. ಅರಿವೆ ತಾನೆಂದರಿದ ಬಳಿಕ, ಗುಹೇಶ್ವರನೆಂಬುದು ಬಯಲು ನೋಡಾ !
--------------
ಅಲ್ಲಮಪ್ರಭುದೇವರು
ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬುದು ಪುಂಡರ ಗೋಷಿ*, ತರ್ಕವೆಂಬುದು ತಗರ ಹೋರಟೆ. ಭಕ್ತಿ ಎಂಬುದು ತೋರಿ ಉಂಬ ಲಾಭ. ಗುಹೇಶ್ವರನೆಂಬುದು ಮೀರಿದ ಘನವು
--------------
ಅಲ್ಲಮಪ್ರಭುದೇವರು
ಅರಸಲಿಲ್ಲದ ಘನವ ಅರಸುವದದೇನೊ? ತಿಳಿವುದದೇನೊ? ತಿಳುಹಿನ ಮುಂದಣ ಸುಳುಹು ತಾನೇನೊ? ಸರದ ಸಮತೆಯ ಪರಿಣಾಮವ ನೋಡಾ ! ಗುಹೇಶ್ವರನೆಂಬುದು ಅದೆ ಕಂಡಾ !
--------------
ಅಲ್ಲಮಪ್ರಭುದೇವರು
ತಲೆಯಲಟ್ಟುಂಬುದ ಒಲೆಯಲಟ್ಟುಂಡಡೆ ಹೊಗೆ ಘನವಾಯಿತ್ತು. ತಲೆಯಲಟ್ಟುಂಡಾತ ಮಹಾಪ್ರಸಾದಿ, ಈಶ್ವರಸ್ವರವ ನುಡಿಯಲರಿಯದೆ ಬೀಸರವೋದರಣ್ಣಗಳೆಲ್ಲ. ಈಶ್ವರ ಸ್ವರವ ನುಡಿದರೆ ತಾನೆ ಶಿವನು ಗುಹೇಶ್ವರನೆಂಬುದು ಬೇರಿಲ್ಲ ಕಾಣಿರೊ.
--------------
ಅಲ್ಲಮಪ್ರಭುದೇವರು
ಹಿಡಿವ ಕೈಯ [ಮೇ]ಲೆ ಕತ್ತಲೆಯಯ್ಯಾ, ನೋಡುವ ಕಂಗಳ ಮೇಲೆ ಕತ್ತಲೆಯಯ್ಯಾ, ನೆರೆವ ಮನದ ಮೇಲೆ ಕತ್ತಲೆಯಯ್ಯಾ, ಕತ್ತಲೆ ಎಂಬುದು ಇತ್ತಲೆಯಯ್ಯಾ, ಗುಹೇಶ್ವರನೆಂಬುದು ಅತ್ತಲೆಯಯ್ಯಾ.
--------------
ಅಲ್ಲಮಪ್ರಭುದೇವರು
ಅರಿದೆನೆಂಬುದು ತಾ ಬಯಲು, ಅರಿಯೆನೆಂಬುದು ತಾ ಬಯಲು, ಅರುಹಿನ ಕುರುಹಿನ ಮರಹಿನೊಳಗೆ ಗುಹೇಶ್ವರನೆಂಬುದು ತಾ ಬಯಲು !
--------------
ಅಲ್ಲಮಪ್ರಭುದೇವರು
ವಸುಧೆಯಿಲ್ಲದ ಬೆಳಸು ರಾಜಾನ್ನ ಹೆಸರಿಲ್ಲದ ಓಗರ, ವೃಷಭ ಮುಟ್ಟದ ಹಯನು, ಬೆಣ್ಣೆಯ ಹೊಸೆವರಿಲ್ಲದೆ ಕಂಡುಂಡೆ. ಶಿಶು ಕಂಡ ಕನಸಿನಂತೆ, ಗುಹೇಶ್ವರನೆಂಬುದು ಹೆಸರಿಲ್ಲದ ಬಯಲು !
--------------
ಅಲ್ಲಮಪ್ರಭುದೇವರು
ಆಕಾಶದ ಬೀಜ ಅಗ್ನಿಯಲೊದಗಿ, ಶಾಖವಿಲ್ಲದೆ ಮೊಳೆತು ಪಲ್ಲವಿಸಿತ್ತು. ಅರಿದೆಹೆನೆಂಬವನನಾರಡಿಗೊಂಡಿತ್ತು. ಈ ನಿರ್ಣಯವನರಿಯದ ಮಾನವಾ, ಗುಹೇಶ್ವರನೆಂಬುದು ಬಯಲ ವಿಕಾರ
--------------
ಅಲ್ಲಮಪ್ರಭುದೇವರು
-->