ಅಥವಾ

ಒಟ್ಟು 31 ಕಡೆಗಳಲ್ಲಿ , 1 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವ ನೆನೆದೆಹೆನೆಂದು ನೆನೆಯುತ್ತಿದ್ದಡೆ ನೆನೆವ ಮನವು ತಾನು ಗುರುವಾಯಿತು ನೋಡಾ. ಆಹಾ ! ಮಹಾದೇವ, ಇನ್ನಾವುದರಿಂದ ? ಆವುದನು ? ಏನೆಂದು ನೆನೆವೆ ? ಮನವೆ ಗುರುವಾದ ಕಾರಣ,_ ಮನವೆ ಗುರುವಾಗಿ ನೆನಹನಿಂಬುಗೊಂಡನು ಗುಹೇಶ್ವರಲಿಂಗ ಚೋದ್ಯಚರಿತ್ರನು !
--------------
ಅಲ್ಲಮಪ್ರಭುದೇವರು
`ನಾ' `ನೀ' ಎಂಬ ಭೇದ ಅಂದೂ ಇಲ್ಲ, ಇಂದೂ ಇಲ್ಲ ಸಾಲೋಕ್ಯನಲ್ಲ ಸಾಮೀಪ್ಯನಲ್ಲ ಶರಣ. ಸಾರೂಪ್ಯನಲ್ಲ ಸಾಯಜ್ಯನಲ್ಲ ಶರಣ. ಕಾಯನಲ್ಲ ಅಕಾಯನಲ್ಲ ಗುಹೇಶ್ವರಲಿಂಗ ತಾನೆಯಾಗಿ
--------------
ಅಲ್ಲಮಪ್ರಭುದೇವರು
ಪೂರಾಯ ಗಾಯ ತಾಗಿ ನೊಂದೆನೆಂದರಿಯೆನಯ್ಯಾ, ಇದ್ದೆನೆಂದರಿಯೆನಯ್ಯಾ, ಸತ್ತೆನೆಂದರಿಯೆನಯ್ಯಾ, ಕಾಯ ಪಲ್ಲಟವಾಯಿತ್ತು ಗುಹೇಶ್ವರಲಿಂಗ ಸ್ವಾಯತವಾಗಿ.
--------------
ಅಲ್ಲಮಪ್ರಭುದೇವರು
ಅನಾದಿಯ ಭ್ರೂಮಧ್ಯದಲ್ಲಿ, ಐದು ಕುದುರೆಯ ಕಟ್ಟಿದ ಕಂಬ, ಮುರಿಯಿತ್ತು ! ಎಂಟಾನೆ ಬಿಟ್ಟೋಡಿದವು ! ಹದಿನಾರು ಪ್ರಜೆ ಬೊಬ್ಬಿಡುತಿರ್ದರು. ಶತಪತ್ರಕಮಲಕರ್ಣಿಕೆಯ ಮಧ್ಯದಲ್ಲಿ ಗುಹೇಶ್ವರಲಿಂಗ ಶಬ್ದ ಮುಗ್ಧವಾಗಿರ್ದನು.
--------------
ಅಲ್ಲಮಪ್ರಭುದೇವರು
ಸಕಲ ಭುವನಾದಿಭುವನಂಗಳಿಗೆ ತಂದೆ, ಸಕಲದೇವಾಧಿದೇವರ್ಕಳಿಗೆ ತಂದೆ. ಭವಭವದಲ್ಲಿ ನೀನೆನ್ನ ತಂದೆ. ಗುಹೇಶ್ವರಲಿಂಗ, ನಿರಾಳದಲ್ಲಿ ನೀನೆನ್ನ ತಂದೆ.
--------------
ಅಲ್ಲಮಪ್ರಭುದೇವರು
ಆಧಾರಲಿಂಗ ಕುಂಡಲಿವಿಡಿದು; ಹೃದಯಕಮಲದಲ್ಲಿ ಬ್ರಹ್ಮ, ನಾಳದಲ್ಲಿ ವಿಷ್ಣು, ನಾಳಾಗ್ರದಲ್ಲಿ ರುದ್ರ, ಭ್ರೂಮಧ್ಯದ ಮೇಲೆ ಈಶ್ವರನು, ಬ್ರಹ್ಮರಂಧ್ರದ ಮೇಲೆ ಸದಾಶಿವನು. ಶಿಖಾಗ್ರದಲ್ಲಿ ಸರ್ವಗತ ಶಿವನು._ ಆದಿ ಅನಾದಿಯಿಲ್ಲದಂದು ಗುಹೇಶ್ವರಲಿಂಗ ನಿರಾಳನು.
--------------
ಅಲ್ಲಮಪ್ರಭುದೇವರು
ಮುನ್ನಿನ ಪರಿಯಂತುಟಲ್ಲ. ಆದಡೆಂತಹುದು? ಆಗದಡೆಂತಾಯಿತ್ತು ? (ಆದಡಿಂತಹುದೆ ? ಆಗದಡಿಂತಾಯಿತ್ತು) ಹಲವು ಪರಿ ಬಗೆಯ ಬಯಕೆ ತಾರ್ಕಣೆಯಾದಂತೆ ಗುಹೇಶ್ವರಲಿಂಗ, ತನುವ ತನ್ನತ್ತಲೊಯ್ದನು.
--------------
ಅಲ್ಲಮಪ್ರಭುದೇವರು
ರೂಪಿಂಗೆ ಬಂದು ನಿಂದುದು ಮಾತಿಂಗೆ ಒಡಲಾಯಿತ್ತು. ಮಾತಿಂಗೆ ವೇಧಿಸಿದ ಮನ ರಾಟಾಳದ ಕುಂಭದಂತೆ. ಅದ ನೇತಿಗಳೆದು ನಿಂದಲ್ಲಿ ಗುಹೇಶ್ವರಲಿಂಗ ತಾನೆ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ನುಡಿಗೆಡೆಗೊಡದ ಘನವ ಹಿಡಿದು ಒಡಬಂದಿಯಾಳು. ಎಡೆಯಿಲ್ಲದ ಪರಿಪೂರ್ಣದೊಳಗೆ ನಡೆನುಡಿಗೆಟ್ಟಳು. ತನ್ನ ನಿಲುಕಡೆಯ ನಿಜವ ತಾನರಿಯದಂತೆ ಎನ್ನಿಂದ ಕೇಳಿ ಸ್ವಯವಾದಳು. ಗುಹೇಶ್ವರಲಿಂಗ ಸಾಕ್ಷಿಯಾಗಿ, ಮಹಾದೇವಿಯಕ್ಕನ ನಿಲವ ಕೊಂಡಾಡುವುದಕ್ಕೆ ತೆರಹಿಲ್ಲ ಕಾಣಾ ಮಡಿವಾಳಯ್ಯ.
--------------
ಅಲ್ಲಮಪ್ರಭುದೇವರು
ಹಿರಿಯರನೆಲ್ಲ ಹುಟ್ಟಿಸಿದಾತನನರಿಯಿರೊ, ಹಿರಿಯರ ಮಕ್ಕಳಿರಾ ? ಇಂದು ಎಂದೇನೊ ? ನಾಳೆ ಎಂದೇನೊ ? ಎಂದೂ ಒಂದೇ ಮಕ್ಕಳಿರಾ ? ಗುಹೇಶ್ವರಲಿಂಗ ಹಂಗಿಲ್ಲದ ಸಂಯೋಗ ಇದ ಬೇಗನರಿಯಿರೊ ಹಿರಿಯರ ಮಕ್ಕಳಿರಾ.
--------------
ಅಲ್ಲಮಪ್ರಭುದೇವರು
ಬಯಕೆ ಎಂಬುದು ದೂರದ ಕೂಟ, `ಬಯಸೆ' ಎಂಬುದು ಕೂಟದ ಸಂದು. ಈ ಉಭಯವೂ ಕಪಟ ಕನ್ನಡವಲ್ಲದೆ ಸಹಜವಲ್ಲ. ಕೂಡಿ ಕಂಡ ಪರಿಯೆಂತು ಹೇಳಾ ಇನ್ನು ಲಿಂಗೈಕ್ಯವನು ? ಕೂಪಠಾವಿನಲ್ಲಿ ಪರವಶವಾದೆನೆಂಬ ಮಾತ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗ ?
--------------
ಅಲ್ಲಮಪ್ರಭುದೇವರು
ಇಲ್ಲದ ಶಂಕೆಯನು ಉಂಟೆಂದು ಭಾವಿಸಿದಡೆ ಅದು ಕಣ್ಣ ಮುಂದೆ ರೂಪಾಗಿ ಕಾಡುತ್ತಿಪ್ಪುದು. ಇಲ್ಲದ ತನುವ ಉಂಟೆಂಬನ್ನಕ್ಕರ, ಅದೇ ಮಾಯೆಯಾಗಿ ಕಾಡುತ್ತಿಪ್ಪುದು. ನಿಃಕ್ರಿಯಾಲಿಂಗಕ್ಕೆ ಕ್ರಿಯಾಂತಲ್ಲದೆ ಆಗದೆಂಬವರ ಸಂದು ಸಂಶಯ ಮುಂದುಗೆಡಿಸುತ್ತಿಪ್ಪುದು ಕೇಳಾ. ಮನವ ಮನೆಯ ಮಾಡಿಕೊಂಡಿಪ್ಪ ಲಿಂಗದ ಅನುವನರಿಯಬಲ್ಲಡೆ, ಗುಹೇಶ್ವರಲಿಂಗ ದೂರವಿಲ್ಲ ಕೇಳಾ ಮರುಳೆ.
--------------
ಅಲ್ಲಮಪ್ರಭುದೇವರು
ಜಂಗಮವೆ ಹೊರಗಿರಲು ಲಿಂಗಾರ್ಚನೆ ಏವುದಯ್ಯಾ ? ಪ್ರಾಣನ ಹೊರಗಿರಿಸಿ ಎಡೆಯಾಡುವ ದೇಹವುಂಟೆ ? ಶರಣರು ಬಂದು ಬಾಗಿಲಲ್ಲಿ ನಿಂದಿರಲು ತನ್ನ ತಾ ಮರೆದಿಪ್ಪವರ ಕಂಡಡೆ ನಮ್ಮ ಗುಹೇಶ್ವರಲಿಂಗ ಒಡೆಯ ಹಾಯ್ಕದೆ ಮಾಣ್ಬನೆ ?
--------------
ಅಲ್ಲಮಪ್ರಭುದೇವರು
ಅಂಗಜೀವಿಗಳೆಲ್ಲಾ ಅಶನಕ್ಕೆ ನೆರೆದು, ಲಿಂಗವಾರ್ತೆಯ ನುಡಿವರಯ್ಯಾ. ಕಾಯಜೀವಿಗಳೆಲ್ಲಾ ಕಳವಳಿಸಿ ನುಡಿವರಯ್ಯಾ. ಮನಬಂದ ಪರಿಯಲ್ಲಿ ನುಡಿವಿರಿ, ಗುಹೇಶ್ವರಲಿಂಗ ನಿಮಗೆಲ್ಲಿಯದೊ ?
--------------
ಅಲ್ಲಮಪ್ರಭುದೇವರು
ಮುನ್ನ ಎಂತಾಯಿತ್ತು ? ಆಗದಡೆಂತಾಯಿತ್ತು ? ತನ್ನ ತಾನು ಅರಸುತ್ತಿದ್ದಿತ್ತು. ತನ್ನ ಬಚ್ಚಿಟ್ಟ ಬಯಕೆಯ ನಿಧಾನವ ಕಂಡು ತಾನೆ ಮಹವೆಂದು ತಿಳಿದು ನೋಡಾ. ಗುಹೇಶ್ವರಲಿಂಗ ತನ್ನುವ ತನ್ನಂತೆ ಮಾಡಿತ್ತು.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->