ಅಥವಾ

ಒಟ್ಟು 30 ಕಡೆಗಳಲ್ಲಿ , 1 ವಚನಕಾರರು , 30 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು ! ಅರಿದು ಮರೆದು ನೆನೆದಡೆ ನೆಲೆಗೊಳ್ಳದು. ಅರಿವರಾರಯ್ಯ ಆಗಮ್ಯಲಿಂಗವನು ? ಕೊಟ್ಟು ಕೊಂಡಾಡುವ ವ್ಯವಹಾರಕ್ಕೆಲ್ಲಿಯದೊ ? ನೀರಲೊದಗಿದ ಬೆಣ್ಣೆ ಮುಗಿಲಲೊದಗಿದ ಕಿಚ್ಚು ಪವನನ ಶಬ್ದಸಂಚಕ್ಕೆ ಬಣ್ಣವುಂಟೆ ? ಗುಹೇಶ್ವರಲಿಂಗದ ನಿಲವ ತೋರಬಾರದು_ಕೇಳಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಕನಕಾಚಲದಲ್ಲಿ ದಿನನಾಯಕ ಎಂಬ ರತ್ನ ಹುಟ್ಟಿ, ಅಹುದಲ್ಲ (ಅಹುದು ಅಲ್ಲ?) ಎಂಬ ಕೊಳಗದ ಕೊರಳಿನಲ್ಲಿ ಅಳೆವುತ್ತೈದಾನೆ. ಕೊಳಗದ ಕೊರಳು ತುಂಬಿ ಅಳೆವಾತನ ಹೃದಯ ತುಂಬಿ ಗುಹೇಶ್ವರಲಿಂಗದ ಕಂಗಳು ತುಂಬಿ ಮಂಗಳಮಯವಾಯಿತ್ತು !
--------------
ಅಲ್ಲಮಪ್ರಭುದೇವರು
ನಚ್ಚು ಮಚ್ಚಿನ ಸುಖ ಪರಿಣಾಮ ಸನ್ನಹಿತವಾದ ಬಳಿಕ, ಇನ್ನು ಅನುಭಾವವೆಂಬುದಿಲ್ಲ_ಅಂತಿರಲಿ ನುಡಿಯ ಗಡಣ. ಶಶಿಧರನಟ್ಟಿದ ಬೆಸನ ಮಾಡಬಂದ ಬಳಿಕ, ಹೇಳಿದ ಮಣಿಹವ ಮಾಡುತ್ತಿಹುದಲ್ಲದೆ ಅದು ತನ್ನಲ್ಲಿ ತಾನು ಬೆರಸುವಂದಿಗೆ ಬೆರಸಲಿ; ಆ ದಿನಕ್ಕೆ ಬಂದು ಹೇಳುವೆವು ನಿರ್ಣಯವ. ಗುಹೇಶ್ವರಲಿಂಗದ ಆಣತಿ ಬಪ್ಪನ್ನಬರ ಶಿವಶರಣರೆಲ್ಲರೂ ಸಂಗನಬಸವಣ್ಣ ಸಹಿತ ನಿತ್ಯರಾಗಿ ಇರಿ.
--------------
ಅಲ್ಲಮಪ್ರಭುದೇವರು
ತನ್ನಿಂದ ತನ್ನ ನೋಡಲು, ತನಗೆ ತಾ ಪ್ರತ್ಯಕ್ಷನಾಗೆ ಆ ಪ್ರತ್ಯಕ್ಷವೆಂಬುದೆ ಭ್ರಾಂತು ನೋಡಾ ! ಅದೇನು ಕಾರಣವೆಂದಡೆ; ತನಗೆ ತಾನು ಅನ್ಯವಲ್ಲಾಗಿ, ಎನಗೆ ಅನ್ಯವಿಲ್ಲ. ಅನ್ಯ ನಾನಲ್ಲ ಎಂದು; `ಬ್ರಹ್ಮವು ನಾನು' ಎಂಬೆಡೆ_ ಅದು ಅತಿಶಯದಿಂದ ಭ್ರಾಂತು_ಎಂಬುದನು ತಿಳಿದು ನೋಡಾ. ಅದೇನು ಕಾರಣವೆಂದಡೆ: `ಬ್ರಹ್ಮಕ್ಕೆ ನಾ ಬ್ರಹ್ಮ' ಎಂಬುದು ಘಟಿಸದಾಗಿ ! ಅತಿಶಯದ ಸುಖವಳಿದ ನಿರಂತರ ಸುಖವೆಂತುಟೆಂದಡೆ ಗುರು ಮುಗ್ಧನಾದೆಡೆಯ ತಿಳಿಯಲು ನೋಡಲು ಗುಹೇಶ್ವರಲಿಂಗದ ನಿಲವು ತಾನೆ.
--------------
ಅಲ್ಲಮಪ್ರಭುದೇವರು
ಅಯ್ಯ ಸದಾಚಾರಸದ್ಭಕ್ತಿಯಿಲ್ಲದ ಗುರುವು ನರಜೀವಿ. ಆತನಿಂದ ಹುಟ್ಟಿದ ಲಿಂಗಾಂಗವೆರಡು ಜಡಜೀವಿ. ಅವರಿಬ್ಬರಲ್ಲಿ ಹೊಕ್ಕು ಕೊಟ್ಟು ಕೊಂಬುವ ಜಂಗಮ ಭೂತಪ್ರಾಣಿ. ಈ ನರಜೀವಿ, ಜಡಜೀವಿ, ಭೂತಪ್ರಾಣಿಗಳಿಗೆ ಕೊಟ್ಟುಕೊಂಬ ಭಕ್ತಂಗೆ ಏಳನೆಯ ಪಾತಕ ಬಿಡದು ಕಾಣಾ. ಗುಹೇಶ್ವರಲಿಂಗದ ಸದಾಚಾರಸದ್ಭಕ್ತಿಯಿಂದಲ್ಲದೆ ಮುಕ್ತಿಯಿಲ್ಲ ನೋಡಾ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಎಸೆಯದಿರು ಎಸೆಯದಿರು ಕಾಮಾ, ನಿನ್ನ ಬಾಣ ಹುಸಿಯಲೇಕೊ? ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ_ಇವು ಸಾಲದೆ ನಿನಗೆ ? ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ, ಮರಳಿ ಸುಡಲುಂಟೆ ಮರುಳು ಕಾಮಾ ?
--------------
ಅಲ್ಲಮಪ್ರಭುದೇವರು
ಕುಂಡಲಿಗನ ಕೀಟದಂತೆ, ಮೈ ಮಣ್ಣಾಗದಂತೆ ಇದ್ದೆಯಲ್ಲಾ ಬಸವಣ್ಣಾ. ಜಲದೊಳಗಣ ತಾವರೆಯಂತೆ ಹೊದ್ದಿಯೂ ಹೊದ್ದದಂತೆ ಇದ್ದೆಯಲ್ಲಾ ಬಸವಣ್ಣಾ. ಜಲದಿಂದಲಾದ ಮೌಕ್ತಿಕದಂತೆ, ಜಲವು ತಾನಾಗದಂತೆ ಇದ್ದೆಯಲ್ಲಾ ಬಸವಣ್ಣಾ. ಗುಹೇಶ್ವರಲಿಂಗದ ಆಣತಿವಿಡಿದು, ತನುಗುಣ ಮತ್ತರಾಗಿದ್ದ ಐಶ್ವರ್ಯಾಂಧಕರ ಮತವನೇನ ಮಾಡಬಂದೆಯಯ್ಯಾ, ಸಂಗನ ಬಸವಣ್ಣಾ ?
--------------
ಅಲ್ಲಮಪ್ರಭುದೇವರು
ನಾದದ ಉತ್ಪತ್ತಿ ಸ್ಥಿತಿ ಲಯವನು ಹೇಳಿದಡೇನು ಕೇಳಿದಡೇನು, ಎಲೆ ಮರುಳೆ ! ಬಿಂದು ದಳದ ಉತ್ಪತ್ತಿ ಸ್ಥಿತಿ ಲಯವನು ಹೇಳಿದಡೇನು ಕೇಳಿದಡೇನು ಎಲೆ ಮರುಳೆ ! ಮಧ್ಯದಳದ ಉತ್ಪತ್ತಿ ಸ್ಥಿತಿ ಲಯವನು ಹೇಳಿದಡೇನು ಕೇಳಿದಡೇನು ಎಲೆ ಮರುಳೆ ! ಮುಗಿಲಗಲದ ಅಂಬರ ವಾಯು ಅಗ್ನಿಜಲ ಧರೆಯ ಹೊತ್ತುಕೊಂಡು ಅವ, ಹೇಳಿದಡೇನು ಕೇಳಿದಡೇನು ಎಲೆ ಮರುಳೆ ! ಗುಹೇಶ್ವರಲಿಂಗದ ಬಾರಿಗೊಳಗಾಗಿ, ಇವೆಲ್ಲವನುಂಟುಮಾಡಲರಿಯೆನಾಗಿ_ಎನಗಿಲ್ಲವೆನುತಿರ್ದೆನಯ್ಯಾ.
--------------
ಅಲ್ಲಮಪ್ರಭುದೇವರು
ಆದಿಗೆ ಅನಾದಿಗೆ ಭೇದವುಂಟೆ ? ಆದಿ ಲಿಂಗ ಅನಾದಿ ಶರಣನೆಂಬುದು, ತನ್ನಿಂದ ತಾ ಮಾಡಲಾಯಿತ್ತು. ಧರೆಯಾಕಾಶ ಭುವನ ಭವನಂಗಳು ಹುಟ್ಟದ ಮುನ್ನ ಅನಾದಿ ಪರಶಿವನು ತಾನೆ ತನ್ನ ಲೀಲೆಗೆ ಸಾಕಾರವ ಧರಿಸಿದಡೆ ಆ ಸಾಕಾರವೆ ಈ ಸಾಕಾರವಾಯಿತ್ತು. ಎನ್ನ ಸಾಕಾರದ ಆದಿಯನೂ, ಎನ್ನ ನಿರಾಕಾರದ ಆದಿಯನೂ ಬಸವಣ್ಣ ಬಲ್ಲವನಾಗಿ, ಗುಹೇಶ್ವರಲಿಂಗದ ಘನವು ಬಸವಣ್ಣನಿಂದೆನಗೆ ಸಾಧ್ಯವಾಯಿತ್ತು ಕಾಣಾ ಚನ್ನಬಸವಣ್ಣಾ !
--------------
ಅಲ್ಲಮಪ್ರಭುದೇವರು
ಅಯ್ಯ, ಸ್ಥೂಲದೇಹದ ಸುಖದಲ್ಲಿ ಹೊದ್ದಿದವರು ಸೂಕರನ ಹಾಂಗೆ. ಸೂಕ್ಷ್ಮದೇಹದ [ಸುಖ]ದಲ್ಲಿ ಹೊದ್ದಿದವರು ಮದಗಜದಂತೆ. ಕಾರಣ ದೇಹದ ಸುಖದಲ್ಲಿ ಹೊದ್ದಿದವರು ರಾಜಹಂಸನ ಹಾಂಗೆ. ಅದೆಂತೆಂದಡೆ: ಸ್ಥೂಲದೇಹವೆಂದಡೆ ಸಪ್ತಧಾತುಯುಕ್ತವಾದ ಪಂಚವಿಂಶತಿತತ್ತ್ವ ಸ್ವರೂಪು, ಆ ದೇಹಕ್ಕೆ ಬಿಂದು ಮಾತ್ರ ಸುಖ ಪರ್ವತದಷ್ಟು ದುಃಖ ನೋಡಾ. ಸೂಕ್ಷ್ಮದೇಹವೆಂದಡೆ:ಪಂಚರಸಾಮೃತಸ್ವರೂಪವಾದ ಕರಣಂಗಳು. ಆ ದೇಹಕ್ಕೆ ಬಿಂದು ಮಾತ್ರ ದುಃಖವು, ಪರ್ವತದಷ್ಟು ಸುಖ ನೋಡಾ. ದಶವಿಧತತ್ತ್ವಸ್ವರೂಪವಾದ ಕಾರಣದೇಹವೆಂದಡೆ: ಅನಂತನಾದಸ್ವರೂಪವಾದ ಏಕತತ್ತ್ವವನ್ನುಳ್ಳ ಆತ್ಮನೆ ಕಾರಣದೇಹ, [Àಅದು] ದಿವ್ಯ ಸುಧಾರಸಾಮೃತಸ್ವರೂಪವಾದ ಮಹಾಸದ್ಗಂಧದ ಪರಿಮಳದಂತಿಪ್ಪುದು ನೋಡಾ. ಆ ದೇಹಕ್ಕೆ ಅಣುಮಾತ್ರ ದುಃಖವಿಲ್ಲದ ಸುಖವುಂಟು ನೋಡಾ, ಲಿಂಗಸಂಗಿಯಾದ ಕಾರಣ. ಇಂತಪ್ಪ ಲಿಂಗಸಂಗದಿಂದ ಅಖಂಡಸುಖಿ ತಾನಾಗಬೇಕಾದಡೆ ಪಿಂಡಾದಿ ಜ್ಞಾನಶೂನ್ಯಾಂತಮಾದ ನೂರೊಂದು ಸ್ಥಳ_ಕುಳವ ಕರತಳಾಮಳಕವಾಗಿ ತಿಳಿದು, ಮೇಲಾದ ಜ್ಞಾನಶೂನ್ಯಸ್ಥಲದಲ್ಲಿ ನಿಂದು, ಪಿಂಡಾದಿ ಜ್ಞಾನ ಗುರುಕರುಣ ಸ್ಥಲಂಗಳೆಂಬ ಮಾರ್ಗವು ತಪ್ಪದೆ ನಡೆ_ನುಡಿ ಸಂಪನ್ನರಾಗಿ ನಿಜಾಚರಣೆಯಲ್ಲಿ ನಿಂದು ಅರು ವೈರಿ ಅಷ್ಟಮದ [ಸಪ್ತ]ವ್ಯಸನವೆಂಬ ಮಾಯಾಪಾಶಪರ್ವತಕ್ಕೆ ವಜ್ರಾಯುಧವಾಗಿ ನಿಂದರು ನೋಡಾ ನಮ್ಮ ಶರಣಗಣಂಗಳು. ಇಂತು_ಕಾರಣಸ್ವರೂಪವಾದ ಚಿದ್ಘನಲಿಂಗ ನಡೆ_ನುಡಿ_ಸ್ಥಳ_ಕುಳದನುಭಾವ ಸುಖವ ಪಡೆಯದ ಶೈವ ಜಡಕರ್ಮಿಗಳೆಲ್ಲ, ಅರುವೈರಿ ಅಷ್ಟಮದ ಸಪ್ತವ್ಯಸನವೆಂಬ ಮಾಯಾಪಾಶ ಕಾಲ ಕಾಮರ ಬಾಧೆಗೊಳಗಾಗಿ ಗುಹೇಶ್ವರಲಿಂಗದ ಶರಣರ ಮಾರ್ಗವನರಿಯದೆ [ಕೆಟ್ಟರು]. ಕೆಟ್ಟಿತೀ ಲೋಕ ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಮನವ ತೊಳೆದು ನಿರ್ಮಲವ ಮಾಡಿಹೆನೆಂಬ ಯೋಗವೆಂತುಟೊ ? ಮನವ ಹಿಡಿದು ತಡೆದಿಹೆನೆಂಬವರ ಮರುಳುಮಾಡಿ ಕಾಡಿತ್ತು ನೋಡಾ ಮನವು ! ಮನ ವಿಕಲ್ಪಜ್ಞಾನದಿಂದರಿದು, ಅದ ಶುದ್ಧವ ಮಾಡಿಹೆನೆಂಬುದು ತಾನೆ ಮನ ನೋಡಾ. ನಮ್ಮ ಗುಹೇಶ್ವರಲಿಂಗದ ಅನುವನರಿದಿಹೆನೆಂಬವರು, ಮನವಿಲ್ಲದಿರಬೇಕು ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ;_ ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ ಅರಿವು ಸಾಧ್ಯವಪ್ಪುದು ಕಾಣಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಏನೂ ಏನೂ ಇಲ್ಲದ ಬಯಲೊಳಗೊಂದು ಬಗೆಗೊಳಗಾದ ಬಣ್ಣ ತಲೆದೋರಿತ್ತು. ಆ ಬಣ್ಣವು ಆ ಬಯಲ ಶೃಂಗರಿಸಲು, ಬಯಲು ಸ್ವರೂಪಗೊಂಡಿತ್ತು. ಅಂತಪ್ಪ ಸ್ವರೂಪಿನ ಬೆಡಗು ತಾನೆ, ನಮ್ಮ ಗುಹೇಶ್ವರಲಿಂಗದ ಪ್ರಥಮ ಭಿತ್ತಿ
--------------
ಅಲ್ಲಮಪ್ರಭುದೇವರು
ಸುಳಿವ ಸುತ್ತುವ ಮನದ ವ್ಯವಹರಣೆಯುಳ್ಳನ್ನಕ್ಕರ, ಅರಿಯೆನರಿಯೆ ನೆರೆ ಶಿವಪಥವ ಗುಹೇಶ್ವರಲಿಂಗದ ನಿಜವನರಿದ ಬಳಿಕ ಅರಿಯೆನರಿಯೆ ಲೋಕದ ಬಳಕೆಯ.
--------------
ಅಲ್ಲಮಪ್ರಭುದೇವರು
ಕಾಯದಲಾದ ಅರ್ಪಿತ ಅರ್ಪಿತವಲ್ಲ. ಪ್ರಾಣದಲಾದ ಅರ್ಪಿತ ಅರ್ಪಿತವಲ್ಲ. ಭಾವದಲಾದ ಅರ್ಪಿತ ಅರ್ಪಿತವಲ್ಲ. ಅರಿವಿನಲಾದ ಅರ್ಪಿತ ಅರ್ಪಿತವಲ್ಲ. ನೆನಹಿಲ್ಲದ ಅವಧಾನ ಮರಹಿಲ್ಲದ ಆರೋಗಣೆ ತಟ್ಟದ ಮುಟ್ಟದ ಅರ್ಪಿತ ! ಗುಹೇಶ್ವರಲಿಂಗದ ಆರೋಗಣೆಯನು, ಇಂದು ಬಸವಣ್ಣನಿಂದ ಕಂಡೆನು.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->