ಅಥವಾ

ಒಟ್ಟು 123 ಕಡೆಗಳಲ್ಲಿ , 1 ವಚನಕಾರರು , 123 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

`ನೀನು' `ನಾನು' ಎಂಬ ಉಭಯಸಂಗವಳಿದು ತಾನು ತಾನಾದ ತ್ರಿಕೂಟವೆಂಬ ಮಹಾಗಿರಿಯ ತುಟ್ಟತುದಿಯ ಮೆಟ್ಟಿ ನೋಡಲು, ಬಟ್ಟಬಯಲು ಕಾಣಬಹುದು ನೋಡಾ ! ಆ ಬಯಲ ಬೆರಸುವಡೆ_ತ್ರಿಕೂಟಗಿರಿಯೊಳಗೊಂದು ಕದಳಿಯುಂಟು ನೋಡಾ ! ಆ ಕದಳಿಯ ತಿಳಿದು ಅಲ್ಲಿ ಒಳಹೊಕ್ಕು ನೋಡಲು ತೊಳಗಿ ಬೆಳಗುವ ಜ್ಯೋತಿಯುಂಟು ಕೇಳಾ ! ನಡೆ ಅಲ್ಲಿಗೆ ತಾಯೆ, ಗುಹೇಶ್ವರಲಿಂಗದಲ್ಲಿ ಪರಮಪದವಿ ನಿನಗೆ ಸಯವಪ್ಪುದು ನೋಡಾ
--------------
ಅಲ್ಲಮಪ್ರಭುದೇವರು
ಅಯ್ಯ, ಮಣ್ಣಿಂಗೆ ಹೊಡೆದಾಡುವಾತನ ಗುರುವೆಂಬೆನೆ? ಆತ ಗುರುವಲ್ಲ. ಹೆಣ್ಣಿಂಗೆ ಹೊಡೆದಾಡುವಂತಾ [ಗೆ?]À ಲಿಂಗವೆಂಬೆನೆ ? ಅದು ಲಿಂಗವಲ್ಲ. ಹೊನ್ನಿಂಗೆ ಹೊಡೆದಾಡುವಾತನ ಜಂಗಮವೆಂಬೆನೆ ? ಆತ ಜಂಗಮವಲ್ಲ. ಈ ತ್ರಿವಿಧಮಲಕ್ಕೆ ಹೊಡೆದಾಡುವಾತನ ಶರಣನೆಂಬೆನೆ ? ಆತ ಶರಣನಲ್ಲ ನೋಡಾ. ಈ ವಿಚಾರವನರಿದು, ಮಲತ್ರಯಂಗಳ ಸರ್ವಾವಸ್ಥೆಯಲ್ಲಿ ಹೊದ್ದಲೀಯದೆ ಗೌರವ ಬುದ್ಧಿ ಲಿಂಗಲೀಯ ಜಂಗಮಾನುಭಾವ ಸರ್ವಾಚಾರಸಂಪತ್ತಿನಾಚರಣೆಯ ಶ್ರುತಿ_ಗುರು_ಸ್ವಾನುಭಾವದಿಂದರಿದು ಆಚರಿಸಿದಡೆ, ಗುಹೇಶ್ವರಲಿಂಗದಲ್ಲಿ ಪರಾತ್ಪರಗುರುಲಿಂಗಜಂಗಮಶರಣನೆಂಬೆ ನೋಡ ಜೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಚಿತ್ತುವೆಂಬ ಬಿತ್ತು ಬಲಿದು ಎರಡಾದಲ್ಲಿ, ಲಿಂಗವೆಂಬ ಕಳೆ ಅಂಕುರಿಸಿ ಮೂರ್ತಿಯಾಯಿತ್ತು. ಆ ಮೂರ್ತಿಯ ಘನತೆಯ ಏನೆಂದೂ ಉಪಮಿಸಬಾರದು ! ನೋಡಿದಡೆ ಮೂರ್ತಿ ಹಿಡಿದಡೆ ಬಯಲು ! ಆ ಮೂರ್ತಿಯೊಳಗದೆ ಈರೇಳು ಲೋಕದ ಪ್ರಾಣಕಳೆ. ಆ ಕಳೆಯ ಬೆಳಗು ತಾನೆ ನಮ್ಮ ಗುಹೇಶ್ವರಲಿಂಗದಲ್ಲಿ ಲೀಲಾಮೂಲದ ಪ್ರಥಮ ಭಿತ್ತಿ.
--------------
ಅಲ್ಲಮಪ್ರಭುದೇವರು
ತನುಗುಣನಾಸ್ತಿ ಮನಗುಣನಾಸ್ತಿ ಧನಗುಣನಾಸ್ತಿಯಾದಡೇನು ? ಭಾವನಾಸ್ತಿಯಾಗಿರಬೇಕು. ಭಾವನಾಸ್ತಿಯಾದಲ್ಲದೆ ಅರಿವು ನೆಲೆಗೊಳ್ಳದು. ಅರಿವು ನೆಲೆಗೊಂಡಲ್ಲಿ ಕುರುಹಿಂಗೆ ಹೊರಗು ಕುರುಹಳಿದು ಕೂಡುವ ಪರಮಸುಖವು, ಗುಹೇಶ್ವರಲಿಂಗದಲ್ಲಿ ನಿನಗೆ ಸಾಧ್ಯವಾದ ಪರಿಯ ಹೇಳಾ ಮಡಿವಾಳ ಮಾಚಯ್ಯಾ ?
--------------
ಅಲ್ಲಮಪ್ರಭುದೇವರು
ಕಾಲ,_ಕಾಲವರವತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲವೈವತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲ ನಾಲ್ವತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲ ಮೂವತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲ ಇಪ್ಪತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲ ಹತ್ತು; ಕಾಲ ಕಾಲವನೆ ಅರಿವುದು. ಇಂತೀ ಕಾಲಂಗಳ ಕಾಲವನರಿವಡೆ ಗುಹೇಶ್ವರಲಿಂಗದಲ್ಲಿ ಹೇಳು ಚೆನ್ನಬಸವಣ್ಣಾ ?
--------------
ಅಲ್ಲಮಪ್ರಭುದೇವರು
ಒಕ್ಕುದು ಪ್ರಸಾದವೆಂಬರು, ಮಿಕ್ಕುದು ಪ್ರಸಾದವೆಂಬರು ಒಕ್ಕುದು ಮಿಕ್ಕುದನೆಲ್ಲ ಬೆಕ್ಕು ಕೊಳ್ಳದೆ ? ಒಕ್ಕುಮಿಕ್ಕು ಹೋಗುವ ಪಂಚಸಕೀಲವ ಬಲ್ಲಡೆ ಗುಹೇಶ್ವರಲಿಂಗದಲ್ಲಿ ಆತನೆ ಪ್ರಸಾದಿ
--------------
ಅಲ್ಲಮಪ್ರಭುದೇವರು
ತುಂಬಿದ ತೊರೆಯ ಹಾಯ್ದಹೆವೆಂದು ಹರುಗೋಲನೇರುವ ಅಣ್ಣಗಳು ನೀವು ಕೇಳಿರೆ. ತೊರೆಯೊಳಗಣ ನೆಗಳು ಹರುಗೋಲ ನುಂಗಿದಡೆ, ಗತಿಯಿಲ್ಲ. ಎಚ್ಚತ್ತು ನಡಿಸಿರೆ. ನಡುದೊರೆಯಲ್ಲಿ ಹುಟ್ಟು ಹಾಯ್ಕಿದಡೆ, ಹರುಗೋಲು ಮುಳುಗದೆ, ಏರಿದವರು ಸತ್ತರು. ಇದರೊಳಹೊರಗನರಿದಾತನಲ್ಲದೆ ಗುಹೇಶ್ವರಲಿಂಗದಲ್ಲಿ ಅಚ್ಚ ಶರಣನಲ್ಲ.
--------------
ಅಲ್ಲಮಪ್ರಭುದೇವರು
ಅನಾದಿಪುರುಷ ಬಸವಣ್ಣಾ, ಕಾಲ ಮಾಯೆಗಳೆರಡೂ ನಿಮ್ಮ ಮುಂದಿರ್ದು, ನಿಮ್ಮ ಕಾಣೆವೆನುತ್ತಿಹವು. ಆದಿಪುರುಷ ಬಸವಣ್ಣಾ; ಸುರಾಸುರರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ನಾದಪುರುಷ ಬಸವಣ್ಣಾ, ನಾದ ಮಂತ್ರಗಳು ಪಂಚಮಹಾವಾದ್ಯಂಗಳು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು. ವೇದಪುರುಷ ಬಸವಣ್ಣಾ, ವೇದಶಾಸ್ತ್ರಾಗಮ ಪುರಾಣಂಗಳು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು. ಆಗಮ್ಯಪುರುಷ ಬಸವಣ್ಣಾ, ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ನಂದಿವಾಹನರು ಗಂಗೆವಾಳುಕರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ಅಗೋಚರಪುರುಷ ಬಸವಣ್ಣಾ, ಈ ಗೋಚರಿಸಿದ ಮನುಮುನಿ ದೇವದಾನವ ಮಾನವರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ಅಪ್ರಮಾಣಪುರುಷ ಬಸವಣ್ಣ, ಈ ಪ್ರಮಾಣರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ಸರ್ವಜ್ಞಪುರುಷ ಬಸವಣ್ಣಾ, ಈ ಸರ್ವರು ನಿಮ್ಮ ಬಳಸಿರ್ದು ನಿಮ್ಮ ಕಾಣೆವೆನುತ್ತಿಹರು. ಇಂತೀ ಸರ್ವಪ್ರಕಾರದವರೆಲ್ಲರೂ ನಿಮ್ಮ ಸಾಧಿಸಿ ಭೇದಿಸಿ ಪೂಜಿಸಿ ತರ್ಕಿಸಿ ಹೊಗಳಿ ಕಾಣದೆ ನಿಮ್ಮಿಂದವೆ ಉತ್ಪತ್ತಿ ಸ್ಥಿತಿಲಯಂಗಳಾಗುತ್ತಿಹರು. ಅದು ಕಾರಣ,_ನಮ್ಮ ಗುಹೇಶ್ವರಲಿಂಗದಲ್ಲಿ ಭಕ್ತಿವಡೆದ ಅನಂತ ಭಕ್ತರೆಲ್ಲ ಬಸವಣ್ಣ ಬಸವಣ್ಣ ಬಸವಣ್ಣ ಎನುತ್ತ ಬದುಕಿದರಯ್ಯಾ.
--------------
ಅಲ್ಲಮಪ್ರಭುದೇವರು
ಅಂದಂದಿನ ಮಾತನು ಅಂದಂದಿಗೆ ಅರಿಯಬಾರದು. ಹಿಂದೆ ಹೋದ ಯುಗಪ್ರಳಯಂಗಳ ಬಲ್ಲವರಾರಯ್ಯಾ ? ಮುಂದೆ ಬಪ್ಪ ಯುಗಪ್ರಳಯಂಗಳ ಬಲ್ಲವರಾರಯ್ಯಾ ? ಬಸವಣ್ಣನು ಆದಿಯಲ್ಲಿ ಲಿಂಗಶರಣನೆಂಬುದ ಭೇದಿಸಿ ನೋಡಿ ಅರಿವರಿನ್ನಾರಯ್ಯಾ ? ಲಿಂಗ ಜಂಗಮ ಪ್ರಸಾದದ ಮಹಾತ್ಮೆಗೆ ಬಸವಣ್ಣನೆ ಆದಿಯಾದನೆಂಬುದನರಿದ ಸ್ವಯಂಭು ಜ್ಞಾನಿ, ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನೊಬ್ಬನೆ.
--------------
ಅಲ್ಲಮಪ್ರಭುದೇವರು
ಅರಿವನರಿದು ಮರಹ ಮರೆದು, ಸಂಕಲ್ಪ ಸಂಶಯವಳಿದ ನಿಲವನು, ಅರಿದ ಪರಿ ಎಂತು ಹೇಳಾ ? ಅರಿದೆನೆಂದಡೆ ಜ್ಞಾನಕ್ಕೆ ದೂರ, ಮರೆದೆನೆಂದಡೆ ಮನಕ್ಕೆ ದೂರ. ನಿರ್ಭಾವದ ಹೊಲಿಗೆಯಲ್ಲಿ ಭಾವಸಂಕಲ್ಪ ಬಿಡದು. ನಮ್ಮ ಗುಹೇಶ್ವರಲಿಂಗದಲ್ಲಿ ಮನಮಗ್ನಯೋಗ, ನಿನಗೆಂತು ಸಾಧ್ಯವಾಯಿತ್ತು ಹೇಳಾ ಸಿದ್ಧರಾಮಯ್ಯಾ ?
--------------
ಅಲ್ಲಮಪ್ರಭುದೇವರು
ಲಿಂಗ ನಿಮ್ಮದಾದಡೆ ನಿಮ್ಮ ಅಂಗೈಯೊಳಗೇಕೆ ಅಡಗದು ? ನಿಮ್ಮ ಅಂಗಮಯ ಲಿಂಗವಾದಡೆ ಸಂಸಾರದ ಅಂಗವ ಉಲುಹೇತಕ್ಕೆ ? ಅದು ನಮ್ಮ ಗುಹೇಶ್ವರಲಿಂಗದಲ್ಲಿ ಲಿಂಗದ ಮೆಚ್ಚಲ್ಲವೆಲೆ ಭ್ರಾಂತು ಯೋಗಿ, ಘಟ್ಟಿವಾಳಯ್ಯ.
--------------
ಅಲ್ಲಮಪ್ರಭುದೇವರು
ಸುಳಿಯ ಬಲ್ಲಡೆ ಸುಳುಹೆ ಲೇಸಯ್ಯಾ. ಗಮನವಿಲ್ಲದೆ ಸುಳಿಯ ಬಲ್ಲಡೆ, ನಿರ್ಗಮನಿಯಾಗಿ ನಿಲ್ಲಬಲ್ಲಡೆ, ಅದಕ್ಕದೆ ಪರಿಣಾಮ ಅದಕ್ಕದೆ ಸಂತೋಷ. ಗುಹೇಶ್ವರಲಿಂಗದಲ್ಲಿ ಅವರ ಜಗದಾರಾಧ್ಯರೆಂಬೆ.
--------------
ಅಲ್ಲಮಪ್ರಭುದೇವರು
ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ ಶಿವನನರಿವರೆ ? ಮನವೆಂಬ ಸಂಕಲ್ಪದ ಕುಣಿಕೆಗೊಳಗಾದವರೆಲ್ಲರೂ ಮಾಯದ ಹೊಡೆಗಿಚ್ಚ ಗೆಲ್ಲಬಲ್ಲರೆ ? ಗುಹೇಶ್ವರಲಿಂಗದಲ್ಲಿ ಸರ್ವಸಂದೇಹವ ಕಳೆದಿಪ್ಪ ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಉದಯಬಿಂದು ರೂಪಾಯಿತ್ತು. ಅಂತರಬಿಂದು ನಿರೂಪಾಯಿತ್ತು. ಊಧ್ರ್ವಬಿಂದು ನಿಶ್ಶೂನ್ಯವಾಯಿತ್ತು. ತ್ರಿವಿಧಲಿಂಗವ ಕೂಡಿ ಬಯಲಾಯಿತ್ತು. ಗುಹೇಶ್ವರಲಿಂಗದಲ್ಲಿ.
--------------
ಅಲ್ಲಮಪ್ರಭುದೇವರು
ಕಿರಿಯರಾದಡೇನು ? ಹಿರಿಯರಾದಡೇನು ? ಅರಿವಿಂಗೆ ಹಿರಿದು ಕಿರಿದುಂಟೆ ? ಆದಿ ಅನಾದಿ ಇಲ್ಲದಂದು, ಅಜಾಂಡ ಬ್ರಹ್ಮಾಂಡ ಕೋಟಿಗಳುದಯವಾಗದಂದು ಗುಹೇಶ್ವರಲಿಂಗದಲ್ಲಿ ನೀನೊಬ್ಬನೆ ಮಹಾಜ್ಞಾನಿ ಎಂಬುದು ಕಾಣಬಂದಿತ್ತು ಕಾಣಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->