ಅಥವಾ

ಒಟ್ಟು 81 ಕಡೆಗಳಲ್ಲಿ , 3 ವಚನಕಾರರು , 81 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಇಲ್ಲದ ಅರಣ್ಯದಲ್ಲೊಂದು ಬೀಜವಿಲ್ಲದ ವೃಕ್ಷ ಪುಟ್ಟಿತ್ತು. ಆ ವೃಕ್ಷಕ್ಕೆ ಹೂವಿಲ್ಲದೆ ಕಾಯಿಯಾಯಿತ್ತು; ಕಾಯಿಯಿಲ್ಲದೆ ಹಣ್ಣಾಗಿತ್ತು. ಗಾಳಿಯಿಲ್ಲದೆ ಗಂಧವ ತೋರಿತ್ತು. ಆ ವಾಸನಕ್ಕೆ ಪಕ್ಕವಿದಲ್ಲದ ಹಕ್ಕಿ ಹಾರಿಹೋಗಿ ಹಣ್ಣನೆ ಕಚ್ಚಿತ್ತು. ಆ ಹಣ್ಣಿನ ರಸ ಭೂಮಿಯಮೇಲೆ ಸುರಿಯಲು ಭೂಮಿ ಬೆಂದು, ಸಮುದ್ರ ಬತ್ತಿ, ಅರಸನ ಮಾರ್ಬಲವೆಲ್ಲ ಪ್ರಳಯವಾಗಿ, ಅರಸು ಪ್ರಧಾನಿ ಸತ್ತು ಅರಸಿ ಅರಮನೆಯಲ್ಲಿ ಬಯಲಾಗಿ, ಎತ್ತ ಹೋದರೆಂದರಿಯಬಲ್ಲರೆ ಗುಹೇಶ್ವರಲಿಂಗವು ತಾನೆಯೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತೋರಬಾರದ ಘನವ ಹೇಳಲೆಂದೇನಯ್ಯಾ ? ಹೇಳಬಾರದ ಘನವ ತೋರಲೆಂದೇನಯ್ಯಾ ? ಶರಸಂಧಾನದ ಪರಿಯಲ್ಲ ನೋಡಾ ! ಗುಹೇಶ್ವರಲಿಂಗವು ಕಲ್ಪಿತವಲ್ಲ ನೋಡಯ್ಯಾ.
--------------
ಅಲ್ಲಮಪ್ರಭುದೇವರು
ಅರುಹಿನ ಕುರುಹ ಕಾಣದೆ ಗಿರಿ ಕೋಡಗಲ್ಲ ಮೇಲೆ ತಲೆಕೆಳಗೆ ಮಾಡಿ ತಪಸ್ಸವ ಮಾಡಿದಡಿಲ್ಲ, ಕಾಲಕರ್ಮಂಗಳ ದಂಡಿಸಿದಡಿಲ್ಲ, ಪೃಥ್ವಿ ತಿರುಗಿ, ತೀರ್ಥಂಗಳ ಮಿಂದು, ನಿತ್ಯನೇಮಂಗಳ ಮಾಡಿದಡಿಲ್ಲ. ಜಲಸಮಾದ್ಥೀಯಲ್ಲಿ ಕುಳಿತಡಿಲ್ಲ, ಇದಕ್ಕೆ ಶ್ಲೋಕ : ಪೂಜಾಕೋಟಿಸಮಂ ಸ್ತೋತ್ರಂ ಸ್ತೋತ್ರಕೋಟಿಸಮಂ ಜಪಃ | ಜಪಕೋಟಿಸಮಂ ಧ್ಯಾನಂ ಧ್ಯಾನಕೋಟಿಮನೋಲಯಂ || ಇಂತೆಂದುಂದಾಗಿ, ಸುತ್ತಿಸುಳಿವ ಮನವನು ಚಿತ್ತದಲ್ಲಿರಿಸಿ ನಿಶ್ಚಿಂತವಾದಡೆ ನಿತ್ಯಪ್ರಕಾಶ ಗುರು ಗುಹೇಶ್ವರಲಿಂಗವು ಮತ್ತೆ ಅರಸಲುಂಟೇನಯ್ಯಾ? ಮಠವ್ಯಾಕೊ, ಪರ್ವತವ್ಯಾಕೊ, ಜನವ್ಯಾಕೋ, ನಿರ್ಜನವ್ಯಾಕೊ ಚಿತ್ತ ಸಮಾಧನವುಳ್ಳ ಪುರುಷಂಗೆ ? ಹೊರಗಣ ಧ್ಯಾನ ಮೌನ ಜಪತಪ ನಿತ್ಯನೇಮಂಗಳ್ಯಾಕೊ ತನ್ನ ತಾನರಿದ ಶರಣಂಗೆ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ?
--------------
ಗುಹೇಶ್ವರಯ್ಯ
ಇತ(ದಿ?)ರ ಭ್ರಮಿತನು ಭಕ್ತನಲ್ಲ, ಲೋಕೋಪಚಾರಿ ಜಂಗಮವಲ್ಲ. ಹೇಳಿಹೆನು ಕೇಳಿರಣ್ಣಾ: ಜಂಗಮ ಪ್ರೇಮಿಯಾದರೆ ಭಸಿತ ರುದ್ರಾಕ್ಷೆ ಸಹ ಶಿವಸ್ವರೂಪ ಕಾಣುತ್ತ, ನಮಸ್ಕರಿಸಿ ಬಿಜಯಂ ಮಾಡಿಕೊಂಡು ಬಂದು ಮನಹರುಷದಲ್ಲಿ ಭೋಜನವ ಮಾಡಿಸೂದೀಗ ಭಕ್ತಂಗೆ ಲಕ್ಷಣ. ಕಾಡೊಳಗಿರಲಿ ಊರೊಳಗಿರಲಿ ಮಠದಲ್ಲಿರಲಿ ಮನೆಯಲ್ಲಿರಲಿ ಲಿಂಗವಂತರು ಕರೆಯಬಂದರೆ, ಹೋಗಬೇಕೆಂಬ ಅಭಿಲಾಷೆಯುಳ್ಳಡೆ, ತಾನಿದ್ದಲ್ಲಿ ತಾ ಮಾಡುವಂಥ ಅಷ್ಟವಿಧಾರ್ಚನೆ ಷೋಡಶೋಪಚಾರ ಲಿಂಗಕ್ರಿಯೆಗಳು ನಿತ್ಯನೇಮವು ಆದ ಬಳಿಕ ಮತ್ತೆ ತಾ ಹೋಗಿ ತನ್ನ ಗುಂಪ ತೋರದೆ, ಭಕ್ತರಾಶ್ರಯದಲ್ಲಿ ಭೋಜನವ ಮಾಡುವುದೀಗ ಜಂಗಮಕ್ಕೆ ಲಕ್ಷಣ. ಅಂತಲ್ಲದೆ ಗ್ರಹಸ್ಥಾಶ್ರಮದಲ್ಲಿ ಕ್ರಿಯೆ ಮಾಡಿದರೆ ಜಂಗಮಕ್ಕೆ ಹೇಳುವ ಅರಿವು ಕೊರಮಜೀವಿಯಂತಾಯಿತ್ತಾಗಿ_ ಇದು ಕಾರಣ ಲೋಕೋಪಚಾರಿಗಳಾಗಿ ಒಡಲ ಹೊರೆವವರ ನಮ್ಮ ಗುಹೇಶ್ವರಲಿಂಗವು ಬಲ್ಲನಾಗಿ ಅವರ ಒಲ್ಲನಯ್ಯಾ.
--------------
ಅಲ್ಲಮಪ್ರಭುದೇವರು
ಅಯ್ಯ ! ಕಾರ್ಯನಲ್ಲ ಕಾರಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಭೇದಕನಲ್ಲ ಸಾಧಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಪಾತಕನಲ್ಲ ಸೂತಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ದ್ವೈತನಲ್ಲ ಅದ್ವೈತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಕಾಟಕನಲ್ಲ ಕೀಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಎನ್ನವನಲ್ಲ ನಿನ್ನವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಸಂಕಲ್ಪನಲ್ಲ ವಿಕಲ್ಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಒಮ್ಮೆ ಆಚಾರದವನಲ್ಲ ಒಮ್ಮೆ ಅನಾಚಾರದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಕುಂಟಣಿಯಲ್ಲ ನೆಂಟಣಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ದುಶ್ಶೀಲನಲ್ಲ ದುರ್ಮಾರ್ಗಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಜಾತಿಯವನಲ್ಲ ಅಜಾತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಇಂದು ಉಭಯವಳಿದು ಬೆಳಗುವ ಸಂಗನಬಸವಣ್ಣನ ಉನ್ಮನಾಗ್ರದಲಿ ಹೊಳೆವಾತ ತಾನೆ ನೋಡ ! ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
`ಓಂ' ಎಂದು ವೇದವನೋದುವ ಮಾದಿಗಂಗೆ ಸಾಧ್ಯವಾಗದು ವಿಭೂತಿ. ಪುರಾಣವನೋದುವ ಪುಂಡರಿಗೆ ಸಾಧ್ಯವಗದು ವಿಭೂತಿ ಶಾಸ್ತ್ರವನೋದುವ ಸಂತೆಯ ಸೂಳೆಮಕ್ಕಳಿಗೆ ಸಾಧ್ಯವಾಗದು ವಿಭೂತಿ ಅಂಗಲಿಂಗಸಂಬಂಧವನರಿದ ಶಿವಜ್ಞಾನಿಗಳಿಗಲ್ಲದೆ ಸಾಧ್ಯವಾಗದು ವಿಭೂತಿ. ಅಂಗೈಯೊಳಗೆ ವಿಭೂತಿಯನಿರಿಸಿಕೊಂಡು, ಅಗ್ಘಣಿಯ ನೀಡಿ ಗುಣಮರ್ದನೆಯ ಮಾಡಿ ಲಿಂಗ ಉಚ್ಛಿಷ್ಟನಂಗೈದು ? ಲಿಂಗ ಸಮರ್ಪಣಂಗೈದು, ಷಡಕ್ಷರಿಯ ಸ್ಮರಣೆಯಂಗೈದು ಭಾಳದೊಳು ಪಟ್ಟವಂ ಕಟ್ಟಿ, ವಿಭೂತಿಯ ಧಾರಣಂಗೈದು ಹಸ್ತವ ಪ್ರಕ್ಷಾಲಿಸುವವ ಗುರುದ್ರೋಹಿ ಲಿಂಗದ್ರೋಹಿ ಜಂಗಮದ್ರೋಹಿ. ಶ್ರೀವಿಭೂತಿಯ ಲಲಾಟಕ್ಕೆ ಧರಿಸಿ ಹಸ್ತವ ತೊಳೆವ ಪಾತಕರ ಮುಖವ ನೋಡಲಾಗದು. ಶ್ರೀವಿಭೂತಿಯನು ಶಿವನೆಂದು ಧರಿಸುವುದು, ಪರಶಿವನು ತಾನೆಂದು ಧರಿಸುವುದು. ಸಾಕ್ಷಿ:ಕೃತ್ವೇವ ಜಲಮಿಶ್ರಂತು ಸಮುಧೃತ್ಯಷಡಕ್ಷರಿ ಧಾರಯೇತ್ ತ್ರಿಪುಂಡ್ರಂತು ಮಂತ್ರೇಣ ಮಂತ್ರಿತಂ'' ಶ್ರೀವಿಭೂತಿಯ ಧರಿಸಿ ಹಸ್ತವ ತೊಳದಾತಂಗೆ ದೇವಲೋಕ ಮತ್ರ್ಯಲೋಕಕ್ಕೆ ಸಲ್ಲದೆಂದುದಾಗಿ ನಿಮ್ಮಾಣೆ ನಿಮ್ಮ ಪ್ರಮಥರಾಣೆ, ನಮ್ಮ ಗುಹೇಶ್ವರಲಿಂಗವು ತಾನಾದ ವಿಭೂತಿ ಕಾಣಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ನಿಜ ಬಲ್ಲವಂಗೆ ಜಲವೂ ಸರಿ, ನೆಲವೂ ಸರಿ. ಅರಿದು ನುಡಿವಂಗೆ ಜಗವೂ ಸರಿ, ಸಮಯವೂ ಸರಿ. ಎಮಗಾಮಿಥ್ಯವಿಲ್ಲ, ಸಂಗನಬಸವಣ್ಣಾ, ಗುಹೇಶ್ವರಲಿಂಗವು ಪರಿಪೂರ್ಣವಾದ ಕಾರಣ.
--------------
ಅಲ್ಲಮಪ್ರಭುದೇವರು
ನೆಳಲ ಹೂಳಿಹೆನೆಂದು ಬಳಲುತ್ತಿದೆ ಜಗವೆಲ್ಲಾ. ನೆಳಲು ಸಾಯಬಲ್ಲುದೆ ಅಂಗಪ್ರಾಣಿಗಳಿಗೆ ? ಸಮುದ್ರದಾಚೆಯ ತಡಿಯಲ್ಲಿ ಕಳ್ಳನ ಕಂಡು, ಇಲ್ಲಿಂದ ಮುನಿದು ಬೈದಡೆ, ಅವ ಸಾಯಬಲ್ಲನೆ ? ಭಾವದಲ್ಲಿ ಹೊಲಿದ ಹೊಲಿಗೆಯ ಭೇದವನರಿಯರು, ಕಾಮಿಸಿದಡುಂಟೆ ನಮ್ಮ ಗುಹೇಶ್ವರಲಿಂಗವು ?
--------------
ಅಲ್ಲಮಪ್ರಭುದೇವರು
ಕಾಮಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ. ಕಲ್ಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ಭಾವಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ರೂಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ಪೂರ್ವಾಚಾರ್ಯ ಸಂಗನಬಸವಣ್ಣನ ಕಂಡು ಗುಹೇಶ್ವರಲಿಂಗವು ಅಲ್ಲಿಯೆ ಅನುಶ್ರುತವಯ್ಯಾ !
--------------
ಅಲ್ಲಮಪ್ರಭುದೇವರು
ಅರಿದ ಶರಣಂಗೆ ಆಚಾರವಿಲ್ಲ, ಆಚಾರವುಳ್ಳವಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ಸುಳುಹು ಜಗಕ್ಕೆ ವಿಪರೀತ, ಚರಿತ್ರವದು ಪ್ರಕಟವಲ್ಲ ನೋಡಾ ! ಸಂಸಾರಿ ಬಳಸುವ ಬಯಕೆಯನೆಂದೂ ಹೊದ್ದನು. ಸಟೆಯ ಹಿಡಿದು ದಿಟವ ಮರೆದು, ಇಲ್ಲದ ಲಿಂಗವನು ಉಂಟೆಂದು ಪೂಜಿಸುವರಾಗಿ ಆಚಾರವುಂಟು, ಆಚಾರವುಳ್ಳವಂಗೆ ಗುರುವುಂಟು, ಗುರುವುಳ್ಳವಂಗೆ ಲಿಂಗವುಂಟು, ಲಿಂಗಪೂಜಕಂಗೆ ಭೋಗವುಂಟು. ಈ ಬರಿಯ ಬಾಯ ಬಣ್ಣಕರೆಲ್ಲರೂ ಪೂಜಕರಾದರು. ಗುಹೇಶ್ವರಲಿಂಗವು ಅಲ್ಲಿ ಇಲ್ಲವೆಂಬುದನು; ಈ ವೇಷಲಾಂಛನರೆತ್ತಬಲ್ಲರು ಹೇಳಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ತನುವಿನಲ್ಲಿಪ್ಪ ಲೋಭವ ಮನವ ಕದ್ದು ಮಾತನಾಡಿದಡೆ ಆ ತನುವೆ ಮನೋರೂಪವಾಗಿ ಕಾಣಬರುತ್ತದೆ. ಆ ಮನದಲ್ಲಿ ಬಯಕೆ ಸಮರತಿಯಾಗದಾಗಿ; ಕಾಮ(ಯ?)ದ ಕರುಳು ಲೋಭದ ಬಯಕೆಯೊಳಗದೆ. ಅರಿದೆನೆಂದು ಬರುಮಾತ ನುಡಿದಡೆ ನಮ್ಮ ಗುಹೇಶ್ವರಲಿಂಗವು ಮೆಚ್ಚ ನೋಡಾ ಮಡಿವಾಳ ಮಾಚಯ್ಯಾ.
--------------
ಅಲ್ಲಮಪ್ರಭುದೇವರು
ತ್ರಿನದಿಯ ಮಧ್ಯದಲ್ಲೈದು ಕುದುರೆಯ ಕಟ್ಟಿದ್ದ ಕಂಭ ಮುರಿಯಿತ್ತು. ಎಂಟಾನೆ ಬಿಟ್ಟೋಡಿದವು. ಹದಿನಾರು ಪ್ರಜೆ ಬೊಬ್ಬಿಡುತ್ತಿದ್ದವು. ಶತಪತ್ರಕಮಲಕರ್ಣಿಕಾ ಮಧ್ಯದಲ್ಲಿ ಗುಹೇಶ್ವರಲಿಂಗವು ಮುಗ್ಧವಾಗಿರ್ದನು.
--------------
ಅಲ್ಲಮಪ್ರಭುದೇವರು
ಘಟಸರ್ಪನಂತೆ ಅತಿಶಯವು ! ನಾಭಿಸರವರಸ್ಥಾನಕವೆ ದಳವೆಂಟು ! ನವದಳಕಮಲ ಊಧ್ರ್ವಮಂಡಲದ ಅಮೃತಸೇವನೆಯಾಗಿ, ಶಿವಯೋಗಿಯಾದೆವೆಂಬರು. ಗುಹೇಶ್ವರಲಿಂಗವು ಪವನವಿಯೋಗ !
--------------
ಅಲ್ಲಮಪ್ರಭುದೇವರು
ಇಕ್ಷುದಂಡಕ್ಕೆ ಕೀಳು ಮೇಲಲ್ಲದೆ ಸಕ್ಕರೆಯ ದಂಡಕ್ಕೆ ಕೀಳು ಮೇಲುಂಟೆ ? ಪರುಷಪಾಷಾಣಕ್ಕೆ ಕೀಳು ಮೇಲಲ್ಲದೆ ಕಡೆಯಾಣಿಗುಂಟೆ ಒರೆಗಲ್ಲು ? `ಉಂಟು' `ಇಲ್ಲ' ಎಂಬ ಸಂದೇಹ ನಿಂದಲ್ಲಿ ಗುಹೇಶ್ವರಲಿಂಗವು ತಾನೆ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಅಯ್ಯ ! ಸಮಸ್ತಧಾನ್ಯಾದಿಗಳಲ್ಲಿ, ಸಮಸ್ತ ಫಲಾದಿಗಳಲ್ಲಿ, ಸಮಸ್ತಪುಷ್ಪಪತ್ರಾದಿಗಳಲ್ಲಿ ಮಧುರ, ಒಗರು, ಕ್ಷಾರ, ಆಮ್ಲ, ಕಹಿ, ಲವಣ ಮೊದಲಾದ ಸಮಸ್ತಪರಮಚಿದ್ರಸವಡಗಿರ್ಪಂತೆ, ಷೋಡಶಮದಗಜದಂತರಂಗದ ಮಧ್ಯದಲ್ಲಿ ಸಮಸ್ತ ವೈರಾಗ್ಯ, ತಿರಸ್ಕಾರಸ್ವರೂಪ ಮಹಾ [ಅ]ಜ್ಞಾನವಡಗಿರ್ಪಂತೆ, ಚಂದ್ರಕಾಂತದ ಶಿಲಾಮಧ್ಯದಲ್ಲಿ ಚಿಜ್ಜಲವಡಗಿರ್ಪಂತೆ, ಶಿಶುಗಳು `ಕಂಡ ಕನಸು' ತಂದೆ ತಾಯಿಗಳಿಗೆ ಕಾಣಿಸಿದಂತೆ, ಕರವೀರ, ಸುರಹೊನ್ನೆ, ಜಾಜಿ, ಬಕುಳ, ಪಾದರಿ, ಪಾರಿಜಾತ, ಮೊಲ್ಲೆ, ಮಲ್ಲಿಗೆ, ತಾವರೆ, ನೈದಿಲೆ, ಸಂಪಿಗೆ, ದವನ, ಪಚ್ಚೆ, ಕಸ್ತೂರಿ, ಮರುಗ, ಬಿಲ್ವ ಮೊದಲಾದ ಪುಷ್ಪ ಪತ್ರಾದಿಗಳಲ್ಲಿ ಮಹಾಸದ್ವಾಸನಾ ಸ್ವರೂಪವಾದ ಪರಿಮಳವಡಗಿರ್ಪಂತೆ, ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳ ಮಧ್ಯದಲ್ಲಿ ಭ್ರಮರನಾದ, ವೀಣಾನಾದ, ಘಂಟಾನಾದ, ಭೇರಿನಾದ, ಮೇಘನಾದ, ಪ್ರಣಮನಾದ, ದಿವ್ಯನಾದ, ಸಿಂಹನಾದ, ಶರಭನಾದ, ಮಹಾನಾದಂಗಳಡಗಿರ್ಪಂತೆ, ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಅಡಗಿರ್ದು, ಜಗದ ಜಡಜೀವರಿಗೆ ಗೋಚರವಿಲ್ಲದಿರ್ಪುದು ನೋಡ ! ಗುಹೇಶ್ವರಲಿಂಗವು, ಚೆನ್ನಬಸವಣ್ಣ
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->