ಅಥವಾ

ಒಟ್ಟು 15 ಕಡೆಗಳಲ್ಲಿ , 1 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿವಿನೊಳಗೊಂದು ಮರವೆಯದೆ, ಮರವೆಯೊಳಗೊಂದು ಅರಿವದೆ. ಅರಿವು ಮರವೆಯೆಂಬೆರಡೂ ಅಳಿದಡೆ ನಿರ್ಣಯವದೆ (ನಿರ್ವಯಲಿದೆ?). ತಾನೆಂಬಲ್ಲಿ ನಿಷ್ಪತಿಯಿದೆ_ಇದೇನು ಹೇಳಾ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಭಾವದಲೊಬ್ಬ ದೇವರ ಮಾಡಿ, ಮನದಲೊಂದು ಭಕ್ತಿಯ ಮಾಡಿದಡೆ, ಕಾಯದ ಕೈಯಲ್ಲಿ ಕಾರ್ಯವುಂಟೆ? ವಾಯಕ್ಕೆ ಬಳಲುವರು ನೋಡಾ. ಎತ್ತನೇರಿ ಎತ್ತನರಸುವರು, ಎತ್ತ ಹೋದರೈ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಆ ಮಾತು, ಈ ಮಾತು, ಹೋ ಮಾತು_ಎಲ್ಲವೂ ನೆರೆದು ಹೋಯಿತ್ತಲ್ಲಾ ಭಕ್ತಿ ನೀರಲ್ಲಿ ನೆರೆದು ಜಲವ ಕೂಡಿ ಹೋಯಿತ್ತಲ್ಲಾ. ಸಾವನ್ನಕ್ಕ [ಸರಸ] ಉಂಟೇ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಸತಿ ಭಕ್ತೆಯಾದಡೆ ಹೊಲೆಗಂಜಲಾಗದು, ಪತಿ ಭಕ್ತನಾದೆಡೆ ಕುಲಕಂಜಲಾಗದು. ಸತಿ_ಪತಿಯೆಂಬ ಅಂಗಸುಖ ಹಿಂಗಿ, ಲಿಂಗವೇ ಪತಿಯಾದ ಬಳಿಕ ಸತಿಗೆ ಪತಿಯುಂಟೆ? ಪತಿಗೆ ಸತಿಯುಂಟೆ? ಹಾಲುಂಡು ಮೇಲುಂಬರೆ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಆಗಮ್ಯ ಅಗೋಚರನೆನಿಸಿಕೊಂಡು, ಅವರಿವರ ಕೈಗೆ ಎಂತು ಬಂದೆ ? ಉಗುರುಗಳೆಲ್ಲ ಸುತ್ತಿದವೆ? ಅಗ್ಘವಣಿ ಪತ್ರೆ ಅರತವೆ ಅಯ್ಯಾ ? ಎನ್ನ ಕರಸ್ಥಲದೊಳಗಿರ್ದು ಎನ್ನೊಡನೆ ನುಡಿಯೆ, ನಿನ್ನ ಹಲ್ಲ ಕಳೆದಡೆ ಒಡೆಯರುಂಟೆ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ತಲೆಯ ಮೇಲೆ ತಲೆಯಿದ್ದಿತ್ತಲ್ಲಾ ! ಆ ತಲೆಯಾತಲೆ ನುಂಗಿತ್ತಲ್ಲಾ ! ಸತ್ತು ಹಾಲ ಸವಿಯ ಬಲ್ಲಡೆ, ರಥದ ಕೀಲ ಬಲ್ಲಡೆ_ಅದು ಯೋಗ ! ಶಿಶು ಕಂಡ ಕನಸಿನಲುಳ್ಳ ತೃಪ್ತಿ ನಿನ್ನಲ್ಲಿ ಉಂಟೆ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಇಪ್ಪತ್ತೆ ೈದು ತತ್ವದ ಹತ್ತೆಂಬ ದ್ವಾರದಲ್ಲಿ ಬಳಲುವ ವ್ಯರ್ಥಗೇಡಿ ಮನವ ನಾನೇನೆಂಬೆನಯ್ಯಾ? ತನ್ನ ತಾ ತಿಳಿಯಲು ತನಗೆ ತಾನನ್ಯವಿಲ್ಲ ಮರುಳೆ ಮುತ್ತಯ್ಯನ ಬೆಣ್ಣೆಯ, ಶಿಶು ನುಂಗಿತ್ತು. ಮತ್ತೆ ಶಿಶುವಿನ ಸುಖವನೇನೆಂಬೆ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಹೊನ್ನ ತೂಗಿದ ತ್ರಾಸುಕಟ್ಟಳೆ ಹೊನ್ನಿಂಗೆ ಸರಿಯುಪ್ಪುದೆ? ಸನ್ನಹಿತರಾದೆವೆಂಬ ನುಡಿಗೆ ನಾಚರು ನೋಡಾ, ಕನ್ನದಲಿ ಸವೆದ ಕಬ್ಬುನದಂತೆ, ಮುನ್ನ ಹೋದ ಹಿರಿಯರು ಲಿಂಗದ ಸುದ್ದಿಯನರಿಯರು. ಇನ್ನಾರು ಬಲ್ಲರು ಹೇಳಾ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಲಿಂಗವಂತಂಗೆ ಲಿಂಗದ ವಾರ್ತೆಯ ನುಡಿವುದೇ ಭಂಗ, ಹಂಗು ನೋಡಾ, ಹಂಗಿನ ಶಬ್ದ ನೋಡಾ ! ಕೊಡನ ತುಂಬಿದ ಹಾಲನೊಡೆಯ ಹಾಯಿಕಿ ಇನ್ನು ಉಡುಗಿಹೆನೆಂದಡೆ ಉಂಟೆ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಖಂಡಾಖಂಡ ಸಂಯೋಗವಿಲ್ಲದ ಅಖಂಡಿತನ ನಿಲವು, ತನ್ನಲ್ಲಿ ಅಲ್ಲದೆ ಮತ್ತೆಲ್ಲಿಯೂ ಇಲ್ಲ. ಬಯಲ ಹಿರಿಯರು ಬಯಲನೆ ಅರಸುವರು. ಅಲ್ಲಿ ಉಂಟೆ ಹೇಳಾ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ನಿತ್ಯ ನಿರಂಜನ ತಾನೆಂದರಿಯದೆ, `ತತ್ತ್ವ ಮಸಿ' ಎಂದು ಹೊರಗನೆ ಬಳಸಿ ಸತ್ತಿತ್ತಲ್ಲಾ ಜಗವೆಲ್ಲ ನಾಯ ಸಾವ ! ತಮ್ಮ ತಾವರಿಯದೆ, ಸತ್ತವರ ಹೆಸರ ಪತ್ರವನೋದಿದಡೆ ಎತ್ತಣ ಮುಕ್ತಿ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಕೆರೆಯಲುಂಡು ತೊರೆಯ ಹೊಗಳುವರು. ಅತ್ಯುತ್ಕಟದ ಪರಬ್ರಹ್ಮವನೆ ನುಡಿವರು. ಸಹಜ ಪಿನಾಕಿಯ ಬಲೆಯಲ್ಲಿ ಸಿಲುಕಿ ಭವವ ಹರಿಯಲರಿಯರು. ರುದ್ರನ ಛತ್ರವನುಂಡು ಇಲ್ಲವೆಯ ನುಡಿವ ಹಿರಿಯರಿಗೆ ಮಹದ ಮಾತೇಕೋ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಅರೆಯ ಮೇಲಣ ಹುಲ್ಲೆಗೆ ಕೆಂಗರಿಯ ಬಾಣವ ತೊಟ್ಟವನೆ (ತೊಟ್ಟಡೆ ?) ತಪ್ಪದೆ ತಾಗಿತ್ತಲ್ಲಾ ! ಅದು ಒಂದೆ ಬಾಣದಲ್ಲಿ ಅಳಿಯಿತ್ತಲ್ಲಾ ! ನಾರಿ ಹರಿಯಿತ್ತು, ಬಿಲ್ಲು ಮುರಿಯಿತ್ತು. ಹುಲ್ಲೆ ಎತ್ತ ಹೋಯಿತ್ತು ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಆಡಾಡ ಬಂದ ಕೋಡಗ ಹಂದರವನೇರಿತ್ತಲ್ಲಾ ! ನೋಡಬಂದವರ ಕಣ್ಣೆಲ್ಲಾ ಒಡೆದವು. ಬೆಣ್ಣೆಯ ತಿಂದವರ ಹಲ್ಲೆಲ್ಲಾ ಹೋದವು ! ಇದೇನು ಸೋಜಿಗ ಹೇಳಾ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಅಸ್ಥಿಗೆ ಚರ್ಮವಾಧಾರವಾಗಿ, ಪ್ರಾಣಕ್ಕೆ ಪ್ರಸಾದ ಮೃತ್ತಿಕೆಯಾಗಿ(ಗೆ?) ಪ್ರಾಣ ಲಿಂಗವಲ್ಲೊ! ಪ್ರಾಣಲಿಂಗವೆಂಬುದು ಕರಕಷ್ಟ ನೋಡಾ. ಪ್ರಾಣಲಿಂಗವೆಂಬುದು ಕರನಾಚಿಕೆ ನೋಡಾ. ಒಡೆದ ಮಡಕೆಗೆ ಒತ್ತಿ ಮಣ್ಣ ಮೆತ್ತಿದಡೆ, ಅದು ತರಹರವಾಗಬಲ್ಲುದೆ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
-->