ಅಥವಾ

ಒಟ್ಟು 45 ಕಡೆಗಳಲ್ಲಿ , 1 ವಚನಕಾರರು , 45 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಿರಿಡುವ ಪೂಜೆ ವಾಗ್‍ಬ್ರಹ್ಮದ ಷಡುಸ್ಥಲದ ಸೋಪಾನ ಅಡಿಯ ಮೆಟ್ಟಿ ಅಡಿವಿಡಿವನ್ನಕ್ಕ ಗೋಪತಿನಾಥ ವಿಶ್ವೇಶ್ವರಲಿಂಗವುಉಭಯನಾಮವಾಗಿಪ್ಪನು.
--------------
ತುರುಗಾಹಿ ರಾಮಣ್ಣ
ಜಾÕನನೇತ್ರ ಮುಸುಕ ತೆಗೆದು ಮುಂದಕ್ಕೆ ಅದೇನ ಕಾಬುದು? ಕಾಬುದು ಕಾಣಿಸಿಕೊಂಬುದು ನಿಜ ತಾನಾದಲ್ಲಿ ಗೋಪತಿನಾಥ ವಿಶ್ವೇಶ್ವರಲಿಂಗವು ಉಭಯನಾಮವಿಲ್ಲ.
--------------
ತುರುಗಾಹಿ ರಾಮಣ್ಣ
ಆತ್ಮಂಗೆ ಕಾಯವೆ ರೂಪು. ಆ ಕಾಯಕ್ಕೆ ಆತ್ಮನೆ ಹಾಹೆ. ಆ ಹಾಹೆಗೆ ಅರಿವೇ ಬೀಜ. ಆ ಬೀಜಕ್ಕೆ ಗೋಪತಿನಾಥ ವಿಶ್ವೇಶ್ವರಲಿಂಗವೆ ನಿರ್ವೀಜ.
--------------
ತುರುಗಾಹಿ ರಾಮಣ್ಣ
ಸ್ಥಲಂಗಳನರಿದು ಆಚರಿಸುವಲ್ಲಿ ಮೂರನರಿದು ಮೂರ ಮರೆದು ಮೂರವೇದಿಸಿ ಐದ ಕಾಣಿಸಿಕೊಂಡು ಆರರ ಅರಿಕೆ ಹಿಂಗಿ ಮತ್ತಿಪ್ಪತ್ತೈದರ ಭೇದವಡಗಿ ಮತ್ತೊಂದರಲ್ಲಿ ಕಂಡೆಹೆನೆಂಬ ಸಂದು ಸಲೆ ಸಂದು ಒಂದಿ ಒಂದಾಹನ್ನಕ್ಕ ಗೋಪತಿನಾಥ ವಿಶ್ವೇಶ್ವರಲಿಂಗವೆಂಬ ಉಭಯನಾಮ ಬಿಡದು.
--------------
ತುರುಗಾಹಿ ರಾಮಣ್ಣ
ಶಾಸ್ತ್ರ ಪ್ರಮಾಣವೆಂಬ ಬೆಟ್ಟದಲ್ಲಿ ವಾಚಾರಚನೆಯೆಂಬ ಹುಲಿ ಹುಟ್ಟಿ, ಅರಿದೆನೆಂಬ ಹಿರಿದಪ್ಪ ಬೆಟ್ಟದಲ್ಲಿ ಗೆಲ್ಲ ಸೋಲವೆಂಬ ಮತ್ತಗಜ ಹುಟ್ಟಿ, ಮೊನೆ ಮುಂಬರಿದು ಹರಿದ ಬೆಟ್ಟದಲ್ಲಿ ಪರಿಭ್ರಮಣದ ತೋಳ ಹುಟ್ಟಿ, ಹುಲಿ ಹುಲ್ಲೆಯ ಕೋಡಿನಲ್ಲಿ ಸತ್ತು ಗಜ ಅಜದ ಮೆಲುಕಿನಲ್ಲಿ ಸಿಕ್ಕಿ, ತೋಳ ಉಡುವಿನ ಕಣ್ಣಿನೊಳಡಗಿತ್ತು. ತುರುವಿನ ಮುಂದೆ ಬರಿಕೆಯಿವುತ್ತಿದೆ ಗೋಪತಿನಾಥ ವಿಶ್ವೇಶ್ವರಲಿಂಗವನರಿತೆಹೆನೆಂದು.
--------------
ತುರುಗಾಹಿ ರಾಮಣ್ಣ
ಹಸುವಿಗೆ ಹಾಗ, ಎತ್ತಿಗೆ ಹಣವಡ್ಡ, ಕರುವಿಗೆ ಮೂರು ಹಣ, ಎಮ್ಮೆ ಕೋಣಕುಲವ ನಾ ಕಾಯಲಿಲ್ಲ. ಅವು ಎನ್ನ ತುರುವಿಗೆ ಹೊರಗು. ತೊಂಡು ಹೋಗದಂತೆ ಕಾದೊಪ್ಪಿಸುವೆ ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ.
--------------
ತುರುಗಾಹಿ ರಾಮಣ್ಣ
ಶ್ವೇತ ಪೀತ ಕಪೋತ ಕೃಷ್ಣ ಗೌರ ಮಾಂಜಿಷ್ಟ ಕಪಿಲಿ ಕರ್ಬುರ ಅಳಗು ಬೊಟ್ಟಳಗ ಇಂತೀ ದಶವರ್ಣದ ಪಶುನಾಮದ ಅಸುವನರಿತು ಸಂಜ್ಞೆ ಗರ್ಜನೆ ತಾಡನೆ ತ್ರಿವಿಧ ಭೇದಂಗಳಿಂದ ಕಾದೊಪ್ಪಿಸಬೇಕು ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ.
--------------
ತುರುಗಾಹಿ ರಾಮಣ್ಣ
ಹಸುವಿಂಗೊಂದು ಕಚ್ಚು, ಎತ್ತಿಂಗೆರಡು ಕಚ್ಚು, ಕರುವಿಂಗೆ ಮೂರು ಕಚ್ಚು. ಇಂತಿವ ನೋಡಿ ಮೇಯಿಸಿಕೊಂಡು ತೊಂಡುಹೋಗದಂತೆ ಕಾಯಿದೊಪ್ಪಿಸಬೇಕು ಗೋಪತಿನಾಥ ವಿಶ್ವೇಶ್ವರಲಿಂಗದರಿಕೆಯಾಗಿ.
--------------
ತುರುಗಾಹಿ ರಾಮಣ್ಣ
ಬೆಳೆದು ಬೆಳೆಯಿಸಿಕೊಂಬುದು ನೀರೊ ನೆಲನೊ ಬೀಜವೊ ಎಂಬುದ ತಿಳಿದು, ಕರ್ಮವರ್ಮ ಕೂಟಂಗಳ ಆಟವನರಿತು ವರ್ತನಕ್ಕೆ ಕ್ರೀ ಸತ್ಯಕ್ಕೆ ಜ್ಞಾನ ಜ್ಞಾನಕ್ಕೆ ಸರ್ವಜೀವದ ವ್ಯಾಪಾರ ಭೇದ. ಅದು ಸಂಪದ ಸಂಬಂಧ ತತ್ವ ಗೋಪತಿನಾಥ ವಿಶ್ವೇಶ್ವರಲಿಂಗದ ಕ್ರಿಯಾನಿರ್ವಾಹ.
--------------
ತುರುಗಾಹಿ ರಾಮಣ್ಣ
ಜೀವಕುಳವಳಿಯಿತ್ತು, ಜ್ಞಾನಕುಳ ಉಳಿಯಿತ್ತು. ಭವಪಾಶ ಹರಿಯಿತ್ತು, ಅಜ್ಞಾನ ಹಿಂಗಿತ್ತು. ಎಲೆ ಗೋಪತಿನಾಥ ವಿಶ್ವೇಶ್ವರಲಿಂಗಾ, ನಿನ್ನತ್ತ ಮನವಾಯಿತ್ತೆನಗೆ ಕೃಪೆಮಾಡು ಕೃಪೆಮಾಡು ಶಿವಧೋ ಶಿವಧೋ.
--------------
ತುರುಗಾಹಿ ರಾಮಣ್ಣ
ತತ್ವಂಗಳ ಗೊತ್ತ ಗುಟ್ಟೆಂದು ಬಿಡಬಾರದು ಇಷ್ಟಲಿಂಗದ ಪೂಜೆಯ ಆತ್ಮನ ಗೊತ್ತನರಿತೆನೆಂದು ಮರೆಯಲಾಗದು ಪಾಪ ಪುಣ್ಯವಿಲ್ಲಾ ಎಂದು ನೀಕರಿಸಿ ನಡೆಯಲಾಗದು. ಈ ಗುಣ ಅಂಗವನರಿವನ್ನಕ್ಕ ಒಂದೂ ಇಲ್ಲಾ ಎಂದು ಬಿಡಬಹುದೆ? ನಾನೆಂಬುದ ಇದೇನೆಂದು ಅರಿವನ್ನಕ್ಕ ಶ್ರುತಕ್ಕೆ ದೃಷ್ಟ, ದೃಷ್ಟಕ್ಕೆ ಅನುಮಾನ, ಅನುಮಾನಕ್ಕೆನಿಶ್ಚಯ. ನಿಶ್ಚಯ ನಿಜವಾದಲ್ಲಿ, ಗೋಪತಿನಾಥ ವಿಶ್ವೇಶ್ವರಲಿಂಗನ ಕ್ರಿಯಾನಿರ್ವಾಹ.
--------------
ತುರುಗಾಹಿ ರಾಮಣ್ಣ
ಕರೆವ ಹಸುವ ಉಳುವ ಬೆನ್ನತ್ತ ಮೊಲೆವುಂಬ ಕರುವ ಕುರುಹನರಿಯದೆ ಕಾಣಬಹುದೆ, ಈ ತ್ರಿವಿಧವಿಲ್ಲದೆ ಗುರುವಿನ ಇರವ ಲಿಂಗದ ಮೂರ್ತಿಧ್ಯಾನವ ಅರಿವಿನ ಮರೆದೊರಗುವ ಕಲೆಯ ಚಲನೆ ನಿಂದಲ್ಲಿ ಆತ್ಮಲಿಂಗ ಭೇದ, ಪ್ರಾಣ ಸಂಬಂಧವಪ್ಪುದು. ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೇ ಪ್ರಮಾಣು.
--------------
ತುರುಗಾಹಿ ರಾಮಣ್ಣ
ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ ಏಕಚಿತ್ತನಾಗಿ ಸರ್ವವಿಕಾರಂಗಳ ಕಟ್ಟುವಡೆದು, ಇಂದ್ರಿಯಂಗಳ ಇಚ್ಛೆಯಲ್ಲಿ ತ್ರಿವಿಧವ ಹಿಡಿದಿರುವರ ಸಂದಿಯಲ್ಲಿ ನುಸುಳದೆ ವಸ್ತುವಿನ ಅಂಗದಲ್ಲಿಯೆ ತನ್ನಂಗೆ ತಲ್ಲೀಯವಾಗಿಪ್ಪುದೆ ಮಹಾ ನಿಜದ ನೆಲೆ. ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೆ ಬಟ್ಟೆ.
--------------
ತುರುಗಾಹಿ ರಾಮಣ್ಣ
ಭಾವವುಳ್ಳನ್ನಕ್ಕ ಭ್ರಮೆಯ ಬೀಜ. ಭ್ರಮೆ ನಿಭ್ರಮೆಯಹನ್ನಕ್ಕ ಪೂಜೆಯ ದೃಷ್ಟ. ಪುಣ್ಯದ ಬೀಜ ಸುಖದ ಬೆಳೆ ಸಾಧನ ಸಂಪತ್ತು. ಇಂತೀ ಕ್ರೀ ಸಾಧ್ಯವಹನ್ನಕ್ಕ ಅಸಾಧ್ಯದ ಸಂಬಂಧ. ವಿರಳ ಅವಿರಳವೆಂಬ ಕಲೆ ಕಳೆಯಲ್ಲಿ ಕಲೆದೋರದೆ ನಿಂದುದು ಗೋಪತಿನಾಥ ವಿಶ್ವೇಶ್ವರಲಿಂಗವು ವಿಶ್ವನಾಮ ನಷ್ಟವಾದಭೇದ.
--------------
ತುರುಗಾಹಿ ರಾಮಣ್ಣ
ಅಯ್ಯಾ, ಏನನಹುದೆಂಬೆ, ಏನನಲ್ಲಾ ಎಂಬೆ. ಕಾಯವುಳ್ಳನ್ನಕ್ಕ ಕರ್ಮ ಬಿಡದು, ಜೀವವುಳ್ಳನ್ನಕ್ಕ ಕಾರ್ಪಣ್ಯ ಕೆಡದು. ಆರ ಕೇಳಿ ಆರಿಗೆ ಹೇಳಿಹೆನೆಂದಡೂ ಭಾವದ ಭ್ರಮೆ ಬಿಡದು. ಮಹಾಸಮುದ್ರವನೀಜುವವನಂತೆ ಕರ ಕಾಲು ಆಡುವನ್ನಕ್ಕ ಜೀವಭ್ರಮೆ ನಿಂದಲ್ಲಿ ನಿಂದಿತ್ತು. ಭಾವಭ್ರಮೆ ಒಂದನರಿತು ಒಂದನರಿದೆಹೆನೆಂಬನ್ನಕ್ಕ ಬಂದಿತ್ತು ದಿನ, ಅಂಗವ ಹರಿವುದಕ್ಕೆ. ಈ ಸಂದೇಹದ ಸಂದಿಯಲ್ಲಿ ಕೆಡಹದೆ ನಿಜದಂಗವ ತೋರು ಗೋಪತಿನಾಥ ವಿಶ್ವೇಶ್ವರ ಲಿಂಗ.
--------------
ತುರುಗಾಹಿ ರಾಮಣ್ಣ
ಇನ್ನಷ್ಟು ... -->