ಅಥವಾ

ಒಟ್ಟು 37 ಕಡೆಗಳಲ್ಲಿ , 1 ವಚನಕಾರರು , 37 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮದಲ್ಲಿಮುಳುಗಿ ನುಡಿವರು ಶರಣಂಗೆ ಕಾಮಿಯೆಂದು, ಕ್ರೋಧದಲ್ಲಿಮುಳುಗಿ ನುಡಿವರು ಶರಣಂಗೆ ಕ್ರೋದ್ಥಿಯೆಂದು, ಲೋಭದಲ್ಲಿಮುಳುಗಿ ನುಡಿವರು ಶರಣಂಗೆ ಲೋಬ್ಥಿಯೆಂದು, ಮೋಹದಲ್ಲಿಮುಳುಗಿ ನುಡಿವರು ಶರಣಂಗೆ ಮೋಹಿಯೆಂದು, ಮದದಲ್ಲಿಮುಳುಗಿ ನುಡಿವರು ಶರಣಂಗೆ ಮದಭರಿತನೆಂದು, ಮತ್ಸರದಲ್ಲಿಮುಳುಗಿ ನುಡಿವರು ಶರಣಂಗೆ ಮತ್ಸರಭರಿತನೆಂದು, ಅರಿಷಡ್ವರ್ಗದಲ್ಲಿರ್ದು ಒಂದೊಂದು ನುಡಿದರೆ ಸಂದೇಹವಿಲ್ಲ ಶರಣಂಗೆ. ನಿಂದೆಯನಾಡುವ ನರನಿಗೆ ಸೂಕರಜನ್ಮವು ಇದು ಸತ್ಯ ಗುರುನಿರಂಜನ ಚನ್ನಬಸವಲಿಂಗದ ವಚನ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾವು ಗುರುಲಿಂಗಜಂಗಮಪ್ರಸಾದಿಗಳೆಂದು ಹೇಳಿಕೊಂಡು ನಡೆವ ಅಬದ್ಧ ಮೂಢಮನುಜರನೇನೆಂಬೆನಯ್ಯಾ! ಗುರುಪ್ರಸಾದಿಯಾದಡೆ, ಕಾಯಗುಣವಳಿದು ಪರಸ್ತ್ರೀಸಂಗ ಪರದ್ರವ್ಯ ಅಪಹರಣ ಅಭಕ್ಷಭಕ್ಷಣ ಹಿಂಸಾದಿಗಳನಳಿದುಳಿದಿರಬೇಕು. ಲಿಂಗಪ್ರಸಾದಿಯಾದಡೆ ಹುಸಿ ನಿಷ್ಠುರಾದಿ ವಾಕ್‍ದೋಷಂಗಲನಳಿದಿರಬೇಕು. ಜಂಗಮಪ್ರಸಾದಿಯಾದಡೆ ಆಸೆ ಆಮಿಷ ದುರ್ಮೋಹಾದಿಗಳನಳಿದಿರಬೇಕು. ಇಂತಲ್ಲದೆ ಕರಣತ್ರಯವಳಿಯದೆ ಕರ್ಮತ್ರಯವನುಂಬ ಕಾಳಕೂಳರಿಗೆ ತ್ರಿವಿಧಪ್ರಸಾದವೆಲ್ಲಿ ಹದಯ್ಯಾ? ನಮ್ಮ ಗುರುನಿರಂಜನ ಚನ್ನಬಸವಲಿಂಗದ ನಿಜಪ್ರಸಾದಿಗಳಿಗಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅಖಂಡಲಿಂಗವನು ಧರಿಸಿಪ್ಪ ಇಂದ್ರಿಯಾನಂದ ಪ್ರಾಣಾನಂದ ಜ್ಞಾನಾನಂದ ಭಾವಾನಂದ ತೂರ್ಯಾನಂದ ಮಹದಾನಂದಸ್ವರೂಪವಾದ ಶರಣನು, ಕಾರಣಕ್ಕೆ ಕಾರ್ಯನಾಗಿ ಲೋಕೋಪಕಾರ ಚರಿಸುವನಲ್ಲದೆ ಪಂಚಭೂತಕಾಯದ ಪಂಚೇಂದ್ರಿಯವಿಷಯಪ್ರಕೃತಿಯೊಳು ಮುಕ್ತನಾಗಿ ಕಾಮಾದಿ ಷಡ್ವರ್ಗಂಗಳಂತರಂಗದಲ್ಲಿ ಮಡಗಿ, ಕೊಟ್ಟವರ ಹೊಗಳಿ, ಕೊಡದವರ ಬೊಗಳಿ, ತಟ್ಟಿ ಬಾಗಿಲಲರಸುವ ತುಡುಗ ಶುನಕನಂತೆ ಧನವನಿತೆಯರಾಸೆ ತಲೆಗೇರಿ ಮನೆಮನೆ ಪಳ್ಳಿ ಪಟ್ಟಣವ ಹುಡುಕುತ್ತ, ಒಡಲ ಹೊರೆದು ಗುಡಿ ಮಳಿಗೆ ಮಠವ ಸೇರಿ ಸತ್ತು ಹೋಗಬಂದ ಮಿಥ್ಯವೇಷಧಾರಿಗಳಂತಲ್ಲ ನೋಡಾ ನಿಮ್ಮ ಶರಣ. ಗುರುನಿರಂಜನ ಚನ್ನಬಸವಲಿಂಗದ ಅಬ್ಥಿಮಾನಿ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅವಿರಳ ಪರಬ್ರಹ್ಮ ಪ್ರಸಾದಮೂರ್ತಿಯು ತನ್ನ ತಾನೆ ಬೆಳಗಾಗಿ ತೋರುವ ನಿರಂತರ, ತನುತ್ರಯ ಮನತ್ರಯ ಭಾವತ್ರಯ ಕರಣತ್ರಯಾದಿ ಸಕಲರಲ್ಲಿಯು ಕೂಡಿ ಗುರುನಿರಂಜನ ಚನ್ನಬಸವಲಿಂಗದ ಶರಣನು ತನ್ನೊಳಗೆ ಪರಿಣಾಮಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎನ್ನ ಮನೆಯ ರಮಣನ ಮಾಧುರ್ಯವನೇನೆಂದು ಹೇಳಲಮ್ಮ. ನೆಲಮನೆಯಲ್ಲಿ ನೆರೆವ ಸುಖವ ಕಂಡವರರಿಯರು. ಮನಮಂದಿರದಲ್ಲಿ ಕೂಡುವ ಸುಖವ ವಾಗದ್ವೈತರೇನಬಲ್ಲರು ? ಸಿಖಿಮಂಟಪದಲ್ಲಿ ಸುರತದಸುಖವ ಕಣ್ಣುಗೆಟ್ಟನಾರಿಯರೇನಬಲ್ಲರು ? ಪವನಗೃಹದಲ್ಲಿ ನೆರೆವ ಸೌಖ್ಯವ ಅವರಿವರರಿಯರು. ಗಗನಮಂಟಪದಲ್ಲಿ ಸೊಗಸಿನಿಂದ ನೆರೆವ ಕುಶಲವ ಕೆಳಗಳವರರಿಯರು. ಮೇಲುಮಂದಿರ ಮಧ್ಯಮಂಟಪದಲ್ಲಿ ಲೋಲಸಂಯೋಗವ ಕಾಲಕೆಳಗಲವರರಿಯರು. ಗುರುನಿರಂಜನ ಚನ್ನಬಸವಲಿಂಗದ ನಿಜಾಂಗನೆಯಾನಲ್ಲದೆ, ಹೋಗಿಬರುವ ಸೋಗಿನ ನಾರಿಯವರೆತ್ತ ಬಲ್ಲರು, ಹೇಳಾಯಮ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಸೆಯುಳ್ಳರೆ ಭಕ್ತನೆಂಬೆ, ರೋಷವುಳ್ಳರೆ ಮಹೇಶ್ವರನೆಂಬೆ, ಆಲಸ್ಯವುಳ್ಳರೆ ಪ್ರಸಾದಿಯೆಂಬೆ, ಹಿಂಸೆಯುಳ್ಳರೆ ಪ್ರಾಣಲಿಂಗಿಯೆಂಬೆ, ಸಂಸಾರವುಳ್ಳರೆ ಶರಣನೆಂಬೆ, ಸಂಗವುಳ್ಳರೆ ಐಕ್ಯನೆಂಬೆ. ಇಂತಿವು ಶೂನ್ಯವಾದರೆ ಆರೂಢನೆಂಬೆ ಗುರುನಿರಂಜನ ಚನ್ನಬಸವಲಿಂಗದ ಸಂಗಕ್ಕೆ ಬೇಕಾದ ಕಾರಣ ಬೇಕೆಂಬ ಶರಣಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಉಪಾಧಿವಿಡಿದು ಮಾಡುವ ಭಕ್ತನ ಮನೆಯ ಕೆಟ್ಟಕೂಳ ತಿನ್ನಲಾಗದು ಶಿವಜ್ಞಾನಿಗಳು. ಅದೇನು ಕಾರಣವೆಂದೊಡೆ : ಲಿಂಗತ್ರಯವನು ಮಾರಿ ಅಂಗತ್ರಯವನು ತುಂಬಿ ಮಂಗಲಮಹಿಮರೆಂದು ಭಂಗವಿಟ್ಟಾಡುವ ಜಂಗುಳಿಗಳ ಸಂಗ ಸಹಪಂಕ್ತಿ ಪಂಚಮಹಾಪಾತಕವೆಂದು ಕಂಗಳಿಂದೆ ನಿರೀಕ್ಷಿಸಲೊಲ್ಲರು ನಮ್ಮ ಗುರುನಿರಂಜನ ಚನ್ನಬಸವಲಿಂಗದ ನಿಜಶರಣರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಯದಲ್ಲೊಬ್ಬನ ಮೆಚ್ಟಿ ಮಾಡಿದವಳು, ಆವಗೆ ರತಿಗೊಟ್ಟವಳು, ಆವಗೆ ಉಣಿಸಿದವಳು, ಆತನ ಮೋಹಿಸಿದವಳು, ಇವರಂತಿರಲಿ, ಎನ್ನ ಸುಖವನರಿಯರು. ಮನದಲ್ಲೊಬ್ಬನ ಮೆಚ್ಚಿ ಮಾಡಿದವಳು, ಅಲ್ಲಿಯೇ ನಿಷೆ*ಯನಿಟ್ಟವಳು, ಅಲ್ಲಿಯೇ ಮನಮೆಚ್ಚಿ ಉಣಿಸಿದವಳು, ಅಲ್ಲಿಯೇ ಮಾತಿನ ಮಲಕಿನೊಳು ಮರುಳಾದವಳು, ಇವರಂತಿರಲಿ, ಎನ್ನ ಪರಿಣಾಮವನರಿಯರು. ಭಾವದಲ್ಲೊಬ್ಬನ ಮೆಚ್ಚಿ ಮಾಡಿದವಳು, ಆವಗೆ ಮನವಿಟ್ಟವಳು, ಅಲ್ಲಿಯೇ ಗೋಪ್ಯದಲ್ಲಿ ಉಣಿಸಿದವಳು, ಅಲ್ಲಿಯೇ ಭಾವಭ್ರಾಂತಿಗೊಂಡವಳು, ಇವರಂತಿರಲಿ, ಎನ್ನ ಸಂಯೋಗವನರಿಯರು. ಗುರುನಿರಂಜನ ಚನ್ನಬಸವಲಿಂಗದ ಸುಖವ ಅಂಗನೆಗಲ್ಲದೆ ಮತ್ತಾರು ಅರಿಯರು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಧನರತಿಯುಳ್ಳ ಸೂಳೆಯ ಮನ ಭುಜಂಗನ ರತಿವೆರಸದುಪಚಾರದಂತೆ. ಪದಫಲ ರತಿಭಕ್ತನ ಮನಸ್ಸು ನಿಜವೆರಸದೆ ಪೂಜೆ ಗಜೆಬಜೆಯಾಯಿತ್ತು ಗುರುನಿರಂಜನ ಚನ್ನಬಸವಲಿಂಗದ ಬೆಳಗನರಿಯದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಮಶಾಂತ ಪರಿಪೂರ್ಣ ಪ್ರಾಣಲಿಂಗಿಯು ಮಹಾನುಭಾವ ಜಂಗಮಲಿಂಗ ಸುಖಮಯವಾದ ಬಳಿಕ ಹುಸಿಯೆಂಬ ಮಸಿಯ ಪೂಸದ, ಆಸೆಯೆಂಬ ಮದ್ದು ತಿನ್ನದೆ, ಭಾಷೆ ಬಣ್ಣಿಗನಾಗದೆ, ಕಣ್ಣುಗೆಟ್ಟು ಮಲತ್ರಯ ಮೋಹಿಯಾಗದೆ, ಸಂದುಸಂಶಯ ಮಂದಮರುಳನಾಗದೆ, ಬೆಂದ ಒಡಲಿಗೆ ಸಂದು ಯಂತ್ರ ಮಂತ್ರ ವೈದ್ಯ ವಶ್ಯಾದಿ ಉಪಾಧಿ ಉಲುಹಿನ ಭ್ರಾಂತನಾಗದೆ, ಸದ್ಭಕ್ತಿ ಸುಜ್ಞಾನ ಪರಮವಿರಾಗತೆಯೆಂಬ ರತ್ನವ ಕಳೆಯದೆ ಡಂಭಕ ಜಡಕರ್ಮವ ಸೋಂಕದೆ ಕರಣಾದಿ ಗುಣಗಳ ಜರಿದು ಏಕಾಂತವಾಸನಾಗಿ ಚರಿಸುತಿರ್ದ ಗುರುನಿರಂಜನ ಚನ್ನಬಸವಲಿಂಗದ ಲೀಲೆಯುಳ್ಳನ್ನಕ್ಕರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗಯ್ಯಲಿಂಗದನುವರಿದು ಅನಿಮಿಷಸುಖಿಯಾಗಲರಿಯದೆ, ತುಂಗಭದ್ರೆಯ ಹಂಪೆ, ನಂಜುಂಡಪರ್ವತ, ಕಾಶಿ, ಸಂಗಮಾದಿ ಪುಣ್ಯಕ್ಷೇತ್ರವ ಕಂಡು ಬದುಕುವೆನೆಂದು ಮಂಡಲವ ಸುತ್ತಿ ಬೆಂಡಾಗಿ ಅಸುವಳಿದು ಹೋಗುವ ಕಸಮನುಜರು, ಅವರೆತ್ತ ಬಲ್ಲರಯ್ಯಾ ಗುರುನಿರಂಜನ ಚನ್ನಬಸವಲಿಂಗದ ಘನವ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಂದು ವಿಷಯಕೆ ಮನೆಯ ನೋಡಿ ಮಾಡುವರು ತನುಗುಣವ ತಪ್ಪಿಸಿ ತರಲರಿಯದವರು. ಒಂದು ವಿಷಯಕೆ ಧನವ ನೋಡಿ ಮಾಡುವರು ಪ್ರಾಣನಗುಣವ ತಪ್ಪಿಸಿ ತರಲರಿಯದವರು. ಒಂದು ವಿಷಯಕೆ ನೆರವಿಯ ನೋಡಿ ಮಾಡುವರು ಭಾವದಗುಂಜ ತಪ್ಪಿಸಿ ತರಲರಿಯದವರು. ಈ ಸಂಬೋಧೆಯ ಆಸೆಗಿಕ್ಕಿ ಹೇಸದೆ ಘಾಸಿಯಾಗುವ ಪ್ರಾಣಿಗಳು ತಮಗೆ ಗುರುತ್ವ ಸಹಜವೆ ಅಲ್ಲ. ಮತ್ತೆಂತೆಂದೊಡೆ : ಭೂಷಣವಿಲ್ಲದ ಶಿಷ್ಯಂಗೆ ಗುಣವಿಲ್ಲದ ಗುರುವು ಅಣಕದನುಗ್ರಹ ಎಣಿಕೆಗೆಬಾರದು ನಮ್ಮ ಗುರುನಿರಂಜನ ಚನ್ನಬಸವಲಿಂಗದ ಶರಣಚಾರಿತ್ರದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಸಗೂಡಿದ ಭೂಮಿಯಲ್ಲಿ ಸಸಿ ಪಲ್ಲೈಸುವುದೇ? ಅನಾದಿ ಮಲಸಂಬಂಧ ಕಾಯದಲ್ಲಿ ಗುರೂಪದೇಶ ಫಲಿಸಲರಿಯದು. ಭೂತದೇಹಿಗಳಿಗೆ ಪ್ರಸಾದವಕೊಟಟರೆ ಅಘೋರನರಕತಪ್ಪದು, ಅದೇನು ಕಾರಣ? ಗುರುನಿರಂಜನ ಚನ್ನಬಸವಲಿಂಗದ ಲೀಲೆಯ ನಟಿಸುವರಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಂಡುಹೆಣ್ಣಲ್ಲದಾರು ಹನ್ನೊಂದುಕೋಟಿಗಳನಳಿದು ನೀಟವಾಗಿಷ್ಟವಹಿಡಿದು ಮಾಟಗಳೆದು ಮಾಡಿದರೆಮ್ಮ ಬಸವಾದಿಪ್ರಮಥರು. ಅವರಾಟವನರಿದು ಮಾಡುವಲ್ಲಿ ಪಂಚೇಂದ್ರಿಯಂಗಳಲ್ಲಿ ಪ್ರಕಾಶ ಮುಂದುವರಿಯಬೇಕು. ವಿಷಯಂಗಳಲ್ಲಿ ಕಳೆ ಸೂಸುತಿರಬೇಕು, ಕರಣಂಗಳಲ್ಲಿ ಬೆಳಗು ಬೆಂಬಳಿಗೊಂಡಿರಬೇಕು. ಗುರುನಿರಂಜನ ಚನ್ನಬಸವಲಿಂಗದ ಪ್ರಭೆಯೊಳಡಗಿ ಆಚರಿಸುತ್ತಿರಬೇಕು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅರಿಯಬಲ್ಲ ಹಿರಿಯರೆಂದು ನೋಡಿಕೊಡುವರಯ್ಯಾ ಅಜ್ಞಾನಿಗಳು. ಲಿಂಗವಬಲ್ಲ ಸಂಗವಿರಹಿತರೆಂದು ಮುಟ್ಟಿಕೊಡುವರಯ್ಯಾ ಅಂಗಹೀನರು. ಜಂಗಮಾರ್ಪಿತವಬಲ್ಲ ಜಗದಾರಾಧ್ಯರೆಂದು ಸವಿದುಕೊಡುವರಯ್ಯಾ ಜಿಹ್ವೆಲಂಪಟರು. ಪ್ರಸಾದವಬಲ್ಲ ಪ್ರಸಾದಿಗಳೆಂದು ಕೇಳಿಕೊಡುವರಯ್ಯಾ ಶಬ್ದಹೀನರು. ಸಾವಧಾನಭಕ್ತಿಯ ವಾಸನೆಯ ಬಲ್ಲವರೆಂದು ಸೇವಿಸಿಕೊಡುವರಯ್ಯಾ ಮೂಕೊರೆಯರು. ಮಹಾತೃಪ್ತಿಯ ಬಲ್ಲ ಸದುಹೃದಯರೆಂದು ಪರಿಣಾಮಿಸಿಕೊಡುವರಯ್ಯಾ ಅಂತಃಶೂನ್ಯರು. ಗುರುನಿರಂಜನ ಚನ್ನಬಸವಲಿಂಗದ ನಿಜವನರಿಯದೆ ವಾಗ್ಭ್ರಹ್ಮವ ನುಡಿವರಯ್ಯಾ ಉಚ್ಛಿಷ್ಟಭುಂಜಕರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->