ಅಥವಾ

ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಲಿಂಗಿಗಳೆಂದು ನುಡಿವುತಿಪ್ಪ ಅಣ್ಣಗಳು ನೀವು ಕೇಳಿರೆ. ಲಿಂಗಕ್ಕೆ ಪ್ರಾಣ ಮೊದಲೋ? ಪ್ರಾಣಕ್ಕೆ ಲಿಂಗ ಮೊದಲೋ? ಈ ಉಭಯವ ವಿಚಾರಿಸಿಕೊಂಡು ನುಡಿಯಿರಣ್ಣಾ. ವಾಯು ಗಂಧವ ಸೋಂಕಿತೊ? ಗಂಧ ವಾಯುವ ಸೋಂಕಿತೊ? ಲಿಂಗವ ಮನವರಿಯಿತೊ? ಮನವ ಲಿಂಗವರಿಯಿತೊ? ಕಾಯದಿಂದ ಸೋಂಕಿದ ಸುಖವ ಮನದಿಂದರಿದವರಾರೊ? ಮನದಲ್ಲಿ ಮುಟ್ಟಿದ ಗುಣವ ತನುವಿನಿಂದರಿದವರಾರೊ? ಇಂತೀ ಉಭಯವನರಿದಡೆ ಪ್ರಾಣಲಿಂಗಿಗಳೆಂಬೆ. ಉರಿ ಸೋಂಕಿದ ಕರ್ಪುರಕ್ಕೆ ನಿಲುವುದಕ್ಕೆ ನೆಲೆವನೆಯಿನ್ನಾವುದೊ? ಭ್ರಮರ ಸೋಂಕಿದ ಸುವಾಸನೆಗೆ ಕಡೆ ನಡು ಮೊದಲಾವುದೊ? ಧೂಳು ಕೊಂಡ ಜಲಕ್ಕೆ ನೆಲೆಯಿನ್ನಾವುದೊ? ಲಿಂಗ ಸೋಂಕಿದ ಮನಕ್ಕೆ, ಲಿಂಗನವರಿವುದಕ್ಕೆ ನೆಲೆಗೊಂಬ ಠಾವಿನ್ನಾವುದೊ? ಇಂತೀ ಗುಣಂಗ[ಳೆಲ್ಲ] ಕಳೆದುಳಿದ ಮಹಾತ್ಮಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಏಕಾಕಾಶದಿಂದ ಅಂಬು ಸಂಭ್ರಮಿಸಿತ್ತು. ಬಹುವರ್ಣದ ಧರಿತ್ರಿಯಲ್ಲಿ, ಅವರವರ ವರ್ಣಛಾಯೆ ನಿಂದಿತ್ತು. ಕೂಡಿ ವೇಧಿಸಿ ಚರಿಸಲಾಗಿ, ಒಂದೆ ಗುಣ ನಿಂದಿತ್ತು. ಅದು ತಟಾಕದಲ್ಲಿ ಆಶ್ರಯಿಸಲಾಗಿ, ಸ್ತೋಮವಾಯಿತ್ತು. [ಕೀಳಿನಲ್ಲಿ] ನಿಂದು ಜಾಳಿಸಲಾಗಿ, ಸ್ತೋಮ ಬಿಟ್ಟಿತ್ತು. ಭಾವಿಸಿ ನೋಡಿಹೆನೆಂದಡೆ ಪ್ರಮಾಣವಿಲ್ಲ ಕಂಡಯ್ಯಾ. ಇಂತೀ ಪ್ರಕಾರದಲ್ಲಿ ಜನಿಸಿದ ಪಿಂಡ ಹಿಂಗುವ ಠಾವಿನ್ನಾವುದೊ? ಒಂದು ಚಕ್ರದಲ್ಲಿ ಜನಿಸಿದ ನಾನಾವರ್ಣದ ಕುಂಭಂಗಳಿಗೆ ಸ್ಥೂಲ ಸೂಕ್ಷ್ಮದ ಅನ್ಯವ ಕಲ್ಪಿಸಲುಂಟೇ ಒಂದೆ ಗುಣದ ಬಗೆಯಲ್ಲದೆ? ಅಡಗಿದ ತತ್ವಂಗಳ ತತ್ವಮುದ್ದೆಯ ತುತ್ತನೊಲ್ಲದೆ ನಿಶ್ಚಯವಾದ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆದಿಶೂನ್ಯಲಿಂಗಕ್ಕೆ ಮಜ್ಜನವಾವುದು? ಕುಸುಮಭರಿತಲಿಂಗಕ್ಕೆ ಪೂಜೆ ಯಾವುದು? ಪರಿಪೂರ್ಣ ಲಿಂಗಕ್ಕೆ ನೈವೇದ್ಯವಾವುದು? ಅರ್ಪಿಸುವುದಕ್ಕೆ ಮುನ್ನವೆ ತೃಪ್ತಿಯಾದ ಮತ್ತೆ ಮುಟ್ಟಿ ಕೂಡುವ ಠಾವಿನ್ನಾವುದೊ? ಅಟ್ಟ ಮಡಕೆಯ ನೆತ್ತಿಯ ಮೇಲೆ ಹೊತ್ತು ತಿರುಗುವನಂತೆ, ಹೊಟ್ಟೆಗೆ ಕಾಣದೆ ಇವರು ಕೆಟ್ಟ ಕೇಡ ನೋಡಿರೆ. ಈ ಬಟ್ಟೆಯ ಮೆಟ್ಟದಂತೆ ಮಾಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->