ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಲ್ಲ :ಬಂಧನ ಸಂಸಾರದಂದುಗದ ದಾಳಿಯಲ್ಲಿ ನೊಂದು ಬೆಂದೆನೊ ಎನ್ನ ಹುಯ್ಲು ತಂಬಿಸು ಗುರುವೆ ಭವಹರ ನಿತ್ಯನಿರ್ಮಳಾತ್ಮಕ ಶಂಭುವೆ. ಪದ :ಹಲವು ಜನ್ಮದಿ ಹುಟ್ಟಿ ಹಲವಾಹಾರವನುಂಡು ಹಲವು ಭೂಮಿಯ ಮೆಟ್ಟಿ ಹಲವು ಕರ್ಮವ ಕಂಡು ಹಲವು ಭವಕೀಡಾಗಿ ಹಲವು ಹಂಬಲಿಸುತಿರುವ ಹೊಲೆಜನ್ಮ ಸಂಸಾರ ಮಾಯಾರಕ್ಕಸಿ ತುಡುರೆ ನಿಲ್ಲಲಾರದಲಿ ನಿಮ್ಮ ಮರೆಹೊಕ್ಕೆ ಎನ್ನ ಕೊಡದೆ ಗೆಲಿದುಕೊ ದುರಿತಹರ ಕರುಣಾಳು ಪರಮಗುರುವೆ. | 1 | ಸಟೆ ಠಕ್ಕು ಠೌಳಿ ಅಟಮಟದ ಬಂಧನದ ಕುಟಿಲಸಂಸಾರಸಾಗರದ ತೊರೆನೆರೆಗಳೊಳು ಪುಟನೆಗೆದು ತಲೆ ಮುಣುಗುತಲಿರುವನ ಕಂಡು ನಿಟಿಲಾಕ್ಷ ಕೃಪೆಯೆಂಬ ಹಡಗವನು ತಂದೊಲಿ ತಟಕೆನ್ನನೆಳೆದು ತಗೆದೀಗ ಇನಿತಾತ್ಮ ಘಟದೊಳಗೆ ಜ್ಞಾನಜ್ಯೋತಿಯ ತೀವು ಪರಮಗುರುವೆ. | 2 | ರಸವಿಷಯ ಮೋಹನದ ಕೂಪಜಲದೊಳು ಮುಳುಗಿ ದೆಸೆದೆಸೆಗೆ ಚಾಲಿವರಿವನ ಕಂಡು ಬೇಗದಲಿ ವಿಷಕಂಠ ದುರಿತಸಂಹರ ಕರುಣಾಕರ ತೊಟ್ಟಿಲಿಗೆ ಎಸೆವ ಹಗ್ಗವ ಕಟ್ಟಿ ಎಳೆದು ತಗೆಯೆನ್ನ ರಂ ಬಿಸುತ ಸಂತೈಸಿ ದುಃಖದಲ್ಲಿ ಭೋರ್ಗರೆದಳುವ ಶಿಶುವ ಬೋಳೈಸುವಂದದಲೆನ್ನ ಬೋಳೈಸು ಅಸಮಾಕ್ಷ ಪರಮಗುರುವೆ.| 3 | ತೆರಣಿಯ ಹುಳು ನೂಲು ಸುತ್ತಿಕೊಂಡು ಎಸೆವ ತೆರದಿ ಈ ಸಂಸಾರ ಸುಖದುಃಖ ಎನ್ನನು ಸುತ್ತಿ ಪರಿಭವಕ್ಕೆ ಗುರಿಯಾಗಿ ಯೋನಿಯಂತ್ರದೆ ತಿರುಗಿಯೆ ಬರುತಲಿರ್ದೆನು ಘೋರ ಅರಣ್ಯದೊಳು ಸುತ್ತಿ ಹರಹರ ನಿಮ್ಮ ಸ್ಮರಣೆಯ ಮರೆದ ಕಾರಣದಿ ದುರಿತನ್ಯಾಯದ ಬಂಧನಕೆ ಗುರಿಯಾಗಿದ್ದೆನಯ್ಯಾ ಶಿವನೆ. | 4 | ಮಾಯಾಸಂಸಾರಸರ್ಪನ ವಿಷವು ತಲೆಗೇರಿ ನೋಯುತಿದ್ದೆನು ಹಲವುವಿಧದಾಸೆಪಾಶದಲಿ ಬೇಯುವವನ ಕಂಡು ನೀ ಬೇಗಲೊಯಿದ್ಯವ ಮಾಡಿಯೆ ಶವವನುಳುವಿಕೋ ಭವರೋಗವೈದ್ಯ ನಿತ್ಯ ಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭು ನೀವಲ್ಲದೆನಗನ್ಯವಿಲ್ಲ ಕಾಯೋ ಕಾಯೋ ದೇವಾ. | 5 |
--------------
ಹೇಮಗಲ್ಲ ಹಂಪ
ಸರ್ವರಲ್ಲಿ ಹುಸಿಯನಾಡಿದರೆ ಆಡಲಿ, ಗುರುವಿನೆಡೆಗೆ ಹುಸಿಯಿಲ್ಲದಿರಬೇಕು. ಸರ್ಪ ಕಡೆಯಲೆಲ್ಲ ಡೊಂಕಾಗಿ ಚರಿಸುತ್ತ ಹುತ್ತದೆಡೆಗೆ ಸಸಿನವಾಗಿ ಹೋದಂತೆ. ಅನ್ಯರೆಡೆಗೆ ಹುಸಿ ಠಕ್ಕು ಠೌಳಿ ಇದ್ದರೂ ಇರಲಿ, ಗುರುವಿನೆಡೆಗೆ ಹುಸಿಬೇಡ. ಕೊಟ್ಟೆ ಕೊಂಡೆನೆಂದು ನುಡಿದು ಕೊಡದೆ ವಾಚಾಳತ್ವವಾದರೆ ಬ್ರಾಹ್ಮಣನ ಕೊಂದ ಪಾಪದಷ್ಟು ಪಾಪ ನಿಮಗಂಡಲೆವವು ಕಾಣಿರೊ ! ಸಾಕ್ಷಿ :``ಯೋ ಶುದ್ಧಿ ಗೋಪಾದಪ್ರೋಕ್ತಂ ಗುರುರಂಘ್ರಿನುತಸ್ಯ ಚ | ವಾಗ್ವಿದನ್ಯಪ್ರದಾನೇನ ಬ್ರಹ್ಮಹತ್ಯಾಸಮಾಹಿತಃ (?) ||'' ಎಂದುದಾಗಿ, ಇಂತಪ್ಪ ಗುರುವಿನೆಡೆಗೆ ಹುಸಿ[ದು] ಜೀವಿಸೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
-->