ಅಥವಾ

ಒಟ್ಟು 8 ಕಡೆಗಳಲ್ಲಿ , 4 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಶಾಂತ ಪರಿಪೂರ್ಣ ಪ್ರಾಣಲಿಂಗಿಯು ಮಹಾನುಭಾವ ಜಂಗಮಲಿಂಗ ಸುಖಮಯವಾದ ಬಳಿಕ ಹುಸಿಯೆಂಬ ಮಸಿಯ ಪೂಸದ, ಆಸೆಯೆಂಬ ಮದ್ದು ತಿನ್ನದೆ, ಭಾಷೆ ಬಣ್ಣಿಗನಾಗದೆ, ಕಣ್ಣುಗೆಟ್ಟು ಮಲತ್ರಯ ಮೋಹಿಯಾಗದೆ, ಸಂದುಸಂಶಯ ಮಂದಮರುಳನಾಗದೆ, ಬೆಂದ ಒಡಲಿಗೆ ಸಂದು ಯಂತ್ರ ಮಂತ್ರ ವೈದ್ಯ ವಶ್ಯಾದಿ ಉಪಾಧಿ ಉಲುಹಿನ ಭ್ರಾಂತನಾಗದೆ, ಸದ್ಭಕ್ತಿ ಸುಜ್ಞಾನ ಪರಮವಿರಾಗತೆಯೆಂಬ ರತ್ನವ ಕಳೆಯದೆ ಡಂಭಕ ಜಡಕರ್ಮವ ಸೋಂಕದೆ ಕರಣಾದಿ ಗುಣಗಳ ಜರಿದು ಏಕಾಂತವಾಸನಾಗಿ ಚರಿಸುತಿರ್ದ ಗುರುನಿರಂಜನ ಚನ್ನಬಸವಲಿಂಗದ ಲೀಲೆಯುಳ್ಳನ್ನಕ್ಕರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎನ್ನ ಭಕ್ತನೆಂದೆಂಬರು: ಎನ್ನ ಹೊರಹಂಚೆ, ಒಳಬೊಳ್ಳೆತನವನರಿಯರಾಗಿ. ಎನ್ನ ಮಾನಾಪಮಾನವೂ ಶರಣರಲ್ಲಿ, ಜಾತಿವಿಜಾತಿಯೂ ಶರಣರಲ್ಲಿ, ತನುಮನಧನ[ವೂ] ಶರಣರಲ್ಲಿ. ವಂಚನೆಯುಳ್ಳ ಡಂಭಕ ನಾನು. ತಲೆಯೊಡೆಯಂಗೆ ಕಣ್ಣ ಬೈಚಿಡುವೆ ಕೂಡಲಸಂಗಮದೇವಾ. 306
--------------
ಬಸವಣ್ಣ
ಆ ಪರಶಿವನೇ ತಾನೇ ಆದ ಆತ್ಮನೋರ್ವಗೆ ಕರ್ಮ ಎರಡು, ಮೂರು ಗುಣ, ಕರಣ ನಾಲ್ಕು, ಇಂದ್ರಿಯ ಐದು, ವರ್ಗ ಆರು, ವ್ಯಸನ ಏಳು, ಮದ ಎಂಟು, ನಾಳ ಒಂಬತ್ತು, ವಾಯು ಹತ್ತು, ಎಪ್ಪತ್ತೆರಡು ಸಾವಿರ ನಾಡಿ, ಅರವತ್ತಾರುಕೋಟಿ ಗುಣ, ಆರುವರೆಕೋಟಿ ರೋಮ- ಇವು ಮೊದಲಾದ ಅನಂತ ತತ್ವಯುಕ್ತವೆನಿಸಿದ ತೊಂಬತ್ತಾರು ಅಂಗುಲ ದೇಹದೊಳಗೆ ನಿರ್ದೇಹಿಯಾಗಿ, ಕರ್ಮ ಎರಡರೊಳಗೆ ದುಷ್ಕರ್ಮಮಾಡುವದೆಂತೆನೆ : ಜಾರ ಚೋರ ಹುಸಿ ಹಾಸ್ಯ ಡಂಭಕ ಜೀವಹಿಂಸಾ ಪರಪೀಡಾ ಕ್ಷುದ್ರ ಧೂರ್ತ ಕ್ರೋಧಿ ವಿಕಾರಿ ಪರದ್ರವ್ಯಾಪಹಾರಕ ಅಹಂಕಾರ ಅಜ್ಞಾನ ಅನಾಚಾರ ಪಂಚಪಾತಕ ವಿಶ್ವಾಸಘಾತಕ ಇವು ಮೊದಲಾದ ಅನಂತ ದುರ್ಗುಣದಿಂದ ತನ್ನ ತಾ ಮರೆತು ತಾ ಮಾಡಿದ ದುಷ್ಕರ್ಮದಿಂದೆ ಪಾಪಹತ್ತಿ, ದುಃಖಗೊಂಡು ಯಮನೊಳಗಾಗಿ ನರಕ ಉಂಡು ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಅನಂತಕಾಲ ತಿರುತಿರುಗಿ ಬಳಲುವದು. ಆ ಬಳಲುವ ದುಷ್ಕರ್ಮವೇ ಕಾಲೋಚಿತಕ್ಕೆ ಸತ್ಕರ್ಮವಾಯಿತು. ಅದು ಎಂತಾಯಿತೆಂದರೆ : ಚೋರರಿಗೆ ಪರದ್ರವ್ಯಾಪಹಾರ ವಿಯೋಗದಲ್ಲಿ, ದೇಗುಲ ದೀಪದಕುಡಿ ಕಡಿದಂತೆ : ಆ ಸತ್ಕರ್ಮ ಮಾಡುವದೆಂತೆನೆ : ದಯ, ಧರ್ಮ, ನಯ, ನೀತಿ ಶಾಂತಿ, ದಾಂತಿ, ಕ್ಷಮೆ, ದಮೆ, ಭಕ್ತಿ , ಜ್ಞಾನ, ವೈರಾಗ್ಯ, ನಿರಹಂಕಾರ, ನಿರಾಶ, ಅಷ್ಟಾಂಗಯೋಗ, ಅಷ್ಟವಿಧಾರ್ಚನೆ, ಅಷ್ಟಾವರಣನಿಷೆ* - ಇವು ಮೊದಲಾದ ಅನಂತ ಸುಗುಣದಿಂದೆ ಪುಣ್ಯವೊದಗಿ ಸುಖಗೊಂಡು ಇಂದ್ರನೊಳಗಾಗಿ ಸ್ವರ್ಗ ಅನುಭವಿಸಿ ಅಥವಾ ಬಹು ಸತ್ಕರ್ಮವಾದಡೆ ಸದಾಶಿವನ ಚೌಪದ ಬಹುಪದದೊಳಗಾಗಿ ಕೈಲಾಸಕ್ಕೆ ಹೋಗಿ ಸತ್ಕರ್ಮದಿಂದ ಒದಗಿದ ಪುಣ್ಯದ ಫಲವನ್ನು ಅನುಭವಿಸಿ ಮರಳಿ ಎಂಬತ್ನಾಲ್ಕುಲಕ್ಷ ಜೀವರಾಶಿ ಯೋನಿಯ ದ್ವಾರದಲ್ಲಿ ಅನಂತಕಾಲ ತಿರುತಿರುಗಿ ಅಷ್ಟಭೋಗಸುಖದೊಳಗೆ ತೊಳಲುವದು, ಆ ತೊಳಲುವ ಸತ್ಕರ್ಮವೇ ಕಾಲೋಚಿತಕ್ಕೆ ದುಷ್ಕರ್ಮವಾಗುವದು. ಅದೆಂತೆನೆ : ಶಿವಗಡ ಬಿದ್ದು ಗಂಧರ್ವ ಕರಿನಾಯಿ ಆದಂತೆ `ಅತಿದಾನಾದ್ ಬಲೇರ್ಬಂಧಃ' ಎಂಬ ನೀತಿ ಉಂಟಾಗಿ, ಇದಕ್ಕೆ ದುಷ್ಟಮಾರಿ ಚೌಡಾಪೂರ ವಿರೂಪಾಕ್ಷಿಗೆ ಜಂಗಮದಾಸೋಹದಲ್ಲಿ ಜಂಗಮದೋಷ ಘಟಿಸಿದಂತೆ. ಅದುಕಾರಣ ಸತ್ಕರ್ಮಕ್ಕೆ ಬೀಜ ದುಷ್ಕರ್ಮ, ದುಷ್ಕರ್ಮಕ್ಕೆ ಬೀಜ ಸತ್ಕರ್ಮ. ಹೀಗಾದ ಮೇಲೆ ಸತ್ಕರ್ಮವೇ ದುಷ್ಕರ್ಮ, ದುಷ್ಕರ್ಮವೇ ಸತ್ಕರ್ಮ, ಪಾಪವೇ ಪುಣ್ಯ ಪುಣ್ಯವೇ ಪಾಪ, ಸುಖವೇ ದುಃಖ ದುಃಖವೇ ಸುಖ, ಇವು ಎರಡರೊಳಗೆ ಹೆಚ್ಚು ಕಡಿಮೆ ಎಂಬುದೇನೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಸತ್ಕ್ರಿಯಾ ಸಮ್ಯಕ್‍ಜ್ಞಾನ ಪಥವರಿದ ಭಕ್ತನ ಕುರುಹೆಂತೆನ್ನಲು, ಮಾಡಿ ಬೇಡುವನಲ್ಲ, ನೀಡಿ ನಿಂತವನಲ್ಲ, ಕಾಣಿಸಿಕೊಂಬುವನಲ್ಲ, ಡಂಭಕ ವ್ಯಸನಿಯಲ್ಲ, ವಂಚನೆಯ ಸಂಚವನರಿಯದು ಸರ್ವಾಂಗಸತ್ಯ ನೋಡಾ. ಕೊಟ್ಟು ಕೊಟ್ಟು ಕೊಡುವ ಭಾವವಲ್ಲದೆ ಉಳಿದ ಭಾವವ ಮರೆದಿರ್ದ ನೋಡಾ. ಚಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ನಿಮ್ಮ ಶರಣನ ನಿಲವು ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಲವು ವೇಷವ ಧರಿಸಿ ಹಲವು ಭಾಷೆಯ ಕಲಿತು ಹಲವು ದೇಶಕ್ಕೆ ಹರಿದಾಡಿದಡೇನು ? ಕಾಲಾರಿಯಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ : ತನುವಿನ ಆಶೆಯಾಮಿಷ ಹಿಂಗದಾಗಿ. ಊರಾಶ್ರಯವ ಬಿಟ್ಟು ಕಾಡಾಶ್ರಮ ಗಿರಿಗಂಹರದಲ್ಲಿರ್ದಡೇನು ? ಹಗಲು ಕಣ್ಣುಕಾಣದ ಗೂಗೆಯಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ : ಮನದ ಮಾಯವಡಗದಾಗಿ. ಹಸಿವು ತೃಷೆಯ ಬಿಟ್ಟು ಮಾತನಾಡದೆ ಮೌನವಾಗಿರ್ದಡೇನು ? ಕಲ್ಲು ಮರ ಮೋಟು ಗುಲ್ಮಂಗಳಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ : ವಿಷಯವ್ಯವಹಾರ ಹಿಂಗದಾಗಿ. ನಿದ್ರೆಯ ತೊರೆದು ಎದ್ದು ಕುಳ್ಳಿರ್ದಡೇನು ? ಕಳ್ಳ ಊರಹೊಕ್ಕು ಉಲುಹು ಅಡಗುವನ್ನಬರ ಮರೆಯಲ್ಲಿ ಕುಳಿತಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ: ಅಂತರಂಗದ ಘನಗಂಭೀರ ಮಹಾಬೆಳಗಿನ ಶಿವಸಮಾಧಿಯನರಿಯದ ಕಾರಣ. ಇಂತಪ್ಪ ಹೊರವೇಷದ ಡಂಭಕ ಜೊಳ್ಳುಮನದವರ ವಿರಕ್ತರೆಂದಡೆ ಮಚ್ಚರಯ್ಯ ನಿಮ್ಮ ಶರಣರು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಲಿಂಗ ಜಂಗಮಕ್ಕೊಕ್ಕುಮಿಕ್ಕಿದುದಕ್ಕೆ ಯೋಗ್ಯವೆಂದು ಬೀರಿಕೊಳ್ಳುವ ಕಕ್ಕುಲಾತಿ ಡಂಭಕ ವೇಷಧಾರಿಗಳನೇನೆಂಬೆನಯ್ಯಾ ! ಆ ಗುರುಲಿಂಗಜಂಗಮ ಬಂದಲ್ಲಿ, ಅರ್ಥ ಪ್ರಾಣ ಅಭಿಮಾನವಿಡಿದು ವಂಚನೆಯೊಳ್ನಿಂದು ಮಾಡಿ ನೀಡಿ ಕೊಂಡು ಕಳುಹಿಸುವ ತ್ರಿವಿಧಗುರುದ್ರೋಹಿಗಳಿಗೆ ಸತ್ಕ್ರಿಯಾಚಾರವೆಲ್ಲಿಹದೊ ! ಸತ್ಕ್ರಿಯಾಚಾರವಿಲ್ಲದ ತ್ರಿವಿಧಲಿಂಗದ್ರೋಹಿಗಳಿಗೆ ಸುಜ್ಞಾನಾಚಾರವೆಲ್ಲಿಹದೊ ! ಸುಜ್ಞಾನಾಚಾರವಿಲ್ಲದ ತ್ರಿವಿಧ ಜಂಗಮದ್ರೋಹಿಗಳಿಗೆ ಸಮರಸಭಾವಾಚಾರವೆಲ್ಲಿಹದೊ ! ಗುರುನಿರಂಜನ ಚನ್ನಬಸವಲಿಂಗದಲ್ಲಿ ಐಕ್ಯಪದವೆಲ್ಲಿಹದೊ !
--------------
ದೇಶಿಕೇಂದ್ರ ಸಂಗನಬಸವಯ್ಯ
ನಾನು ಭಕ್ತನಲ್ಲಯ್ಯಾ, ನಾನು ಯುಕ್ತನಲ್ಲಯ್ಯಾ, ನಾನು ಮುಕ್ತನಲ್ಲಯ್ಯಾ ಕಪಟವೇಷದ ಡಂಭಕ ನಾನು. ಕೂಡಲಸಂಗಮದೇವಾ, ಎನ್ನ ಭಕ್ತಿ ಒಳಲೊಟ್ಟೆ ಎಂಬುದ ನೀವು ತೋರಬಂದಿರಾಗಿ ಎನಗಿಂದರಿಯ ಬಂದಿತ್ತು.
--------------
ಬಸವಣ್ಣ
ತನುವ ನಿಮಗೊಪ್ಪಿಸಿ ತನುಶುದ್ಧನಾಗಲರಿಯೆನಯ್ಯ ನಾನು. ಮನವ ನಿಮಗೊಪ್ಪಿಸಿ ಮನಶುದ್ಧನಾಗಲರಿಯೆನಯ್ಯ ನಾನು. ಧನವ ನಿಮಗೊಪ್ಪಿಸಿ ಧನಶುದ್ಧನಾಗಲರಿಯೆನಯ್ಯ ನಾನು. ಈ ತನುಮನಧನದಲ್ಲಿ ಶುದ್ಧನಲ್ಲದ ಪ್ರಪಂಚಿನ ಡಂಭಕ ನಾನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->