ಅಥವಾ

ಒಟ್ಟು 6 ಕಡೆಗಳಲ್ಲಿ , 3 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಂತಸಾಧಕಂಗಳ ಕಲಿತ ಆಯಗಾರನು, ಅಭ್ಯಾಸಿಗಳಿಗೆ ಸಾಧಕವ ಕಲಿಸುವನಲ್ಲದೆ ತಾ ಮರಳಿ ಅಭ್ಯಾಸವ ಮಾಡುವನೆ ಅಯ್ಯಾ ? ಅಖಂಡಪರಿಪೂರ್ಣಬ್ರಹ್ಮವನೊಡಗೂಡಿದ ಮಹಾಘನ ಪರಮ ಶಿವಶರಣನು, ಸತ್‍ಕ್ರಿಯವನಾಚರಿಸಿದಡೂ ಲೋಕೋಪಕಾರವಾಗಿ ಆಚರಿಸುವನಲ್ಲದೆ ಮರಳಿ ತಾನು ಫಲಪದದ ಮುಕ್ತಿಯ ಪಡೆವೆನೆಂದು ಆಚರಿಸುವನೆ ಅಯ್ಯಾ ? ಇದು ಕಾರಣ, ನಿಮ್ಮ ಶರಣನು ಎಷ್ಟು ಸತ್ಕ್ರಿಯವನಾಚರಿಸಿದಡು ಘೃತಸೋಂಕಿದ ರಸನೆಯಂತೆ, ಕಾಡಿಗೆ ಹತ್ತಿದ ಆಲಿಯಂತೆ, ಹುಡಿ ಹತ್ತದ ಗಾಳಿಯಂತೆ ನಿರ್ಲೆಪನಾಗಿರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗಪ್ರೇಮವುಳ್ಳವಂಗೆ ಭವಬಂಧನವಿಲ್ಲ ; ಜಂಗಮಪ್ರೇಮವುಳ್ಳವಂಗೆ ಸಂಸಾರದ ತೊಡಕಿಲ್ಲ. ಪ್ರಸಾದಪ್ರೇಮವುಳ್ಳವಂಗೆ ಇಹಪರದ ಎಡೆಯಾಟವಿಲ್ಲ. ತಾನಿಲ್ಲದೆ ಮಾಡುವ ಭಕ್ತಂಗೆ ಆವಾವ ಫಲಪದದ ಹಂಗಿಲ್ಲವಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾಯಜೀವದ ಕೀಲವನರಿದು ಜನನ ಮರಣಂಗಳಾಯಾಸವಳಿದು ಅಂಗಲಿಂಗದೊಳಗೇಕಾರ್ಥವ ಮಾಡುವ ಭೇದವೆಂತೆಂದಡೆ : ಪಂಚಭೂತಂಗಳ ಪೂರ್ವಾಶ್ರಯವನಳಿದು ಪಂಚಕರಣಂಗಳ ಹಂಚುಹರಿಮಾಡಿ, ಕರ್ಮಬುದ್ಧೀಂದ್ರಿಯಂಗಳ ಮರ್ದಿಸಿ, ದಶವಾಯುಗಳ ಹಸಗೆಡಿಸಿ ಕರಣಚತುಷ್ಟಯಂಗಳ ಕಾಲಮುರಿದು ಪಂಚವಿಂಶತಿ ತತ್ತ್ವಂಗಳ ವಂಚನೆಯನಳಿದು ಹತ್ತುನಾಡಿಗಳ ವ್ಯಕ್ತೀಕರಿಸಿ ಅಷ್ಟತನು ಅಷ್ಟಾತ್ಮಂಗಳ ನಷ್ಟಮಾಡಿ ಅಂತರಂಗದ ಅಷ್ಟಮದಂಗಳ ಸಂತರಿಸಿ, ಬಹಿರಂಗದ ಅಷ್ಟಮಂದಗಳ ಬಾಯಟೊಣೆದು, ಅಷ್ಟಮೂರ್ತಿಮದಂಗಳ ಹಿಟ್ಟುಗುಟ್ಟಿ ಸಪ್ತಧಾತು ಸಪ್ತವ್ಯಸನಂಗಳ ಸಣ್ಣಿಸಿ ಷಡೂರ್ಮೆ ಷಡ್‍ವರ್ಗಂಗಳ ಕೆಡೆಮೆಟ್ಟಿ ಷಡ್‍ಭ್ರಮೆ ಷಡ್‍ಭಾವವಿಕಾರಂಗಳ ಗಂಟಸಡಲಿಸಿ, ಪಂಚಕೋಶ ಪಂಚಕ್ಲೇಶಂಗಳ ಪರಿಹರಿಸಿ ಅಂಗಚತುಷ್ಟಯಂಗಳ ಶೃಂಗಾರವಳಿದು ಗುಣತ್ರಯಂಗಳ ಗೂಡಮುಚ್ಚಿ ಅಹಂಕಾರತ್ರಯಂಗಳ ಶಂಕೆಗೊಳಗುಮಾಡಿ ತಾಪತ್ರಯಂಗಳ ತಲ್ಣಣಗೊಳಿಸಿ ತನುತ್ರಯಂಗಳ ತರಹರಮಾಡಿ ಜೀವತ್ರಯಂಗಳ ಜೀರ್ಣೀಕರಿಸಿ, ಆತ್ಮತ್ರಯಂಗಳ ಧಾತುಗೆಡಿಸಿ, ಅವಸ್ಥಾತ್ರಯಂಗಳ ಅವಗುಣವಳಿದು, ತ್ರಿದೋಷಂಗಳ ಪಲ್ಲಟಗೊಳಿಸಿ, ಭಾವತ್ರಯಂಗಳ ಬಣ್ಣಗೆಡಿಸಿ , ದುರ್ಭಾವತ್ರಯಂಗಳ ದೂರಮಾಡಿ, ಮನತ್ರಯಂಗಳ ಮರ್ದನಮಾಡಿ, ತ್ರಿಕರಣಂಗಳ ಛಿದ್ರಗೊಳಿಸಿ, ಪಂಚಾಗ್ನಿಗಳ ಸಂಚಲವನತಿಗಳೆದು, ಇಂತೀ ಅಂಗ ಪ್ರಕೃತಿಗುಣಂಗಳೆಲ್ಲ ನಷ್ಟವಾಗಿ ಸರ್ವಾಂಗದಲ್ಲಿ ಸರ್ವಾಚಾರ ನೆಲೆಗೊಂಡು ಬಹಿರಂಗದ ಮೇಲಿದ್ದ ಇಷ್ಟಲಿಂಗದಲ್ಲಿ ನೈಷಿ*ಕಭಾವಂಬುಗೊಂಡು, ಅನಿಮಿಷದೃಷ್ಟಿ ಅಚಲಿತವಾಗಿ ಭಾವಬಲಿದಿರಲು, ಆ ಲಿಂಗವು ಅಂತರಂಗಕ್ಕೆ ವೇಧಿಸಿ ಪ್ರಾಣಲಿಂಗವೆನಿಸಿಕೊಂಡು ಷಡಾಧಾರಚಕ್ರಂಗಳಲ್ಲಿ ಷಡ್‍ವಿಧ ಲಿಂಗವಾಗಿ ನೆಲೆಗೊಂಬುದು. ಆ ಷಡ್‍ವಿಧ ಲಿಂಗಕ್ಕೆ ಷಡಿಂದ್ರಿಯಗಳನೆ ಷಡ್‍ವಿಧಮುಖಂಗಳೆನಿಸಿ, ಆ ಷಡ್‍ವಿಧ ಮುಖಂಗಳಿಗೆ ಷಡ್‍ವಿಧವಿಷಯಂಗಳನೆ ಷಡ್‍ವಿಧ ದ್ರವ್ಯಪದಾರ್ಥವೆನಿಸಿ, ಆ ಪದಾರ್ಥಂಗಳು ಷಡ್‍ವಿಧಲಿಂಗಕ್ಕೆ ಷಡ್‍ವಿಧ ಭಕ್ತಿಯಿಂದೆ ಸಮರ್ಪಿತವಾಗಲು, ಅಂಗವೆಂಬ ಕುರುಹು ಅಡಗಿ ಒಳಹೊರಗೆಲ್ಲ ಮಹಾಘನಲಿಂಗದ ದಿವ್ಯಪ್ರಕಾಶವೆ ತುಂಬಿ ತೊಳಗಿ ಬೆಳಗುತ್ತಿರ್ಪುದು. ಇಂತಪ್ಪ ಘನಲಿಂಗದ ಬೆಳಗನೊಳಗೊಂಡಿರ್ಪ ಚಿದಂಗವೆ ಚಿತ್‍ಪಿಂಡವೆನಿಸಿತ್ತು. ಇಂತಪ್ಪ ಅತಿಸೂಕ್ಷ್ಮವಾದ ಚಿತ್‍ಪಿಂಡದ ವಿಸ್ತಾರವನು ಚಿದ್‍ಬ್ರಹ್ಮಾಂಡದಲ್ಲಿ ವೇಧಿಸಿ ಕಂಡು, ಆ ಚಿದ್‍ಬ್ರಹ್ಮಾಂಡದ ಅತಿಬಾಹುಲ್ಯವನು ಆ ಚಿತ್‍ಪಿಂಡದಲ್ಲಿ ವೇಧಿಸಿ ಕಂಡು, `ಪಿಂಡಬ್ರಹ್ಮಾಂಡಯೋರೈಕ್ಯಂ' ಎಂಬ ಶ್ರುತಿ ಪ್ರಮಾಣದಿಂದ ಆ ಪಿಂಡಬ್ರಹ್ಮಾಂಡಗಳು ಒಂದೇ ಎಂದು ಕಂಡು, ಆ ಪಿಂಡಬ್ರಹ್ಮಾಂಡಂಗಳಿಗೆ ತಾನೇ ಆಧಾರವೆಂದು ತಿಳಿದು ಆ ಪಿಂಡಬ್ರಹ್ಮಾಂಡಗಳ ತನ್ನ ಮನದ ಕೊನೆಯಲ್ಲಿ ಅಡಗಿಸಿ, ಆ ಮನವ ಭಾವದ ಕೊನೆಯಲ್ಲಿ ಅಡಗಿಸಿ, ಆ ಭಾವವ ಜ್ಞಾನದ ಕೊನೆಯಲ್ಲಿ ಅಡಗಿಸಿ, ಆ ಜ್ಞಾನವ ಮಹಾಜ್ಞಾನದಲ್ಲಿ ಅಡಗಿಸಿ, ಆ ಮಹಾಜ್ಞಾನವನು ಪರಾತ್ಪರವಾದ ಪರಿಪೂರ್ಣ ಬ್ರಹ್ಮದಲ್ಲಿ ಅಡಗಿಸಿ, ಆ ಪರಬ್ರಹ್ಮವೆ ತಾನಾದ ಶರಣಂಗೆ ದೇಹಭಾವವಿಲ್ಲ. ಆ ದೇಹಭಾವವಿಲ್ಲವಾಗಿ ಜೀವಭಾವವಿಲ್ಲ. ಆ ಜೀವಭಾವವಿಲ್ಲವಾಗಿ ಫಲಪದಂಗಳ ಹಂಗಿಲ್ಲ. ಫಲಪದದ ಹಂಗಿಲ್ಲವಾಗಿ ಭವಬಂಧನಂಗಳು ಮುನ್ನವೆ ಇಲ್ಲ. ಭವಬಂಧನಂಗಳು ಇಲ್ಲವಾಗಿ, ಆ ಶರಣನು ತಾನು ಎಂತಿರ್ದಂತೆ ಪರಬ್ರಹ್ಮವೆ ಆಗಿ ಆತನ ಹೃದಯಾಕಾಶವು ಬಚ್ಚಬರಿಯ ಬಯಲನೈದಿಪ್ಪುದು. ಇದು ಕಾರಣ, ಆ ಶರಣನು ದೇಹವಿದ್ದು ಸುಟ್ಟಸರವಿಯಂತೆ ನಿರ್ದೇಹಿಯಾದ ಕಾರಣ ಉಪಮಾತೀತ ವಾಙ್ಮನಕ್ಕಗೋಚರನಾಗಿರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪ್ರಾಣಲಿಂಗಿಗೆ ಪರದೈವ ಪೂಜೆಯುಂಟೆ ? ಪ್ರಾಣಲಿಂಗಿಗೆ ಪರರ ಸೇವಾವೃತ್ತಿಯುಂಟೆ ? ಪ್ರಾಣಲಿಂಗಿಗೆ ಪರಲೋಕದ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವರೆಂಬ ಪಂಚಬ್ರಹ್ಮರು ಮೊದಲಾದ ಅನೇಕ ದೇವತೆಗಳ ಚತುರ್ವಿಧಫಲಪದ ಮೊದಲಾದ ಎಂ¨Àತ್ತೆಂಟುಕೋಟಿ ಫಲಪದದ ಮೇಲಣ ಕಾಂಕ್ಷೆಯುಂಟೆ ? ಪ್ರಾಣಲಿಂಗಿಗೆ ಮತ್ರ್ಯಲೋಕದ ಅರ್ಥೈಶ್ವರ್ಯ ಸಕಲಸಂಪದದ ಭೋಗೋಪಭೋಗವನು ಭೋಗಿಸಬೇಕೆಂಬ ಪುಣ್ಯದಮೇಲಣ ಮಮಕಾರವುಂಟೆ ? ಇಂತಪ್ಪ ಕರ್ಮದ ಶೇಷವನಳಿದುಳಿದಾತನೇ ಪ್ರಾಣಲಿಂಗಿ ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶ್ರೀಗುರುಕರುಣಕಟಾಕ್ಷೆಯಿಂದ ತಮ್ಮ ತಾವರಿದ ನಿತ್ಯಮುಕ್ತ ನಿಜೋತ್ತಮ ಸದ್ಭಕ್ತ ಮಹೇಶ್ವರರು, ಹಿಂದೆ ಹೇಳಿದ ಬಹಿರಂಗ ಪಂಚಪಾತಕಮಂ ನಿರಸನಂಗೈದು ಮಾರ್ಗಕ್ರಿಯೆ ಶುದ್ಧರೆನಿಸಿ, ಅಂತರಂಗದ ಗುಪ್ತಪಾತಕಮಂ ನಿರಸನಗೈವ ವಚನಸೂತ್ರವದೆಂತೆಂದೊಡೆ : ತನಗುಳ್ಳ ಗಂಧ ರಸ ಮೊದಲಾದ ಸುಪದಾರ್ಥದ್ರವ್ಯಗಳ ಗುರು ಚರ ಪರ ಸ್ಥಿರ ತಂದೆ ತಾಯಿ ಘನಲಿಂಗ ಸಮ್ಮೇಳಕ್ಕೆ ಮಾಡದೆ ನಿರವಯಪರಿಪೂರ್ಣ ನಿರಂಜನ ಗುರುಲಿಂಗಜಂಗಮ ಪ್ರಸನ್ನೋದಯವಾದ ಚಿತ್ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಮಹಾಮಂತ್ರ ಕೊನೆಮೊನೆಯಲ್ಲುದಯವಾದ ಮಹದರಿವು ಮಹಾಜ್ಞಾನ ಮಹಾನುಭಾವಾಚಾರ ಸಂಬಂಧದಾಚರಣೆಗಳೆ ಕೇವಲ ಎನ್ನ ಜನನಾಂಕುರದ ಮುಕ್ತಿದ್ವಾರವಾಗಿರುವ ಸ್ಥಿತಿಯ ಗೊತ್ತಿನ ಹಕ್ಕೆ, ನಾ ನಿರವಯಲಾಗುವ ಲಯಸ್ಥಾನದ ಉಳುವೆಯ ಮಹಾಮನೆಯೆಂದು ಭಾವಭರಿತವಾಗಿ ಹಿಂದುಮುಂದಣ ಫಲಪದದ ಭೋಗಮೋಕ್ಷದಾಪೇಕ್ಷೆಗಳಂ ನೆರೆನೀಗಿ, ಬಯಲಬ್ರಹ್ಮದಿರವ ಹೊದ್ದಲೊಲ್ಲದೆ ಪಾಪದಪುಂಜ, ಕರ್ಮದೋಕುಳಿ, ಮಲದಾಗರ, ಅನಾಚಾರದಕ್ರಿಯೆ, ಅಜ್ಞಾನ ವಿಷಯಾತುರದ ಭವಜೀವಿಗಳಾಗಿರುವ ಪರಮಪಾತಕರ ಮೋಹವಿಟ್ಟು, ನನ್ನ ಪೂರ್ವಾಶ್ರಯವೆಂದು, ಅತಿ ಪ್ರೇಮದಿಂದ ತನುಮನಧನವ ಸವೆದು, ಅವರೊಡಗೂಡಿ ತೀರ್ಥಯಾತ್ರೆಗಳಂ ಮಾಡಿ, ತಾ ಸ್ವೀಕರಿಸಿದ ಪ್ರಸಿದ್ಧಪ್ರಸಾದ ಪಾದೋದಕಪ್ರಸಾದಮಂ ಆ ತ್ರಿವಿಧ ದೀಕ್ಷಾಚಾರಹೀನವಾದ ಭೂಪ್ರತಿಷಾ*ದಿಗಳಿಗೆ ಕೊಟ್ಟು ಕೊಂಬುವ ಭ್ರಷ್ಟ ನಡಾವಳಿಯೆ ಅಂತರಂಗದ ಪ್ರಥಮಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಭಾವವೇ ಬ್ರಹ್ಮವಾದ ಬಳಿಕ ಇನ್ನಾವ ವೇಷವ ತೊಡಲೇತಕೋ ? ತನುವೇ ಲಿಂಗವಾದ ಬಳಿಕ ಆವ ಫಲಪದದ ಹಂಗೇತಕೊ ? ಮನದಲ್ಲಿ ತನಗೆ ತಾನೆ ಸ್ವಾತ್ಮಜ್ಞಾನ ಉದಯವಾದ ಬಳಿಕ ಇನ್ನು ಹಲವು ಶಾಸ್ತ್ರವನೋದಿ ತಿಳಿಯಬೇಕೆಂಬ ಸಂದೇಹವೇತಕೊ ? ಒಳಹೊರಗೆ ಸರ್ವಾಂಗದಲ್ಲಿ ಮಹಾಜ್ಞಾನವೆ ತುಂಬಿದ ಬಳಿಕ ಮುಂದೆ ಮುಕ್ತಿಯ ಪಡೆಯಬೇಕೆಂಬ ಭ್ರಾಮಕವೇತಕೊ ? ಇದು ಸತ್ಯದ ನಡೆಯಲ್ಲ ; ಶರಣರ ಮೆಚ್ಚಲ್ಲ ; ನಮ್ಮ ಅಖಂಡೇಶ್ವರನ ಒಲುಮೆ ಮುನ್ನವೆ ಅಲ್ಲ.
--------------
ಷಣ್ಮುಖಸ್ವಾಮಿ
-->