ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಳಕಾಕಾರಮಾದ ಮಹಾಲಿಂಗವೇ ಬೀಜ, ಅದು ಸಕಲಪ್ರಪಂಚಗಳನ್ನು ತನ್ನೊಳಗಿಟ್ಟುಕೊಂಡು, ಸಕಲಕ್ಕೂ ತಾನೇ ಕಾರಣಮಾಗಿಹುದು. ಅಂತಪ್ಪ ಮಹಾಲಿಂಗವು ಗುರುತಂತ್ರದಿಂ ಭಕ್ತಕ್ಷೇತ್ರದಲ್ಲಿ ತಾನೊಂದೆರಡಾದಲ್ಲಿ, ಶಿವಶಕ್ತಿಸ್ವರೂಪಮಾದ ವರ್ಣಶಾಖೆಗಳು ಅಭೇದಮಾಗಂಕುರಿಸಿ, ಪರ್ಣದಿಂದ ಶಾಖೆಯು ಬಲಿದು, ಶಾಖೆಯಿಂದ ಪರ್ಣವು ಬಲಿದು, ಅಂತಪ್ಪ ಶಾಖಾರೂಪಮಾದ ಮುಖಂಗಳಿಂದೊಪ್ಪುತಿರ್ಪ ವೃಕ್ಷವೇ ರುದ್ರನು. ಆ ಪರ್ಣವೇ ವಿಷ್ಣು, ಫಲವೇ ಬ್ರಹ್ಮ, ಪುಷ್ಪವೇ ಪೃಥ್ವೀ, ಫಲವೇ ಜಲ, ನನೆಯೇ ಅಗ್ನಿ, ಪರ್ಣವೇ ವಾಯು, ಆ ವೃಕ್ಷವೇ ಆಕಾಶ, ಬೀಜವೇ ಆತ್ಮ. ಅಂತಪ್ಪ ಬೀಜಕ್ಕೆ ನಿಂದಲ್ಲಿ ಫಲವರ್ಣಶಾಖೆಗಳು ವರ್ಧಿಸಿ, ಸುಖವಂ ಕೊಡುತಿರ್ಪವು. ಲಿಂಗಾರ್ಚನೆಯಂ ಮಾಡಿದಲ್ಲಿ, ಸಕಲ ದೇವತೆಗಳು ತೃಪ್ತರಾಗಿ ವರ್ಧಿಸುತಿರ್ಪರಾದ ಕಾರಣ, ವೀರಶೈವಮತದಲ್ಲಿ ಆತ್ಮಸ್ವರೂಪಮಾದ ಬೀಜ ಒಂದೆರಡಾದುದೇ ಇಷ್ಟ ಪ್ರಾಣಗಳು. ಫಲಮಧ್ಯದಲ್ಲನಂತರೂಪಮಾಗಿ ಸಕಲ ಪ್ರಪಂಚವಂ ತನ್ನೊಳಗಿಟ್ಟುಕೊಂಡು ತನ್ನನು ತಿಳಿದು ಸೃಷ್ಟಿಗೆ ತಾನೇ ಕಾರಣಮಾಗಿ, ಪರಮಾನಂದಮಹೀರುಹವು ಫಲಿಸಿ ತೃಪ್ತಿರೂಪಮಾಗಿ ಆ ಪ್ರಪಂಚಕ್ಕೆ ತಾನೇ ಕಾರಣಮಾಗಿ, ಮಿಕ್ಕವೆಲ್ಲಾ ಮಿಥ್ಯವಾಗಿ ತೋರುತ್ತಿರ್ಪುದೇ ಭಾವಲಿಂಗವು. ಅಂತಪ್ಪ ಭಾವಲಿಂಗಸಂಗದಲ್ಲಿ ನಿಸ್ಸಂಗ ನಿರ್ಭಾವಮಾದ ನಿತ್ಯಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಇಂತೀ ಕ್ರಮದಲ್ಲಿ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನ ನೀಡಿದ ಭಕ್ತಗಣಂಗಳಿಗೆ ಮೋಕ್ಷವೆಂಬುದು ಕರತಳಾಮಳಕವಾಗಿರ್ಪುದು. ಇಂತಪ್ಪ ವಿಚಾರವ ತಿಳಿಯದೆ ಮೂಢಮತಿಯಿಂದ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನವ ನೀಡಿದಾತನೇ ಭಕ್ತನೆಂದು ವೇದಾಗಮಶ್ರುತಿ ಪ್ರಮಾಣವಾಕ್ಯಂಗಳು ಸಾರುತ್ತಿರ್ಪವು. ಆ ಶ್ರುತಿ ಸಾರಿದ ವಾಕ್ಯಗಳು ಪ್ರಮಾಣ. ಅದೆಂತೆಂದಡೆ: ಅಂತಪ್ಪ ಶ್ರುತಿವಾಕ್ಯಂಗಳ ಕೇಳಿ ಸ್ವಾನುಭಾವಗುರುಮುಖದಿಂದ ವಿಚಾರಿಸಿಕೊಳ್ಳಲರಿಯದೆ, ತಮ್ಮಲ್ಲಿ ಸ್ವಯಂಜ್ಞಾನೋದಯವಾಗಿ ತಾವು ತಿಳಿಯದೆ ಮೂಢಮತಿಯಿಂದ ಅಜ್ಞಾನ ಎಡೆಗೊಂಡು ಗುರುವಿಗೆ ತನುವ ನೀಡಬೇಕೆಂದು, ಆ ಗುರುವಿನ ಸೇವಾವೃತ್ತಿಯಿಂದ ತನುವ ದಂಡನೆಯ ಮಾಡುವರು. ಅದೇನು ಕಾರಣವೆಂದಡೆ: ಗುರುವಿನ ನಿಲುಕಡೆಯನರಿಯದ ಕಾರಣ. ಲಿಂಗಕ್ಕೆ ಮನವ ನೀಡಬೇಕೆಂದು ಧೂಪ-ದೀಪ-ನೈವೇದ್ಯ-ತಾಂಬೂಲ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿ, ಹಸ್ತದಲ್ಲಿರುವ ಇಷ್ಟಲಿಂಗದಲ್ಲಿ ಮನವ ನಿಲ್ಲಿಸಬೇಕೆಂದು ಎವೆಗೆ ಎವೆ ಹೊಡೆಯದೆ ಸತ್ತ ಮಲದ ಕಣ್ಣಿನಂತೆ ಕಣ್ಣು ತೆರೆದು ನೋಡಿದಡೆ ಆ ಕಲ್ಲಲಿಂಗದಲ್ಲಿ ಮನವು ನಿಲ್ಲಬಲ್ಲುದೆ ? ನಿಲ್ಲಲರಿಯದು. ಅದೇನು ಕಾರಣವೆಂದಡೆ : ಆ ಇಷ್ಟಬ್ರಹ್ಮದ ನಿಜನಿಲುಕಡೆಯ ಸ್ವರೂಪ ತಾವೆಂದರಿಯದ ಕಾರಣ. ಇಂತೀ ಪರಿಯಲ್ಲಿ ಮನವ ಬಳಲಿಸುವರು. ಜಂಗಮಕ್ಕೆ ಧನವ ನೀಡಬೇಕೆಂದು ಅನ್ನ-ವಸ್ತ್ರ ಮೊದಲಾದ ಹದಿನೆಂಟು ಧಾನ್ಯ ಜೀನಸು ಸಹವಾಗಿ ನಾನಾ ಧಾವತಿಯಿಂದ ಗಳಿಸಿ ಸಕಲ ಪದಾರ್ಥವನು ಜಂಗಮಕ್ಕೆ ನೀಡಿ, ಆತ್ಮನ ಬಳಲಿಸುವರು. ಅದೇನು ಕಾರಣವೆಂದಡೆ, ಆ ಜಂಗಮದ ನಿಜನಿಲುಕಡೆಯ ಸ್ವರೂಪ ತಾವೆಂದರಿಯದ ಕಾರಣ. ಇಂತಿವೆಲ್ಲವು ಹೊರಗಣ ಉಪಚಾರ. ಈ ಹೊರಗಣ ಉಪಚಾರವ ಮಾಡಿದವರಿಗೆ ಪುಣ್ಯಫಲಪ್ರಾಪ್ತಿ ದೊರಕೊಂಬುವದು. ಆ ಪುಣ್ಯಫಲ ತೀರಿದ ಮೇಲೆ ಮರಳಿ ಭವಬಂಧನವೇ ಪ್ರಾಪ್ತಿ. ಅದೆಂತೆಂದಡೆ : ಪುಣ್ಯವೇ ತೈಲ, ಫಲವೇ ಜ್ಯೋತಿ. ತೈಲವು ತೀರಿದ ಹಾಗೆ ಆ ಜ್ಯೋತಿಯ ಪ್ರಕಾಶ ಅಡಗುವದು. ಪುಣ್ಯ ತೀರಿದ ಮೇಲೆ ಫಲಪದ ನಾಶವಾಗುವದು ನೋಡೆಂದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->