ಅಥವಾ

ಒಟ್ಟು 38 ಕಡೆಗಳಲ್ಲಿ , 8 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ನಾನೆಂಬುದನು ಒಯ್ಯನೆ ಒಯ್ಯನೆ ಮರೆದೆ. ಅಯ್ಯಾ, ನೀ ಗುರುರಾಗಿ ಕರುಣದಿಂದ ಒಯ್ಯನೆ ಬಂದೆನ್ನ `ಅಯ್ಯೊ ಮಗನೆ' ಎಂದು ಕೈವಿಡಿದು ತೆಗೆದೆನ್ನ ಸಲಹಿರಿ ಕರುಣದಿಂದ. ಆನೀಗ ನಿಮ್ಮ ಅವ್ಯಯದ ಪದಕಾನು ಮೂಲನಾದೆ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ. ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ ಗೊರವನು ಬಂದೆನ್ನ ನೆರೆದ ನೋಡವ್ವಾ. ಆತನನಪ್ಪಿಕೊಂಡು ತಳವೆಳಗಾದೆನು. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ಣಮುಚ್ಚಿ ತೆರೆದು ತಳವೆಳಗಾದೆನು.
--------------
ಅಕ್ಕಮಹಾದೇವಿ
ಅಯ್ಯಾ, ನಿಮ್ಮ ಶರಣರು ಬಂದೆನ್ನ ಅಂಗಳದೊಳಗೆ ರಕ್ಷಿಸಿಹೆವೆಂದಿರಲು ನಾನು ತೆರಹು-ಮರಹಾಗಿರ್ದು ಕೆಟ್ಟೆನಯ್ಯಾ, ನಾನು ಕೆಟ್ಟ ಕೇಡಿಂಗೆ ಕಡೆಯಿಲ್ಲವಯ್ಯಾ. ಕೂಡಲಸಂಗಮದೇವಾ, ಎನ್ನ ಭಕ್ತಿ ಸಾವಿರ ನೋಂಪಿಯ ನೋಂತು ಹಾದರದಲ್ಲಿ ಅಳಿದಂತಾಯಿತ್ತಯ್ಯಾ.
--------------
ಬಸವಣ್ಣ
ಅಯ್ಯಾ ನೀ ಮಾಡಿದಂತಾನಾದೆ ನೀ ಇರಿಸಿದಲ್ಲಿದ್ದೆ ಅಯ್ಯಾ ನೀ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಅನಾಹತ ವಿಶುದ್ಧಿ ಆಜ್ಞೆ ಪ್ರಣವ ಪಂಚಮ ಸಮಾದ್ಥಿಯಲ್ಲಿ ನೀನು ಅನುಭವಿಸಿ ಮುಂದೆ ಇರಿಸುವದ ನಾನಿಂದೆ ಕಂಡೆ. ಅದೇನು ಹದರದಿಂದ? ನಿನ್ನವರು ಎನ್ನನೊಲ್ಲದಿದ್ದಡೆ ಆ ನಿನ್ನ ಪಾದವ ಹಿಡಿದೆ. ನೀ ನಿನ್ನ ಆ ರೂಪಬಿಟ್ಟು ಗುರುವಾಗಿ ಬಂದೆನ್ನ ಭವದ ಬೇರ ಹರಿದೆ. ನಾನರಿವುದೇನರಿದಯ್ಯ. ನೀ ಶುದ್ಧದಲ್ಲಿ ಹೊಕ್ಕಡೆ ಆನೊಡನೆ ಹೊಕ್ಕೆ, ನೀ ಸಿದ್ಧದಲ್ಲಿ ಹೊಕ್ಕಡೆ ಆನೊಡನೆ ಹೊಕ್ಕೆ, ನೀನು ಪ್ರಸಿದ್ಧದಲ್ಲಿ ಪ್ರವೇಶಿಸಿದಡೆ ಆನೊಡನೆ ಪ್ರವೇಶಿಸಿದೆ. ಎನಗಿನ್ನೇನು ಅರಿದಿಲ್ಲ. ಇನ್ನು ಹಿಂದೆ ತಿರಿಗಿ ನೋಡಿದೆನಾಯಿತ್ತಾದಡೆ ಭಕ್ತಿಯ ತೋರಿದ ತಂದೆ, ಎನ್ನ ಭವವ ತಪ್ಪಿಸಿದ ಗುರು ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನ ತದ್ರೂಪಾದ ಬಸವಪ್ರಭುವಿನಾಣೆ.
--------------
ಸಿದ್ಧರಾಮೇಶ್ವರ
ಅರಿಯಬಾರದ ಘನವನರಿದು ಸಾದ್ಥಿಸಿ ಗೆದ್ದ ಘನಮಹಿಮ ಶರಣರ ಮುಂದೆ ಎನ್ನ ಪ್ರತಾಪ ನಿಲುಕುವುದೆ? ಅವರಿಪ್ಪರು ಲಂಗಪ್ರಭೆಯೊಳಗೆ; ನಾನಿಪ್ಪೆನು ಅಹಂಕಾರ ಪಂಜರದೊಳಗೆ ಎನ್ನ ನೊಸಲ ಕಣ್ಣಿನ ಕಿಚ್ಚುಡುಗಿ ಲಜ್ಜಿತವಾಗಿ ಮರಳಿ ಬಂದೆನ್ನ ಸ್ತುತಿ ಮುತ್ತಿತ್ತು ನಾನು ಶರಣೆಂಬ ಗುರುವಚನವಿದಿರೆದ್ದು ಕೊಲುವಡೆ, ಕಪಿಲಸಿದ್ಧಮಲ್ಲಿನಾಥನೊಳಗೆ ಅಳಿವೆನಲ್ಲದೆ ಉಳಿವನಲ್ಲ.
--------------
ಸಿದ್ಧರಾಮೇಶ್ವರ
ನಟ್ಟಡವಿಯೊಳಗೆ ಇರುಳು-ಹಗಲೆನ್ನದೆ ಅಪ್ಪಾ! ಅಯ್ಯಾ! ಎಂದು ನಾನರಸುತ್ತ ಹೋದಡೆ, `ನಾನಿದ್ದೇನೆ ಬಾ ಮಗನೆ' ಎಂದು ಕರೆದು, ಎನ್ನ ಕಂಬನಿದೊಡೆದು, ತನ್ನ ನಿಜವ ತೋರಿದ ಪಾದವಿಂದೆನ್ನಲ್ಲಿಗೆ ನಡೆದುಬಂದಡೆ ನಾನರಿಯದೆ ಮರುಳುಗೊಂಡೆಹೆನೆಂದು ಎನ್ನ ಮನದೊಳಗೆಚ್ಚರ ಮಾಡಿದೆ. ಆತನನರಸಿಕೊಂಡು ಬಂದೆನ್ನ ಹೃದಯದಲಿಂಬಿಟ್ಟುಕೊಂಬೆ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನನ.
--------------
ಸಿದ್ಧರಾಮೇಶ್ವರ
ಎಮ್ಮ ನಲ್ಲನೊದು ಒಲಿಸಿ ಕಾಡುತ್ತಿರೆ, `ಬಾರಾ ಬಾರಾ' ಎಂದೆನ್ನ ಕರಣ ಹರಣವ ತೋರಿದಡೆ ತಾನೆ ಒಲಿದು ಬಂದೆನ್ನ ತಲೆಯ ಪಿಡಿದು ನೆಗಹಿ, ಎನ್ನ ಮನೆಗೆ ಬಂದ ಕಪಿಲಸಿದ್ಧಮಲ್ಲಿನಾಥನ ಒಲುಮೆಯ ಘನವೇನೆಂದುಪಮಿಸುವೆನು.
--------------
ಸಿದ್ಧರಾಮೇಶ್ವರ
ಗುರುಲಿಂಗವು ಬಂದೆನ್ನ ಕರಸ್ಥಲಕೈದಿದ ಮೇಲೆ, ಸಿರಿಸಂಪತ್ತು ಸಂಭ್ರಮವಾಯಿತ್ತು ; ಸಕಲ ಗಣತಿಂತಿಣಿ ನೆರೆಯಿತ್ತು. ಅನುಸರಣೆ ಅಡಗಿತ್ತು, ಆಚಾರ ಬೆಳಗಿತ್ತು, ಪುರದರಮನೆ ಪರಿಪರಿ ಶೃಂಗರಿಸಿತ್ತು, ಎನ್ನ ಸುಚಿತ್ತವೆಂಬ ಹಸ್ತ ಸುಬುದ್ಧಿಯನೈದಲು, ಗುರುನಿರಂಜನ ಚನ್ನಬಸವಲಿಂಗದಾಣತಿಗೆ ಮಹೇಶ್ವರತ್ವ ಮುಂದುವರಿಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುವಾಗಿ ಬಂದೆನೆಗೆ ದೀಕ್ಷೆಯ ಮಾಡಿರಿ; ಲಿಂಗವಾಗಿ ಬಂದೆನ್ನ ಮನದ ಮನವ ಕಳೆದಿರಿ; ಜಂಗಮವಾಗಿ ಬಂದೆನ್ನ ಪ್ರಪಂಚಕತನವ ಕಳೆದು ಪರಮ ಸೀಮೆಯ ಮಾಡಿರಿ. ಇಂತಿವೆಲ್ಲವೂ ಬಸವಣ್ಣನಾಗಿ ಎನಗೆ ಪ್ರಸಾದವ ನೀಡಿ ಸಲಹಿದ, ಕಪಿಲಸಿದ್ಧಮಲ್ಲಿಕಾರ್ಜುನ. ಇನ್ನೆನಗತಿಶಯವೇನೂ ಇಲ್ಲ.
--------------
ಸಿದ್ಧರಾಮೇಶ್ವರ
ಎನ್ನ ತನುವಿಡಿದವರ ತನುವ ಬೆರೆಸುವೆನು, ಎನ್ನ ಮನವಿಡಿದವರ ಮನವ ಬೆರೆಸುವೆನು, ಎನ್ನ ಶಿರವನವರ ಪಾದಕ್ಕೆ ಪೂಜೆಯ ಮಾಡುವೆನು. ಕೂಡಲಸಂಗನ ಶರಣರನು ಒಡಗೊಂಡು ಬಂದೆನ್ನ ಭವವ ಹರಿವೆನು.
--------------
ಬಸವಣ್ಣ
ನಿನ್ನವನಾಗಿ ಅನ್ಯರ ಬೇಡುವ ಅನ್ಯಾಯವನೇನೆಂಬೆನೆಲೆಯಯ್ಯಾ. ನಿನ್ನನರ್ಚಿಸಿದ ಪುರಾತನರು ನೀವೆಯಾದರು. ನಿನ್ನನರ್ಚಿಸಿದ ಬಸವಣ್ಣ ನೀನೆಯಾದ. ಎಲೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯ, ಗುರುವಾಗಿ ಬಂದೆನ್ನ ಭವದ ಬೇರ ಹರಿದ ಬಳಿಕ ನಿನ್ನವರು ನೀನು ನಾನೆಂಬ ಸಂದೇಹವೇಕಯ್ಯ?
--------------
ಸಿದ್ಧರಾಮೇಶ್ವರ
ಕಾಳರಾತ್ರಿಯಲ್ಲಿ ಅಂಧಕಾರದ ಕೊಟ್ಟಿಗೆಯಲ್ಲಿ ಕಾಳೆಮ್ಮೆಯ ಕರು ಹಾಳವಾಗಿ ಹಾಳಿದ್ದ ದನಿಗಂಜೆ ಕೊಟ್ಟಿಗೆ ಹಾಳಾದುದಿಲ್ಲ. ಎತ್ತ ಕಟ್ಟುವುದಿಲ್ಲ ಎಮ್ಮೆಯಕರು ಸತ್ತಲ್ಲದೆ. ಕೊಟ್ಟಿಗೆ ಹಾಳಾಗದಯ್ಯಾ. ಕರುವಿನ ಕೊರಳೂ ಅಡಗದು. ಇನ್ನೇವೆನಿನ್ನೇವೆನಯ್ಯಾ, ನಾರಾಯಣಪ್ರಿಯ ರಾಮನಾಥಾ, ನೀನೇ ಗುರು ರೂಪಾಗಿ ಬಂದೆನ್ನ ಕರಸ್ಥಲವನಿಂಬು ಗೊಳ್ಳಯ್ಯಾ.
--------------
ಗುಪ್ತ ಮಂಚಣ್ಣ
ಹೊರಗಿದ್ದಹನೆಂದು ನಾನು ಮರೆದು ಮಾತನಾಡಿದೆ; ಅರಿಯಲೀಯದೆ ಬಂದೆನ್ನ ಅಂತರಂಗದಲ್ಲಿಪ್ಪನು. ತೆರಹಿಲ್ಲದಭವ ನುಡಿಗೆಡೆಗೊಡನು; ಆತನ ಬಯಲಿಂಗೆ ಬೇಟಗೊಂಡೆನವ್ವಾ. ನಾನೇನ ಮಾಡುವೆನೆಲೆ ತಾಯೆ, ಮರೆದಡೆ ಎಚ್ಚರಿಸುವ ಕುರುಹಿಲ್ಲದ ಗಂಡನು. ತನ್ನನರಿದಡೆ ಒಳ್ಳಿದನವ್ವಾ ನಮ್ಮ ಶಂಭುಜಕ್ಕೇಶ್ವರನು.
--------------
ಸತ್ಯಕ್ಕ
ಅಯ್ಯಯ್ಯಾ ನೀ ಬಾರಯ್ಯ ಬಾರಯ್ಯ. ಆನಂದದಾದಿಯಲ್ಲಿ ಬಂದೆನ್ನ ಕರದಲ್ಲಿ ನಿಲ್ಲಯ್ಯ. ಅಯ್ಯಯ್ಯಾ, ಒಯ್ಯನೆ ಕೈಯಗುಡಯ್ಯ. ಕಂಗೆಟ್ಟ ಪಶುವಾದೆನು ಎಲೆ ಅಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಕರುಣಿಸು ನಿಮ್ಮ ಧರ್ಮ.
--------------
ಸಿದ್ಧರಾಮೇಶ್ವರ
ಶುದ್ಧವೆ ತದ್ರೂಪವಾಗಿ ಬಾರನೆ ಅಂದು ಅನಾಹತನೆಂಬ ಗಣೇಶ್ವರನು ಬಂದೆನ್ನ ಜರಿಯನೆ? ಜರಿದರೆ ನೀನು ಕೊಟ್ಟ ತಲೆಯ ಹುಣ್ಣ ಕಣ್ಣೆಂದು ತೆರೆದು ಲಜ್ಜೆಗೆಡನೆ ಆನಾ ಗಣೇಶ್ವರನ ಕೈಯಲ್ಲಿ? ಶುದ್ಧಕಾತನೊಡೆಯ, ಸಿದ್ಧಕಾತನೊಡೆಯ, ಪ್ರಸಿದ್ಧಕಾತನೊಡೆಯ! ಒಪ್ಪಿಪ್ಪಾರು ಆತನ ಸೀಮೆ. ಮೂವತ್ತಾರರ ಮೇಲಿಂದಾತನ ಸಂಯೋಗ. ಇಂತಪ್ಪಾತನ ನೀನೆನ್ನಲರಿಯದೆ ನೊಂದೆ ಕೆಲವು ದಿನ. ಈ ನೋವ ಮಾಣಿಸಿದಾತನೂ ಆತನೆ, ಎನ್ನ ಭವವ ತಪ್ಪಿಸಿದಾತನೂ ಆತನೆ, ಆತನಿಂದ ಉರುತರ ಕೈವಲ್ಯಕ್ಕೆ ಕಾರಣಿಕನಾದೆ! ಆತನ ಪ್ರಸಾದದಿಂದ ನಿನ್ನವರ ಪಾದೋದಕ ಪ್ರಸಾದಕ್ಕೆ ಯೋಗ್ಯನಾದೆ. ಫಲಪದಕ್ಕೆ ದೂರವಾದೆ ಕಪಿಲಸಿದ್ಧಮಲ್ಲಿಕಾರ್ಜುನ, ಬಸವಣ್ಣನಿಂದ!
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->