ಅಥವಾ

ಒಟ್ಟು 45 ಕಡೆಗಳಲ್ಲಿ , 24 ವಚನಕಾರರು , 42 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮಪಾಶ, ವಿಷ್ಣುಮಾಯೆ ಎಂಬ ಬಲೆಯ ಬೀಸಿ, ಹೊನ್ನು ಹೆಣ್ಣು ಮಣ್ಣು ತೋರಿ, ಮುಕ್ಕಣ್ಣನಾಡಿದ ಬೇಂಟೆಯ. ಆಸೆಯೆಂಬ ಕುಟುಕನಿಕ್ಕಿ, ಹೇಸದೆ ಕೊಂದೆಯಲ್ಲಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಧರೆಯಗಲದ ಹುಲ್ಲೆ ಹರಿದು ಮೇಯಿತ್ತ ಕಂಡೆ. ಬಲೆಯ ಬೀಸುವ ಗಂಡರಾರೂ ಇಲ್ಲ, ಹರಿದು ಹಿಡಿದಹೆನೆಂದಡೆ ತಲೆ ಕಾಣಬರುತ್ತಲಿದೆ. ಶಿರವ ಹಿಡಿದೆಹೆನೆಂಬವರಿನ್ನಾರೂ ಇಲ್ಲ. ಹರಿದಾಡುವ ಹುಲ್ಲೆಯ ಕಂಡು ಹಲವು ಬೇಳಾರ (ಬೆಳ್ಳಾರ?)ವ ಬಿಟ್ಟು, ಬೇಟೆಕಾರ ಬಲೆಯ ಬೀಸಿದಡೆ ಹುಲ್ಲೆಯಂಜಿ ಹೋಯಿತ್ತು. ಮರುಳುದಲೆಯಲ್ಲಿ ಹುಲ್ಲೆಯನೆಸೆದಯಬೇಕೆಂದು ಸರಳ ಬಿಟ್ಟು ಬಾಣವನೊಂದು ಕೈಯಲ್ಲಿ ಹಿಡಿದು (ಹಿಡಿವಡೆ?) ಹಳ್ಳಕೊಳ್ಳವ ದಾಂಟಿ ಗಟ್ಟಬೆಟ್ಟವ ಕಳೆದು ಅತ್ತ ಬಯಲ ಮರನ ತಾ ಮೊರೆಗೊಂಡಿತ್ತು. ಹತ್ತೆ ಸಾರಿದ ಮೃಗವ ತಾನೆಚ್ಚಡೆ ನಾರಿ ಹರಿದು ಬಿಲ್ಲು ಮುರಿದು ಹುಲ್ಲೆ ಸತ್ತಿತ್ತು. ಅದ ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡಲು ಸತ್ತ ಹುಲ್ಲೆ ಕರಗಿ ಶಬ (ಸಬ?) ಉಳಿಯಿತ್ತು. ಗುಹೇಶ್ವರಾ ನಿಮ್ಮ ಶರಣ ಕಟ್ಟಿದಿರ ಬಾಣಸದ ಮನೆಗೆ ಬಂದನು.
--------------
ಅಲ್ಲಮಪ್ರಭುದೇವರು
ಗುರುಕರಜಾತನಾದೆನಾಗಿ, ಆಣವಮಲ ಹೋಯಿತ್ತಯ್ಯ ಎನಗೆ. ಭಕ್ತಜನಬಂಧುತ್ವವಾಯಿತ್ತಾಗಿ, ಮಾಯಾಮಲ ಹೋಯಿತ್ತಯ್ಯ ಎನಗೆ. ದ್ರವ್ಯವ ತ್ರಿಲಿಂಗದ ಸೊಮ್ಮೆಂದರಿದೆನಾಗಿ, ಕಾರ್ಮಿಕಮಲ ಹೋಯಿತ್ತಯ್ಯ ಎನಗೆ. ಇಂತೀ ಮಲತ್ರಯಂಗಳ ಬಲೆಯ ಹರಿದು ನಿಮ್ಮ ಕರುಣದ ಕಂದನಾದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಗದಗಲದಲ್ಲಿ ಹಬ್ಬಿದ ಬಲೆ, ಯುಗಜುಗಕ್ಕೆ ತೆಗೆಯದು ನೋಡಾ ! [ಅದು] ಬಗೆಯಲ್ಲಿ ಭ್ರಮೆಗೊಳ್ಳದು;_ತನ್ನ ಇರವಿನ ಪರಿ ಇಂತುಟಾಗಿ ! ಜಗದ ಪ್ರಾಣಿಗಳುಲಿದುಲಿದು ಮರಳಿ ಮತ್ತಲ್ಲಿಯೆ ಬೀಳಲು; ಬಲೆಯ ನೇಣು ಬಗ್ಗುರಿಯ ಕೈಯಲಿರಲು,_ ಬಲೆಯ ನೇಣ ಕಣ್ಣಿ ಕಳಚಿ, ಲಿಂಗಕ್ಕೆ ಪ್ರಾಣ ಶರಣೆನ್ನುತ್ತವೆ ನಿಂದು, ಒಡಲುಪಾಧಿಯನರಿಯದೆ ಬೆಳಗಿನಲ್ಲಿ ನಿಂದು, ಬೇಡಿದವರಿಗೆ ಅಣಿಮಾದಿ ಗುಣಂಗಳನಿತ್ತು, ಮನೋಮಧ್ಯದಲ್ಲಿ ನಿಲಿಸಿ ನೆನೆವುತ್ತಿರ್ದು ಸುಖಿಯಾದ; ಪ್ರಾಣನಾಥನ ಕಾಯ ಶೂನ್ಯಲಿಂಗಕ್ಕೆ, ಪ್ರಾಣಶೂನ್ಯಶರಣ. ಗುಹೇಶ್ವರಲಿಂಗವ ಬೆರಸಿ ಬೇರಿಲ್ಲ.
--------------
ಅಲ್ಲಮಪ್ರಭುದೇವರು
ಹುಲ್ಲಹೊರೆಯೊಳಗೊಂದು ಕಿಚ್ಚು ಹುಟ್ಟಿ ಸುಡುವುದ ಕಂಡೆ. ಹುಲ್ಲ ಮೇವ ಎರಳೆಯ ಕೋಡು ಮುರಿದು ಅಡವಿಯಲ್ಲಿ ಬಿಟ್ಟುದ ಕಂಡೆ. ಬಲ್ಲಿದ ಬಲೆಗಾರನ ಬಲೆಯ ನೇಣು ಹರಿದು, ಬಲೆಯ ಬಿಟ್ಟುಹೋದುದ ಕಂಡೆ. ಅಟ್ಟೆಯ ಬಿಟ್ಟು ತಲೆ ಆಕಾಶವನಡರಿತ್ತ ಕಂಡೆ. ದೂರ ದಾರಿ ಸಾರೆಯಾದುದ ಕಂಡೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣ, ಹುಟ್ಟು ಮುರಿದು ಬಟ್ಟಬಯಲಾದುದ ಕಂಡೆ.
--------------
ಸ್ವತಂತ್ರ ಸಿದ್ಧಲಿಂಗ
ಎನ್ನ ಕಾಮದ ಕಳೆಯ ಕಳೆಯಯ್ಯ ಸಿದ್ಧರಾಮಯ್ಯ. ಎನ್ನ ಕ್ರೋಧದ ಕೊನರ ಚಿವುಟಯ್ಯ ಚೆನ್ನಬಸವಣ್ಣ . ಎನ್ನ ಲೋಭದ ಬಲೆಯ ಹರಿಯಯ್ಯ ಪ್ರಭುದೇವ. ಎನ್ನ ಮೋಹದ ಮುಂದ ಬಿಡಿಸಯ್ಯ ಸಂಗನಬಸವಣ್ಣ. ಎನ್ನ ಮದಕ್ಕೆ ಮಾವತಿಗನಾಗಿ ಬಾರಯ್ಯ ಮಡಿವಾಳಯ್ಯ. ಎನ್ನ ಮಚ್ಚರಕಿಚ್ಚ ಸುಟ್ಟು ನಿಮ್ಮಲ್ಲೆನ್ನ ಅಚ್ಚೊತ್ತಿದಂತಿರಿಸಯ್ಯಾ ಮಹಾಘನ ಶಾಂತಮಲ್ಲಿಕಾರ್ಜುನಲಿಂಗವೆ.
--------------
ವೀರಣ್ಣದೇವರು (ಕರಸ್ಥಲದ ವೀರಣ್ಣೊಡೆಯರು)
ಕಣ್ಣಿನೊಳಗಣ ಮತ್ಸ ್ಯಕ್ಕೆ ಬಲೆಯ ಬೀಸಿ, ಹದ್ದಿನ ಬಾಯ ಹಾವಿಂಗೆ ಹೇಳಿಗೆಯ ಮಾಡಿ, ಕಾಣಬಾರದ ಬಯಲಿಂಗೆ ಮನೆಯ ಕಟ್ಟಿ ಬಾಳುತ್ತಿದ್ದವನ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಪ್ಪೆ ಸತ್ತು ಸರ್ಪನ ನುಂಗಿತ್ತು ನೋಡಾ. ಮೊಲ ಸತ್ತು ಬಲೆಯ ಮೀರಿತ್ತು ನೋಡಾ. ಮತ್ತೊಡೆದು ಜಲವ ನುಂಗಿತ್ತು ನೋಡಾ. ಜೀವ ಸತ್ತು ಕಾಯ ನುಂಗಿತ್ತು ನೋಡಾ. ಉದಕ ಒಡೆದು ಏರಿ ತುಂಬಿತ್ತು, ರೆಕ್ಕೆ ಮುರಿದು ಪಕ್ಷಿ ಹಾರಿತ್ತು. ಹಾರುವ ಪಕ್ಷಿಯ ಮೀರಿ ನಿಂದಿತ್ತು ಬಯಲು. ನುಂಗಿದ ಬಯಲವ, ಹಿಂಗಿದ ಪಕ್ಷಿಯ ಕಂಗಳು ನುಂಗಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಪ್ಪದ ಕಪ್ಪೆ ಸರ್ಪನ ನುಂಗಿತ್ತ ಕಂಡೆ. ತುಪ್ಪುಳು ಬಾರದ ಮರಿ ಹೆತ್ತ ತಾಯ ನುಂಗಿತ್ತ ಕಂಡೆ. ಕೊಂಬಿನ ಮೇಲಣ ಕೋಡಗ ಕೊಂಬ ನುಂಗಿತ್ತ ನೋಡಾ. ಬೀಸಿದ ಬಲೆಯ ಮತ್ಸ್ಯ ಗ್ರಾಸವ ಕೊಂಡಿತ್ತು ನೋಡಾ. ಅರಿದೆಹೆನೆಂಬ ಅರಿವ, ಮರೆದೆಹೆನೆಂಬ ಮರವೆಯ ಕಳೆದುಳಿದ ಪರಿಯಿನ್ನೆಂತೊ ? ಅರಿವುದೆ ಮರವೆ, ಮರೆವುದೆ ಅರಿವು. ಅರಿವು ಮರವೆ ಉಳ್ಳನ್ನಕ್ಕ ಕುರಿತು ಮಾಡುವುದೇನು ? ಕುರುಹಿಂಗೆ ನಷ್ಟ, ಆ ಕುರುಹಿನಲ್ಲಿ ಅರಿದೆಹೆನೆಂಬ ಅರಿವು ತಾನೆ ಭ್ರಮೆ. ಆರೆಂಬುದ ತಿಳಿದಲ್ಲಿ, ಕೂಡಿದ ಕೂಟಕ್ಕೆ ಒಳಗಲ್ಲ ಹೊರಗಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜೀವತಾಮಸದ ಮಾಯದ ಬಲೆಯ ಭ್ರಾಂತಿಂಗೆ ಸೋಲುವ ಶರೀರ ! ಸಂಸಾರ ಸಂಗವ ಭೇದಿಸಿ ನೋಡುವಡೆ ದೂರ, ಚಿಂತೆಯನೆ ಗೆಲಿದು ಸುಳಿದಡೆ, ಗುಹೇಶ್ವರನೆಂದರಿದ ಶರಣಸಾರಾಯನು.
--------------
ಅಲ್ಲಮಪ್ರಭುದೇವರು
ಕಾಲನೆಂಬ ಜಾಲಗಾರನು ಕರ್ಮವೆಂಬ ಬಲೆಯ ಬೀಸಿ, ಸಂಸಾರಶರದ್ಥಿಯಲ್ಲಿರ್ಪ ಸಕಲಪ್ರಾಣಿಗಳೆಂಬ ಮೀನುಗಳ ಹಿಡಿದು ಕೊಲ್ಲುತಿದ್ದಾನೆ. ಕಾಮನೆಂಬ ಬೇಂಟೆಗಾರನು ಕಂಗಳ ತೋಹಿನಲ್ಲಿ ನಿಂದು, ಕಳವಳದ ಬಾಣವನೆಸೆದು ಭವವೆಂಬ ಬಲೆಯಲ್ಲಿ ಸಕಲಪ್ರಾಣಿಗಳ ಕೆಡಹಿಕೊಂಡು ಕೊಲ್ಲುತಿದ್ದಾನೆ. ಮಾಯೆಯೆಂಬ ರಕ್ಕಸಿ ಸಕಲ ಪ್ರಾಣಿಗಳ ಸಾರವ ಹೀರಿ ಹಿಪ್ಪೆಯ ಮಾಡಿ ಉಃಫೆಂದು ಊದುತಿದ್ದಾಳೆ. ಇಂತೀ ತ್ರಿವಿಧಮುಖದಲ್ಲಿ ಕಾಡುವ ನಿಮ್ಮ ಮಾಯೆಯ ಗೆಲುವಡೆ ಆರಳವಲ್ಲವಯ್ಯಾ ಅಖಂಡೇಶ್ವರಾ, ನೀವು ಕರುಣಿಸದನ್ನಕ್ಕ.
--------------
ಷಣ್ಮುಖಸ್ವಾಮಿ
ಆ ನಿಜದರಿವು ತಾನೊಂದು ಬಂಧನದಿಂದ ಮರೆಯಾದುದ ತಾನರಿಯದೆ, ಮರವೆಯ ಗುಣ ಇದಿರಿಗೆ ಅದೆಯೆಂದು ಸಂಪಾದಿಸುವಾಗ, ಆ ತೆರ ಶಿಲೆಯ ನೆಳಲಿನ ಮರೆಯಲ್ಲಿ ತನ್ನಂಗ ಬಿಂಬಿಸಲಿಂತಾಗಿ, ಅರಿ ಇದಿರಾಯಿತ್ತೆಂದು, ಶಿಲೆಯ ಕೊಂಡು, ತಾನೊಂದು ಚೇತರಿಸಿಕೊಂಡು ನಿಂದ ಗಜದಂತೆ, ನಿಜದರಿವು ತ್ರಿಗುಣಾತ್ಮಕದಲ್ಲಿ ಬೆರಸಿ, ತ್ರಿದೋಷದ ದೆಸೆಯಿಂದ ನಾನಾದರುಶನ ಪಕ್ಷಪಾತಂಗಳಲ್ಲಿ ಹೊತ್ತು ಹೋರಿ, ಅಧ್ಯಾತ್ಮ, ಆದಿಭೌತಿಕ, ಆದಿದೈವಿಕಂಗಳ ತಿಳಿಯಬೇಕೆಂದು, ಭೂತಭವಿಷ್ಯದ್ವರ್ತಮಾನವ ವಿಚಾರಿಸಿಹೆನೆಂದು, ಷಡುದರುಶನವ ಸಂಪಾದಿಸಿಹೆನೆಂದು, ಪಂಚಭೌತಿಕ ಭೇದ, ಪಂಚವಿಂಶತಿತತ್ವ ಮೂವತ್ತಾರು ಕ್ರಮ, ಐವತ್ತೊಂದು ಮೆಟ್ಟು, ನೂರೊಂದರ ಲಕ್ಷ. ಇಂತಿವ ಪ್ರಮಾಣಿಸಿ ತಿಳಿದಲ್ಲಿ, ಅದಕ್ಕೆ ಬೇರೆ ಬೇರೆ ಸೂರ್ಯ ಚಂದ್ರ ಆಕಾಶ ವಾಯು ಆಗ್ನಿ ಉದಕ ಪೃಥ್ವಿ ಬೇರೊಂದು ನೆಲಹೊಲಬುಂಟೆ ? ಇಂತಿವೆಲ್ಲವು ವಸ್ತುಮಯದೊಳಗಿದ್ದ ಲಕ್ಷ. ಊರೊಳಗಣ ಹಲವು ಕುಲವೆಲ್ಲವೂ ಅರಸಿನ ದೆಸೆ ಕುಲದಲ್ಲಿ ಎಸಕವ ತಿಳಿದಡಗಿದ ತೆರದಂತೆ, ಅರಿದು ನಡೆವ ಪರಮವಿರಕ್ತಂಗೆ ಹಲವುಮಾತಿನ ಬಲೆಯ ಭ್ರಮೆಯಿಲ್ಲ. ಗೆಲ್ಲಸೋಲದ ಕಲ್ಲೆದೆಯವನಲ್ಲ. ಅಲ್ಲಿಗಲ್ಲಿಗೆ ಬಲ್ಲರಿಯರೆಂದು ಕೋಲಾಟಿಗರಂತೆ ಥೆಕಾವ್ಯವೆಲ್ಲವ ಹೇಳುವನಲ್ಲ. ತ್ರಿವಿಧಮಲವಿಲ್ಲದಡೆ ಒಲ್ಲೆನೆಂದು ತನ್ನಲ್ಲಿಗೆ ಬಂದಡೆ, ಕೂಡಿ ಕದಂಬನಾಗಿ, ಮಧು ಮಕ್ಷಿಕನಂತೆ ಸಂಸಾರದಲ್ಲಿಯೆ ಸಾವನಲ್ಲ. ಕಲ್ಲಿಯೊಳಗಣ ಮಕರದ ಜೀವದಂತೆ, ಸಂಸಾರದಲ್ಲಿಯೆ ಹೋದ ಕುಳಿಗೊಂಬನಲ್ಲ. ಆತನ ಇರವು ದಗ್ಧಪಟದಂತೆ, ರತ್ನದೀಪ್ತಿಯ ಹೊದ್ದಿಗೆಯ ತೆರದಂತೆ, ಸ್ಫಟಿಕದ ನಿರ್ದೇಹದ ವರ್ಣದ ಹೊದ್ದಿಗೆಯಂತೆ, ಇಂತು ಚಿದ್ರೂಪನ ಇರವು. ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗದೊಳಗಾದವನ ಇರವು
--------------
ಮಹಾಲಿಂಗ ಶಶಿಮೌಳಿ ಸದಾಶಿವ
ಜಗದಲ್ಲಿ ಪರಿವೇಷ್ಟಿಸುವ ದೈವಜಾತಿಗಳ ಪರಿಪ್ರಕಾರವ ನೋಡಿರೆ. ಬ್ರಹ್ಮಮೂರ್ತಿ ಗುರುವಾದ, ವಿಷ್ಣುಮೂರ್ತಿ ಲಿಂಗವಾದ, ರುದ್ರಮೂರ್ತಿ ಜಂಗಮವಾದ. ಇಂತೀ ಮೂವರು ಬಂದ ಭವವ ನೋಡಾ. ಇಷ್ಟಲಿಂಗವ ಕೊಟ್ಟು ಕಷ್ಟದ್ರವ್ಯಕ್ಕೆ ಕೈಯಾನುವ ಕಾರಣ, ಗುರುಬ್ರಹ್ಮನ ಕಲ್ಪಿತವ ತೊಡೆದುದಿಲ್ಲ. ಲಿಂಗ ಸರ್ವಾಂಗದಲ್ಲಿ ಸಂಬಂದ್ಥಿಸಿದ ಮತ್ತೆ, ಕಾಯದಲ್ಲಿ ಮೆಟ್ಟಿಸಿಕೊಂಬ ಕಾರಣ, ವಿಷ್ಣುವಿನ ಸ್ಥಿತಿ ಬಿಟ್ಟುದಿಲ್ಲ. ಜಂಗಮ ರುದ್ರನ ಪಾಶವ ಹೊತ್ತ ಕಾರಣ, ರುದ್ರನ ಲಯಕ್ಕೆ ಹೊರಗಾದುದಿಲ್ಲ. ಇಂತಿವರ ಗುರುವೆನಬಾರದು, ಲಿಂಗವೆನಬಾರದು, ಜಂಗಮವೆನಬಾರದು. ಪೂಜಿಸಿದಲ್ಲಿ ಮುಕ್ತಿಯಲ್ಲದೆ ನಿತ್ಯತ್ವವಿಲ್ಲ. ಸತ್ಯವನರಸಿ ಮಾಡುವ ಭಕ್ತ, ನಿತ್ಯಾನಿತ್ಯವ ವಿಚಾರಿಸಬೇಕು. ಸತ್ತು ಗುರುವೆಂಬುದ, ಚಿತ್ತು ಲಿಂಗವೆಂಬುದ, ಆನಂದ ಜಂಗಮವೆಂಬುದ [ಅರಿದು], ಇಂತೀ ತ್ರೈಮೂರ್ತಿಯಾಗಬೇಕು. ತಾನೆ ಗುರುವಾದಡೆ ಬ್ರಹ್ಮಪಾಶವ ಹರಿಯಬೇಕು. ತಾನೆ ಲಿಂಗವಾದಡೆ ಶಕ್ತಿಪಾಶವ ನಿಶ್ಚೆ ೈಸಬೇಕು. ತಾನೆ ಜಂಗಮವಾದಡೆ ರುದ್ರನ ಬಲೆಯ ಹರಿಯಬೇಕು. ಇಂತಿವರೊಳಗಾದವೆಲ್ಲವು ಪ್ರಳಯಕ್ಕೆ ಒಳಗು. ಗುರುವೆಂಬುದು ಬಿಂದು, ಲಿಂಗವೆಂಬುದು ಕಳೆ, ಜಂಗಮವೆಂಬುದು ಕಳಾತೀತ, ಜ್ಞಾನ ಜಂಗಮ. ಆ ವಸ್ತುವಿಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. ಪಾಶಬದ್ಧನಲ್ಲ, ವೇಷಧಾರಿಯಲ್ಲ, ಗ್ರಾಸಕ್ಕೋಸ್ಕರವಾಗಿ ಭಾಷೆಯ ನುಡಿವನಲ್ಲ. ಈಶಲಾಂಛನವ ಹೊತ್ತು, ಕಾಸಿಂಗೆ ಕಾರ್ಪಣ್ಯಬಡುವನಲ್ಲ. ಮಹದಾಶ್ರಯವನಾಶ್ರಯಿಸಿದನಾಗಿ, ಮನೆಯ ತೂತಜ್ಞಾನಿಗಳ ಮೆಚ್ಚ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ನಿರ್ಲೇಪನಾದ ಶರಣ.
--------------
ಮೋಳಿಗೆ ಮಾರಯ್ಯ
ನೀರಮಡಿಯ ಕಟ್ಟಿ ಬಯಲಿಗೆ ಬಲೆಯ ಬೀಸಬಹುದೆ ? ಏರಿಗೆ ಅರಗ ತೋರಿ ಗಾಳಿಗೆ ಸೊಡರ ಹಿಡಿಯಬಹುದೆ ? ಮಳಲಗೋಡೆಯನಿಕ್ಕಿ ಮಂಜಿನಮನೆಯ ಕಟ್ಟಿದರೆ ಅದು ಅಸ್ಥಿರವಾಗುದಲ್ಲದೆ ಸ್ಥಿರವಾಗಬಲ್ಲುದೆ ? ಹಲವು ಮುಖದಲ್ಲಿ ಜಿನುಗುವ ಭವಭಾರಿ ಮನುಜರಿಗೆ ಶಿವಾಚಾರ ಅಳವಡದು ನೋಡಾ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಅಕಟಾ, ರಾಟಾಳದ ಘಟದಂತೆ ಭವಾರಣ್ಯದೊಳು ತಿರುಗಿತಿರುಗಿ ಸತ್ತು ಸತ್ತು ಹುಟ್ಟುವಂತಿದ್ದೆನಯ್ಯಾ. ಅದು ಎಂತೆಂದರೆ : ಶ್ವೇದಜ ಉದ್ಬಿಜ ಜರಾಯುಜ ಅಂಡಜವೆಂಬ ನಾಲ್ಕು ತೆರದ ಮುಖ್ಯ ಆನೆ ಕಡೆ ಇರುವೆ ಮೊದಲು ಎಂಬತ್ತುನಾಲ್ಕು ಲಕ್ಷ ಜೀವರಾಶಿಯಲ್ಲಿ ಒಂದೊಂದು ಯೋನಿಯಲ್ಲಿ ಸಾವಿರಬಾರಿ ತಿರುಗಿ, ಆವಾವ ಜನ್ಮದಲ್ಲಿ ಆವಾವ ಆಹಾರವನುಂಡು, ಆವಾವ ಭೂಮಿಯಲ್ಲಿ ಪುಟ್ಟಿ, ಆವಾವ ಕರ್ಮವ ಕಂಡು, ಭಂಗ ಬಡುತ್ತಿದ್ದುದಯ್ಯಾ ಶರೀರ. ಸಾಕ್ಷಿ :``ನಾನಾಯೋನಿಸಹಸ್ರಾಣಿ ಕೃತಂ ಚೈವ ತು ಮಾಯಯಾ | ಅನೇಕಂ ವಿವಿಧಾಹಾರಂ ಪೀತಾಶ್ಚ ವಿವಿಧಾಃ ಸ್ತನಾಃ ||'' ಎಂದುದಾಗಿ, ಇಂತಪ್ಪ ಸಂಸಾರಭ್ರಾಂತಿನ ಬಲೆಯ ತೊಲಗಿಸಿ ನಿಃಸಂಸಾರಿಯಾಗಿಪ್ಪ ಶರಣರ ಪಾದಕ್ಕೆ ನಮೋ ನಮೋಯೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇನ್ನಷ್ಟು ... -->