ಅಥವಾ

ಒಟ್ಟು 39 ಕಡೆಗಳಲ್ಲಿ , 12 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರ್ಜಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದ್ದಿತ್ತು. ಅದಕ್ಕೆ ಮಣಿಮಾಡಂಗಳಿಂದ ಆಶ್ರಯವೊಂದು ಬಾಗಿಲು ಬೇರೆ. ಅದಕ್ಕೆ ಹೋಗಿ ಆಡುವ ನಾಟಕಸಾಲೆ. ಪವನನೆಂಬ ಸೂಳೆ ಅಘಟದಿಂದ ಆಡುತ್ತಿರಲಾಗಿ, ಕಾಲುಜಾರಿ ನೆಲಕ್ಕೆ ಬಿದ್ದಳು. ಬಿದ್ದ ಘಾತಕ್ಕೆ ಯೋನಿ ಒಡೆಯಿತ್ತು, ಮೊಲೆ ಹರಿದು, ಕಿವಿ ಕಿತ್ತು, ಕಣ್ಣು ಹಿಂಚುಮುಂಚಾಯಿತ್ತು. ನೋಡುವ ಅಣ್ಣಗಳ ಬಯಕೆ ಹರಿಯಿತ್ತು. ಯೋನಿ ಕಿತ್ತಲ್ಲಿ ಕೂಟಕ್ಕೆ ಸುಖವಿಲ್ಲ, ನೋಟಕ್ಕೆ ಬೆಂಬಳಿಯಿಲ್ಲ. ಪವನನ ಅಘಟ ಹೋಯಿತ್ತು, ಕಾಲನ ಕಮಟಕ್ಕೆ. ನೀ ಅಲೇಖನಾದ ಶೂನ್ಯ, ಇವರಾಟದ ಬೆಂಬಳಿಯ ಬಿಡಿಸು, ಕಲ್ಲಿನೊಳಗಿಂದ ಇತ್ತ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ಓಂ ಜಯ ಪರಮೇಶ್ವರಂ ಪರಮಾತ್ಮಂ ಈಶ್ವರನುರ್ವಿಪರ್ವಿ ಅಡಗಿಕೊಂಡಿಪ್ಪನು. ಒಬ್ರ್ಬಣಿಗೆಯಾಗಿ ಯೋಗಿಗಳ ಮನದ ಸಂಸಾರ ತೆಪ್ಪದೊಳಗೆ ಆನೀಗ ಅದ್ದು ಅಳಲುತಪ್ಪೆನಯ್ಯಾ, ಬೇಗ ಬಾರ ಬಾರಯ್ಯಾ ಬಾರಾ. ವಜ್ರಲೇಪದ ಬಿದ್ದಿದ್ದೇನೆ, ಬೇಗ ಬಂದೆತ್ತಯ್ಯಾ ಎತ್ತಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಶರಣೆಂದು ಪಾದವ ಹಿಡಿದಿಹೆನೆಂದಡೆ ಚರಣದ ನಿಲವು ಕಾಣಬಾರದು, ಕುರುಹುವಿಡಿದೆಹೆನೆಂದಡೆ ಕೈಗೆ ಸಿಲುಕದು, ಬೆರಸಿ ಹೊಕ್ಕೆಹೆನೆಂದಡೆ ಮುನ್ನವೆ ಅಸಾಧ್ಯ. ಅಕಟಕಟಾ, ಅಹಂಕಾರದಲ್ಲಿ ಕೆಟ್ಟೆನಲ್ಲಾ, ಗುರುವೆ, ಎನ್ನ ಪರಮಗುರುವೆ ಬಾರಯ್ಯಾ, ಅರಿಯದ ತರಳನ ಅವಗುಣವ ನೋಡುವರೆ ಕೂಡಲಸಂಗಮದೇವಾ
--------------
ಬಸವಣ್ಣ
ಇತ್ತ ಬಾರಯ್ಯಾ, ಇತ್ತ ಬಾರಯ್ಯಾ ಎಂದು ಭಕ್ತರೆಲ್ಲರೂ ಕೂರ್ತು ಹತ್ತಿರೆ ಕರೆವುತ್ತಿರಲು, ಮತ್ತೆ ಕೆಲಕ್ಕೆ ಸಾರ್ದು, ಶರಣೆಂದು ಹಸ್ತ ಬಾಯನೆ ಮುಚ್ಚಿ, ಕಿರಿದಾಗಿ ಭೃತ್ಯಾಚಾರವ ನುಡಿದು, ವಿನಯ ತದ್ಧ್ಯಾನವುಳ್ಳಡೆ ಎತ್ತಿಕೊಂಬನಯ್ಯಾ, ಕೂಡಲಸಂಗಮದೇವ ಪ್ರಮಥರ ಮುಂದೆ. 245
--------------
ಬಸವಣ್ಣ
ಅಯ್ಯಾ, ಬಾರಯ್ಯಾ ಬಾರಾ ಆನಂದದಾದಿಯಲ್ಲಿ ಅಯ್ಯಾ ಒಯ್ಯನೇ ಕೈಗೊಡಯ್ಯ. ಅಯ್ಯಾ ಕಂಗೆಟ್ಟ ಪಶುವಾದೆನು. ಎಲೆ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ನಾದ ಗುರುವಾದಲ್ಲಿ , ಬಿಂದು ಲಿಂಗವಾದಲ್ಲಿ, ಕಳೆ ಜಂಗಮವಾದಲ್ಲಿ, ಉತ್ಪತ್ಯಕ್ಕೆ ಹೊರಗು. ನಾದ ವಿಸರ್ಜನವಾದಲ್ಲಿ ಸ್ಥಿತಿಗೆ ಹೊರಗು. ಬಿಂದು ವಿಸರ್ಜನವಾದಲ್ಲಿ ಪ್ರಳಯಕ್ಕೆ ಹೊರಗು. ಸರ್ವಚೇತನಕ್ಕೆ ವಿಸರ್ಜನವಾದಲ್ಲಿ ಇಂತೀ ತ್ರಿವಿಧನಾಮ ನಷ್ಟ. ಅರಿದು ಅರುಹಿಸಿಕೊಂಬ ಉಭಯಲೇಪ ಏನೂ ಎನಲಿಲ್ಲ. ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ, ಇಲ್ಲಿಗೆ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮೊದಲಾದ ನೇಮ ನಿತ್ಯ ಕೃತ್ಯ ಸಕಲಸಮೂಹ ನಿತ್ಯನೇಮದ ಜಂಗಮಭಕ್ತರು ಗಣಂಗಳು ಮುಂತಾದ ಸಮೂಹಸಂಪದಕ್ಕೆ ನೈವೇದ್ಯಕ್ಕೆ ವೇಳೆಯೆಂದು ಹೇಳಿ ಬಾರಯ್ಯಾ, ಅಮಲೇಶ್ವರಲಿಂಗದ ಮನೆಯಲ್ಲಿ ಆದಿಹಿತೆಂದು.
--------------
ಆಯ್ದಕ್ಕಿ ಲಕ್ಕಮ್ಮ
ವಂಚನೆವಿರಹಿತ ಕಾಯ ಉಪಚಾರಕ್ಕತಿ ಸೌಖ್ಯವಯ್ಯಾ. ಚಂಚಲವಿಲ್ಲದ ಮನ ಅನುಕೂಲಗತಿ ರಮ್ಯವಯ್ಯಾ. ಭಿನ್ನಭ್ರಾಮಕವಳಿದ ಭಾವ ಸ್ನೇಹಸೌಖ್ಯಾನಂದವಯ್ಯಾ. ಈ ತ್ರಿವಿಧವಳಿದುಳಿದು ನಿಂದ ನಿಯತನಯ್ಯಾ ನಾನು ಗುರುನಿರಂಜನ ಚನ್ನಬಸವಲಿಂಗಕ್ಕೆ ಅಭಿನ್ನಭಾವಿ ನಾನು, ಬಾರಯ್ಯಾ ತಂದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗೈಯಗಲದ ಪಟ್ಟಣದೊಳಗೆ ಆಕಾಶದುದ್ದ ಎತ್ತು ತಪ್ಪಿತ್ತು. ಅರಸಹೋಗಿ ಹಲಬರು ಹೊಲಬುದಪ್ಪಿ, ತೊಳಲಿ ಬಳಲುತ್ತೈದಾರೆ. ಆರಿಗೆ ಮೊರೆಯಿಡುವೆ, ಅಗುಸಿಯನಿಕ್ಕುವೆ. ಜಲಗಾರನ ಕರೆಸಿ, ಜಲವ ತೊಳೆಯಿಸಿ ಅಘಟಿತ ಘಟಿತ ನಿಜಗುರು ಭೋಗೇಶ್ವರಾ, ಅರಸಿಕೊಂಡು ಬಾರಯ್ಯಾ.
--------------
ಭೋಗಣ್ಣ
ಐದಂಗದಂಗನೆಯಾನು ಬಾರಯ್ಯಾ. ಐದು ಕೆಳದಿಯರೆನಗೆ ನೋಡಯ್ಯಾ. ಹಿರಿಯ ಕಾಲದ ದೇವರ ವರವೆನಗಯ್ಯಾ. ಬೇಡಿದ್ದು ಮಾಡಿ ಮನೆ ತುಂಬಿಸುವ ಬಾರಯ್ಯಾ. ಕೈಗೂಡಿ ಕಾರ್ಯವ ಮಾಡಿ, ಮನಗೂಡಿ ಒಗತನ ಮಾಡಿ, ಪ್ರಾಣಗೂಡಿ ಇಚ್ಫೆಯನರಿದಿತ್ತು, ಪರಮಪದವಿಯೊಳೋಲಾಡುವ ಬಾರಯ್ಯಾ, ಗುರುನಿರಂಜನ ಚನ್ನಬಸವಲಿಂಗ ಮೆಚ್ಚುವಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಿರಿಯೊಳು ಮನದೊಳು ಗಿಡಗಿಡದತ್ತ ದೇವ, ಎನ್ನದೇವ, ಬಾರಯ್ಯಾ, ತೋರಯ್ಯಾ ನಿಮ್ಮ ಕರುಣವನೆಂದು, ನಾನು ಅರಸುತ್ತ ಅಳಲುತ್ತ ಕಾಣದೆ ಸುಯಿದು ಬಂದು ಕಂಡೆ. ಶರಣರ ಸಂಗದಿಂದ ಅರಸಿ ಹಿಡಿದಿಹೆನಿಂದು ನೀನಡಗುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಕಣ್ಣ ಕೋಪಕ್ಕೆ ಮುಂದರಿಯದೆ ನುಡಿದು, ಮನಮಚ್ಚಿ ಮರುಳಾದೆ ನೋಡವ್ವಾ ! ಕೇಳು, ಕೇಳವ್ವಾ ಕೆಳದಿ, ಸಖಿಯರಿಲ್ಲದೆ ಸುಖವ ಬಯಸಿದಡೆ ದೊರಕೊಂಬುದೆ ಹೇಳಾ. ಎನ್ನ ಮುನಿಸು ಎನ್ನಲ್ಲೆ ಅಡಗಿತ್ತು, ಇನ್ನು ಬಾರಯ್ಯಾ, ಕೂಡಲಸಂಗಯ್ಯಾ. 520
--------------
ಬಸವಣ್ಣ
ಲೀಲೆಗೆ ಹೊರಗಾದ ಲಿಂಗವೆ ಬಾರಯ್ಯಾ, ಎನ್ನ ಅಂಗದೊಳಗಾಗು. ಶ್ರುತ ದೃಷ್ಟ ಅನುಮಾನದಲ್ಲಿ ನೋಡುವವರಿಗೆಲ್ಲಕ್ಕೂ ಅತೀತವಾಗು. ಆಗೆಂಬುದಕ್ಕೆ ಮುನ್ನವೆ ಆ ಗುಂಡು ಕಾಯದ ಕರಸ್ಥಲದಲ್ಲಿ ನಿರ್ಭಾವವಾಗಿ, ಕಾಯವಡಗಿ, ಭಾವವೆಂಬ ಬಯಲಾಯಿತ್ತು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬುದಕ್ಕೆಮುನ್ನವೆ.
--------------
ಘಟ್ಟಿವಾಳಯ್ಯ
ತನ್ನ ಕಾರ್ಯಕ್ಕೆ ಹೋಗುತ್ತ ಅಡವಿಯಲಿ ಅಸ್ತಮಾನವಾಗೆ ಹಸಿದು ನಿಲಲಾರದೆ ಉಣಲಿಕ್ಕಿರವ್ವಾಯೆಂದು ಬೇಡಿದರೆ, ನೀನಾರಾತನಾರಾತನೆಂದರೆ ರೋಮರುಷ್ಟಿಯರತ್ಸಾತ್ರ? ನೋಡಯ್ಯ. ಇತ್ತ ಬಾರಯ್ಯಾ ಬಾರಯ್ಯಾ ಎಂದು ಕರೆದು ವೃಕ್ಷ ಭಿಕ್ಷವನಿಕ್ಕಿದುವು. ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನ ಶರಣರ ಹೆಸರು ಕಲ್ಪವೃಕ್ಷ ನೋಡಯ್ಯಾ.
--------------
ಸಿದ್ಧರಾಮೇಶ್ವರ
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು, ದೇವಾಂಗವನುಟ್ಟೆನೆಲೆ ಪುರುಷ ಬಾರಾ, ಪುರುಷ ರತ್ನವೆ ಬಾರಾ. ನಿನ್ನ ಬರವೆನ್ನ ಅಸುವಿನ ಬರವಾದುದೀಗ, ಬಾರಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ, ನೀನು ಬಂದಹನೆಂದು ಬಟ್ಟೆಯ ನೋಡಿ ಬಾಯಾರುತಿರ್ದೆನು.
--------------
ಅಕ್ಕಮಹಾದೇವಿ
ಇನ್ನಷ್ಟು ... -->