ಅಥವಾ

ಒಟ್ಟು 70 ಕಡೆಗಳಲ್ಲಿ , 33 ವಚನಕಾರರು , 64 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯ ಸದ್ಭಕ್ತರ ಸಂಭಾಷಣೆ ನುಡಿಗಡಣವೆಂಬುದು ನಿಚ್ಚಲೊಂದು ಉಪದೇಶ ಮಂತ್ರವ ಕಲಿತಂತೆ. ಬಚ್ಚಬರಿಯ ಭವಿಗಳ ಸಂಗದಲ್ಲಿದ್ದರೆ ಕಿಚ್ಚಿನೊಳಗೆ ಬಿದ್ದ ಕೀಡೆಯಂತಪ್ಪುದಯ್ಯ. ಸುಚಿತ್ತದಿಂದ ನಿಮ್ಮ ಸದ್ಭಕ್ತರ ಸಂಗದಲ್ಲಿರಿಸದಿರ್ದಡೆ ನಾನಿನ್ನೆತ್ತ ಸಾರುವೆನು ಹೇಳಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಮಾರ್ಜಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದ್ದಿತ್ತು. ಅದಕ್ಕೆ ಮಣಿಮಾಡಂಗಳಿಂದ ಆಶ್ರಯವೊಂದು ಬಾಗಿಲು ಬೇರೆ. ಅದಕ್ಕೆ ಹೋಗಿ ಆಡುವ ನಾಟಕಸಾಲೆ. ಪವನನೆಂಬ ಸೂಳೆ ಅಘಟದಿಂದ ಆಡುತ್ತಿರಲಾಗಿ, ಕಾಲುಜಾರಿ ನೆಲಕ್ಕೆ ಬಿದ್ದಳು. ಬಿದ್ದ ಘಾತಕ್ಕೆ ಯೋನಿ ಒಡೆಯಿತ್ತು, ಮೊಲೆ ಹರಿದು, ಕಿವಿ ಕಿತ್ತು, ಕಣ್ಣು ಹಿಂಚುಮುಂಚಾಯಿತ್ತು. ನೋಡುವ ಅಣ್ಣಗಳ ಬಯಕೆ ಹರಿಯಿತ್ತು. ಯೋನಿ ಕಿತ್ತಲ್ಲಿ ಕೂಟಕ್ಕೆ ಸುಖವಿಲ್ಲ, ನೋಟಕ್ಕೆ ಬೆಂಬಳಿಯಿಲ್ಲ. ಪವನನ ಅಘಟ ಹೋಯಿತ್ತು, ಕಾಲನ ಕಮಟಕ್ಕೆ. ನೀ ಅಲೇಖನಾದ ಶೂನ್ಯ, ಇವರಾಟದ ಬೆಂಬಳಿಯ ಬಿಡಿಸು, ಕಲ್ಲಿನೊಳಗಿಂದ ಇತ್ತ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ಮೊದಲಿಂದತ್ತಲರಿಯದೆ, ಕಡೆಯಿಂದ ಮೇಲೆ ಕಾಣದೆ, ಚದುರಿನ ಹದನ ಸದನ ಸಂಭ್ರಮಕ್ಕೆ ಒದಗಿ ಬಿದ್ದೊರಲಿದರು ಅಜ ವಿಷ್ಣು ಇಂದ್ರಾದಿ ಸಕಲ ಸಂದೋಹ. ಉಳಿದ ಉಚ್ಛಿಷ್ಟ ಬಚ್ಚಲದೊಳು ಬಿದ್ದ ಪ್ರಾಣಿಗಳಂತಿರಲಿ, ಮತ್ತೆ ಕೋಟಲೆಯ ಕಳೆದು ರಾಟಣವ ಹರಿದು, ನಿಜಬೇಟವರಿದು ನಿರ್ಮಲವನರ್ಪಿಸಿ, ನಿರಾವಯವ ಕೊಂಡಾಡುವ ನಿಜಪ್ರಸಾದಿಗಲ್ಲದೆ ಅಸಾಧ್ಯ ಕಾಣಾ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಡೆದು ಕಂಡವರೆಂದು ನುಡಿದು ಸಿಲುಕಿ ಬಿದ್ದು ಹೋಗುವ ಪಾತಕರು ಒಡೆಯನವಸರವನವರೆತ್ತ ಬಲ್ಲರೋ ! ಮಾಂಸಕ್ಕೆ ಬಿದ್ದ ಶುನಿಭಾವದಂತೆ ಕೊಡುಕೊಳ್ಳೆ ಬೆಳೆಯುಂಟು ಕಾಲನಲ್ಲಿ, ಅರಿದು ಮರೆದವರಂತಲ್ಲ ಕೊಡುಕೊಳ್ಳೆ ಬೆಳೆಯುಂಟು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಯವ ಬಿಟ್ಟು ಪ್ರಾಣಹೋದ ಮತ್ತೆ, ಆ ಕಾಯಕ್ಕೆ ಆ ಪ್ರಾಣ ಪುನರಪಿಯಾಗಿ ಒಪ್ಪುದೆ ? ಅಂಗವ ಬಿಟ್ಟು ಲಿಂಗ ಬಿದ್ದ ಮತ್ತೆ, ಮತ್ತಾ ಅಂಗಕ್ಕೆ ಲಿಂಗವುಂಟೆ ? ಲಯವೆಂದಿದ್ದಡೂ ತಪ್ಪದು. ಪ್ರಾಯಶ್ಚಿತವೆಂದು ಪ್ರಕಾರವ ಮಾಡಿ, ಶ್ವಾನನ ಕಾಲಿನಲ್ಲಿ ಸೋಮಪಾನವನೆರೆದು, ಪಾಯಸ ಶುದ್ಧವಾಯಿತ್ತೆಂದು ಕೊಂಬವನಂತೆ, ಈ ಗುಣವ ಕಾಬುದಕ್ಕೆ ಮೊದಲೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಪರುಷ ಲೋಹವ ಸೋಂಕಿದಲ್ಲಿ ಆ ಗುಣವಳಿದು ಹೇಮವಾಯಿತ್ತಲ್ಲದೆ, ಪುನರಪಿ ಶುದ್ಧಾತ್ಮವಾದುದಿಲ್ಲ. ಗುರು ಲಿಂಗವೆಂದು ಕೊಟ್ಟಡೆ ಅಂಗದಲ್ಲಿ ಬಂಧವಾಯಿತ್ತಲ್ಲದೆ, ಸರ್ವಾಂಗ ಆತ್ಮನಲ್ಲಿ ಲೀಯವಾದುದಿಲ್ಲ. ಇಂತಿದು ಕಾರಣದಲ್ಲಿ, ಕೆಂಡದ ಮೇಲೆ ಕಟ್ಟಿಗೆಯ ಹಾಕಿದಡೆ ಪೊತ್ತುವುದಲ್ಲದೆ, ನಂದಿದ ಪ್ರಕಾಶಕ್ಕೆ ಅರಳೆಯ ತಂದಿರಿಸಿದಡೆ ಹೊತ್ತಿದುದುಂಟೆ? ಇದು ಕಾರಣ, ಸಂಸಾರಪಾಶದಲ್ಲಿ ಬಿದ್ದ ಗುರು ಇಂತೀ ಗುರುಸ್ಥಲನಿರ್ವಾಹಸಂಪಾದನೆ, ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ
ಮುನಿಸ ಮುನಿದಡೆ ಶ್ರೀಗಂಧದ ಮುರಡಿನ ಹಾಂಗಿರಬೇಕವ್ವಾ. ತೆಗೆದಪ್ಪಿದಡೆ ಚಂದನ ಶೀತಾಳದ ಹಾಂಗಾಗಬೇಕವ್ವಾ. ಹೋಗುವಲ್ಲಿ ಮೈಯೆಲ್ಲಾ ಕೈಯಾಗಿ ಹೆಣಗುತ್ತಿರಬೇಕವ್ವಾ. ಮಹಾಲಿಂಗ ಗಜೇಶ್ವರನ ನೆರೆವ ಭರದಿಂದ ನೊಂದಂಕದ ಮೇಲೆ ಬಿದ್ದ ಹಾಂಗಿರಬೇಕವ್ವಾ.
--------------
ಗಜೇಶ ಮಸಣಯ್ಯ
ಏರಿಯಕೆಳಗೆ ಬಿದ್ದ ನೀರು ಪೂರ್ವದ ತಟಾಕಕ್ಕೆ ಏರಬಲ್ಲುದೆ ? ವ್ರತಾಚಾರವ ಮೀರಿ ಕೆಟ್ಟ ಅನಾಚಾರಿ ಸದ್ಭಕ್ತರ ಕೂಡಬಲ್ಲನೆ ? ದೇವಾಲಯದಲ್ಲಿ ಸತ್ತಡೆ ಸಂಪ್ರೋಕ್ಷಣವಲ್ಲದೆ ದೇವರು ಸತ್ತಲ್ಲಿ ಉಂಟೆ ಸಂಪ್ರೋಕ್ಷಣ ? ಅಂಗದಲ್ಲಿ ಮರವೆಗೆ ಹಿಂಗುವ ಠಾವಲ್ಲದೆ, ಮನವರಿದು ತಾಕು ಸೋಂಕಿಗೆ ಹೆದರದೆ ಕೂಡಿದ ದುರ್ಗಣಕ್ಕುಂಟೆ ಪ್ರಾಯಶ್ಚಿತ್ತ ? ಇಂತಿವ ಕಂಡಲ್ಲಿ ಗುರುವಾದಡೂ ಬಿಡಬೇಕು, ಲಿಂಗವಾದಡೂ ಬಿಡಬೇಕು, ಜಂಗಮವಾದಡೂ ಬಿಡಬೇಕು ; ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ಬಿಡಬೇಕು.
--------------
ಅಕ್ಕಮ್ಮ
ನೆರೆ ನಂಬಿ-ಕರೆದಡೆ ನರಿ ಕುದುರೆಯಾಗಿ ಹರಿವೆ? ಜಗವೆಲ್ಲಾ ಅರಿಯಲು ತೊರೆಯೊಳಗೆ ಬಿದ್ದ ಲಿಂಗ ಕರೆದಡೆ ಬಂದುದು ಕರಸ್ಥಲಕ್ಕೆ. ನಂಬದೆ ಕರೆದವರ ಹಂಬಲನೊಲ್ಲನೆಮ್ಮ ರಾಮನಾಥ.
--------------
ಜೇಡರ ದಾಸಿಮಯ್ಯ
ಅಯ್ಯಾ, ನಿನ್ನ ಕೂಟದ ಸುಖದಲ್ಲಿ ನೀ ನಾನೆಂಬ ಸಂದಳಿದೆ ಅಯ್ಯಾ. ಮೇಲೆ ಬಿದ್ದ ಮಸಿಯನ್ನು ಅರಿಯದೆ ಕೂಟದಲ್ಲಿ ತಾಮಸಿಯಾದೆನಯ್ಯಾ. ಕಾರುಣ್ಯಾಕರನೆ, ಕಪಿಲಸಿದ್ಧಮಲ್ಲಿನಾಥಯ್ಯಾ, ನಿರ್ನಾಮವಾಗಿ ನಿತ್ಯವೆಯ್ದಿದೆ ತಂದೆ
--------------
ಸಿದ್ಧರಾಮೇಶ್ವರ
ಪೂರ್ವಕ್ಕೆ ತಾಳಾಗಿ ಉತ್ತರಕ್ಕೆ ತಲಹಾ ಬಿದ್ದ ಮರನ ತಂದು, ನಿಬದ್ಧಿಯ ಕಾರುಕನ ಕೈಯಲ್ಲಿ ಸುಬದ್ಧಿಸಿ, ಶುದ್ಧೈಸಿ ಅನಾದಿಯೆಂಬ ಹುಗಿಲುದೆಗೆದು, ಆದಿಯೆಂಬ ಈಯವನಿಕ್ಕಿ, ಇಷ್ಟವೆಂಬ ವಿಶ್ವಾಸದ ಮೇಳಿಯಂ ಬೆಟ್ಟಿ, ಭಾವವೆಂಬ ಜಿಗುಳಿಯನಿಕ್ಕಿ, ಸದ್ಭಾವವೆಂಬ ಗುಳುವ ತೊಡಿಸಿ, ಸತ್ಕ್ರಿಯೆಯೆಂಬ ಕಣ್ಣಿಯಲ್ಲಿ ನೇಗಿಲ ತೊಡಚಿ, ಜ್ಞಾನಚಕ್ಷುವೆಂಬ ನೊಗದ ಉಭಯದ ಕೊನೆಯಲ್ಲಿ ಎಡಗೋಲಿನಲ್ಲಿ ಕಾರಿಯ ಹೂಡಿ, ಬಲಗೋಲಿನಲ್ಲಿ ಬೆಳ್ಳಿಯ ಹೂಡಿ, ಅಡಿ ಕೆತ್ತುವಂತೆ ಧಾಯೆಂದು ಹೊಡೆಯಲಾಗಿ, ಭೂಮಿಯೊಡಗೂಡಿ ಸವೆಯಿತ್ತು. ಬಿತ್ತವಟ್ಟಕ್ಕೆ ದಿಕ್ಕಿಲ್ಲ, ಕಾಮಬ್ಥೀಮ ಜೀವಧನದೊಡೆಯ ನೀನೆ ಬಲ್ಲೆ.
--------------
ಒಕ್ಕಲಿಗ ಮುದ್ದಣ್ಣ
ಭಕ್ತಿ ಸಮೇಳ ಎತ್ತಿದ ಹಳವಿಗೆ ಸುತ್ತಲೂ ಬೇವಿನ ದಂಡೆ ರಣರಂಗ ಹಾಸಿನ ಮೇಲೆ. ಸಮಕಳೆ ಸಮರತಿ ನೆರೆವ ಭರದಲ್ಲಿ. ಎಲೆ ಬಿದ್ದ ಮಸಿಯನರಿಯದಿದ್ದಳು. ರಣರಂಗ ಸಂಯೋಗ ವಿಯೋಗ ಬ್ರಹ್ಮಸಮಾದ್ಥಿ ಮಹಾಲಿಂಗ ಗಜೇಶ್ವರನೇಕೋಭಾವ.
--------------
ಗಜೇಶ ಮಸಣಯ್ಯ
ಒಡೆಯರು ದೇವರಿಗೆ ಕೊಟ್ಟಲ್ಲದೆ, ಕೊಳ್ಳೆನೆಂಬ ಮೃಡನ ಭಕ್ತರ ನೋಡಾ. ಒಡೆಯರಿಗೊಂದು ಪರಿ, ತನಗೊಂದು ಪರಿ ಮಾಡುವ ಸಡಗರವ ನೋಡಾ. ಒಡೆಯಂಗೆ ಭೆಟ್ಟಿ, ಮನೆಯೊಡಯಂಗೆ ತುಪ್ಪ ಕಟ್ಟು ಮೊಸರು ಮೃಷ್ಟಾನ್ನ. ಒಡೆಯರಿಗೆ ಕುರುಹ ತೋರಿ, ತಾ ಹಿರಿದಾಗಿ ಉಂಬ ಕಡುಗಲಿಯ ನೋಡಾ. ಇವರಡಿಯಲ್ಲಿ ಬಂದಡೆ, ಇವರನೊಡಗೂಡಿ ನುಡಿದೆನಾದಡೆ, ಜೇನಗಡಿಗೆಯಲ್ಲಿ ಬಿದ್ದ ಗುದಿಮಕ್ಷಿಕನಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಡುವಿಲ್ಲದ ಬಾಲೆಯು ಕಣ್ಣಿಲ್ಲದ ಅಂಧಕನ ಕೂಡಿಕೊಂಡು ನೀರಿಲ್ಲದ ಬಾವಿಗೆ ಹೋಗಿ ನೀರನೆ ಮೊಗೆದು ಕಣ್ಣಿಲ್ಲದ ಅಂಧಕ ಬಿದ್ದ, ನಡುವಿಲ್ಲದ ಬಾಲೆಯು ಅಡಗಿಪ್ಪಳಯ್ಯ. ಇದೇನು ವಿಚಿತ್ರವೆಂದು ಝೇಂಕಾರಪ್ರಭು ಬಂದು ವಿಚಾರಿಸಲು ಮಕ್ಕಳಿಲ್ಲದಾಕಿ ಬಂದು, ಕಣ್ಣು ಇಲ್ಲದ ಅಂಧಕನ ಕೂಡಿಕೊಂಡು, ನಡುವಿಲ್ಲದ ಬಾಲೆಯ ಕರೆದು ಅವರಿಬ್ಬರನು ಮಹಾಲಿಂಗಕ್ಕೆ ಒಪ್ಪಿಸುತಿರ್ದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಯ್ಯಾ, ಗುರುದ್ರವ್ಯ, ಗಣದ್ರವ್ಯ, ಭಕ್ತದ್ರವ್ಯ, ಚರದ್ರವ್ಯ, ಪರದ್ರವ್ಯ, ರಾಜದ್ರವ್ಯ, ತಂದೆ-ತಾಯಿ ಬಂಧು-ಬಳಗ ಭಾವ-ಮೈದುನ ನಂಟುತನದ ದ್ರವ್ಯ, ಕುಂತ ನಿಂತ ಸಹಾಸದ್ರವ್ಯ, ನೋಡಕೊಟ್ಟದ್ರವ್ಯ, ನೂರೊಂದುಕುಲ ಹದಿನೆಂಟು ಜಾತಿಯ ದ್ರವ್ಯ, ಬೀದಿ ಬಾಜಾರದಲ್ಲಿ ಬಿದ್ದ ದ್ರವ್ಯ, ಹಾದಿಪಥದಲ್ಲಿ ಬಿದ್ದ ದ್ರವ್ಯ, ಹಕ್ಕಿಪಕ್ಕಿ ತಂದಿಟ್ಟ ದ್ರವ್ಯ, ಮದುವೆ ಶುಭಶೋಭನದಾಸೋಹದ ದ್ರವ್ಯ ಮೊದಲಾಗಿ ಕಳ್ಳಕಾಕರ ಸಂಗದಿಂದ ಚೋರತನದಿಂದಪಹರಿಸಿ, ಜನ್ಮ ಜನ್ಮಾಂತರದಲ್ಲಿ ಭವಪಾತಕಕ್ಕೆ ಗುರಿಯಾಯಿತಯ್ಯ ಎನ್ನ ಪಾಣೇಂದ್ರಿಯವು. ಇಂಥ ಅಜ್ಞಾನದಿಂದ ತೊಳಲುವ ಜನ್ಮ ಜಡತ್ವವನಳಿದುಳಿದು ನಿಮ್ಮ ಸದ್ಭಕ್ತ ನಿಜಶರಣ ದೇವರದಾಸಿಮಯ್ಯನ ದಾಸಿಯ ಪಾದವನೊರಸಿ ಬಾಳುವಂತೆ ಮಾಡಯ್ಯ ಕರುಣಾಳಿ ಎನ್ನಾಧಾರಮೂರ್ತಿ ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಇನ್ನಷ್ಟು ... -->