ಅಥವಾ

ಒಟ್ಟು 42 ಕಡೆಗಳಲ್ಲಿ , 23 ವಚನಕಾರರು , 41 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಟ್ಟದ ತುದಿಯ ಮೇಲೆ ಮುಟ್ಟಿ ಕೂಗುವ ಕೋಗಿಲೆಯ ಕಂಡೆನಯ್ಯ. ಆ ಕೋಗಿಲೆಯ ಇರುವೆ ನುಂಗಿ, ಆ ಇರುವೆಯ ನಿರ್ವಯಲು ನುಂಗಿ, ಆ ನಿರ್ವಯಲ ತಾನು ತಾನೇ ನುಂಗಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ ? ಬೆಟ್ಟದ ಮೇಲಣ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು, ಎತ್ತಣಿಂದೆತ್ತ ಸಂಬಂಧವಯ್ಯಾ ? ಗುಹೇಶ್ವರಲಿಂಗಕ್ಕೆಯೂ ನಮಗೆಯೂ ಎತ್ತಣಿಂದೆತ್ತ ಸಂಬಂಧವಯ್ಯಾ.
--------------
ಅಲ್ಲಮಪ್ರಭುದೇವರು
ಹೂವಿನ ಮೇಲೊಂದು ಚಿಕ್ಕ ಬೆಟ್ಟ ಹುಟ್ಟಿ, ಬೆಕ್ಕಿನ ಮೇಲಾರು ಬೆಟ್ಟ ಹುಟ್ಟಿದವು. ಬೆಟ್ಟದ ಮೇಲಣವರು ಕಲ್ಲನಿರಿಸಿ ಆರೂ ಕಾಣರು ! ಒಂದು ಗಿರಿ ನೂರನಾಲ್ವತ್ತೆಂಟು ಲಕ್ಷ ಮುಖವು. ನಾನೊಂದು ಮುಖದಲಿ ಇದ್ದೇನೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬೆಟ್ಟದ ಲಿಂಗವ ಹಿರಿದುಮಾಡಿ, ತನ್ನ ಇಷ್ಟಲಿಂಗವ ಕಿರಿದುಮಾಡುವ ಮೂಳಹೊಲೆಯರಿರಾ, ಅಣುರೇಣುತೃಣಕಾಷ್ಠ ಮೊದಲಾದ ಬ್ರಹ್ಮಾಂಡ ಪರಿಪೂರ್ಣವಾದ ಮಹಾಲಿಂಗವೆ ಅಂಗಕ್ಕೆ ಗುರುವು ಎಂದು ಸಂಬಂದ್ಥಿಸಿ ಸರ್ವಸಂ[ಕು]ಲವ ತೋರಿದ ಬಳಿಕ, ಇಂತಪ್ಪ ಮೋಕ್ಷಕ್ಕೆ ಕಾರಣವಾದ ಲಿಂಗವನು ಅಡಿಮಾಡಿ ನಟ್ಟ ಕಲ್ಲಿಂಗೆ ಅಡ್ಡಬೀಳುವ ಹೊಲೆಯರಿಗೆ ಲಿಂಗ ಕಟ್ಟುವುದು ಕಿರಿದು, ಗೊಡ್ಡೆಮ್ಮೆಗೆ ಲಿಂಗವದು ಕರ ಲೇಸು. ಇಂಥ ಮೂಳ ಹೊಲೆಯರು ಶಿವಭಕ್ತರೆಂದು ನುಡಿವ ಭ್ರಷ್ಟರನು ಕತ್ತೆಯನೇರಿಸಿ ಕೆರಹಿನಟ್ಟೆಯಲಿ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯನೆಂಬ ನಿಜಶರಣನು.
--------------
ಅಂಬಿಗರ ಚೌಡಯ್ಯ
ಕಂಗಳಲ್ಲಿ ಕಾಂಬೆನೆಂದು ಕತ್ತಲೆಯ ಹೊಕ್ಕಡೆಂತಹುದಯ್ಯಾ ? ಬೆಟ್ಟದ ತುದಿಯ ಮೆಟ್ಟಲೆಂದು ಹಳ್ಳಕೊಳ್ಳಂಗಳಲ್ಲಿ ಇಳಿದಡೆಂತಹುದಯ್ಯಾ ? ನೀನಿಕ್ಕಿದ ಸಯದಾನವನೊಲ್ಲದೆ ಬೇರೆ ಬಯಸಿದೊಡೆಂತಹುದಯ್ಯಾ ? ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು ಕಿರುಕುಳಕ್ಕೆ ಸಂದಡೆಂತಹುದಯ್ಯಾ ? ಕತ್ತಲೆಯ ಹೊಕ್ಕಡೆಂತಹುದಯ್ಯಾ ?
--------------
ಅಕ್ಕಮಹಾದೇವಿ
ಬೆಟ್ಟದ ಮೇಲೊಂದು ದಳ್ಳುರಿ ನಿಮುರಿ ಬಳ್ಳಿವರಿದು ಆಕಾಶಕ್ಕಡರಿ ಜಗದೊಳ್ಪಸರಿಸಿ ಸಪ್ತಸಮುದ್ರಂಗಳ ನುಂಗಿತ್ತು, ಅಷ್ಟದಿಗುದಂತಿಗಳ ಸುಟ್ಟುರುಪಿತ್ತು, ಪಂಚವಕ್ತ್ರಂಗಳ ಮುಖಗೆಡಿಸಿತ್ತು, ನವಬ್ರಹ್ಮರ ಸುಳುಹನಾರಡಿಗೊಂಡಿತ್ತು, ಸಮ್ಯಜ್ಞಾನವಪ್ಪ ದಳ್ಳುರಿ ಸೌರಾಷ್ಟ್ರ ಸೋಮೇಶ್ವರನ ತೋರಿ ಭವಗೆಡಿಸಿತ್ತು.
--------------
ಆದಯ್ಯ
ಬೆಟ್ಟದ ತುದಿಯ ಮೇಲೆ ಘಟ್ಟಿಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ಒಬ್ಬ ಸತಿಯಳು ಕಷ್ಟಕರ್ಮವ ಹರಿದು ಬಟ್ಟಬಯಲಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸುಟ್ಟ ಬೂದಿಯೊಳಗೊಂದು ಸುಡದ ಬೂದಿಯ ಕಂಡೆ, ಆ ಸುಡದ ಬೂದಿಯ ಬೆಟ್ಟವ ಮಾಡಿದಾತನ ಗುಟ್ಟನಾರು ಕಂಡುದಿಲ್ಲ. ನಾನು ಆತನನರಿದು ಶರಣೆಂದು ಬದುಕಿದೆ. ಆ ಬೆಟ್ಟದ ಮೇಲೆ ಅನೇಕ ವಸ್ತುಗಳ ಕಂಡು ಚರಿಸುತ್ತಿದ್ದೇನೆ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅಚ್ಚಿನಲ್ಲಿ ಬೆಟ್ಟದ ರೂಹು ದೃಷ್ಟವಾಯಿತ್ತು. ಮನಮಚ್ಚಿ ಕೊಟ್ಟ ಲಿಂಗ, ಹೃತ್ಕಮಲದಲ್ಲಿ ಮುಟ್ಟಿದುದಿಲ್ಲ. ತಾ ದೃಷ್ಟಿತನಾದಲ್ಲದೆ ಇದಿರಿಂಗಿಷ್ಟವ ಕಟ್ಟಬಾರದು. ಕಟ್ಟಿಕೊಂಡು ಮತ್ತೆ ಗುರಿಯನೆಚ್ಚ ಕೈಯ [ಲಾ]ಹರಿಯಂತಿಬೇಕು. ರಣವ ಗೆಲಿದ ದ್ಥೀರನ ಉದಾರದಂತಿರಬೇಕು. ಹೀಂಗಲ್ಲದೆ ಗುರುಸಂಬಂಧವೆಲ್ಲ ಮಡಕೆಯ ಮರೆಯ ಕ್ಷೀರದಂತೆ ಕೈಗುಡಿತೆಗೆ ಬಂದುದಿಲ್ಲ, ಈ ಗುರುಸ್ಥಲವೆಂದಡಕವೇಕೆ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಬೆಟ್ಟದ ತುದಿಯ ಮೇಲೆ ಹುಟ್ಟಿ ಆಡುವ ಹಂಸನ ಕಂಡೆ ನೋಡಾ, ಅದಕೆ ತಲೆ ಒಂದು, ನಾಲಗೆ ಮೂರು, ಹಸ್ತವಾರು, ಮೂವತ್ತಾರು ಪಾದಂಗಳು, ಐವತ್ತೆರಡು ಎಸಳಿನ ಮನೆಯಲ್ಲಿ ಸುಳಿದಾಡುತಿಪ್ಪುದು ನೋಡಾ. ಆ ಸುಳುವಿನ ಭೇದವನರಿವ ಶರಣರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಟ್ಟದ ತುದಿಯ ಮೇಲೆ ಉರಿವ ಕಂಬವ ಕಂಡೆ ನೋಡಾ! ಆ ಕಂಬದ ಮೇಲೊಂದು ಕೋಗಿಲೆ ಕುಳಿತು ಕೂಗುತಿದೆ ನೋಡಾ! ಆ ಕೋಗಿಲೆಯ ಹಿಡಿದು ನಿಶ್ಚೈಸಬಲ್ಲ ಹಿರಿಯರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಟ್ಟದ ಮೇಲಣ ಗುಂಡು, ಬೆಟ್ಟವ ನುಂಗಿತ್ತು. ಸೃಷ್ಟಿಯ ಮೇಲಣ ಜಗ, ಪೃಥ್ವಿಯ ನುಂಗಿತ್ತು. ಹಸುವಿನ ಗರ್ಭದ ವತ್ಸ, ಹಸುವ ನುಂಗಿತ್ತು. ಹೆಸರಿಡುವುದಿನ್ನೇನೊ ? ಕಣ್ಣೊಳಗಣ ಎರಳೆ ಬಣ್ಣವ ನುಂಗಿದ ಮತ್ತೆ ಬಣ್ಣಿಸಿ ಪೂಜಿಸಿಕೊಂಬುದಿನ್ನೇನೊ ? ಕಣ್ಣಾವಗಾಲದ ಹೊಳೆಯಲ್ಲಿ ಮುಳುಗಿ ಚೆನ್ನುಗೆಟ್ಟಿರಲ್ಲಾ. ಅಣ್ಣಗಳೆಲ್ಲರೂ ಮುಕ್ಕಣ್ಣನ ಪೂಜಿಸಿ ಮೂರುಬಟ್ಟೆಯ ಸುತ್ತಿ, ಊರ ಹೊಕ್ಕು ಆರೈದಿರಯ್ಯಾ, ನೀವಾರಾಧಿಸುವ ಲಿಂಗವ. ಆ ಲಿಂಗದಲ್ಲಿ ಲೀಯವಾದರೆ ಸಂಗಕ್ಕೆ ಒಳಗಾದರು. ನಮ್ಮ ನಿಸ್ಸಂಗಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ದಿಕ್ಕುಗೆಟ್ಟೆನಯ್ಯಾ.
--------------
ಮೋಳಿಗೆ ಮಾರಯ್ಯ
ಕಟ್ಟಿದ ಲಿಂಗವ ಕಿರಿದು ಮಾಡಿ, ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ! ಇಂತಪ್ಪ ಲೊಟ್ಟಿಮೂಳರ ಕಂಡರೆ ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕೋಡಗದ ತಲೆಯ ಚಂಡಿನ ಮೇಲೆ ಮೂರುಕವಲಿನ ಸೂಜೆ. ಮೂರರ ಮನೆಯಲ್ಲಿ ಐದು ಬೆಟ್ಟವಡಿಗಿದವು. ಬೆಟ್ಟದ ತುತ್ತತುದಿಯಲ್ಲಿ ಮಟ್ಟಿಲ್ಲದ ಬಾವಿ. ಬಾವಿಯೊಳಗೊಂದು ಹಾವು ಹುಟ್ಟಿತ್ತು. ಆ ಹಾವಿನ ಮೈಯೆಲ್ಲವೊ ಬಾಯಿ. ಬಾಲದಲ್ಲಿ ಹೆಡೆ ಹುಟ್ಟಿ, ಬಾಯಲ್ಲಿ ಬಾಲ ಹುಟ್ಟಿ, ಹರಿವುದಕ್ಕೆ ಹಾದಿಯಿಲ್ಲದೆ, ಕೊಂಬುದಕ್ಕೆ ಆಹಾರವಿಲ್ಲದೆ ಹೊಂದಿತ್ತು. ಆ ಹಾವು ಬಾವಿಯ ಬಸುರಿನಲ್ಲಿ ಬಾವಿಯ ಬಸುರೊಡೆದು ಹಾವಿನ ಇಲು ನುಂಗಿ ಬೆಟ್ಟ ಚಿಪ್ಪು ಬೇರಾಗಿ ಸೂಜಿಯ ಮೊನೆ ಮುರಿದು ಕೋಡಗದ ಚಂಡು ಮಂಡೆಯ ಬಿಟ್ಟು ಹಂಗು ಹರಿಯಿತ್ತು. ಆತ್ಮನೆಂಬ ಲಿಂಗ ನಾಮ ರೂಪಿಲ್ಲ ನಾರಾಯಣಪ್ರಿಯ ರಾಮನಾಥನಲ್ಲಿ ಶಬ್ದಮುಗ್ಧನಾದ ಶರಣಂಗೆ.
--------------
ಗುಪ್ತ ಮಂಚಣ್ಣ
ಎರಡು ಬೆಟ್ಟದ ನಡುವೆ ಹಳ್ಳವ ಮಿಳಿಯ ಮಾಡಿ, ಬಾವಿಯನುತ್ತೆನೆಂಬ ಮರುಳತನವ ನೋಡಾ ! ತೊರೆಯ ಮೇಲೆ ಮಾರುಗೋಲನಿಕ್ಕಿ ಹುಟ್ಟ ಮುರಿದು ಹೋದ ಅಂಬಿಗನ ನೋಡಾ. ಮರೆದು ಮಲಗಿದ ಬೆಕ್ಕಿನ ಕಿವಿಯ ಇಲಿ ಮೇದಂತೆ ಗುಹೇಶ್ವರನೆಂಬ ಲಿಂಗ ನಿರಾಳದ ನಿಲವು.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->