ಅಥವಾ

ಒಟ್ಟು 24 ಕಡೆಗಳಲ್ಲಿ , 9 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲಲ್ಲಿ ಕಣ್ಣು ಮೂಡಿತ್ತ ಕಂಡೆ. ನೆತ್ತಿಯ ಕುಂಭವನೊಡೆದು ಸುಧೆ ಸರ್ವಾಂಗದಲ್ಲಿ ತುಂಬಿತ್ತ ಕಂಡೆ. ಕತ್ತಲೆ ಬೆಳಗಾಯಿತ್ತ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶಿಶುವಿನ ಗರ್ಭದೊಳಗೆ ಈರೇಳು ಭುವನಂಗಳಿರ್ಪವು. ಆ ಭುವನಂಗಳನೆಲ್ಲ ಒಂದು ನಕ್ರ ನುಂಗಿರ್ಪುದು. ಆ ನಕ್ರನ ತಲೆಯೊಳಗೆ ಒಂದು ಬೆಲೆಯಿಲ್ಲದ ರತ್ನ ಇರ್ಪುದು. ಆ ರತ್ನಕ್ಕೆ ಇಬ್ಬರು ಹೆಣಗಾಡುತ್ತಿರ್ಪರು ನೋಡಾ! ಹೆಳವ ನಡದ, ಅಂಧಕ ಕಂಡ, ಕೈಯಿಲ್ಲದವ ಪಿಡಿದುದ ಕಂಡು ನಾ ಬೆರಗಾದೆನಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತನುವಿನ ಕೊನೆಯಲ್ಲಿ ನೇತ್ರದ ಅನುವ ಕಂಡೆನಯ್ಯಾ ಆ ನೇತ್ರದ ಕೊನೆಯಲ್ಲಿ ಮನದ ಸುಳುಹು ಕಂಡೆನಯ್ಯಾ. ಆ ಮನದ ಕೊನೆಯಲ್ಲಿ ಘನಮಹಾಶಿವನ ಕಂಡೆನಯ್ಯಾ. ಆ ಶಿವನೊಳಗೆ ಅನಂತಕೋಟಿಬ್ರಹ್ಮಾಂಡಗಳಡಗಿರ್ಪುದ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹರಿಯಾಣದೊಳಗಣ ಓಗರವ ಹರಿಯವರು ಹರಿಹರಿದುಂಡರಯ್ಯಾ. ಪರ ವಧು ಬಂದು ಬೆರಸಲು ಆ ಹರಿ ಪರಹರಿಯಾದ. ಉಣಬಂದ ಹರಿಯ ಶಿರವ ಮೆಟ್ಟಿ ನಿಂದಳು ನಿಮ್ಮ ಹೆಣ್ಣು. ಇದ ಕಂಡು ನಾ ಬೆರಗಾದೆನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ
--------------
ಸಿದ್ಧರಾಮೇಶ್ವರ
ಅಂಜನಗಿರಿಯಲ್ಲಿ ಅರ್ಕನ ಉದಯವ ಕಂಡೆ. ಸಂಜೆಯ ಮಬ್ಬು ಅಂಜಿ ಓಡಿದುದ ಕಂಡೆ. ಕುಂಜರನ ಮರಿಗಳ ಕೋಳಿ ನುಂಗಿದುದ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ಹುಟ್ಟಿದ ಶಿಶುವಿಗೆ ಮೊಲೆ ಮುಡಿ ಜವ್ವನ ಬಂದು, ಬಟ್ಟೆಯೊಳು ನಿಂದು ಆಕಾರವಿಡಿದು ಬಂದ ನಲ್ಲನ ಕೈಯ ಒತ್ತೆಯ ಹಿಡಿವುದ ಕಂಡು ಬೆರಗಾದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಶ್ಚಿಮದ ಗಿರಿಯಲ್ಲಿ ಚಿತ್‍ಸೂರ್ಯನುದಯವಾದುದ ಕಂಡೆ. ಸುತ್ತಿ ಮುತ್ತಿದ ಕತ್ತಲೆಯೆಲ್ಲ ಅತ್ತಿತ್ತ ಹರಿದು ಹೋದುದ ಕಂಡೆ. ಹತ್ತು ದಿಕ್ಕಿನ ಒಳಹೊರಗೆಲ್ಲ ಬೆಳಗಿನ ಮೊತ್ತವೇ ತುಂಬಿದುದ ಕಂಡೆ. ಮುಚ್ಚಿದ ಕಮಲಂಗಳೆಲ್ಲ ಬಿಚ್ಚಿ ಅರಳಾಗಿ ಹೊಚ್ಚ ಹೊಸ ಗಂಧ ದೆಸೆದೆಸೆಗೆ ಎಸೆದುದ ಕಂಡೆ. ಇಂತಿದರ ಕುಶಲವ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನೀರಬೊಂಬೆಗೆ ನಿರಾಳದ ಗೆಜ್ಜೆಯ ಕಟ್ಟಿ, ಬಯಲಬೊಂಬೆಯ ಕೈಯಲ್ಲಿ ಕೊಟ್ಟು ಮುದ್ದಾಡಿಸುತ್ತಿರ್ದನಯ್ಯಾ. ಕರ್ಪೂರದ ಪುತ್ಥಳಿಗೆ ಅಗ್ನಿಯ ಸಿಂಹಾಸನವನಿಕ್ಕಿ, ಅಗ್ನಿ ಕರಗಿ ಕರ್ಪೂರ ಉಳಿದುದಕ್ಕೆ ಬೆರಗಾದೆನಯ್ಯಾ, ಎನ್ನ ಅಜಗಣ್ಣನ ಯೋಗಕ್ಕೆ.
--------------
ಮುಕ್ತಾಯಕ್ಕ
ಊರ ಬೆಂಕಿ ಊರ ಸುಟ್ಟಿತ್ತ ಕಂಡೆ. ಸುಟ್ಟ ಊರೊಳಗಣ ಅಗ್ನಿ ಊರ ಮುಂದಿನ ಶಿಶುವ ನುಂಗಿತ್ತ ಕಂಡೆ. ಆ ಶಿಶು ಊರ ಬೆಂಕಿಯ ನುಂಗಿ, ಸೂಳಿಯ ಸಂಗವ ಮಾಡಿ, ಆ ಶಿಶುವು ಸತ್ತಿತ್ತ ಕಂಡು ಬೆರಗಾದೆನಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ದೂರದಿಂದ ಬಂದ ಜಂಗಮವನಯ್ಯಗಳೆಂದು, ಸಾರಿದ್ದ ಜಂಗಮವ ಪರಿಚಾರಕರೆಂಬ ಕೇಡಿಂಗೆ ಬೆರಗಾದೆನಯ್ಯಾ. ಸಾರಿದ್ದವರು, ದೂರದವರೆಂದು ಬೇರೆ ಮಾಡಿ ಕಂಡಡೆ, ಕೂಡಲಸಂಗಮದೇವ ಸಿಂಗಾರದ ಮೂಗ ಕೊಯ್ಯದೆ ಮಾಬನೆ 415
--------------
ಬಸವಣ್ಣ
ಅಯ್ಯಾ, ಆನಂದದಾನಂದದಲ್ಲಿ ಎಂದಿಪ್ಪೆನೋ. ಆ ಅಕ್ಷರದೊಳಗೆ ಅಯ್ಯಾ, ನಾನು ಭೇದಾ ಭೇದವೆಂದರಿದೆನಯ್ಯಾ. ಹೋದ ಹೋದ ಬಟ್ಟೆಯ ನೋಡಿ ನೋಡಿ ಬೆರಗಾದೆನಯ್ಯಾ. ವಿಚಿತ್ರ ಮೂಲ ಕಪಿಲಸಿದ್ಧಮಲ್ಲಿಕಾರ್ಜುನ, ಎನ್ನ ಚಿತ್ತ ವಿಚಿತ್ತವ ಮಾಡರು ತಂದೆ.
--------------
ಸಿದ್ಧರಾಮೇಶ್ವರ
ನೆನಹು ನೆನೆವ ಮನದಲ್ಲಿಲ್ಲ, ತನುವಿನಲ್ಲಿ ಆಸೆಯಿಲ್ಲ. ನೆನೆವ ಮನವನತಿಗಳೆದ ಘನಕ್ಕೆ ಘನವೆಂತೆಂಬೆ ? ತನ್ನಲ್ಲಿ ತಾನಾಯಿತ್ತು, ಭಿನ್ನವಿಲ್ಲದೆ ನಿಂದ ನಿಜವು. ಅನಾಯಾಸದ ಅನುವ ಕಂಡು ಆನು ಬೆರಗಾದೆನಯ್ಯಾ. ಎಂತಿದ್ದುದು ಅಂತೆ ಅದೆ ಚಿಂತೆಯಿಲ್ಲದನುಭಾವ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅರಸನ ಹೆಂಡತಿಯ ತಂದು ಹೊಲೆಯಗೆ ಮದುವೆಯ ಮಾಡಿದೆ. ಹೊಲೆಯನ ಹೆಂಡತಿಯ ತಂದು ಅರಸಗೆ ಮದುವೆಯ ಮಾಡಿದೆ. ಅಣ್ಣನ ಹೆಂಡತಿಯ ತಂದು ತಮ್ಮಗೆ ಮದುವೆಯ ಮಾಡಿದೆ. ತಮ್ಮನ ಹೆಂಡತಿಯ ತಂದು ಅಣ್ಣಗೆ ಮದುವೆಯ ಮಾಡಿದೆ. ಒಡೆಯನ ಹೆಂಡತಿಯ ತಂದು ಆಳಿಗೆ ಮದುವೆಯ ಮಾಡಿದೆ. ಆಳಿನ ಹೆಂಡತಿಯ ತಂದು ಒಡೆಯಗೆ ಮದುವೆಯ ಮಾಡಿದೆ. ಇಂತಿವರ ಮದುವೆಯ ಸಂಭ್ರಮದೊಳಗೆ ಕಂಬ ಸುಟ್ಟು ಹಂದರ ಉಳಿಯಿತ್ತು. ಭೂಮಿ ಸುಟ್ಟು ಹಸಿಜಗುಲಿ ಉಳಿಯಿತ್ತು. ಐದುಮಂದಿ ಐದಗಿತ್ತೇರು ತಮ್ಮ ಶಾಲಿಯ ಕಳೆದು, ಕುಪ್ಪಸ ತೆಗೆದು, ಹೆಂಡಗಾರನ ಬೆನ್ನು ಹತ್ತಿ ಹೋದುದು ಕಂಡು ಬೆರಗಾದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗಾಳಿಯ ನಾರಿನಲ್ಲಿ ಬೆಟ್ಟ ಕಟ್ಟುವಡೆಯಿತ್ತ ಕಂಡೆ. ಆ ಬೆಟ್ಟವೊಂದು ಮಾನದೊಳಗಡಕವಾದುದ ಕಂಡೆ. ಆ ಮಾನದೊಳಗೆ ಎಂಟು ಮಂದಿ ಹಿರಿಯರ ಕಂಡೆ. ಅವರ ಗುಹ್ಯದಲ್ಲಿ ನರರು ಸುರರು ನೆರೆದಿಪ್ಪುದ ಕಂಡು, ಬೆರಗಾದೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ತಾಗು ನಿರೋಧದ, ಆಗುಹೋಗನರಿಯದ ಶರಣನ ಚರಿತ್ರವ ನೋಡಿ ನೋಡಿ ಬೆರಗಾದೆನಯ್ಯಾ, ಕೂಡಲಸಂಗಮದೇವಯ್ಯನಲ್ಲಿ ತಾನು ಸುಯಿಧಾನಿಯಾ[ಗೆ]
--------------
ಬಸವಣ್ಣ
ಇನ್ನಷ್ಟು ... -->