ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಿಂಡ ಬ್ರಹ್ಮಾಂಡವ ಒಂದು ಮಾಡಿ ನಿರ್ಮಿಸಿದ ಶಿವನ ಕಂಡವರುಂಟೇ ? ಹೇಳಿರೆ ! ಕಂಡವರುಂಟು, ಅದು ಹೇಗೆಂದಡೆ : ಶಿಲೆಯೊಳಗಣ ಪಾವಕನಂತೆ, ತಿಲದೊಳಗಣ ತೈಲದಂತೆ, ಬೀಜದೊಳಗಣ ವೃಕ್ಷದಂತೆ, ಉದಕದೊಳಗಣ ಪ್ರತಿಬಿಂಬದಂತೆ, ಹಸುವಿನೊಳಗಣ ಘೃತದಂತೆ ಇದ್ದಿತ್ತು ಆ ಪರಬ್ರಹ್ಮದ ನಿಲವು. ಇದ್ದರೇನು, ಕಾಣಬಹುದೇ ? ಕಾಣಬಾರದು. ಕಾಣುವ ಬಗೆ ಹೇಗೆಂದರೆ ಹೇಳುವೆ ಕೇಳಿರಣ್ಣಾ : ಶಿಲೆಯೊಳಗಣ ಅಗ್ನಿ ಚಕಿಮಕಿ ದೂದಿವಿಡಿದು ಕ್ರೀಯಿಟ್ಟು ಮಾಡಿದಲ್ಲದೆ ಪ್ರಜ್ವಲಿಸದು. ತಿಲದೊಳಗಣ ತೈಲ ಯಂತ್ರದಲ್ಲಿ ಕ್ರೀಡಿಸಿದಲ್ಲದೆ ತೋರದು. ಬೀಜದೊಳಗಣ ವೃಕ್ಷ ಮೇಘದ ದೆಸೆಯಲ್ಲಿ ಪಸಿಯಕ್ಷೇತ್ರಕ್ಕೆ ಬಿದ್ದಲ್ಲದೆ ಮೊಳೆದೋರದು. ಪಶುವಿನೊಳಗಣ ಘೃತ ಪಶುವ ಬೋಧಿಸಿ ಕ್ರೀಯಿಟ್ಟು ಅಮೃತ ಕರೆದರೆ ಕೊಡುವುದು. ಮೇಘದ ದೆಸೆಯಲಿ ಉದಕ ಬಂದು ಎಲೆಯ ತುಂಬಿದರೆ ಸೂರ್ಯನ ಪ್ರತಿಬಿಂಬವದರೊಳು ತೋರುವಂತೆ, ನಾದ ಬಿಂದು ಕಳೆಯ ದೆಸೆಯಲಿ ಪಿಂಡವಾಯಿತ್ತು. ಆ ಪಿಂಡದೊಳಗಣ ಜೀವ ಶಿವಚೈತನ್ಯ. ಅದು ಹೇಗೆಂದಡೆ, ಅದಕ್ಕೆ ಸಾಕ್ಷಿ : ``ಶಿವೋ ಜೀವಃ ಜೀವಂ ಶಿವಃ ಸ ಜೀವಃ ಕೇವಲಂ ಶಿವಃ'' ಎಂದುದಾಗಿ, ಪಿಂಡ ಬ್ರಹ್ಮಾಂಡದೊಳಗಣ ಶಿವನಿಲವು ಇಂತಿದ್ದಿತ್ತು. ಇದ್ದರೇನು ? ಲೋಕದ ಜಡದೇಹಿಗಳಿಗೆ ಕಾಣಬಾರದು. ಆದಿಯಲ್ಲಿ ಶಿವಬೀಜವಾದ ಮಹಿಮರಿಗೆ ತೋರುವುದು. ಉಳಿದವರಿಗೆ ಸಾಧ್ಯವೇ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಒರಳೊನಕಿಯ ನಡುವಿನ ಸಿಹಿಧಾನ್ಯದಂತೆ, ಖಣಿ ಗಾಣದ ನಡುವಿನ ತಿಲದಂತೆ, ಅಗ್ನಿ ಕುಂಭದ ನಡುವಿನ ಜೀವಪಾಕದಂತೆ, ತ್ರಿದೋಷದಿಂದಲೆನ್ನ ಕಾಡುತಿದೆ ಮಾಯೆ. ಅದುಯೆಂತೆಂದಡೆ : ಜನನ ಮರಣವೆಂಬ ಯಂತ್ರದಲ್ಲಿ ತಿರುವಿ, ಹೊನ್ನು ಹೆಣ್ಣು ಮಣ್ಣೆಂಬ ಒರಳೊನಕಿಯ ನಡುವೆ ಹಾಕಿ ಕುಟ್ಟಿ, ತಾಪತ್ರಯವೆಂಬ ಅಗ್ನಿ ಕುಂಭದೊಳಿಟ್ಟೆನ್ನ ಸುಟ್ಟು ಸೂರೆಮಾಡಿ ಕಾಡುತಿರ್ದುದೀ ಮಾಯೆ, ಕಳೆವರೆನ್ನಳವಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
-->