ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾರಕಾಕೃತಿ, ನಕಾರಪ್ರಣಮ, ಆಧಾರಚಕ್ರ, ಸದ್‍ಭಕ್ತನೆ ಅಂಗ, ಸುಚಿತ್ತವೆ ಹಸ್ತ, ಆಚಾರಲಿಂಗ, ಘ್ರಾಣವೆಂಬ ಮುಖ, ಕ್ರಿಯಾಶಕ್ತಿ, ಶ್ರದ್ಧಾಭಕ್ತಿ, ಸುಗಂಧಪದಾರ್ಥ, ಗಂಧಪ್ರಸಾದ, ನಿವೃತ್ತಿಕಲೆ, ಕರ್ಮಸಾದಾಖ್ಯ, ಸತ್ತುವೆಂಬ ಲಕ್ಷಣ, ಪರವೆಂಬ ಸಂಜ್ಞೆ, ಋಗ್ವೇದ- ಇಂತಿವೆಲ್ಲವು ಇಷ್ಟಲಿಂಗದ ವೃತ್ತದಲ್ಲಿ ಸಂಬಂಧವು. ದಂಡಕಾಕೃತಿ, ಮಕಾರಪ್ರಣಮ, ಸಾಧಿಷಾ*ನಚಕ್ರ, ಮಹೇಶ್ವರನೆ ಅಂಗ, ಸುಬುದ್ಧಿಯೆ ಹಸ್ತ, ಗುರುಲಿಂಗ, ಜಿಹ್ವೆಯೆಂಬ ಮುಖ, ಜ್ಞಾನಶಕ್ತಿ, ನೈಷಿ*ಕಭಕ್ತಿ , ಸುರಸಪದಾರ್ಥ, ರಸಪ್ರಸಾದ, ಪ್ರತಿಷಾ*ಕಲೆ, ಕರ್ತೃಸಾದಾಖ್ಯ, ಚಿತ್ತುವೆಂಬ ಲಕ್ಷಣ, ಗೂಢವೆಂಬ ಸಂಜ್ಞೆ, ಯುಜುರ್ವೇದ ಇಂತಿವೆಲ್ಲವು ಇಷ್ಟಲಿಂಗದ ಕಟಿಯಲ್ಲಿ ಸಂಬಂಧವು. ಕುಂಡಲಾಕೃತಿ, ಶಿಕಾರಪ್ರಣಮ, ಮಣಿಪೂರಕಚಕ್ರ, ಪ್ರಸಾದಿಯೆ ಅಂಗ, ನಿರಹಂಕಾರವೆ ಹಸ್ತ , ಶಿವಲಿಂಗನೇತ್ರವೆಂಬ ಮುಖ, ಇಚ್ಛಾಶಕ್ತಿ , ಸಾವಧಾನಭಕ್ತಿ , ಸುರೂಪುಪದಾರ್ಥ, ರೂಪುಪ್ರಸಾದ, ವಿದ್ಯಾಕಲೆ, ಮೂರ್ತಿಸಾದಾಖ್ಯ, ಆನಂದವೆಂಬ ಲಕ್ಷಣ, ಶರೀರಸ್ಥವೆಂಬ ಸಂಜ್ಞೆ, ಸಾಮವೇದ- ಇಂತಿವೆಲ್ಲ ಇಷ್ಟಲಿಂಗದ ಗೋಳಕದಲ್ಲಿ ಸಂಬಂಧವು. ಅರ್ಧಚಂದ್ರಾಕೃತಿ, ವಕಾರಪ್ರಣಮ, ಅನಾಹತ ಚಕ್ರ, ಪ್ರಾಣಲಿಂಗಿಯೆ ಅಂಗ, ಸುಮನವೆ ಹಸ್ತ , ಜಂಗಮಲಿಂಗ, ತ್ವಗೀಂದ್ರಿಯವೆಂಬ ಮುಖ, ಆದಿಶಕ್ತಿ , ಅನುಭಾವಭಕ್ತಿ , ಸುಸ್ಪರ್ಶನಪದಾರ್ಥ, ಸ್ಪರ್ಶನಪ್ರಸಾದ, ಶಾಂತಿಕಲೆ, ಅಮೂರ್ತಿಸಾದಾಖ್ಯ, ನಿತ್ಯವೆಂಬ ಲಕ್ಷಣ, ಲಿಂಗಕ್ಷೇತ್ರಸಂಜ್ಞೆ, ಅಥರ್ವಣವೇದ- ಇಂತಿವೆಲ್ಲ ಇಷ್ಟಲಿಂಗದ ಗೋಮುಖದಲ್ಲಿ ಸಂಬಂಧವು. ದರ್ಪಣಾಕೃತಿ, ಯಕಾರಪ್ರಣಮ, ವಿಶುದ್ಧಿ ಚಕ್ರ, ಶರಣನೆ ಅಂಗ, ಸುಜ್ಞಾನವೆ ಹಸ್ತ, ಪ್ರಸಾದಲಿಂಗ, ಶ್ರೋತ್ರವೆಂಬ ಮುಖ, ಪರಾಶಕ್ತಿ , ಆನಂದ ಭಕ್ತಿ , ಸುಶಬ್ದಪದಾರ್ಥ, ಶಬ್ದಪ್ರಸಾದ, ಶಾಂತ್ಯತೀತಕಲೆ, ಶಿವಸಾದಾಖ್ಯ, ಪರಿಣಾಮವೆಂಬ ಲಕ್ಷಣ, ಅನಾದಿವತ್ ಎಂಬ ಸಂಜ್ಞೆ, ಅಜಪೆವೇದ- ಇಂತಿವೆಲ್ಲ ಇಷ್ಟಲಿಂಗದ ನಾಳದಲ್ಲಿ ಸಂಬಂಧವು. ಒಂಕಾರಾಕೃತಿ, ಒಂಕಾರಪ್ರಣಮ, ಆಜ್ಞೇಯಚಕ್ರ, ಐಕ್ಯನೆ ಅಂಗ, ಸದ್‍ಭಾವಹಸ್ತ, ಮಹಾಲಿಂಗ, ಹೃದಯವೆಂಬ ಮುಖ, ಚಿಚ್ಛಕ್ತಿ , ಸಮರಸಭಕ್ತಿ , ಸುತೃಪ್ತಿಪದಾರ್ಥ, ತೃಪ್ತಿಪ್ರಸಾದ, ಶಾಂತ್ಯತೀತೋತ್ತರಕಲೆ, ಮಹಾಸಾದಾಖ್ಯ, ಅಖಂಡವೆಂಬ ಲಕ್ಷಣ, ಮಹಾಸಂಜ್ಞೆ, ಗಾಯತ್ರಿಯೆಂಬ ವೇದ- ಇಂತಿವೆಲ್ಲ ಇಷ್ಟಲಿಂಗದ ಮಸ್ತಕದಲ್ಲಿ ಸಂಬಂಧವು. ಇಂತೀ ತೊಂಬತ್ತಾರು ಸಕೀಲಗಳನೊಳಕೊಂಡ ಮಹಾಘನ ಪರಾತ್ಪರವಾದ ಇಷ್ಟಲಿಂಗವನೆ ಕರ ಮನ ಭಾವದೊಳಗೆ ಕುಳ್ಳಿರಿಸಿ ಅರ್ಚಿಸಿ, ಧ್ಯಾನಿಸಿ ಕೂಡಿ ಎರಡಳಿದ ಮಹಾಘನ ಶರಣರ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಯ್ಯ ದರ್ಪಣಾಕೃತಿ, ಯಕಾರಪ್ರಣಮ, ಪ್ರಣವನಾಮ, ವಿಶುದ್ಧಿಚಕ್ರ, ಕಪೊತವರ್ಣ, ಶರಣಸ್ಥಲ, ಆನಂದತನು, ಸುಜ್ಞಾನಹಸ್ತ, ಪ್ರಸಾದಲಿಂಗ, ಶ್ರೋತ್ರವೆಂಬ ಮುಖ, ಆನಂದಭಕ್ತಿ, ಸುಶಬ್ದಪದಾರ್ಥ, ಸುಶಬ್ದ ಪ್ರಸಾದ, ಸದಾಶಿವ ಪೂಜಾರಿ, ಸದಾಶಿವನಧಿದೇವತೆ, ಶಿವಸಾದಾಖ್ಯ, ಪರಿಪೂರ್ಣವೆಂಬ ಲಕ್ಷಣ, ಅನಾದಿವತುವೆಂಬ ಸಂಜ್ಞೆ, ಊಧ್ರ್ವದಿಕ್ಕು, ಅಜಪೆವೇದ, ಆಕಾಶವೆ ಅಂಗ, ಶುದ್ದಾತ್ಮ, ಪರಾಶಕ್ತಿ, ಶಾಂತ್ಯತೀತಕಲೆ- ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು, ಎನ್ನ ವಿಶುದ್ಧಿಚಕ್ರವೆಂಬ ಐಮುಕ್ತಿಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಈಳನಾಸ್ವರೂಪವಾದ ಪ್ರಸಾದಲಿಂಗವೆ ವಿಶ್ವನಾಥಲಿಂಗವೆಂದು ಭಾವತ್ರಯವ ಮಡಿಮಾಡಿ, ಕ್ಷಮೆಯೆಂಬ ಜಲದಿಂ ಮಜ್ಜನಕ್ಕೆರೆದು, ಗಗನನಿವೃತ್ತಿಯಾದ ಗಂಧವ ಧರಿಸಿ, ಜ್ಞಾನ ಸುಜ್ಞಾನವಾದದಕ್ಷತೆಯನಿಟ್ಟು, ಅಲ್ಲಿಹ ಷೋಡಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಕಪೋತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ತುರ್ಯಾತೀತಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ, ನಿರ್ಮದವೆಂಬಾಭರಣವ ತೊಡಿಸಿ, ಸುಶಬ್ಧವೆಂಬ ನೈವೇದ್ಯವನರ್ಪಿಸಿ, ಆನಂದವೆಂಬ ತಾಂಬೂಲನವಿತ್ತು, ಇಂತು ಪ್ರಸಾದಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಪ್ರಸಾದಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು ಆ ಪ್ರಸಾದಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ಯಂ ಯಂ ಯಂ ಯಂ ಯಂ ಯಂ ಎಂಬ ಯಕಾರ ಷಟ್ವಿಧ ಮಂತ್ರಗಳಿಂದೆ ನಮಸ್ಕರಿಸಿ, ಆ ಪ್ರಸಾದಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿರ್ಮೋಹಿಯಾಗಿ ಆಚರಿಸಬಲ್ಲಾತನೆ ಆನಂದಭಕ್ತಿಯುಳ್ಳ ಶಿವಶರಣ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
-->