ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲ್ಲು ದೇವರೆಂದು ಪೂಜಿಸುವರೆಲ್ಲ ಕಲ್ಲಾಗಿ ಪುಟ್ಟುವರು. ಕಟ್ಟಿಗೆ ದೇವರೆಂದು ಪೂಜಿಸುವರೆಲ್ಲ ಕಟ್ಟಿಗೆಯಾಗಿ ಪುಟ್ಟುವರು. ಮಣ್ಣುದೇವರೆಂದು ಪೂಜಿಸುವರೆಲ್ಲ ಮಣ್ಣಾಗಿ ಪುಟ್ಟುವರು. ನೀರು ದೇವರೆಂದು ಪೂಜಿಸುವರೆಲ್ಲ ನೀರಾಗಿ ಪುಟ್ಟುವರು. ಅಗ್ನಿದೇವರೆಂದು ಪೂಜಿಸುವರೆಲ್ಲರು ಅಗ್ನಿಯಾಗಿ ಪುಟ್ಟುವರು. ಇದಕ್ಕೆ ದೃಷ್ಟಾಂತ: 'ಯದ್ದøಷ್ಟಂ ತನ್ನಷ್ಟಂ ಯಥಾಭಾವಸ್ತಥಾ ಸಿದ್ಧಿಃ' ಎಂದುದಾಗಿ, ಇಂತಿವರೆಲ್ಲರು ದೇವರೆಂದು ಪೂಜಿಸುವರು ಹುಟ್ಟುಕುರುಡನು ಬೆಣ್ಣೆಯೆಂದು ನರಕವ ಭುಂಜಿಸಿದಂತಾಯಿತ್ತಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರುಶಿಷ್ಯ ಸಂಬಂಧವೆಂದು ನುಡಿಯುತಿರ್ಪರೆಲ್ಲರು; ಗುರುಶಿಷ್ಯ ಸಂಬಂಧವನಾರೂ ಅರಿಯರಲ್ಲ ! ಗುರುಶಿಷ್ಯ ಸಂಬಂಧವೆಂತೆಂದೊಡೆ ಹೇಳಿಹೆವು ಕೇಳಿರೋ ಸದ್ಭಕ್ತ ಶರಣಜನಂಗಳೆಲ್ಲರು. ಶ್ರೀಗುರು ಶಿಷ್ಯಂಗೆ ಉಪದೇಶವ ಮಾಡುವ ಕಾಲದಲ್ಲಿ ಆ ಶಿಷ್ಯನ ಸ್ಥೂಲತನು ಸೂಕ್ಷ್ಮತನು ಕಾರಣತನುವೆಂಬ ತನುತ್ರಯಂಗಳಲ್ಲಿ ಮುಸುಕಿದ ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳ ಕಳೆದು, ಮಾಯಾಪ್ರಕೃತಿಕಾಯದ ಪೂರ್ವಾಶ್ರಯವನು ಚಿದಗ್ನಿಯಿಂದೆ ಸುಟ್ಟು ಚಿತ್ಕಾಯವೆಂದೆನಿಸಿ, ಆ ಚಿತ್ಕಾಯಸ್ವರೂಪವಾದ ಶಿಷ್ಯನ ಮಸ್ತಕದ ಮೇಲೆ ಹಸ್ತವನಿರಿಸಿ ಮಥನವ ಮಾಡಿ, ಶಿಷ್ಯನ ಭಾವದ ಘಟ್ಟಿಯನೆ ಕರದಲ್ಲಿ ಕೊಡುವುದು. ಅದೆಂತೆಂದೊಡೆ : ``ಜ್ವಲತ್ಕಾಲಾನಲಾಭಾಸಾ ತಟಿತ್ಕೋಟಿ ಸಮಪ್ರಭಾ | ತಚ್ಚೋಧ್ರ್ವಂತು ಶಿಖಾ ಸೂಕ್ಷ್ಮಾ ಚಿದ್ರೂಪಾ ಪರಮಾ ಕಳಾ || ಯಥಾಕಲಾಸ್ತಥಾಭಾವೋ ಯಥಾಭಾವಸ್ತಥಾ ಮನಃ | ಯಥಾಮನಸ್ತಥಾ ದೃಷ್ಟಿಃ ಯಥಾದೃಷ್ಟಿಸ್ತಥಾ ಸ್ಥಲಂ || ಏವಂ ಭೇದಾಃ ಕಳಾದೇವಿ ಸದ್ಗುರುಶಿಷ್ಯಮಸ್ತಕೇ | ಹಸ್ತಾಬ್ಜಮಥನಗ್ರಾಹ್ಯಂ ತಸ್ಯ ಭಾವಃ ಕರೋದಿತಃ || ಏತೇ ಗುರುಕರಾಜಾಜತಾಃ ಲಿಂಗಭಕ್ತಾ ವಿಭೇದತಃ | ನಾದಬಿಂದುಕಳಾತೀತಂ ಗುರೂಣಾಂ ಲಿಂಗಮುದ್ಭವಂ ||'' -ಪರಮರಹಸ್ಯ ಎಂಬ ಶಿವಾಗಮೋಕ್ತವಾಗಿ, ಆ ಶಿಷ್ಯನ ಪಶ್ಚಿಮದಿಶೆಯಲ್ಲಿ ಬೆಳಗುತಿರ್ಪ ನಿತ್ಯನಿರಂಜನ ಪರಮಕಳೆಯ ಧ್ಯಾನಿಸಿ ಭಾವಸ್ಥಲಕ್ಕೆ ತಂದು, ಆ ಭಾವಸ್ಥಲದಿಂದೆ ಮನಸ್ಥಲಕ್ಕೆ ತಂದು, ಆ ಮನಸ್ಥಲದಿಂದೆ ದೃಷ್ಟಿಸ್ಥಲಕ್ಕೆ ತಂದು, ಆ ದೃಷ್ಟಿಸ್ಥಲದಿಂದೆ ಕರಸ್ಥಲಕ್ಕೆ ತಂದು, ಸಾಕಾರಲಿಂಗಮೂರ್ತಿಯಲ್ಲಿ ತುಂಬಿ ಇಷ್ಟಲಿಂಗವೆನಿಸಿ ಕರಸ್ಥಲದಲ್ಲಿ ಮೂರ್ತಿಗೊಳಿಸಿ ಆ ಲಿಂಗಕ್ಕೆ ಜಂಗಮದ ಪಾದತೀರ್ಥ ಪ್ರಸಾದವನೆ ಪ್ರಾಣಕಳೆಯೆಂದರ್ಪಿಸಿ, ಮತ್ತಂ, ಆ ಇಷ್ಟಲಿಂಗವೆ ಅನಿಷ್ಟಪಂಚಕಂಗಳೆಂಬ ಕತ್ತಲೆಯನೋಡಿಸುವುದಕ್ಕೆ ಚಿತ್ಸೂರ್ಯನೆಂದು ನಂಬುಗೆಯನಿಂಬುಗೊಳಿಸಿ, ಮತ್ತಮಾಲಿಂಗದಲ್ಲಿ ವೃತ್ತ ಕಟಿ ವರ್ತುಳ ಗೋಮುಖ ನಾಳ ಗೋಳಕವೆಂಬ ಆರು ಸ್ಥಾನಂಗಳ ತೋರಿ, ಆ ಆರು ಸ್ಥಾನಂಗಳಲ್ಲಿ ನಕಾರ ಮಕಾರ ಶಿಕಾರ ವಕಾರ ಯಕಾರ ಓಂಕಾರ ಎಂಬ ಆರು ಪ್ರಣವಂಗಳನೆ ಬೋಧಿಸಿ, ಆ ಆರು ಪ್ರಣವಂಗಳನೆ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಎಂಬ ಆರು ಲಿಂಗಗಳೆಂದರುಹಿ, ಆ ಆರು ಲಿಂಗಂಗಳಿಗೆ ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯ ಎಂಬ ಆರು ಇಂದ್ರಿಯಂಗಳನೆ ಆರು ಮುಖಗಳೆಂದು ತಿಳುಹಿ, ಆ ಆರು ಮುಖಂಗಳಿಗೆ ಗಂಧ ರುಚಿ ರೂಪು ಸ್ಪರ್ಶನ ಶಬ್ದ ತೃಪ್ತಿ ಎಂಬ ಆರು ಪದಾರ್ಥಂಗಳನು ಶ್ರದ್ಧೆ ನಿಷೆ* ಸಾವಧಾನ ಅನುಭಾವ ಆನಂದ ಸಮರಸ ಎಂಬ ಆರು ಭಕ್ತಿಗಳಿಂದರ್ಪಿಸುವ ಸಕೀಲದ ವಿವರವ ತೋರಬಲ್ಲಾತನೇ ಗುರು. ಆ ಗುರುವಿನ ಕರುಣದಿಂದೆ ಪಡೆದ ಇಷ್ಟಲಿಂಗವನು ಕರಸ್ಥಲ ಮನಸ್ಥಲ ಭಾವಸ್ಥಲಮಂಟಪದಲ್ಲಿ ಮೂರ್ತಿಗೊಳಿಸಿ, ಸಗುಣಪೂಜೆ ನಿರ್ಗುಣಪೂಜೆ ಕೇವಲ ನಿರ್ಗುಣಪೂಜೆಯ ಮಾಡಿ, ಆ ಲಿಂಗದ ಮಹಾಬೆಳಗಿನೊಳಗೆ ತನ್ನಂಗದ ಕಳೆಯನಡಗಿಸಿ, ಉರಿ-ಕರ್ಪುರ ಸಂಯೋಗದಂತೆ ಅವಿರಳ ಸಮರಸವಾಗಿರ್ಪಾತನೆ ಶಿಷ್ಯನು. ಇಂತೀ ಅರುಹು ಆಚಾರಸನ್ನಿಹಿತ ಗುರುಶಿಷ್ಯರಿಬ್ಬರು ಬಯಲು ಬಯಲ ಬೆರದಂತೆ ನಿರವಯಲ ಪರಬ್ರಹ್ಮದಲ್ಲಿ ನಿಷ್ಪತ್ತಿಯನೈದಿರ್ಪರು ನೋಡಾ ! ಇಂತೀ ಅರುಹಿನ ವಿಚಾರವನರಿಯದೆ ಮಾಡುವ ಮಾಟವೆಲ್ಲ ಅಜ್ಞಾನಗಡಣದೊಳಗು. ಈ ಅಜ್ಞಾನಗುರುಶಿಷ್ಯರ ವಿಧಿಯೆಂತಾಯಿತ್ತೆಂದಡೆ, ಹುಟ್ಟುಗುರುಡನ ಕೈಯ ಕೆಟ್ಟಗಣ್ಣವ ಹಿಡಿದು ಬಟ್ಟೆಯ ಕಾಣದೆ ಕಮರಿಯ ಬಿದ್ದು ಸತ್ತಂತಾಯಿತ್ತು ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->