ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ಎರಡಹುದೆ ? ಎರಡು ಒಂದಹುದೆ ? ಒಂದು ಒಂದೇ, ಎರಡು ಎರಡೇ. ಅದು ಕಾರಣ, ಶಿವನು ತನ್ನ ಲೀಲಾಕಾರಣವಾಗಿ ಮಾಯಾ ನಿರ್ಮಿತವಂ ಮಾಡಿ, ಆ ಮಾಯಾರಚನೆಯಿಂದಾದ ಬ್ರಹ್ಮಾಂಡ ಸಂದೋಹ, ಹರಿ ವಿರಿಂಚಿ ಸುರಪತಿ ಸುರಾಸುರರು ನರನಿಕರ, ಖಗಮೃಗ ಜೀವರಾಶಿಗಳೆಲ್ಲವೂ ಶಿವನಿಂದಲಾಗಿ, ಶಿವನಿಂದ ಹೊರೆಯಿಸಿಕೊಂಡು, ಶಿವನಿಂದವೆ ಹೋದವೆಂದಡೆ, ಅವರ ಆಗು ಹೋಗು ಇರವು ಹೋಗಿನೊಳಗೆ ಲಯ ಗಮನ ಸ್ಥಿತಿ ಶಿವಂಗುಂಟೆ, ಎಲೆ ಮರುಳಗಳಿರಾ ? ಗಗನದಲ್ಲಿ ತೋರಿದ ಮೇಘವು ಗಗನದಲ್ಲಿ ಅಡಗಿದವೆಂದಡೆ, ಆ ಗಗನ ತಾ ಮೇಘವೆ ? ತನ್ನಾದ್ಥೀನಶಕ್ತಿದಂಡದಿಂ ಕುಂಬಾರ ಚಕ್ರವ ತಿರುಗಿಸಲು, ಆ ಚಕ್ರಭ್ರಮಣ ಚೈತನ್ಯವು ಆ ಕುಂಬಾರನೆ, ಮರುಳುಗಳಿರಾ ? ಆ ಚೈತನ್ಯ ಅಡಗುವುದೆ ? ನಿಲ್ಲು ಮಾಣು. ಬಿಲ್ಲ ನಾರಿಗೆ ಅಂಬಂ ಸಂಧಾನಿಸಿ ಎಸೆಯಲಾ, ಅಂಬು ಹರಿದ ಚೈತನ್ಯ ಬಿಲ್ಲು ಕಾರಣವೆ ? ಅಲ್ಲ , ನಿಲ್ಲು , ಮಾಣು. ಇವೆಲ್ಲವು ಚೈತನ್ಯಂಗಳು. ಅಂತು ಸರ್ವವೆಲ್ಲವು ತೋರಿಯಡಗುವುದು. ಸರ್ವೇಶ್ವರನು, ಸರ್ವಕರ್ತೃ, ಸರ್ವಚೈತನ್ಯ, ಸೂತ್ರಯಂತ್ರವಾಹಕ ಶಿವನು. ಸರ್ವಲಯ ಗಮನ ಸ್ಥಿತಿ ತನಗುಂಟೆ ? ನಿಲ್ಲು , ಮಾಣಿರೆ, ಎಲೆ ಜಡಜೀವಿಗಳಿರಾ. ಗಗನದ ರವಿ ಕಿರಣದಿಂದ ಸಕಲರೂಪಿತ ದ್ರವ್ಯಪದಾರ್ಥಂಗಳಲ್ಲಿ ಪ್ರತಿಪ್ರಭೆ ತೋರಲು, ಆ ಪ್ರತಿಪ್ರಭೆಯ ಆಗುಹೋಗಿನ ಸ್ಥಿತಿಗತಿ ಆ ಗಗನದ ಸೂರ್ಯಂಗುಂಟೆ, ಎಲೆ ಜಡಜೀವಿಗಳಿರಾ ? ಈ ಪರಿಯಲೆ ವಿಶ್ವವೆಲ್ಲವಕ್ಕೂ ತಾನಲ್ಲದ ತಾನಿಲ್ಲದ ಪ್ರೇರಣ ಚೈತನ್ಯವೇ ವಿಶ್ವದ ನಯನ, ವಿಶ್ವದ ಮುಖ, ವಿಶ್ವದ ಬಾಹು, ವಿಶ್ವದ[ಚ]ರಣ, ಸ್ವರ್ಗಮತ್ರ್ಯ ಭುವನಾದ್ಯಂಗಳ ಮೂಲಚೈತನ್ಯಸೂತ್ರ ತಾನಲ್ಲದೆ, ತಾನಿಲ್ಲದೆ ಆಡಿಸುವ ಸೂತ್ರಾತ್ಮಕನಲ್ಲದೆ ಅವರಾಗು ತನಗುಂಟೆ, ಎಲೆ ಭ್ರಮಿತರಿರಾ ? `ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋ ಬಾಹುರುತ ವಿಶ್ವತಸ್ಪಾ ಪಾತ್ | ಸಂ ಬಾಹುಭ್ಯಾಂಧಮತಿ ಸಂಪತತ್ರೈದ್ರ್ಯಾವಾ ಭೂಮೀ ಜನಯನ್ ದೇವ ಏಕಃ ಎನಲು, `ಈಶಾನಃ ಶಿವ ಏಕೋದೇವಃ ಶಿವಂ ಕರಃ ತತ್ಸರ್ವಮನ್ಯತ್ ಪರಿತ್ಯಜೇತ್' ಎನಲು, `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥು' ಎನಲು, ಶಿವನೊಬ್ಬನೇ, ಇಬ್ಬರಿಲ್ಲ . `ನ ಯಥಾಸ್ತಿ ಕೂರ್ಮರೋಮಾಣಿ, ಶೃಂಗಂ ನ ನರಮಸ್ತಕೇ ನ ಯಥಾಸ್ತಿ ವಿಯತ್ಪುಷ್ಪಂ ನ ತಥಾಸ್ತಿ ಪರಾತ್ಪರಃ |' ನಾಲ್ಕು ವೇದಂಗಳು ಬಿನ್ನವಿಸಿದವು ಕೇಳಿರೇ ಎಲೆ ವಿಪ್ರರಿರಾ. ಇದನರಿದು, ಬಸವಪ್ರಿಯ ಕೂಡಲಚೆನ್ನಸಂಗಯ್ಯನನೆ ಧ್ಯಾನಿಸಿ, ನಿರೀಕ್ಷಿಸಿ, ಸ್ತುತಿಸಿ, ಯಜಿಸಿ ಕೃತಾರ್ಥರಾಗಿರೆ ಎಲೆ ಮರುಳು ವಿಪ್ರರಿರಾ.
--------------
ಸಂಗಮೇಶ್ವರದ ಅಪ್ಪಣ್ಣ
-->