ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ, ಎನ್ನ ಕರ-ಮನ-ಭಾವ-ಕಂಗಳ ಕೊನೆಯಲ್ಲಿ ಬೆಳಗುವ ಪರಂಜ್ಯೋತಿಮೂರ್ತಿ ಕೇಳ ! ನಿತ್ಯನಿಜಾನಂದ ಪರಿಪೂರ್ಣದರಿವೆ! ಆದಿಯಲ್ಲಿ ಪ್ರಸಾದವಯ್ಯ, ಅಂತ್ಯದಲ್ಲಿ ಪ್ರಸಾದವಯ್ಯ, ಮಧ್ಯದಲ್ಲಿ ಪದಾರ್ಥವಯ್ಯ. ಈ ಪ್ರಸಾದ-ಪದಾರ್ಥವನರಿಯದವರೆಲ್ಲ ಹುಟ್ಟಂಧಕರೆಂಬೆನಯ್ಯ. ಈ ಪ್ರಸಾದ-ಪದಾರ್ಥವ ಭೇದಿಸಿ ಬಸವಣ್ಣ ಬಯಲಾದ. ಚೆನ್ನಬಸವಣ್ಣ, ಪ್ರಭು, ಸಿದ್ಧರಾಮ, ಅಜಗಣ್ಣ, ಮರುಳಶಂಕರ, ನೀಲಲೊಚನೆ, ಅಕ್ಕಮಹಾದೇವಿ, ಮುಕ್ತಾಯಕ್ಕ ಮೊದಲಾದ ಮಹಾಚಿದ್ಘನಗಣಂಗಳೆಲ್ಲ ಜ್ಯೋತಿರ್ಮಯಾದರು ನೋಡ. ಮತ್ತಂ, ಸಚ್ಚಿದಾನಂದನಿಜದಿಂದ ಭೇದಿಸಿ, ಹರುಷಾನಂದಿಜಲವುಕ್ಕಿ, ಅತಿಮೋಹದಿಂದ ಪದವನೆ ನೂರೆಂಟೆಳೆಯದಾರವ ಮಾಡಿ, ಅರ್ಥವನೆ ನವವರ್ಣಯುಕ್ತವಾದ ಮಣಿಯ ಮಾಡಿ, ಮಹಾಪರಿಪೂರ್ಣಜ್ಞಾನವೆಂಬ ರಂಧ್ರÀ್ರವ ರಚಿಸಿ, ಮಹಾಚಿದ್ಘನಪ್ರಕಾಶವೆಂಬ ಬಣ್ಣವನ್ನಿಟ್ಟು, ಒಂದು ದಾರದಲ್ಲಿ ಹನ್ನೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಮೂವತ್ತಾರು ಮಣಿಯ ಪವಣಿಸಿದರಯ್ಯ. ಮಿಗಿಲೊಂದು ದಾರದಲ್ಲಿ ನಾಲ್ವತ್ತೆಂಟು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಅರುವತ್ತು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಪ್ಪತ್ತೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಂಬತ್ತುನಾಲ್ಕು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ತೊಂಬ್ತಾರು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ನೂರೆಂಟು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಇನ್ನೂರಹದಿನಾರು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ನಾಲ್ಕುನೂರಮೂವತ್ತೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಂಟುನೂರ ಅರುವತ್ತುನಾಲ್ಕು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಸಾವಿರದಏಳೂನೂರ ಇಪ್ಪತ್ತೆಂಟು ಮಣಿಯ ಪವಣಿಸಿದರಯ್ಯ. ಈ ಪ್ರಕಾರದಿಂದ ಹದಿಮೂರೆಳೆಯ ಮಣಿಗಳ ಸರಗೊಳಿಸಿ, ಆಯಾಯ ಸರದ ಎಸಳುಗಳ ಮಧ್ಯದಲ್ಲಿ ಮುತ್ತು ಮಾಣಿಕ್ಯ ನವರತ್ನಪ್ರಕಾಶಕ್ಕೆ ಮಿಗಿಲಾದ ಮಹಾಜ್ಯೋತಿರ್ಮಯ ಶ್ರೀಗುರುಲಿಂಗಜಂಗಮವೆಂಬ ಮಹಾಪ್ರಸಾದವ ಪದಕವ ಮಾಡಿ ರಚಿಸಿ, ಅಂಗ-ಲಿಂಗ, ಪ್ರಾಣ-ಲಿಂಗ, ಭಾವ-ಲಿಂಗವೆಂಬ ಉಭಯಚಿಹ್ನವಳಿದು ಮಹಾಬೆಳಗಿನೊಳಗೆ ನಿಂದು, ಸರ್ವಾವಸ್ಥೆಗಳಿಲ್ಲದೆ ಕಂಠಾಭರಣವ ಮಾಡಿ ಧರಿಸಿ ಮಹಾಪರಿಪೂರ್ಣಪ್ರಕಾಶವೆಂಬ ಮಹಾಚಿದ್ಘನ ಪ್ರಸಾದಭಾಜನದಲ್ಲಿ ಪರಿಪೂರ್ಣರಾಗಿ, ಸತ್ಯ ಸದಾಚಾರ ಸತ್ಕಾಯಕ ಸದ್ಭಕ್ತಿಯಾನಂದ ಸತ್ಕ್ರಿಯಾ ಸಮ್ಯಜ್ಞಾನದ ಬೆಳಗಿನೊಳಗಣ ಮಹಾಬೆಳಗ ಸಾಧಿಸಿ, ಆನಾದಿಬಯಲೊಳಗಣ ಮಹಾಬಯಲೊಳಗೆ ಜನಿತರಾಗಿ, ಚತುರ್ಮುಖನ ಜಡಸಂಸಾರಕ್ಕೊಳಗಾಗದೆ, ಯದೃಷ್ಟಂ ತನ್ನಷ್ಟಂ ಎಂದುದಾಗಿ, ಮತ್ತಂ ಮರಳಿ ಬಯಲೊಳಗಣ ಮಹಾಬಯಲಾದರು ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶಿವಲಿಂಗದ ಮಹಾತ್ಮೆಯನು ಶಿವಲಿಂಗದ ವರ್ಮವನು ವಲಿಂಗದ ನಿಶ್ಚಯನು ಅದಾರಯ್ಯಾ ಬಲ್ಲವರು ? ಅದಾರಯ್ಯಾ ಅರಿದವರು, ಶ್ರೀಗುರು ತೋರಿ ಕೊಡದನ್ನಕ್ಕರ. `ಸರ್ವೈಶ್ವರ್ಯಸಂಪನ್ನಂ ಮಧ್ಯಧ್ರುವ ತತ್ವಾಧಿಕಂ ಎಂದುದಾಗಿ`ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ `ಯತೋ ವಾಚೋ ನಿವರ್ತಂತೇ' ಎಂದುದಾಗಿ, `ಅತ್ಯತಿಷ*ದ್ದಶಾಂಗುಲಮ್' ಎಂದುದಾಗಿ, ಈ ಪ್ರಕಾರದಲ್ಲಿ ವೇದಾಗಮಂಗಳು ಸಾರುತ್ತಿರಲು, ಲಿಂಗವನು ಹರಿಬ್ರಹ್ಮಾದಿ ದೇವದಾನವ ಮಾನವರಿಗೆಯು ಅರಿಯಬಾರದು. `ಚಕಿತಮಭಿದತ್ತೇ ಶ್ರುತಿರಪಿ ಎಂದುದಾಗಿ ವೇದ ಪುರುಷರಿಗೆಯು ಅರಿಯಬಾರದು. ಅರಿಯಬಾರದ ವಸ್ತುವ ರೂಪಿಸಲೆಂತೂ ಬಾರದು. ರೂಪಿಸಬಾರದ ವಸ್ತುವ ಪೂಜಿಸಲೆಂತುಬಹುದು ? ಪೂಜೆಗಿಲ್ಲವಾಗಿ ಭಕ್ತಿಗಿಲ್ಲ, ಭಕ್ತಿಗಿಲ್ಲವಾಗಿ ಪ್ರಸಾದಕ್ಕಿಲ್ಲ, ಪ್ರಸಾದಕ್ಕಿಲ್ಲವಾಗಿ ಮುಕ್ತಿಗಿಲ್ಲ. ಮುಕ್ತಿಗಿಲ್ಲದೆ ದೇವದಾನವ ಮಾನವರೆಲ್ಲರು ಕೆಡುವರು ಕೆಡುವರು. ಕೆಡದಂತೆ ಮಾಡಿ ರಕ್ಷಿಸಿದನು ಸದ್ಗುರು, ಮಹಾಗುರು, ಶ್ರೀಗುರು. `ನ ಗುರೋರಧಿಕಂ' ಎಂದುದಾಗಿ ಮಹಾಗುರು ಶಾಂತಮೂರ್ತಿ ಕೃಪಾಮೂರ್ತಿ ಲಿಂಗ ಪ್ರತಿಷೆ*ಯಂ ಮಾಡಿದನು. ಅದೆಂತೆನಲು ಕೇಳಿರೆ: ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ, ಸದ್ಗರೋರ್ಲಿಂಗಭಾವಂ ಚ ಸರ್ವ ಬ್ರಹ್ಮಾಂಡವಾಸಿನಾಂ ಸರ್ವಲೋಕಸ್ಯ ವಾಸಸ್ಯ ಮುಕ್ತಿಕ್ಷೇತ್ರ ಸುವಾಸಿನಾಂ ಎಂದುದಾಗಿ, ಸದ್ಗರೋರ್ದೀಯತೇ ಲಿಂಗಂ ಸದ್ಗುರೋರ್ದೀಯತೇ ಕ್ರಿಯಾ ಸದ್ಗುರೋರ್ದೀಯತೇ ಮಂತ್ರಂ ಸದ್ಗುರುಸ್ಸರ್ವಕಾರಣಂ ಎಂದುದಾಗಿ, ಸರ್ವಲೋಕಕ್ಕೆಯು ಸರ್ವರಿಗೆಯು ಲಿಂಗಪ್ರತಿಷೆ*ಯಂ ಮಾಡಿಕೊಟ್ಟನು. ಅರೂಪೇ ಭಾವನೋ ನಾಸ್ತಿ ಯದೃಷ್ಟಂ ತದ್ವಿನಶ್ಯತಿ ದೃಶ್ಯಾದೃಶ್ಯ ಸ್ವರೂಪತ್ವಂ ತಥಾಪ್ಯೇವಂ ಸದಾಭ್ಯಸೇತ್ ಎಂದುದಾಗಿ, ನಿಃಕಲ ಅರೂಪ ನಿರವಯ ಧ್ಯಾನಪೂಜೆಗನುವಲ್ಲ, ಸಕಲ ತತ್ವಸಾಮಾನ್ಯನೆಂದು ಸಕಲನಿಷ್ಕಲವನೊಂದಡಗಿ ಮಾಡಿದನು. ಲಿಂಗಂ ತಾಪತ್ರಯಹರಂ ಲಿಂಗಂ ದಾರಿದ್ರ್ಯನಾಶನಂ ಲಿಂಗಂ ಪಾಪವಿನಾಶಂ ಚ ಲಿಂಗಂ ಸರ್ವತ್ರ ಸಾಧನಂ ಎಂದುದಾಗಿ, ಲಿಂಗವು ಪರಂಜ್ಯೋತಿ ಲಿಂಗವು ಪರಬ್ರಹ್ಮವೆಂದು ಲಿಂಗವನೆ ಪೂಜಿಸಿ, ಭಕ್ತಿಪ್ರಸಾದ ಮುಕ್ತಿಯ ಪಡೆಯಲೆಂದು ಮಹಾಘನ ಗುರು ಲಿಂಗಪ್ರತಿಷೆ*ಯ ಮಾಡಿ ತೋರಿಕೊಟ್ಟನು. ಅದೆಂತೆಂದಡೆ_ ಬ್ರಹ್ಮಾವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಸರ್ವೇ ಲಿಂಗಾರ್ಚನಾರತಾ ಜಾತಾಸ್ತೇ ಲಿಂಗಪೂಜಕಾಃ ಮತ್ತಂ_ ಗೌರೀಪತಿರುಮಾನಾಥೋ ಅಂಬಿಕಾ ಪಾರ್ವತೀಪತಿಃ ಗಂಗಾಪತಿರ್ಮಹಾದೇವೋ ಸತತಂ ಲಿಂಗಪೂಜಕಾಃ ಎಂದುದಾಗಿ, ಈ ಮಹಾಪುರುಷರಪ್ಪ ದೇವಗಣ ರುದ್ರಗಣ ಪ್ರಮಥಗಣಂಗಳು ವಿಷ್ಣ್ವಾದಿ ದೇವದಾನವ ಮಾನವಾದಿಗಳು ಮಹಾಲಿಂಗವನೆ ಧ್ಯಾನಿಸಿ, ಪೂಜಿಸಿ, ಪರಮ ಸುಖಪರಿಣಾಮವ ಹಡೆದರೆಂದು ಮಾಡಿದನು, ಕೇವಲ ಸದ್ಭಕ್ತ ಜನಂಗಳಿಗೆ. ಅದೆಂತೆಂದಡೆ_ `ಇಷ್ಟಂ ಪ್ರಾಣಂ ತಥಾ ಭಾವಂ ತ್ರಿಧಾ ಏಕಂ ವರಾನನೇ' ಎಂದುದಾಗಿ, ಆ ಸದ್ಗುರು ಆ ಪರಶಿವನನು ತತ್ಪ್ರಾಣವನು ಏಕೀಭವಿಸಿ ಸದ್ಭಾವದಿಂ ಲಿಂಗಪ್ರತಿಷೆ*ಯಂ ಮಾಡಿ, ಲಿಂಗವಾಗಿ ಕರಸ್ಥಲದಲ್ಲಿ ಬಿಜಯಂಗೈದು, ಅಂತರಂಗ ಬಹಿರಂಗ ಭರಿತನಾಗಿ ಪೂಜೆಗೊಳಲೆಂದು ಕರುಣಿಸಿದನು. ಮತ್ತಂ `ಏಕಮೂರ್ತಿಸ್ತ್ರಿಧಾ ಭೇದಃ' ಎಂದುದಾಗಿ, ಗುರುಲಿಂಗ ಜಂಗಮಲಿಂಗ ಪರಶಿವಲಿಂಗ ಒಂದೆ. `ದೇಶಿಕಶ್ಚರಲಿಂಗಂ ಚ ತ್ರಿವಿಧಂ ಲಿಂಗಮುಚ್ಯತೇ' ಎಂದುದಾಗಿ, ಲಿಂಗದ ವರ್ಮವನು ಲಿಂಗದ ಸ್ವರೂಪವನು ಲಿಂಗದ ನಿಶ್ಚಯವನು ಆದಿಯಲ್ಲು ಧ್ಯಾನಪೂಜೆಯ ಮಾಡಿದವರನು, ಭಕ್ತಿಪ್ರಸಾದ ಮುಕ್ತಿಯ ಪಡೆದವರನು ವೇದ ಶಾಸ್ತ್ರ ಪುರಾಣಾಗಮಂಗಳು ಹೇಳುತ್ತಿವೆ. ಶಿವನ ವಾಕ್ಯಂಗಳಿಗಿದೆ ದಿಟ. ಮನವೆ ನಂಬು, ಕೆಡಬೇಡ ಕೆಡಬೇಡ, ಮಹಾಸದ್ಭಕ್ತರ ನಂಬುವುದು, ಶಿವಲಿಂಗಾರ್ಚನೆಯ ನಿರಂತರ ಮಾಡುವುದು. ಇದು ನಿಶ್ಚಯವ ಶಿವನು ಬಲ್ಲನಯ್ಯ. ಈ ಕ್ರಿಯೆಯಲ್ಲಿ ಲಿಂಗಜಂಗಮನರಿತು, ವಿಶ್ವಾಸಮಂ ಮಾಡಿ, ಕೇವಲ ಸದ್ಭಕ್ತಿ ಕ್ರೀಯನರಿದು, ವರ್ಮವನರಿದು, ಸದ್ಭಾವದಿಂದ ಲಿಂಗಾರ್ಚನೆಯಂ ಮಾಡುವುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
-->