ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರು ಮಠ ಮೂವತ್ತು ಆರಾಗಿ ತೋರುತಿದೆ ಮೀರಿಪ್ಪ ಬೊಮ್ಮ ತಾ ಹಮ್ಮಡರಿತು. ಮಠವು ತಾನೊಂಬತ್ತು ಕುಟಿಲವು ಹಲವಾಗಿ ನಿಟಿಲನೇತ್ರನ ರೂಪು ಅಜಲೋಕದಾ ಸಾದಾಖ್ಯ ದೇಹವಾರಾರು ಹೊಗಲಿಲ್ಲೆಲ್ಲಿ ಮೂವರಿಗೆ ತಾನು ಶಕ್ಯವಲ್ಲ. ನಾದ ಬಿಂದು ಕಳಾತೀತ ಕಪಿಲಸಿದ್ಧಮಲ್ಲಿಕಾರ್ಜುನನ ಆದ್ಥಿಕ್ಯವನರಿವ ಯೋಗಿ ಯಾರು?
--------------
ಸಿದ್ಧರಾಮೇಶ್ವರ
ಕಸವಕೊಂಡು ಹೊಸ ಧಾನ್ಯವ ಕೊಟ್ಟಡೆ, ಒಲ್ಲೆಂಬ ಚದುರರಾರು? ಜಲವ ಕೊಂಡು ಅಮೃತವ ಕೊಟ್ಟಡೆ, ಒಲ್ಲೆಂಬ ಭಾಷೆಯದಾರದು? ಎನ್ನಂತರಂಗದ ಜ್ಞಾನವ ಕೊಂಡು ಸುಜ್ಞಾನವಪ್ಪ ನಿಮ್ಮ ಕರತೇಜವ ಕೊಟ್ಟಡೆ, ಒಲ್ಲೆನೆಂಬ ಪಾತಕಿ ಯಾರು? ಕಪಿಲಸಿದ್ಧಮಲ್ಲಿಕಾರ್ಜುನ ಮಡಿವಾಳ ತಂದೆ.
--------------
ಸಿದ್ಧರಾಮೇಶ್ವರ
ಶಿವಶಿವಾ, ಈ ಮರುಳಮಾನವರಿಗೆ ನಾನೇನೆಂಬೆನಯ್ಯಾ! ಎನ್ನ ಮನೆ, ಎನ್ನ ಬದುಕು, ಎನ್ನ ತಾಯಿತಂದೆ, ಎನ್ನಸತಿಸುತರು ಬಾಂಧವರು ಎಂದು ಮೆಚ್ಚಿ ನಚ್ಚಿ ಮರುಳಾಗಿರ್ದರಯ್ಯಾ. ಹಿಂದೆ ನಾನಾಯೋನಿಯಲ್ಲಿ ಆನೆ ಮೊದಲು ಇರುವೆ ಕಡೆಯಾಗಿ ಒಂದೊಂದು ಜನ್ಮದಲ್ಲಿ ಸಹಸ್ರವೇಳೆ ಹುಟ್ಟಿ, ಸಹಸ್ರವೇಳೆ ಸತ್ತು, ಸಹಸ್ರವೇಳೆ ಹುಟ್ಟಿ ಬಪ್ಪಲ್ಲಿ ಆವಾಗ ನಿನಗೆ ತಾಯಿ ಯಾರು, ನಿನಗೆ ತಂದೆ ಯಾರು, ನಿನಗೆ ಸತಿಸುತರು ಬಾಂಧವರು ಯಾರು? ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ನಿನಗೆ ಶ್ರೀಗುರುವೇ ತಾಯಿ, ನಿನಗೆ ಶ್ರೀಗುರುವೇ ತಂದೆ, ನಿನಗೆ ಶ್ರೀಗುರುವೆ ಸತಿಸುತರು, ಬಂಧುಗಳೆಂಬ ನಿರ್ಣಯವನು ಸಮ್ಯಜ್ಞಾನಗುರುಮುಖದಿಂದ ತಿಳಿದು ವಿಚಾರಿಸಿಕೊಳ್ಳಬಲ್ಲರೆ ಬಲ್ಲರೆಂಬೆ. ಗುರು-ಲಿಂಗ-ಜಂಗಮ ಒಂದೆಯೆಂದು ತಿಳಿಯಬಲ್ಲರೆ ಬಲ್ಲರೆಂಬೆ. ಈ ಭೇದವನರಿಯದೆ ಮಿಥ್ಯಸಂಸಾರದ ಮಾತಾಪಿತರು, ಸತಿಸುತರು ಬಾಂಧವರ ತನು-ಮನ-ಧನದ ಅಭಿಮಾನದಲ್ಲಿ ಸಟೆಯ ಸಂಸಾರದಲ್ಲಿ ಹೊಡೆದಾಡಿ ಹೊತ್ತುಗಳೆದು ಸತ್ತುಹೋಗುವ ಮಂಗಮನುಜರಿಗೆ ಇನ್ನೆಂದು ಮೋಕ್ಷವಹುದೊ ? ಶಿವಶಿವಾ, ಈ ಲೋಕದ ಅಭಿಮಾನವ ಬಿಟ್ಟು, ಪರಲೋಕದಭಿಮಾನವ ಹಿಡಿದು ಆಚರಿಸಿ ಇರಬಲ್ಲರೆ ಗುರು-ಲಿಂಗ-ಜಂಗಮದ ಪುತ್ರರೆಂಬೆ, ಪುರಾತರ ಮಗನೆಂಬೆ, ಇಲ್ಲದಿರೆ ಕಿರಾತರ ಮಗನೆಂಬೆ, ನರಗುರಿಗಳ ಪುತ್ರರೆಂಬೆನೆಂದಾತ ವೀರಾಧಿವೀರ ನಮ್ಮ ಶರಣ ಕಾಡಿನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->