ಅಥವಾ

ಒಟ್ಟು 4 ಕಡೆಗಳಲ್ಲಿ , 1 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂತಪ್ಪ ವಿರಕ್ತನ ನಿಲುಕಡೆಯ ದೇವ ದಾನವ ಮಾನವರು ಮೊದಲಾದ ಸಕಲಜೀವಾತ್ಮರು ತಿಳಿಯದೆ ವೇಷವ ಧರಿಸಿ, ಗ್ರಾಸಕ್ಕೆ ತಿರುಗುವ ಹೇಸಿಗಳ್ಳರ ನಾನೇನೆಂಬೆನಯ್ಯಾ ? ಇಂತಪ್ಪ ವಿರಕ್ತನ ನಿಲುಕಡೆಯ ಬಲ್ಲವರು ಆರೆಂದಡೆ ಸುಜ್ಞಾನೋದಯವಾಗಿ, ಶ್ರೀಗುರುಕಾರುಣ್ಯ ಪಡೆದು ಲಿಂಗಾಂಗಸಂಬಂಧಿಗಳಾದ ವೀರಮಾಹೇಶ್ವರರಾಗಲಿ ಅಥವಾ ಭಕ್ತಗಣಂಗಳಾಗಲಿ ಅಲ್ಲದೆ ವಿಪ್ರಮೊದಲು ಶ್ವಪಚಕಡೆಯಾಗಿ ಆವ ಜಾತಿಯಲ್ಲಿ ಆವನಾದಡೇನು ಸುಜ್ಞಾನೋದಯವಾದ ಜ್ಞಾನಕಲಾತ್ಮರು ಬಲ್ಲರಲ್ಲದೆ ಮಿಕ್ಕಿನ ಭಿನ್ನಭಾವಿಗಳಾದ ವೇದಾಂತಿ, ಸಿದ್ಧಾಂತಿ ಯೋಗಮಾರ್ಗಿಗಳು ಮೊದಲಾದ ಕರ್ಮಕಾಂಡಿಗಳಾದ ವೇಷಧಾರಿಗಳೆತ್ತ ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ ?
--------------
ಕಾಡಸಿದ್ಧೇಶ್ವರ
ಶರಣರ ನಿಲುಕಡೆ ದಾರುಬಲ್ಲರಯ್ಯ ? ಶರಣರ ನಿಲವ ಉರಿಲಿಂಗಪೆದ್ದಯ್ಯಗಳು, ನುಲಿಯ ಚಂದಯ್ಯಗಳು, ಹಡಪದ ಅಪ್ಪಣ್ಣಗಳು, ಮ್ಯಾದಾರ ಕೇತಯ್ಯಗಳು, ಗಜೇಶ ಮಸಣಯ್ಯಗಳು, ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು ಮೊದಲಾದ ಏಳುನೂರೆಪ್ಪತ್ತು ಪ್ರಮಥಗಣಂಗಳು ಬಲ್ಲರಲ್ಲದೆ ಮಿಕ್ಕಿನ ಭವಭಾರಿಗಳಾದ ವೇದಾಂತಿ, ಸಿದ್ಧಾಂತಿ, ಯೋಗಮಾರ್ಗಿಗಳು ಮೊದಲಾದ ಭಿನ್ನಭಾವ ಜೀವಾತ್ಮರೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ ?
--------------
ಕಾಡಸಿದ್ಧೇಶ್ವರ
ಕಲ್ಯಾಣನಗರದ ಬಸವೇಶ್ವರನ ಪ್ರಮಥಗಣಂಗಳ ಮಿಕ್ಕಪ್ರಸಾದಕೊಂಡದಲ್ಲಿ ಮರುಳಶಂಕರದೇವರು ಹನ್ನೆರಡುವರ್ಷ ಅಡಗಿರ್ದನೆಂದು ವೇದಾಂತಿ ಸಿದ್ಧಾಂತಿ ಯೋಗಮಾರ್ಗಿಗಳು ಮೊದಲಾದ ಭಿನ್ನಭಾವದ ಶಾಸ್ತ್ರಸಂಧಿಗಳು ಪೇಳುತಿರ್ಪರು. ಇದರ ಭೇದವ ತಿಳಿಯಬಲ್ಲ ಜ್ಞಾನಿಗಳು ಎನಗೆ ಪೇಳಿರಿ, ಇಲ್ಲದ ಅಜ್ಞಾನಿಗಳು ನಮ್ಮ ನಿರ್ಮಾಯಪ್ರಭುವಿನ ಶರಣರ ಕೇಳಿರಿ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬೇವಿನಮರಕ್ಕೆ ಬೆಲ್ಲದ ಕಟ್ಟೆಯ ಕಟ್ಟಿ, ಚಿನ್ನಿ ಸಕ್ಕರೆಯ ಖಾತವ ಹಾಕಿ, ಜೇನುತುಪ್ಪ ನೊರೆವಾಲೆಂಬ ನೀರೆರೆದರೆ, ಬೇವಿನಮರವಳಿದು ಬೆಲ್ಲದ ಮರವಾಗಬಲ್ಲುದೆ ? ಮಾವಿನಮರಕ್ಕೆ ವಿಷದ ಕಟ್ಟೆಯ ಕಟ್ಟಿ, ಉಪ್ಪಿನ ಖಾತವ ಹಾಕಿ, ಬೇವಿನ ಈಚಲ ತಾಡಿನ ಹಣ್ಣು ಮೊದಲಾದ ತ್ರಿವಿಧ ಹಣ್ಣಿನ ರಸವೆಂಬ ನೀರೆರೆದರೆ ಮಾವಿನಮರವಳಿದು ಬೇವು ಈಚಲ ತಾಡ ಮೊದಲಾದ ತ್ರಿವಿಧ ವೃಕ್ಷವಾಗುವುದೆ ? ಇಂತೀ ದೃಷ್ಟಾಂತದಂತೆ ಲೋಕದ ಮಧ್ಯದಲ್ಲಿ ಸಂಸಾರವಿಷಯರಸಪೂರಿತವಾದ ಕಡುಪಾತಕ ಜಡಜೀವಿಗಳಾದ ಕುರಿಮನುಜರ ತಂದು ಭಿನ್ನಜ್ಞಾನಿಗಳಾದ ಆಶಾಬದ್ಭ ಗುರುಮೂರ್ತಿಗಳು ಅಂತಪ್ಪ ಜಡಮತಿಗಳಿಗೆ ವಿಭೂತಿಯ ಪಟ್ಟವಗಟ್ಟಿ, ರುದ್ರಾಕ್ಷಿಯ ಧರಿಸಿ, ಅವನ ಮಸ್ತಕದ ಮೇಲೆ ಪತ್ರಿ ಪುಷ್ಪವನಿಟ್ಟು, ಮೂರೇಳು ಪೂಜೆಯ ಮಾಡಿ, ಇದಕ್ಕೆ ದೃಷ್ಟಾಂತ : ಹಸಿಯ ಕುಳ್ಳಲ್ಲಿ ಬೆಂಕಿಯನಿಟ್ಟು ಊದಿ ಪುಟುಮಾಡುವ ಮರುಳರಂತೆ, ಬರಡು ಆವಿನ ಹಾಲ ಕರಸಿಹೆನೆಂಬ ಅಧಮನಂತೆ, ದುಮ್ಮಡಿಯ ಹಚ್ಚಿ ಊದಿ ಕಿವಿಯೊಳಗಣ ತೊನಸಿ ತೆಗೆವ ಗಂಧಿಗಾರನಂತೆ, ಅಂತಪ್ಪ ಮಲತ್ರಯಯುಕ್ತವಾದ ಜೀವಾತ್ಮರ ದಕ್ಷಿಣ ವಾಮಭಾಗದ ಕರ್ಣದಲ್ಲಿ ತಾರಕಮಂತ್ರದುಪದೇಶವನು ತಮ್ಮ ನಿಲವ ತಾವರಿಯದ ಭಿನ್ನಭಾವದ ಗುರುಮೂರ್ತಿಗಳು ಊದಿ ಊದಿ ಬಾಯಾರಿ ಗಂಟಲೊಣಗಿ ಧ್ವನಿಬಿದ್ದು ದಣಿದು ಹೋದರಲ್ಲದೆ ಸದ್ಭಕ್ತ ಶರಣಜನಂಗಳು ಮಾಡಲರಿಯರು. ಮತ್ತಂ, ಚಿದಂಶಿಕನಾದಾತ್ಮನು ಶಿವಕೃಪೆಯಿಂ ಸುಜ್ಞಾನೋದಯವಾಗಿ, ಸಕಲಪ್ರಪಂಚವನ್ನೆಲ್ಲ ನಿವೃತ್ತಿಯ ಮಾಡಿ, ಶ್ರೀಗುರುಕಾರುಣ್ಯವ ಪಡೆದ ಲಿಂಗಾಂಗಸಂಬಂಧಿಯಾದ ಸದಾಚಾರಸದ್ಭಕ್ತ ಶರಣಜನಂಗಳಿಗೆ ವೇದಾಂತಿ, ಸಿದ್ಧಾಂತಿ ಯೋಗಮಾರ್ಗಿಗಳು ಮೊದಲಾದ ಸಕಲ ಭಿನ್ನಭಾವದ ಜೀವಾತ್ಮರು ವೇದಾಗಮ ಶಾಸ್ತ್ರ ಪುರಾಣ ತರ್ಕ ತಂತ್ರಗಳೆಲ್ಲವು ತಮ್ಮ ವೇದಾಗಮ ಬೋಧಿಸಿ ಶಿವಾಗಮವನೋದಿದ ಶಿವಶರಣರಿಗೆ ಹೇಳಿ ಹೇಳಿ ತಾವೇ ಬೇಸತ್ತು ಬಳಲಿ ಬೆಂಡಾಗಿ ಮುಖಭಂಗಿತರಾಗಿ ಹೋದರಲ್ಲದೆ ಅವರೇನು ಮರಳಿ ಜಡಮತಿಜೀವರಾಗಲರಿಯರು. ಅಂತಪ್ಪ ಶಿವಜ್ಞಾನಸಂಪನ್ನರಾದ ಶರಣಜನಂಗಳು ಎಷ್ಟು ಪ್ರಪಂಚವ ಮಾಡಿದಡೂ ಮಲತ್ರಯಯುಕ್ತವಾದ ಜೀವರಾಗಲರಿಯರು. ಅವರು ಎಷ್ಟು ಕ್ರೀಯವನಾಚರಿಸಿದೊಡೆಯು ಫಲಪದವಿಯ ಪಡೆದು ಭವಭಾರಕ್ಕೆ ಬರುವ ಜಡಮತಿ ನರಕಜೀವಿಗಳಾಗಲರಿಯರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->