ಅಥವಾ

ಒಟ್ಟು 17 ಕಡೆಗಳಲ್ಲಿ , 8 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೋಗವ ಸಾದ್ಥಿಸಿದವನೊಬ್ಬ ನಿಜಗುಣ; ಯೋಗವ ಸಾದ್ಥಿಸಿದವನೊಬ್ಬ ವೃಷಭಯೋಗೀಶ್ವರ; ಯೋಗವ ಸಾದ್ಥಿಸಿದವನೊಬ್ಬ ಶಿವನಾಗಮಯ್ಯ; ಯೋಗವ ಸಾದ್ಥಿಸಿದೆ ನಾನೊಬ್ಬ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಕೂಡುವ ಯೋಗವ.
--------------
ಸಿದ್ಧರಾಮೇಶ್ವರ
ಯೋಗಾಭ್ಯಾಸ ಯೋಗಾಭ್ಯಾಸವೆಂದೆಂಬಿರಿ ಯೋಗವು ಅಭ್ಯಾಸವೆ ? ಅಭ್ಯಾಸವು ಯೋಗವೆ ಅಯ್ಯಾ ? ಯೋಗಾಭ್ಯಾಸವೆಂಬನ್ನಕ್ಕ ತಾನಾ ಯೋಗಿಯೆ ಅಯ್ಯಾ ? ಯೋಗವ ನುಡಿವರೆ ಅಯ್ಯಾ ? ಗುರುಮತದಿಂ ಭಾವಿಸಲು ಸರ್ವವೂ ಪರಬ್ರಹ್ಮ, ಶ್ರೀಗುರುವಿನ ಶ್ರೀಪಾದಧ್ಯಾನವೇ ಯೋಗ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಬಿಂದು ನಾದವನೊಂದು ರೂಪು ಮಾಡಿ ಮನವ ಸಂದ್ಥಿಸಿ ಬಂದ್ಥಿಸಿ ನಿಲಿಸಿ ಇಂದ್ರಿಯಂಗಳನೇಕಮುಖವ ಮಾಡಿ ಚಂದ್ರ ಸೂರ್ಯರನೊಂದು ಮಾರ್ಗದಲ್ಲಿ ನಡೆಸಿ ಚೌದಳಮಧ್ಯದ ಜ್ಞಾನಪೀಠದಲ್ಲಿರ್ದ ಅಮೃತಲಿಂಗವ ಕಂಡು ಕೂಡುವ ಬೆಡಗಿನ ಯೋಗವ ನಿಮ್ಮ ಶರಣರಲ್ಲದೆ ಉಳಿದ ಭವರೋಗಿಗಳೆತ್ತ ಬಲ್ಲರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?
--------------
ಸ್ವತಂತ್ರ ಸಿದ್ಧಲಿಂಗ
ಆದಿ ಅನಾದಿ ನಿತ್ಯಾನಿತ್ಯವ ತಿಳಿಯಲರಿಯದೆ ವಾಯಕ್ಕೆ ಪರಬ್ರಹ್ಮವ ನುಡಿವ ವಾಯುಪ್ರಾಣಿಗಳವರೆತ್ತ ಬಲ್ಲರೋ, ಆ ಪರಬ್ರಹ್ಮದ ನಿಜದ ನಿಲವ ? ಅದೆಂತೆಂದಡೆ ; ಆದಿಯೆ ದೇಹ, ಅನಾದಿಯೆ ನಿರ್ದೇಹ, ಆದಿಯೆ ಸಕಲ, ಅನಾದಿಯೆ ನಿಷ್ಕಲ, ಆದಿಯೆ ಜಡ, ಅನಾದಿಯೆ ಅಜಡ. ಆದಿಯೆ ಕಾಯ, ಅನಾದಿಯೆ ಪ್ರಾಣ. ಈ ಎರಡರ ಯೋಗವ ಭೇದಿಸಿ ತನ್ನಿಂದ ತಾನೆ ತಿಳಿದು ನೋಡಲು, ಆದಿ ಸಂಬಂಧವಪ್ಪ ಭೂತಂಗಳು ನಾನಲ್ಲ. ದಶವಿಧೇಂದ್ರಿಯಂಗಳು ನಾನಲ್ಲ, ದಶವಾಯುಗಳು ನಾನಲ್ಲ. ಅಷ್ಟಮದಂಗಳು, ಸಪ್ತವ್ಯಸನಂಗಳು, ಅರಿಷಡ್ವರ್ಗಂಗಳು, ಷಡೂರ್ಮಿಗಳು, ಷಡ್ಬ್ರಮೆಗಳು, ಷಡ್ಭಾವವಿಕಾರಂಗಳು, ಷಟ್ಕರ್ಮಂಗಳು, ಷಡ್ಧಾತುಗಳು, ತನುತ್ರಯಂಗಳು, ಜೀವತ್ರಯಂಗಳು, ಮಲತ್ರಯಂಗಳು, ಮನತ್ರಯಂಗಳು, ಗುಣತ್ರಯಂಗಳು, ಭಾವತ್ರಯಂಗಳು, ತಾಪತ್ರಯಂಗಳು, ಅಂತಃಕರಣಂಗಳು ಇಂತಿವಾದಿಯಾಗಿ ತೋರುವ ತೋರಿಕೆಯೇನೂ ನಾನಲ್ಲ, ನನ್ನವಲ್ಲ. ಇಂತಿವೆಲ್ಲವೂ ನನ್ನಾಧೀನವಾಗಿಪ್ಪವು ನಾನಿವರಾಧೀನದವನಲ್ಲ. ನಾನು ತೂರ್ಯ ತೂರ್ಯಾತೀತವಪ್ಪ ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವಸ್ತುವೆ ತನ್ನಿರವೆಂದು ತಿಳಿಯೆ, ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದ ಬೆಸುಗೆ ಬಿಟ್ಟು ನಿರಾಳದಲ್ಲಿ ನಿಜವನೈದಲರಿಯದೆ ಮತ್ತೆಯುಂ ಭೌತಿಕ ತತ್ವಸಂಬಂಧಿಯಾಗಿ ಇರುತ್ತಿರಲು, ಇಂತೀ ತತ್ವದಾದಿ ತಾನೆಂತೆನಲು ಆ ಪರಬ್ರಹ್ಮವಪ್ಪ ನಿತ್ಯನಿರಾಳ ನಿಃಶೂನ್ಯಲಿಂಗವೆ ತನ್ನ ಲೀಲಾವಿಲಾಸದಿಂದ ತಾನೆ ಸುನಾದ ಬಿಂದು ಪ್ರಕಾಶ ತೇಜೋಮೂರ್ತಿಯಾಗಿ ನಿಂದು ಮಹಾಲಿಂಗವೆಂದೆನಿಸಿತ್ತು. ಆ ಮಹಾಲಿಂಗವೆ ಪಂಚಸಾದಾಖ್ಯವೆಂದೆನಿಸಿತ್ತು. ಆ ಪಂಚಸಾದಾಖ್ಯವೆ ಪಂಚಲಿಂಗ ಪ್ರಕಾಶವೆಂದೆನಿಸಿತ್ತು. ಆ ಪಂಚಲಿಂಗ ಪ್ರಕಾಶವೆ ಪಂಚಮುಖವೆಂದೆನಿಸಿತ್ತು. ಆ ಪಂಚಮುಖದಿಂದವೆ ಪಂಚಾಕ್ಷರಿಯುತ್ಪತ್ತಿ. ಆ ಪಂಚಾಕ್ಷರಿಯಿಂದವೆ ಪಂಚಕಲೆಗಳುತ್ಪತ್ತಿ. ಆ ಪಂಚಕಲೆಗಳಿಂದವೆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳುತ್ಪತ್ತಿ. ಆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳಿಂದವೆ ಪಂಚತನ್ಮಾತ್ರಂಗಳುತ್ಪತ್ತಿ. ಆ ಪಂಚತನ್ಮಾತ್ರಂಗಳಿಂದವೆ ಪಂಚಭೂತಂಗಳುತ್ಪತ್ತಿ. ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು. ಆ ಅಂಗಕ್ಕೆ ಜ್ಞಾನೇಂದ್ರಿಯಂಗಳು ಕರ್ಮೇಂದ್ರಿಯಂಗಳು ಪ್ರತ್ಯಂಗವೆಂದೆನಿಸಿತ್ತು. ಇಂತು ದೇಹ ಸಂಬಂಧಮಂ ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ, ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು ಎಲ್ಲಿಯಾಯಿತ್ತು ಅಲ್ಲಿಯೇ ಅಡಗಿಸಿ ಆ ಕಾಯದ ಪೂರ್ವಾಶ್ರಯವನಳಿದು ಮಹಾ ಘನಲಿಂಗವ ವೇಧಿಸಿ ಕೊಟ್ಟು, ಶಿವ ತಾನೆ ಗುರುವಾಗಿ ಬಂದು ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿ ಎಂತೆಂದಡೆ ಆತ್ಮಗೂಡಿ ಪಂಚಭೂತಂಗಳನೆ ಷಡ್ವಿಧ ಅಂಗವೆಂದೆನಿಸಿ, ಆ ಅಂಗಕ್ಕೆ ಆ ಕಲೆಗಳನೆ ಷಡ್ವಿಧ ಶಕ್ತಿಗಳೆಂದೆನಿಸಿ, ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ, ಆ ಭಕ್ತಿಗಳಿಗೆ ಭಾವ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಂಗಳನೆ ಷಡ್ವಿಧ ಹಸ್ತಂಗಳೆಂದೆನಿಸಿ, ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ, ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯಪದಾರ್ಥಂಗಳೆಂದೆನಿಸಿ, ಆ ದ್ರವ್ಯಪದಾರ್ಥಂಗಳು ಆಯಾಯ ಮುಖದ ಲಿಂಗಂಗಳಲ್ಲಿ ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ. ಅಂಗಸ್ಥಲಂಗಳಡಗಿ ತ್ರಿವಿಧ ಲಿಂಗಾಂಗಸ್ಥಲಂಗಳುಳಿದು ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ ಗುರುವಿನಲ್ಲಿ ಶುದ್ಧಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ, ಜಂಗಮದಲ್ಲಿ ಪ್ರಸಿದ್ಧಪ್ರಸಾದ. ಇಂತೀ ತ್ರಿವಿಧ ಪ್ರಸಾದವು ಏಕಾರ್ಥವಾಗಿ, ಮಹಾಘನ ಪರಿಪೂರ್ಣಪ್ರಸಾದವಳವಟ್ಟ ಶರಣ ಜ್ಞಾನಿಯಲ್ಲ, ಅಜ್ಞಾನಿ ಮುನ್ನವೇ ಅಲ್ಲ. ಶೂನ್ಯನಲ್ಲ, ನಿಃಶೂನ್ಯ ಮುನ್ನವೇ ಅಲ್ಲ. ದ್ವೈತಿಯಲ್ಲ, ಅದ್ವೈತಿ ಮುನ್ನವೇ ಅಲ್ಲ. ಇಂತೀ ಉಭಯಾತ್ಮಕ ತಾನೆಯಾಗಿ ? ಇದು ಕಾರಣ, ಇದರ ಆಗುಹೋಗು ಸಕೀಲಸಂಬಂಧವ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರೇ ಬಲ್ಲರು.
--------------
ಅಕ್ಕಮಹಾದೇವಿ
ಂಗವ ಪೂಜಿಸಿದ ಫಲ ನೀಲಲೋಚನೆಗಾಯಿತ್ತು. ಜಂಗಮವ ಪೂಜಿಸಿದ ಫಲ ಬಸವಣ್ಣಂಗಾಯಿತ್ತು. ಮಂತ್ರವ ಪೂಜಿಸಿದ ಫಲ ಅಜಗಣ್ಣಂಗಾಯಿತ್ತು. ಯೋಗವ ಪೂಜಿಸಿದ ಫಲ ಸಿದ್ಧರಾಮಂಗಾಯಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆದಿಯಲ್ಲಿ ಗುರುಬೀಜವಾದ ಪಿಂಡಕ್ಕೆ, ಅನಾದಿಯೆಂಬುದನೊಬ್ಬರು ತಿಳುಹಲುಂಟೆ ? ಆದಿ ಕಾಯ ಅನಾದಿ ಪ್ರಾಣವಾಗಿಪ್ಪ ಯೋಗವ ಭೇದಿಸಿ ತನ್ನೊಳಗೆ ತಾನೆ ತಿಳಿದು ನೋಡಲು `ಸ್ಯೋಹಂ' ಎಂಬುದು ತಾನೆ ಸತ್ಯ ನೋಡಾ ! (`ಕೋಹಂ' ಎಂಬುದು ತಾನಸತ್ಯ ನೋಡಾ?)
--------------
ಅಲ್ಲಮಪ್ರಭುದೇವರು
ಸ್ಥೂಲ ಸೂಕ್ಷ ್ಮ ಕಾರಣಮಯಂಗಳಲ್ಲಿ, ಇಷ್ಟ ಪ್ರಾಣ ಭಾವಂಗಳಲ್ಲಿ, ಉಚಿತವನರಿದು ಕೂಡುವುದೆ ಯೋಗ. ಆ ಯೋಗವ ಪ್ರಯೋಗಿಸಿ ನಿಂದುದೆ ಕಾಲಾಂತಕ ಭೀಮೇಶ್ವರಲಿಂಗವು ಉಭಯವನಳಿದಭಾವ.
--------------
ಡಕ್ಕೆಯ ಬೊಮ್ಮಣ್ಣ
ನಾಸಿಕವಿದ್ದು ನಾಸಿಕರೋಗವಿದ್ದಡೆಂತು? ಅಲ್ಲಿ ಯೋಗವ ನಡೆಸಲು ಮನಕ್ಕೆ ಶಾಂತಿಯಿಲ್ಲ. ಶಾಂತಿಯಿಲ್ಲದಲ್ಲಿ ಭವಶಾಂತಿಯೆಂತು, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಯೋಗದ ಹೊಲಬ ಸಾಧಿಸಬಾರದು. ಯೋಗವೆಂಟರ ಹೊಲಬಲ್ಲ. ಯೋಗ ಒಂಬತ್ತರ ನಿಲವಲ್ಲ. ಯೋಗವಾರರ ಪರಿಯಲ್ಲ. ಧರೆಯ ಮೇಲಣ ಅಗ್ನಿ ಮುಗಿಲ ಮುಟ್ಟದಿಪ್ಪಡೆ ಯೋಗ. ಮನದ ಕಂಗಳ ಬೆಳಗು ಸಸಿಯ ಮುಟ್ಟಿದೆನೆನ್ನದೆ ಘನವ ಮನವನೊಳಕೊಂಡಡದು ಯೋಗ. ವನಿತೆಯರರಿವರನು ಪತಿಯೊಮ್ಮೆ ಕೂಡಿ ತಳುವಳಿದಿರಬಲ್ಲಡದು ಯೋಗ. ಘನಮಹಿಮ ಪ್ರಭುವಿನ ಸಮರಸ ಯೋಗವ ಕಂಡು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು.
--------------
ಘಟ್ಟಿವಾಳಯ್ಯ
ನೋಡುವರೆಲ್ಲರು ಆಡಬಲ್ಲರೆ? ಮಾತನಾಡುವರೆಲ್ಲರು ಲಿಂಗಾಂಗಯೋಗ ಬಲ್ಲರೆ? ಸಾಧನೆಯ ಮಾಡುವ ಬಾಲರೆಲ್ಲರೂ ಕಳನಹೊಕ್ಕು ಕಾದಬಲ್ಲರೆ? ಈ ಮಾತಿನ ಮಾಲೆಯ ಸಂಸಾರದ ತೂತ ಯೋಗಿಗಳೆಲ್ಲರೂ ಲಿಂಗಾಂಗ ನಿಹಿತ ಯೋಗವ ಬಲ್ಲರೆ? ಶಂಭುವಿನಿಂದಿತ್ತ ಸ್ವಯಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 54 ||
--------------
ದಾಸೋಹದ ಸಂಗಣ್ಣ
ಅನಂತ ಜನ್ಮಗಳ ಪಾಪಂಗಳು ಸವೆದು ಹೋಗಿ ಶ್ರೀಗುರುವಿನ ಕರುಣಾಕಟಾಕ್ಷದಿಂದ ಪ್ರಾಣಲಿಂಗೋಪದೇಶವ ಪಡೆದು ಸದ್ಭಕ್ತರಾಗಿ ಶಿವಲಿಂಗ ದರ್ಶನ ಸ್ಪರ್ಶನವ ಮಾಡಿ ಆ ಲಿಂಗವನಂಗದಲ್ಲಿ ಧರಿಸಿಕೊಂಡು ಅಂಗವೇ ಲಿಂಗ ಲಿಂಗವೇ ಅಂಗ ಪ್ರಾಣವೇ ಲಿಂಗ ಲಿಂಗವೇ ಪ್ರಾಣವಾಗಿ ಅಂತರಂಗ ಬಹಿರಂಗ ಸರ್ವಾಂಗವೆಲ್ಲವೂ ಲಿಂಗವಾದ ಬಳಿಕ ಇಂತೀ ಶ್ರೀಗುರು ಕೊಟ್ಟ ಲಿಂಗವ ಬಿಟ್ಟು ಬೋರೆ ಮತ್ತೆ ಆತ್ಮತತ್ತ್ವವ ವಿಚಾರಿಸಿ ನೋಡಬೇಕೆಂದು ಪರಮಾತ್ಮನಲ್ಲಿ ಯೋಗವ ಮಾಡಿ ಯೋಗಿಗಳಾಗಿ ಮುಕ್ತರಾದೆವೆಂಬಿರಿ. ಶಿವಶಿವಾ, ಆತ್ಮನನು ಪರಮಾತ್ಮನನು ಶ್ರೀ ಗುರುಸ್ವಾಮಿ ಒಂದು ಮಾಡಿ ಇದೇ ನಿನ್ನ ನಿಜತತ್ತ್ವವೆಂದು ಅರುಹ ಹೇಳಿ ತೋರಿಸಿಕೊಟ್ಟ ಬಳಿಕ ಇಂತಹ ಗುರುಸ್ವಾಮಿಯ ಆಜ್ಞೆಯ ಮೀರಿ ಲಿಂಗವನರಿಯದೆ ಲಿಂಗಬಾಹಿರರಾದ ದ್ವಿಜರನು ಯೋಗಿಯನು ಸನ್ಯಾಸಿಯನು ಗುರುವೆಂದು ಭಾವಿಸಬಹುದೆ ? ಶಿವ ಶಿವಾ, ಅದು ಗುರುದ್ರೋಹ. ಪರಶಿವಮೂರ್ತಿಯಾದ ಗುರುಸ್ವಾಮಿಯು ಷಡ್ದರ್ಶನಗಳಿಗೂ ಸಮಸ್ತಮತಂಗಳಿಗೂ ಸಮಸ್ತಾಗಮಂಗಳಿಗೆಯೂ ಶಿವನೊಬ್ಬನೇ ಕರ್ತನೆಂದು, ಶಿವದರ್ಶನವೇ ವಿಶೇಷವೆಂದು, ಅಧಿಕವೆಂದು ಹೇಳಿ ತೋರಿ ಕೊಟ್ಟ ಬಳಿಕ ಶೈವವೆಂದು ಶಾಕ್ತೇಯವೆಂದು ವೈಷ್ಣವವೆಂದು ಗಾಣಪತ್ಯವೆಂದು ¸õ್ಞರವೆಂದು ಕಾಪಾಲಿಕವೆಂದು ಇಂತೀ ಷಡ್ದರ್ಶನಂಗಳಿಗೆಯೂ ಶಿವನೊಬ್ಬನೇ ಕರ್ತ, ಇಂತೀ ಷಡ್ದರ್ಶನಕ್ಕೆ ಶಿವದರ್ಶನವೇ ಅಧಿಕವೆಂದು, ಇಂತೀ ಶಿವದರ್ಶನ ಮಾರ್ಗವಿಲ್ಲದೆ ಮುಕ್ತಿಯಿಲ್ಲವೆಂದು, ಆ ಪರಶಿವನೆಂಬ ಗುರುಮೂರ್ತಿ ಅರುಹಿ ಕಾಣಿಸಿ ಹೇಳಿ ತೋರಿ ಕೊಟ್ಟ ಬಳಿಕ ಅದೆಂತೆಂದಡೆ ಶಿವಧರ್ಮೇ_ ದರ್ಶನ ಷಡ್ವಿಧಂ ಪ್ರೋಕ್ತಂ ಶೈವಂ ಶಾಕ್ತಂ ವೈಷ್ಣವಂ ಗಣಾಪತ್ಯಂ ಚ ¸õ್ಞರಂ ಚ ಕಾಪಾಲಿಕಮಿತಿ ಸ್ಮೃತಮ್ ಮತ್ತಂ ಷಡ್ದರ್ಶನಾದಿ ದೇವೋ ಹಿ ಮಹಾದೇವೋ ನ ಸಂಶಯಃ ಮಂತ್ರಪೂಜಾದಿ ಭಿನ್ನಾನಾಂ ಮೂಲಂ ಪರಶಿವಸ್ತಥಾ ಎಂಬುದಾಗಿ, ಇನ್ನು ವೈಷ್ಣವವೆಂದು ಆತ್ಮಯೋಗವೆಂದು ಶಾಕ್ತಿಕವೆಂದು ವೈದಿಕವೆಂದು ಇಂತೀ ಭ್ರಾಂತಿನ ದರ್ಶನಮತಂಗಳನು ಕೇಳಿ, ಅಲ್ಲಿಯ ಧರ್ಮಾಧರ್ಮಂಗಳನು ಕೇಳಿ, ಅಲ್ಲಿ ಉಪದೇಶವ ಮಾಡಿಸಿಕೊಳ್ಳಬಹುದೇ ? ಶಿವಶಿವಾ, ಅದು ಗುರುದ್ರೋಹ, ಆ ಶ್ರೀಗುರುವಿನಾಜ್ಞೆಯ ಮೀರದಿರಿ. ಆ ಪರಶಿವಮೂರ್ತಿತತ್ತ್ವವೇ ಗುರುಸ್ವಾಮಿಯಾಗಿ ಚೆನ್ನಾಗಿ ಅರುಹಿ ತೋರಿ ಹೇಳಿ ಕೊಟ್ಟನಲ್ಲದೆ ಆ ಗುರುಸ್ವಾಮಿ ಏನು ತಪ್ಪಿ ಹೇಳಿದುದಿಲ್ಲ. ಶ್ರುತಿ ``ಏಕೋ ದೇವೋ ನ ದ್ವಿತೀಯಾಯ ತಸ್ಥೇ' ಎಂದುದಾಗಿ ಶಿವನೊಬ್ಬನೇ ದೈವವೆಂದು ತೋರಿಕೊಟ್ಟ ಶ್ರೀಗುರು. ಶ್ರುತಿ ``ಏಕೋ ಧ್ಯೇಯಃ' ಎಂದು ಶಿವನೊಬ್ಬನನ್ನೇ ಧ್ಯಾನಿಸಿ ಪೂಜಿಸೆಂದು ಹೇಳಿ ತೋರಿಕೊಟ್ಟನು ಶ್ರೀಗುರು. ಶ್ರುತಿ ``ನಿರ್ಮಾಲ್ಯಮೇವ ಭಕ್ಷಯಂತಿ' ಎಂದುದಾಗಿ ಶಿವಪ್ರಸಾದವನೆ ಗ್ರಹಿಸಿಯೆಂದು ಪ್ರಸಾದವ ಕರುಣಿಸಿದ ಶ್ರೀಗುರು ಇಂತಹ ಶ್ರೀಗುರು ಮರುಳನು, ನೀನು ಬುದ್ಧಿವಂತನೇ ? ಕೇಳಾ, ನಿಮ್ಮ ಗುರುವ ಮರುಳ ಮಾಡಿದಿರಿ, ಅದೆಂತೆಂದಡೆ: ನಿಮ್ಮಿಚ್ಛೆಯಲ್ಲಿಯೇ ಬಂದುದಾಗಿ, ಅದಲ್ಲದೆ ಮತ್ತೆ ಕೇಳು: ಪೂರ್ವದ ಪುರುಷರು ಮರುಳರು, ನೀನೊಬ್ಬನೇ ಬುದ್ಧಿವಂತ ? ಕೇಳೋ: ದೂರ್ವಾಸ ಉಪಮನ್ಯು ದಧೀಚಿ ಜಮದಗ್ನಿ ಮಾರ್ಕಂಡೇಯ ಪರಾಶರ ಮೊದಲಾದ ಋಷಿಗಳೆಲ್ಲ ಶಿವಾರ್ಚನೆಯಂ ಮಾಡಿದರು. ಬ್ರಹ್ಮವಿಷ್ಣು ಮೊದಲಾದವರೆಲ್ಲರೂ ಶಿವಲಿಂಗಾರ್ಚನೆಯ ಮಾಡಿದರು, ಕೇಳಿರೇ ನೋಡಿರೇ ದೃಷ್ಟವನು. ಮತ್ಸ್ಯಕೇಶ್ವರ ಕೂರ್ಮೇಶ್ವರ ವರಾಹೇಶ್ವರ ನಾರಸಿಂಹೇಶ್ವರ ರಾಮೇಶ್ವರ ಎಂಬ ದಶಾವತಾರಗಳಲ್ಲಿ ಶಿವಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚಾನೆಯಂ ಮಾಡಿದರು. ಅನೇಕ ವೇದಶಾಸ್ತ್ರಾಗಮಪುರಾಣಂಗಳ ಕೇಳಿರೇ ನೋಡಿರೇ. ಯಂ ಯಂ ಕಾಮಯತೇ ಕಾಮಂ ತಂ ತಂ ಲಿಂಗಾರ್ಚನಾಲ್ಲಭೇತ್ ನ ಲಿಂಗೇ [ನ] ವಿನಾ ಸಿದ್ದಿದುರ್ಲಭಂ ಪರಮಂ ಪದಂ ಮತ್ತಂ ಅಸುರಾ ದಾನವಾಶ್ಚೈವ ಪಿಶಾಚೋರಗರಾಕ್ಷಸಾಃ ಆರಾಧ್ಯಂ ಪರಮಂ ಲಿಂಗಂ ಪ್ರಾಪುಸ್ತೇ ಸಿದ್ಧಿಮುತ್ತಮಾಮ್ ಮತ್ತಂ ಅಗ್ನಿಹೋತ್ರಶ್ಚವೇದಶ್ಚ ಯಜ್ಞಾಶ್ಚ ಬಹುದಕ್ಷಿಣಾಃ ಶಿವಲಿಂಗಾರ್ಚನಸ್ಯೈತೇ ಕೋಟ್ಯಂಶೇನಾಪಿ ನೋ ಸಮಾಃ ಎಂದುದಾಗಿ, ಇಂತು ಇದು ಮೊದಲಾದ ದೇವಜಾತಿಗಳೆಲ್ಲ ಶಿವಲಿಂಗಾರ್ಚನೆಯಂ ಮಾಡಿದುದಕ್ಕೆ ದೃಷ್ಟ ನೋಡಿರೇ: ಕಾಶೀಕ್ಷೇತ್ರದಲ್ಲಿ ಬ್ರಹ್ಮೇಶ್ವರ ಇಂದ್ರೇಶ್ವರ ಯಕ್ಷಸಿದ್ದೇಶ್ವರ ಎಂಬ ಲಿಂಗಂಗಳಂ ಪ್ರತಿಷಿ*ಸಿ ಶಿವಲಿಂಗಾರ್ಚನೆಯಂ ಮಾಡಿದರು. ತಾರಕ ರಾವಣಾದಿಗಳೆಲ್ಲ ಶಿವಲಿಂಗಾರ್ಚನೆಯಂ ಮಾಡಿದರು. ಇಂತವರೆಲ್ಲರು ಮರುಳರು, ನೀನೊಬ್ಬನೇ ಬುದ್ಧಿವಂತನೆ ? ಅದು ಕಾರಣ, ಆ ಶ್ರೀಗುರುವಿನಾಜ್ಞೆಯಂ ಮೀರಿ ಕೆಡದಿರಿ ಕೆಡದಿರಿ. ಆ ಮಹಾ ಶ್ರೀಗುರುವಿನ ವಾಕ್ಯವನೇ ನಂಬಿ, ಗುರುಲಿಂಗಜಂಗಮವನೊಂದೇಯೆಂದು ನಿಶ್ಚಯಿಸಿ, ಇದೇ ಅಧಿಕ, ಇದರಿಂದ ಬಿಟ್ಟು ಮತ್ತಾವುದು ಅಧಿಕವಿಲ್ಲ. ಅಂದು ಗುರುಲಿಂಗಜಂಗಮದಲ್ಲಿಯ ಭಕ್ತಿಯೆ ಭಕ್ತಿ, ಅರ್ಚನೆಯೇ ಅರ್ಚನೆ, ಆ ಸಂಗವೇ ಶಿವಯೋಗ, ಇದು ಸತ್ಯ ಶಿವನಾಣೆ, ಉರಿಲಿಂಗಪೆದ್ಧಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಜನ್ಮಾಂತರಸಹಸ್ರೇಷು ತಪೋಧ್ಯಾನಸಮಾಧಿಭಿಃ ನರಾಣಾಂ ಕ್ಷೀಣಪಾಪಾನಾಂ ಶಿವಭಕ್ತಿಃ ಪ್ರಜಾಯತೇ ಇಂತೆಂದುದಾಗಿ, ಅನೇಕ ಜನ್ಮದ ಪಾಪಂಗಳು ಸವೆದು, ಶ್ರೀಗುರುಕಾರುಣ್ಯಮಂ ಪಡೆದು ಶಿವಭಕ್ತನಾಗಿ ಶಿವಲಿಂಗವಂ ಧರಿಸಿ, ಶಿವಲಿಂಗದರ್ಶನಸ್ಪರ್ಶನಂ ಮಾಡಿ ಇಷ್ಟಲಿಂಗ ಪ್ರಾಣಲಿಂಗಸಂಬಂಧ, ಅಂತರಂಗ ಬಹಿರಂಗ ಸರ್ವಾಂಗವಾದ ಬಳಿಕ ಮರಳಿ ಆತ್ಮತತ್ತ್ವವ ವಿಚಾರಿಸಿ, ಪರಮಾತ್ಮನಲ್ಲಿ ಯೋಗವ ಮಾಡಿ ಯೋಗಿಗಳಾದೆವೆಂಬಿರಿ. ಅದೇನು ಕಾರಣ, ಆತ್ಮನೇ ಪ್ರಾಣ, ಪರಮಾತ್ಮನೇ ಶಿವಲಿಂಗ. ಇಂತೀ ಪ್ರಾಣಾತ್ಮನನೂ ಪರಮಾತ್ಮನಪ್ಪ ಶಿವಲಿಂಗವನೂ ಶ್ರೀಗುರು ಯೋಗವ ಮಾಡಿ ತೋರಿಕೊಟ್ಟು, ಕರುಣಿಸಿದ ಬಳಿಕ ಗುರ್ವಾಜ್ಞೆಯಂ ಮೀರಿ, ದ್ವಿಜರನು ಸನ್ಯಾಸಿಯನು ಶ್ರೀಗುರ್ವಾಜ್ಞೆಯನರಿಯದ, ಶಿವನ ಮಹಾತ್ಮೆಯನರಿಯದ ಶಿವಲಿಂಗವೇ ಪರಮಾತ್ಮನೆಂಬ ತಾತ್ಪರ್ಯವನರಿಯದ ಈ ಭ್ರಷ್ಟರ ಮರಳಿ ಮರಳಿ ಗುರುವೆಂದು ಮಾಡಿ ಉಪದೇಶವಂ ಮಾಡಿಸಿಕೊಳಬಹುದೆ? ಶಿವ ಶಿವಾ! ಅದು ಗುರುದ್ರೋಹ, ಶ್ರೀಗುರು ತಪ್ಪಿ ಮಾಡಿದುದಿಲ್ಲ. ಶ್ರೀಗುರು ಸರ್ವಧರ್ಮಂಗಳಿಗೆಯೂ ಅಧಿಕಾಧಿಕವೆಂದು ಹೇಳಿ ತೋರಿಕೊಟ್ಟು ಕರುಣಿಸಿದ ಬಳಿಕ ಆತ್ಮಯೋಗವೆಂದು ವೈದಿಕವೆಂದು ಸಕಲವೆಂದು ನಿಷ್ಕಲವೆಂದು ವೈಷ್ಣವವೆಂದು ಮಾಯಾವಾದಿಗಳೆಂದು ಚಾರ್ವಾಕರೆಂದು ಬೌದ್ಧರೆಂದು ಇತ್ಯಾದಿ ಭಿನ್ನದರ್ಶನಂಗಳಲ್ಲಿ ಧರ್ಮಶಾಸ್ತ್ರಂಗಳ ಕೇಳಿ ಮರಳಿ ಉಪದೇಶವಂ ಮಾಡಿಸಿಕೊಳಬಹುದೆ? ಶಿವ ಶಿವಾ ಅದು ಗುರುದ್ರೋಹ, ಶ್ರೀಗುರು ತಪ್ಪಿ ಮಾಡಿದುದಿಲ್ಲ. ಶ್ರೀಗುರುವೇ ಪರಶಿವನಾಗಿ `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ ಎಂದುದಾಗಿ, `ಶಿವ ಏಕೋ ಧ್ಯೇಯಃ ಎಂದುದಾಗಿ, ಶಿವನನೇ ಪೂಜಿಸಿ ಶಿವನನೇ ಧ್ಯಾನಿಸಿ _ಎಂದು ಹೇಳಿ ತೋರಿಕೊಟ್ಟು ಕರುಣಿಸಿದ ಬಳಿಕ ಶಿವನಿರ್ಮಾಲ್ಯಕಂ ಶುದ್ಧಂ ಭುಂಜೀಯಾತ್ ಸರ್ವತೋ ದ್ವಿಜ ಅನ್ಯದೈವಸ್ಯ ನಿರ್ಮಾಲ್ಯಂ ಭುಕ್ತ್ಯಾಚಾಂದ್ರಾಯಣಂ ಚರೇತ್ ಇಂತೆಂದುದಾಗಿ, ಪ್ರಸಾದವ ಕರುಣಿಸಿದನು ಶ್ರೀಗುರು. ಆ ಶ್ರೀಗುರುವ ಭ್ರಷ್ಟನ ಮಾಡುವಿರಿ, ಗುರು ನಿಮ್ಮಿಚ್ಛೆಗೆ ಬಾರನಾಗಿ, ಪೂರ್ವಪುರುಷರು ಮರುಳರು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು ಕೆಡದಿರು. ದೂರ್ವಾಸ, ಅಗಸ್ತ್ಯ. ಭೃಗು, ದಧೀಚಿ, ಮಾರ್ಕಂಡೇಯ ಮೊದಲಾದ ಋಷಿಜನಂಗಳೆಲ್ಲರೂ ಶಿವಲಿಂಗಪ್ರತಿಷೆ*ಯ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರೆಲ್ಲರು ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು ಕೆಡದಿರು. ಮತ್ತೆ ವಿಷ್ಣು ಬ್ರಹ್ಮ ಇಂದ್ರ ಮೊದಲಾಗಿ ಶಿವಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರು ಮಾಡಿದುದಕ್ಕೆ ದೃಷ್ಟವ ನೋಡಿರೆ: ಮತ್ಸ್ಯಕೇಶ್ವರ, ಕೂರ್ಮೇಶ್ವರ, ಮಾಹೇಶ್ವರ, ರಾಮೇಶ್ವರವೆಂದು ಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರುಗಳೆಲ್ಲರು ಮರಳರು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು ಕೆಡದಿರು. ಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳು ಶಿವಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರು ಮಾಡಿದುದಕ್ಕೆ ದೃಷ್ಟವ ನೋಡಿರೆ: ಕಾಶೀಪುರದಲ್ಲಿ ಇಂದ್ರೇಶ್ವರ, ಬ್ರಹ್ಮೇಶ್ವರ, ಯಕ್ಷಸಿದ್ಧೇಶ್ವರವೆಂದು ಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯ ಮಾಡಿದರು. ಇವರೆಲ್ಲರೂ ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು, ಕೆಡದಿರು. ತಾರಕಾಸುರ ರಾವಣಾದಿಗಳೆಲ್ಲರೂ ಶಿವಲಿಂಗಪ್ರತಿಷೆ*ಯಂ ಮಾಡಿ, ಶಿವಲಿಂಗಾರ್ಚನೆಯಂ ಮಾಡಿದರು. ಇವರೆಲ್ಲರೂ ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ? ಇದು ಕಾರಣ, ಶ್ರೀಗುರುವೆ ಅಧಿಕ, ಶಿವಲಿಂಗವೇ ಅಧಿಕ ಶಿವಲಿಂಗಾರ್ಚನೆಯೇ ಅಧಿಕ, ಆ ಸಂಗವೇ ಸಂಗ, ಶ್ರೀಗುರುಲಿಂಗಜಂಗಮದ ಪೂಜೆಯೇ ಪೂಜೆ, ಅರ್ಚನೆಯೇ ಅರ್ಚನೆ, ಆ ಸಂಗವೇ ಸಂಗ ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
-->