ಅಥವಾ

ಒಟ್ಟು 4 ಕಡೆಗಳಲ್ಲಿ , 2 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂತಪ್ಪ ಘನತರಂಗವ ಕರಸ್ಥಲದಲ್ಲಿ ಬಿಜಯಂಗೆಯ್ಸಿಕೊಂಡು ಗುರುತೋರಿದ ಸದ್ಭಕ್ತಿಕ್ರೀಯಲ್ಲಿರದೆ, ಪಾದೋದಕ ಪ್ರಸಾದವ ಕೊಳ್ಳದೆ, ಯೋಗವೆಂದು ಅದ್ವೆ ೈತವೆಂದು ಭಂಡನೆ ಬಳಸುತಿಪ್ಪ ಮಿಟ್ಟೆಯ ಭಂಡರನೇನೆಂಬೆನೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ದೃಷ್ಟವಪ್ಪ ಗುರುಕರುಣದಲ್ಲಿ ಇಷ್ಟಂಗವ ಸಂಬಂಧಿಸಿಕೊಟ್ಟ ಬಳಿಕ ಮರಳಿ ಯೋಗವುಂಟೆ? ಸರ್ವಯೋಗಕ್ಕೆ ಶಿವಯೋಗ ಮಹಾಯೋಗವೆಂದರಿದ ಬಳಿಕ, ಮತ್ತೆ ಕಿರಿದು ಯೋಗವೆಂದು ಪಾದೋದಕ ಪ್ರಸಾದಕ್ಕೆ ಹೊರಗಾಗಿ ಗುರುವಾಜ್ಞೆಯ ಮೀರಿದ ಗುರುದ್ರೋಹಿಗಳ ಎನ್ನತ್ತ ತೋರದಿರಯ್ಯ, ನಿಮ್ಮ ಧರ್ಮ. ದೀಕ್ಷಾತ್ರಯದಲ್ಲಿ ಸಂಪನ್ನರಾಗಿ, ಪ್ರಸಾದದ್ಲ ಲೋಲುಪ್ತರಾಗಿ, ಜಂಗಮವೆ ಂಗವೆಂಬವರ ಎನಗೊಮ್ಮೆ ತೋರಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನಿಮ್ಮ ಧರ್ಮ.
--------------
ಸಿದ್ಧರಾಮೇಶ್ವರ
ಮಾಡಿ ಮಾಡಿ ನಿತ್ಯ ಲಿಂಗಾರ್ಚನೆಯ, ಮಾಡಿ ಮಾಡಿ ನಿತ್ಯ ಜಂಗಮಾರ್ಚನೆಯ, ಮಾಡಿ ಮಾಡಿ ವಿಸ್ತಾರವೆಂದು ಮಾಡಿ ಕೂಡಿದವರೆಲ್ಲ ನಿತ್ಯರಾದರು. ಮಾಡದೆ ಕೂಡದೆ ಯೋಗವೆಂದು, ಆತ್ಮಬೋಧೆಯೆಂದು, ಯೋಗಿಗಳ ಅನುಮತವೆಂದು, ಅಧ್ಯಾತ್ಮವ ನುಡಿದು ಶಿವಪೂಜೆಗೆ ದೂರವಾಗಬೇಡ. ಅಲ್ಲದೆ, ಕೆಲವರೊಳಗೆ ಆಡಿ ಕಪಿಲಸಿದ್ಧಮಲ್ಲಿಕಾರ್ಜುನನ ಚಿತ್ತಕ್ಕೆ ದೂರವಾಗದೆ ಶಿವಾರ್ಚನೆಯ ಮಾಡಿದಡೆ ದಿವ್ಯಯೋಗಿಯಪ್ಪೆ.
--------------
ಸಿದ್ಧರಾಮೇಶ್ವರ
ಯೋಗ ಯೋಗವೆಂದು ನುಡಿಯುತಿರ್ಪರೆಲ್ಲರು ; ಯೋಗದೊಳಗಣ ಯೋಗವನಾರೂ ಅರಿಯರಲ್ಲ ! ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗವೆಂದು ಯೋಗ ಚತುರ್ವಿಧದೊಳಗೆ, ಮೊದಲು ಮಂತ್ರಯೋಗದ ಭೇದವೆಂತೆಂದೊಡೆ : ಆವನಾನೊಬ್ಬ ಯೋಗಸಿದ್ಧಿಯ ಪಡೆವಾತನು ಪಕ್ಷಿಗಳುಲಿಯದ ಮುನ್ನ, ಪಶುಗಳು ಕೂಗದ ಮುನ್ನ, ಪ್ರಕೃತಿ ಆತ್ಮರು ಸುಳಿಯದ ಮುನ್ನ, ಶುಭಮುಹೂರ್ತದಲ್ಲಿ ಶಿವಧ್ಯಾನಮಂ ಮಾಡುತೆದ್ದು ಶೌಚಾಚಮನ ದಂತಧಾವನಂಗಳಂ ಮಾಡಿ ಜಲಸ್ನಾನಂಗೈದು, ಏಕಾಂತಸ್ಥಳದಲ್ಲಿ ಕಂಬಳಾಸನದಿ ಗದ್ದುಗೆಯಲ್ಲಿ ಪೂರ್ವಮುಖವಾಗಲಿ ಉತ್ತರಮುಖವಾಗಲಿ ತನಗಿಷ್ಟಾಸನದಲ್ಲಿ ಕುಳ್ಳಿರ್ದು, ಭಸ್ಮಸ್ನಾನಂಗಳನಾಚರಿಸಿ ಆಗಮೋಕ್ತದಿಂದೆ ಈಶ್ವರಾರ್ಚನೆಯಂ ಮಾಡಿ ಬಳಿಕ ಅಂತರಾಳಹೃದಯಕಮಲ ಕರ್ಣಿಕಾಸ್ಥಲದಲ್ಲಿಹ ಹಕಾರವೆಂಬ ಬೀಜಾಕ್ಷರಮಧ್ಯದಲ್ಲಿ ಮೂರ್ತಿಧ್ಯಾನಂ ಮಾಡುವುದೆಂತೆನೆ : ಶುದ್ಧಪದ್ಮಾಸನನಾಗಿ ಚಂದ್ರಕಲಾಧರನಾದ ಪಂಚಮುಖ ತ್ರಿನೇತ್ರಂಗಳುಳ್ಳ ಶೂಲ ವಜ್ರ ಖಡ್ಗ ಪರಶು ಅಭಯಂಗಳಾಂತ ಪಂಚ ದಕ್ಷಿಣಹಸ್ತಂಗಳುಳ್ಳ ನಾಗ ಪಾಶ ಘಂಟೆ ಅನಲ ಅಂಕುಶಂಗಳಾಂತ ಪಂಚ ವಾಮಕರಂಗಳುಳ್ಳ ಕಿರೀಟಾದ್ಯಾಭರಣಂಗಳಿಂದಲಂಕೃತನಾದ ಸ್ಫಟಿಕದ ಕಾಂತಿಮಯನಾದ ಸದಾಶಿವಮೂರ್ತಿಯ ಧ್ಯಾನಿಸುತ್ತೆ , ``ಓಂ ಅಸ್ಯ ಶ್ರೀಷಡಕ್ಷರಮಂತ್ರಸ್ಯ ವಾಮದೇವ ಋಷಿಃ ಪಂಕ್ತಿಃ ಛಂದಃ ಶ್ರೀಸದಾಶಿವೋ ದೇವತಾ ಓಂ ಬೀಜಂ ಉಮಾಶಕ್ತಿಃ ಉದಾತ್ತಸ್ವರಃ ಶ್ವೇತವರ್ಣಃ ಸದಾಶಿವಪ್ರೀತ್ಯರ್ಥೇ ಜಪೇ ವಿನಿಯೋಗಃ|'' ಎಂಬ ಷಡಕ್ಷರಮಂತ್ರಾನುಷಾ*ನಾದಿ ಅಖಿಳಮಂತ್ರಗಳಿಂದೆ ಕರಶಿರಾದಿ ಷಡಂಗನ್ಯಾಸಂಗಳಂ ಮಾಡಿ ನಿತ್ಯಜಪಾನುಷಾ*ನಮಂ ಮೋಕ್ಷಾರ್ಥಿಯಾದಾತನು ರುದ್ರಾಕ್ಷಿ ನೂರೆಂಟರಿಂದಾದಡೂ ಇಪ್ಪತ್ತೈದರಿಂದಾದಡೂ ಆಗಮೋಕ್ತಮಾರ್ಗದಿಂದೆ ಜಪಮಾಲಿಕೆಯಿಂದೆ ಅಂಗುಷ*ಮಧ್ಯಮೆಗಳಿಂದೆ ಉಪಾಂಶುರೂಪದಿಂದೆ ಧ್ಯಾನಪೂರ್ವಕದಿಂ ಜಪವಂ ಮಾಡುವುದೆ ಮಂತ್ರಯೋಗವೆನಿಸಿತ್ತು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->