ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಾತ್ಪರ ಚಿದ್ಬ್ರಹ್ಮಪರಶಿವಮೂರ್ತಿಯು ಮನು-ಮುನಿ, ಸಿದ್ಧ-ಸಾಧಕ, ಯಕ್ಷ-ರಾಕ್ಷಸ, ಯತಿ-ವ್ರತಿ, ಶೀಲ-ನೇಮಗಳ ಭಾವಾಭಾವಕ್ಕೆ ಮೆಚ್ಚಿ, ಅವರವರ ಕಾಂಕ್ಷೆಗಳಂತೆ ಫಲಪದದಾಯುಷ್ಯಕ್ಕೆ ಯೋಗ್ಯರಾಗಿ, ಅಷ್ಟಮಹದೈಶ್ವರ್ಯದಿಂದ ಬ್ರಹ್ಮನ ಉತ್ಪತ್ತಿ, ವಿಷ್ಣುವಿನ ಸ್ಥಿತಿ, ರುದ್ರನ ಲಯ, ಈಶ್ವರನ ತಿರೋಧಾನ, ಸದಾಶಿವನ ಅನುಗ್ರಹಕ್ಕೆ ಕಾರಣರಾಗಿ, ಶೈವಮಾರ್ಗದಿಂದೆ ನಿಜಮೋಕ್ಷವ ಕಾಣದೆ, ಅಷ್ಟಾವರಣದ ಚಿದ್ಬೆಳಗ ಸೇರಿದ ಸದ್ಭಕ್ತಿ-ಜ್ಞಾನ-ವೈರಾಗ್ಯ, ಸತ್ಯ-ಸದಾಚಾರವನರಿಯದೆ, ಇಹಲೋಕದ ಭೋಗವ ಪರಲೋಕದ ಮೋಕ್ಷಾಪೇಕ್ಷೆಯಿಂದ ಎಡೆಯಾಡುತ್ತ, ಪುಣ್ಯ-ಪಾಪ, ಸುಖ-ದುಃಖ, ಸ್ತುತಿ-ನಿಂದೆ, ಸಿರಿ-ದರಿದ್ರ. ಆಶೆ-ಆಮಿಷ, ರೋಗ-ರುಜಿನಗಳಿಂದ, ಶಿವನೆ ಹರನೆ ಭವನೆಯೆಂದು ಗೋಳಿಡುವವರಿಗೆ, ನಿರಾಕಾರಪರಿಪೂರ್ಣ ಪರಶಿವನು ಆಗಳು ಹಿಂದಾಗಿ, ಶಿವಗಣವ ಸೇರುವಂತೆ ಯೋಗಾಭ್ಯಾಸವ ತೋರಿ, ಅನಂತಮಣಿಮಾಲೆ ಜಪಕ್ರಿಯಾನುಷ್ಠಾನ ಮಂತ್ರ-ತಂತ್ರ-ಯಂತ್ರ-ಯಜ್ಞಾದಿಗಳ ಹೇಳಿ, ಪರಮಾರಾಧ್ಯ ನಿರವಯಪ್ರಭು ಮಹಾಂತನ ಗಣಾಚಾರಕ್ಕೆ ಅಯೋಗ್ಯರೆನಿಸಿರ್ಪರು ಕಾಣಾ ಸಿದ್ಧಮಲ್ಲಿಕಾರ್ಜುಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಇನ್ನು ಪ್ರತ್ಯಾಹಾರದ ಭೇದವೆಂತೆನೆ : ಯೋಗಾಭ್ಯಾಸವ ಮಾಡುವಲ್ಲಿ ಆಲಸ್ಯವಾದ ಮಂದಸ್ವರೂಪವಾದ ಅತಿ ಉಷ್ಣವಾದ ಅತಿ ಶೀತಲವಾದ ಅತಿ ಕಟುವಾದ ಅತಿ ಆಮ್ಲವಾದ ಅಪವಿತ್ರವಾದ ಅನ್ನಪಾನಂಗಳಂ ಬಿಟ್ಟು, ಯೋಗೀಶ್ವರರಿಗೆ ಸ್ವೀಕರಿಸಲು ಯೋಗ್ಯವಾದ ಗೋದುವೆ ಶಾಲಿ ಜವೆ ಹೆಸರು ಹಾಲು ತುಪ್ಪ ಜೇನುತುಪ್ಪ ಮುಂತಾದ ಪವಿತ್ರ ಅನ್ನಪಾನಂಗಳು ಬಹು ಬಹುಳವಲ್ಲದೆ, ಬಹು ಸೂಕ್ಷ್ಮವಲ್ಲದೆ, ಸುಪ್ರಮಾಣದಲ್ಲಿ ಸ್ವೀಕರಿಸುವುದೆ ಪ್ರತ್ಯಾಹಾರವೆನಿಸುವುದು. ಅಂತುಮಲ್ಲದೆ ಬಾಹ್ಯಾರ್ಥಂಗಳಲ್ಲಿ ಎರಗುವ ಚಿತ್ತಮಂ ಹೃದಯಾಕಾಶದಲ್ಲಿ ನಿಲಿಸುವುದೆ ಪ್ರತ್ಯಾಹಾರವು. ಮತ್ತೆ ಹೃದಯಸ್ಥಾನದಿಂ ಚಲಿಸುವ ಮನಮಂ ಮರಳಿ ಮರಳಿ ಅಲ್ಲಿಯೇ ಸ್ಥಾಪಿಸುವುದೇ ಪ್ರತ್ಯಾಹಾರವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->