ಅಥವಾ

ಒಟ್ಟು 11 ಕಡೆಗಳಲ್ಲಿ , 8 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪರಸ್ಥಾನದಲ್ಲಿ ಆನಂದಬ್ರಹ್ಮವ ಭೇದ್ಥಿಸುವ ಪರಿಯೆಂತೋ? ಪೂರ್ವದಕ್ಷಿಣವೆಂಬ ದಿಕ್ಕುಗಳಲ್ಲಿ ಸಮನಿಸುವ ಆತ್ಮ ಅಂತರ್ಯಾತ್ಮ ಭೂತಾತ್ಮ ಸರ್ವಾತ್ಮ ಪರಮಾತ್ಮವೆಂಬ ಆತ್ಮ ಪಂಚಕಗಳೆಂಬವನು ಹಿಂದು ಮುಂದರಿಯದೆ, ಮುಂದು ಹಿಂದೆಂದರಿಯದೆ ಸಂಯೋಗದಲಿಕ್ಕಿ ಪ್ರಯೋಗಿಸಿಹೆನೆಂಬ ಯೋಗಿ ಕೇಳಾ; ಪೂರ್ವವಾವುದು? ದಕ್ಷಿಣವಾವುದು? ಪೂರ್ವದಲ್ಲಿ ದಿವಾಕರರು ಹನ್ನೆರಡರ ಆನಂದ ಪ್ರಭೆಯಲ್ಲಿ ಭವಿಸಲ್ಪಟ್ಟ ನಯನದ ಕಿರಣದ ಕೊನೆಯ ಮೊನೆಯ ಮೇಲೆ ದಿವ್ಯಾಂಗಯೋಗ ಸಮನಿಸುವ ಪರಿಯೆಂತು ಹೇಳಾ? ದಕ್ಷಿಣದಲ್ಲಿ ದಿಗ್ವಳಯ ಹದಿನಾಲ್ಕರ ವ್ಯಾಪ್ತಿಯ ಸಂಚರಿಸದೆ ಸಮನಿಸುವ ಕೋಹಂ ತತ್ವಾರ್ಥದಿಂದತ್ತ ನಾಹಂ ಪರಮಾರ್ಥದಿಂದತ್ತ ಸೋಹಂ ಸದ್ಭಕ್ತಿಯ ಮುಟ್ಟಿದ ದಾಸೋಹ ನಿನ್ನಲ್ಲಿ ಸಂಯೋಗವ ಎಂತು ಮಾಡುವೆ ಹೇಳಾ? ಯೋಗಿ ನೀನು ಯೋಗಕ್ಕೆ ಹರಿವಾವುದು? ಯೋಗಕ್ಕೆ ನೆಲೆ ಯಾವುದು? ಮತ್ತೆ ಪೆರತನರಿಯದೆ ಶಾಶ್ವತವು ನೀನೆ ನೀನೆ ಎಂದೆನ್ನು, ಸಕಲನಿಷ್ಕಲದೊಳಗೆ ನೀನೆ ನೀನೆಯೆನ್ನಾ ತಾತ್ಪರ್ಯವರ್ಮ ಕಳೆಗಳೊಳಗೆ ನೀನೆ ನೀನೆಯೆಂದೆನ್ನಾ. ಓಂ ಗ್ರಾಂ ಘ್ರೀಂ ಘ್ರೂಂ ಎಂಬಕ್ಷರ ಚತುಷ್ಟಯದ ಮೇಲೆ ಶುದ್ಧ ಸಂಯೋಗವೆಂಬ ಗದ್ದುಗೆಯಿಕ್ಕಿ ಅಕ್ಷರದ್ವಯದ ಆನಂದರಾಜ ಕುಳ್ಳಿದ್ದೆ ೈದಾನೆ ಜಪಿಸುತ. ಆ ಜಪವು ನಿತ್ಯ, ಅದು ಮುಕ್ತಿ, ಅದು ಸತ್ಯ. ಅದು ಪದಕ್ಕೆ ಫಲಕ್ಕೆ ಭವಕ್ಕೆ ದೂರ, ವರ್ಣಾಶ್ರಯವ ಮೀರಿತ್ತು ತತ್ವ ಪ್ರಾಪಂಚಿಕವ ಜರಿಯಿತ್ತು. ಮಂತ್ರಂಗಳ ಕೈಯಿಂದ ವಂದಿಸಿಕೊಂಡಿತ್ತು. ಮೂರರಲ್ಲಿ ಭವಿಸಿತ್ತು, ಆರರಲ್ಲಿ ಫಲವಾಯಿತ್ತು. ಮೂವತ್ತಾರರಲ್ಲಿ ಹಣಿತಿತ್ತು ಯೋಗಿಗಳ ನಡೆಸಿತ್ತು ತತ್ವಮಸಿ ಸಂಗಮವಾಯಿತ್ತು. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯದಲ್ಲಿ ನಿತ್ಯವಾಯಿತ್ತು.
--------------
ಸಿದ್ಧರಾಮೇಶ್ವರ
ಓಂ ಜಯ ಪರಮೇಶ್ವರಂ ಪರಮಾತ್ಮಂ ಈಶ್ವರನುರ್ವಿಪರ್ವಿ ಅಡಗಿಕೊಂಡಿಪ್ಪನು. ಒಬ್ರ್ಬಣಿಗೆಯಾಗಿ ಯೋಗಿಗಳ ಮನದ ಸಂಸಾರ ತೆಪ್ಪದೊಳಗೆ ಆನೀಗ ಅದ್ದು ಅಳಲುತಪ್ಪೆನಯ್ಯಾ, ಬೇಗ ಬಾರ ಬಾರಯ್ಯಾ ಬಾರಾ. ವಜ್ರಲೇಪದ ಬಿದ್ದಿದ್ದೇನೆ, ಬೇಗ ಬಂದೆತ್ತಯ್ಯಾ ಎತ್ತಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಹರಹರಾ, ಈ ಮಾಯೆ ಇದ್ದೆಡೆಯ ನೋಡಾ! ಶಿವಶಿವಾ, ಈ ಮಾಯೆ, ಇದ್ದೆಡೆಯ ನೋಡಾ! ಪುರುಷನ ಮುಂದೆ ಸ್ತ್ರೀಯಾಗಿರ್ಪಳು, ಸ್ತ್ರೀಯ ಮುಂದೆ ಪುರುಷನಾಗಿರ್ಪುದ ಕಂಡೆ. ಕೂಟಕ್ಕೆ ಸತಿಯಾಗಿರ್ಪಳು, ಮೋಹಕ್ಕೆ ಮಗಳಾಗಿರ್ಪಳು ಕಂಡೆ. ಜನನಕ್ಕೆ ತಾಯಾಗಿರ್ಪಳು, ಮೋಹವಿಳಾಸಕ್ಕೆ ಜಾರಸ್ತ್ರೀಯಾಗಿರ್ಪಳು ಕಂಡೆ. ಧರ್ಮಕ್ಕೆ ಕರ್ಮರೂಪಿಣಿಯಾಗಿರ್ಪಳು, ಕರ್ಮಕ್ಕೆ ಧರ್ಮರೂಪಿಣಿಯಾಗಿರ್ಪಳು ಕಂಡೆ. ಯೋಗಿಗಳೆಂಬವರ ಭೋಗಕ್ಕೆ ಒಳಗುಮಾಡಿತ್ತು, ಭೋಗಿಗಳೆಂಬವರ ಯೋಗಿಗಳ ಮಾಡಿತ್ತು ಕಂಡೆ. ಇಂತಪ್ಪ ಮಾಯೆಯ ಗೆಲುವಡೆ ತ್ರೈಲೋಕದೊಳಗೆ ದೇವ ದಾನವ ಮಾನವರು ಮೊದಲಾದವರ ನಾನಾರನು ಕಾಣೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಂದು ಮೂರಾದ ಭೇದವ, ಮೂರು ಆರಾದ ಭೇದವ, ಆರು ಇಪ್ಪತ್ತೈದಾದ ಭೇದವ, ಇಪ್ಪತ್ತೈದು ನೂರೊಂದಾದ ಭೇದವ, ಒಂದನರಿಯದ ಯೋಗಿಗಳ ಪಾಶವನಳೆವ ತೆರದಂತೆ, ಆ ನೂರೊಂದು ಇಪ್ಪತ್ತೈದರಲ್ಲಿ ಅಡಗಿತ್ತು. ಆ ಇಪ್ಪತ್ತೈದು ಆರರಲ್ಲಿ ಅಡಗಿತ್ತು. ಆ ಆರು ಮೂರರಲ್ಲಿ ಅಡಗಿತ್ತು, ಆ ಮೂರು ಒಂದರಲ್ಲಿ ಸಂದಿತ್ತು. ಆ ಒಂದು ಸಂದೇಹವಳಿಯಿತ್ತು. ಇದರಂದವನಾರು ಬಲ್ಲರಯ್ಯಾ? ಸಂದೇಹದಲ್ಲಿ ಬಿದ್ದು, ಲಿಂಗವನರಿಯದೆ ಭಂಗಿತರಾದರಯ್ಯಾ, ಆಗಮಕ್ಕತೀತ ಆನಂದ ದಾವಾನಲ, [ಭ]ವರಹಿತ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕೊಂಕಣ ದ್ವೀಪದಲ್ಲಿ ಒಂದು ಕಪಿ ಹುಟ್ಟಿತ್ತು ತಪವ ಮಾಡುವ ಸಪ್ತ ಋಷಿಯರ ನುಂಗಿತ್ತು ನವನಾಥಸಿದ್ಧರ ತೊತ್ತಳದುಳಿಯಿತ್ತು, ಅರುಹಿರಿಯರ ತಲೆಯ ಮೆಟ್ಟಿ ಅರಿಯಿತ್ತು. ಕಪಿಜನ ವೈರಿ ಸರ್ಪನ ಹೇಳಿಗೆಯಲ್ಲಿ ನಿದ್ರೆಗೆಯ್ಯಿತ್ತು. ಯೋಗಿಗಳ ಭೋಗಿಗಳ ಕೊಲ್ಲದ ಕೊಲೆಯ ಕೊಂದಿತ್ತು. ಕಾಮನ ಅರೆಯ ಮೆಟ್ಟಿ ಕೂಗಿತ್ತು, ಕೋಳಿಯ ಹಂಜರನನಾಸಿಕ ಬೆಕ್ಕ ನುಂಗಿತ್ತು, ಕೋಳಿಯ ಅರ್ಕಜದ ಅರಿವನರಿವ ಅರುಹಿರಿಯರ ಮಿಕ್ಕು ; ಭಾವಸೊಕ್ಕನುಂಡು ಕೊಕ್ಕರನಾಯಿತ್ತು. ಹಿಂದಿರ್ದ ಕೋಳಿಯ ಕೊಕ್ಕರನ ಕಪಿಯ, ಭಾವವ ಅರಿಯದಿರ್ದ ಕಾರಣ_ ಕೆದರಿದ ಚರಣ ಉಡುಗಿ, ಮರಣವರಿಯದೆ, ಕರಣದೇಹತ್ವವಿಲ್ಲದೆ, ಲಿಂಗೈಕ್ಯ_ತಾನೆ ಪ್ರಾಣ ಪುರುಷ. ಇದನರಿದು ನುಂಗಿದಾತನೆ ಪರಮಶಿವಯೋಗಿ_ ಭಂಗವರಿಯದ, ಜನನದ ಹೊಲಬರಿಯದ, ಭಾವದ ಜೀವವರಿಯದ ! _ಇದು ಕಾರಣ ನಿಮ್ಮ ಶರಣನು ಲಿಂಗಸ್ವಯಶಕ್ತಿಶರಣ ತಾನೆ.
--------------
ಅಲ್ಲಮಪ್ರಭುದೇವರು
ಎಲೆ ದೇವಾ ಏತಕ್ಕೆ ನುಡಿಯೆ? ಎನ್ನೊಳು ಮುನಿಸೆ? ಎನ್ನೊಳು ನಿನ್ನಯ ಚಿತ್ತವನಿರಿಸಿ ನೀಕರಿಸಿ ನುಡಿಯದಿರ್ದಡೆ ಎನ್ನಯ ನೋವನಿನ್ನಾರಿಗೆ ಹೇಳುವೆ, ನಿನಗಲ್ಲದೆ? ನೀ ಮಾಡುವ ಮಾಟ ಅನೇಕ ಕುಟಿಲ. ಯೋಗಿಗಳ ಸುತ್ತಿ ಮುತ್ತಿದ ಹರಿತದ ಪಾಶ ನಿಮ್ಮಲ್ಲಿ. ಅನೇಕರ ಕೊಲುವ ಪಾಶ ಕೈಯಲ್ಲಿ, ಭವವೇಷವಂಗದಲ್ಲಿ. ಭಕ್ತರ ಕೊಲುವ ದೋಷಕ್ಕೆ ಅಂಜಿದೆಯಾಗಿ, ನಿನಗದು ನೀತಿಯೆ? ರುದ್ರನ ವೇಷಕ್ಕದು ಸಹಜ, ಅವ ಬಿಡು ಬಿಡು ನೀಕರಿಸು. ಉಮಾಪತಿ ವೇಷವ ಬಿಟ್ಟು ಸ್ವಯಂಭುವಾಗು. ಎಲೆ ಅಯ್ಯಾ, ಎನ್ನಲ್ಲಿ ಸದ್ಭಕ್ತಿಯ ನೆಲೆಗೊಳಿಸಿ, ಎನ್ನ ಪ್ರಕೃತಿಯ ಪರಿಹರಿಸಯ್ಯಾ. ಎನ್ನ ತಂದೆ, ಮುಕುರ ಪ್ರತಿಬಿಂಬದಂತೆ ಎನಗೆ ನಿನಗೆಂಬುದ ನೀನರಿಯಾ? ಎಲೆ ದೇವಾ, ಅರಿದರಿದೇಕೆನಗೆ ಕೃಪೆಯಾಗಲೊಲ್ಲೆ. ಎಲೆ ಸ್ವಾಮಿ, ಆನು ಮಾಡಿದುದೇನು ನಿನಗೆ? ಮಾರನ ಕೊಂದ ಮಲತ್ರಯದೂರನೆ, ಅನಾಗತಸಂಸಿದ್ಧ ಭೋಗಮಯನೆ, ನಯನ ಚರಣಾರವಿಂದ ವಿರಾಜಿತನೆ, ಸರ್ವವ್ಯಾಪಕ ನಾಶನೆ, ಸರ್ವಾಂತರ್ಗತ ವಿಮಲಾಂತರಂಗನೆ, ಕರುಣಾಬ್ಧಿಚಂದ್ರ ವಿಲಾಸಿತನೆ, ಭಕ್ತ ಚಿತ್ತದ ಸಾಕಾರದ ಪುಂಜನೆ, ಭಕ್ತವತ್ಸಲನೆ, ಭಕ್ತದೇಹಿಕದೇವನೆ, ಎನಗೆ ನಿಮ್ಮ ಭಕ್ತಿವಿಲಾಸವ ಕರುಣಿಸಯ್ಯಾ. ಶಂಭು ಮಾರೇಶ್ವರಾ.
--------------
ಅಪ್ಪಿದೇವಯ್ಯ
ಪಕ್ಕವಿಲ್ಲದ ಹಕ್ಕಿ ಅಕ್ಕಜನ ಪಂಜರವ ಗೂಡುಮಾಡಿಕೊಂಡು ದಿಕ್ಕುದಿಕ್ಕನ್ನೆಲ್ಲ ಚರಿಸ್ಯಾಡಿ ಬರುತಿಪ್ಪದು. ಆ ಪಕ್ಷಿಯ ನೆರಳು ಬೀಳೆ ಯತಿ ಸಿದ್ಧ ಸಾಧ್ಯ ಯೋಗಿಗಳ ಯೋಗತ್ವ ಯತಿತನ ಸಿದ್ಧತ್ವ ಕೆಟ್ಟು ಕೆಲಸಾರಿ ಹೋಗುವುದ ಕಂಡೆ. ಪಕ್ಕವಿಲ್ಲದ ಹಕ್ಕಿಯ ಕೊಂದು ಅಕ್ಕಜನ ಪಂಜರವ ಮುರಿದುದಲ್ಲದೆ ನಿರ್ಮನನಲ್ಲ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಾಡಿ ಮಾಡಿ ನಿತ್ಯ ಲಿಂಗಾರ್ಚನೆಯ, ಮಾಡಿ ಮಾಡಿ ನಿತ್ಯ ಜಂಗಮಾರ್ಚನೆಯ, ಮಾಡಿ ಮಾಡಿ ವಿಸ್ತಾರವೆಂದು ಮಾಡಿ ಕೂಡಿದವರೆಲ್ಲ ನಿತ್ಯರಾದರು. ಮಾಡದೆ ಕೂಡದೆ ಯೋಗವೆಂದು, ಆತ್ಮಬೋಧೆಯೆಂದು, ಯೋಗಿಗಳ ಅನುಮತವೆಂದು, ಅಧ್ಯಾತ್ಮವ ನುಡಿದು ಶಿವಪೂಜೆಗೆ ದೂರವಾಗಬೇಡ. ಅಲ್ಲದೆ, ಕೆಲವರೊಳಗೆ ಆಡಿ ಕಪಿಲಸಿದ್ಧಮಲ್ಲಿಕಾರ್ಜುನನ ಚಿತ್ತಕ್ಕೆ ದೂರವಾಗದೆ ಶಿವಾರ್ಚನೆಯ ಮಾಡಿದಡೆ ದಿವ್ಯಯೋಗಿಯಪ್ಪೆ.
--------------
ಸಿದ್ಧರಾಮೇಶ್ವರ
ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಅಜ್ಞೇಯವೆಂಬ ಷಡಾಧಾರ ಚಕ್ರಂಗಳಲ್ಲಿ ವರ್ಣ ದಳ ಅಕ್ಷರ ಅಧಿದೇವತೆಯರಲ್ಲಿ ಕೂಡಿ ತೋರುವ ವಸ್ತು ಒಂದಲ್ಲದೆ ಹಲವುಂಟೆ? ಚಕ್ರಚಕ್ರದಲ್ಲಿ ಲೆಕ್ಕಕ್ಕೆ ಒಳಗಾಗಿ, ನಾಮರೂಪಿಗೆ ಬಂದು ಸಿಕ್ಕಿದೆಯಲ್ಲ. ಯೋಗಿಗಳ ಮನದಲ್ಲಿ ಲಕ್ಷವಿಲ್ಲದ ನಿರ್ಲಕ್ಷ ನೀನು ಲಕ್ಕಕ್ಕೆ ಬಂದ ಪರಿಯೇನು ಹೇಳಾ? ಕಾಣಬಾರದ ವಸ್ತುವ ಕಾಣಿಸಿ ಹಿಡಿದರು ಶರಣರು. ಭೇದಿಸಬಾರದ ವಸ್ತುವ ಭೇದಿಸಿ ಕಂಡರು. ಸಾಧಿಸಬಾರದ ವಸ್ತುವ ಸಾಧಿಸಿ ಕಂಡರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣರು.
--------------
ಸ್ವತಂತ್ರ ಸಿದ್ಧಲಿಂಗ
ಯೋಗದ ನೆಲೆಯನರಿದೆನೆಂಬಾತ ಲಿಂಗಾರ್ಚನೆಯ ಮಾಡಯ್ಯ. ಮನತ್ರಯ ಮದತ್ರಯ ಮಲತ್ರಯಂಗಳ ಕಳೆದು ತನುತ್ರಯಂಗಳನೇಕೀಭವಿಸಿ ಲಿಂಗತ್ರಯದಲ್ಲಿ ಶಬ್ದಮುಗ್ಧನಾಗಿ ಲಿಂಗಾರ್ಚನೆಯ ಮಾಡಯ್ಯಾ. ಅದು ನಿಸ್ತಾರ ಸಮಸ್ತ ಯೋಗಿಗಳ ಮೀರಿದದು ನಿಮ್ಮ ಕೂಡಿ ಬೆರಸುವ ಶಿವಯೋಗವಿಂತುಟಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಉಂಡುಂಡು ಜರಿದವನು ಯೋಗಿಯೆ ? ಅಶನಕ್ಕೆ ಅಳುವವನು ಯೋಗಿಯೆ ? ವ್ಯಸನಕ್ಕೆ ಮರುಗುವವ[ನು] ಯೋಗಿಯೆ ? ಆದಿವ್ಯಾಧಿಯುಳ್ಳವ[ನು] ಯೋಗಿಯೆ ? ಯೋಗಿಗಳೆಂದಡೆ ಮೂಗನಾಗಳೆ ಕೊಯಿವೆ. ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳಾ, ಸಿದ್ಧರಾಮನೊಬ್ಬನೆ ಶಿವಯೋಗಿ.
--------------
ಸೊಡ್ಡಳ ಬಾಚರಸ
-->