ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವ ನಿಲಿಸಿಹೆನೆಂದು ನುಡಿವ ಅಣ್ಣಗಳ ಕಣ್ಣಗೆಡಿಸಿ ಬಣ್ಣಗುಂದಿಸಿ ಬಂಧನಕ್ಕೊಳಗುಮಾಡಿ ಭವದಲ್ಲಿ ಸೆರೆಹಿಡಿದಿರ್ಪುದು ನೋಡಾ ಮನವು. ಅದೆಂತೆಂದೊಡೆ : ವ್ರತವುಳ್ಳವರ ಭ್ರಾಂತುಗೆಡಿಸಿತ್ತು ನೋಡಾ ಮನವು. ಯತಿಗಳೆಂಬವರ ಮತಿಹೀನರ ಮಾಡಿತ್ತು ನೋಡಾ ಮನವು. ಕಣ್ಣುಮುಚ್ಚಿ ಧ್ಯಾನಿಸುವ ಅಣ್ಣಗಳ ಕಳವಳಗೊಳಿಸಿತ್ತು ನೋಡಾ ಮನವು. ಏಕಾಂತವಾಸಿಗಳೆಲ್ಲರ ಹಿಡಿತಂದು ಲೋಕದ ಮಧ್ಯದೊಳಗಿರಿಸಿ ಕಾಕುತನದಲ್ಲಿ ಕಾಡಿ ಏಡಿಸಿತ್ತು ನೋಡಾ ಮನವು. ಯೋಗಿಗಳೆಂಬವರ ಭೋಗಕ್ಕೊಳಗುಮಾಡಿ ಕಾಡಿತ್ತು ನೋಡಾ ಮನವು. ಇಂತೀ ಮನವ ನಿಲಿಸಿಹೆವೆಂದು ನುಡಿದು ಮತಿಗೆಟ್ಟು ಮಣ್ಣುಮಸಿಯಾಗಿ ಹೋದರು ನೋಡಾ ಹಲಕೆಲಬರು. ಅವರಂತಿರಲಿ. ಇನ್ನು ಮನವ ನಿಲಿಸುವ ಭೇದವ ಹೇಳಿಹೆ ಕೇಳಿರೆ. ಆದಿ-ಅನಾದಿ, ಸುರಾಳ-ನಿರಾಳ, ಶೂನ್ಯ-ನಿಃಶೂನ್ಯ, ಸಾಕಾರ-ನಿರಾಕಾರ, ಸಗುಣ-ನಿರ್ಗುಣ, ಮೂರ್ತಿ-ಅಮೂರ್ತಿ, ಶಿವ-ಶಕ್ತಿ, ನಾಮ-ರೂಪು-ಕ್ರಿಯೆ ಸಕಲ ಬ್ರಹ್ಮಾಂಡ ಸಚರಾಚರಾದಿ ನಾನಾ ತೋರಿಕೆಯೆಲ್ಲವು ತಾನೆ ಎಂದು ತಿಳಿಯಲು ಆ ತಿಳಿದಮಾತ್ರದಲ್ಲಿಯೆ ಮನದ ಕಲ್ಪಿತವಳಿದು ಕಾಯಿ ಹಣ್ಣಾದಂತೆ, ಆ ಮನವು ಮಹಾಘನಪರಬ್ರಹ್ಮವೆ ಅಪ್ಪುದು. ಆ ಮನವು ಮಹಾಘನವಾದಲ್ಲಿಯೆ ಶರಣನ ಹುಟ್ಟು ಹೊಂದು ನಷ್ಟವಾಗಿರ್ಪುದು. ಆ ಶರಣನ ಹುಟ್ಟು ಹೊಂದು ನಷ್ಟವಾದಲ್ಲಿಯೆ ಅಖಂಡೇಶ್ವರನೆಂಬ ಕುರುಹು ನಿರ್ವಯಲು ನೋಡಾ.
--------------
ಷಣ್ಮುಖಸ್ವಾಮಿ
ಹರಹರಾ, ಈ ಮಾಯೆ ಇದ್ದೆಡೆಯ ನೋಡಾ! ಶಿವಶಿವಾ, ಈ ಮಾಯೆ, ಇದ್ದೆಡೆಯ ನೋಡಾ! ಪುರುಷನ ಮುಂದೆ ಸ್ತ್ರೀಯಾಗಿರ್ಪಳು, ಸ್ತ್ರೀಯ ಮುಂದೆ ಪುರುಷನಾಗಿರ್ಪುದ ಕಂಡೆ. ಕೂಟಕ್ಕೆ ಸತಿಯಾಗಿರ್ಪಳು, ಮೋಹಕ್ಕೆ ಮಗಳಾಗಿರ್ಪಳು ಕಂಡೆ. ಜನನಕ್ಕೆ ತಾಯಾಗಿರ್ಪಳು, ಮೋಹವಿಳಾಸಕ್ಕೆ ಜಾರಸ್ತ್ರೀಯಾಗಿರ್ಪಳು ಕಂಡೆ. ಧರ್ಮಕ್ಕೆ ಕರ್ಮರೂಪಿಣಿಯಾಗಿರ್ಪಳು, ಕರ್ಮಕ್ಕೆ ಧರ್ಮರೂಪಿಣಿಯಾಗಿರ್ಪಳು ಕಂಡೆ. ಯೋಗಿಗಳೆಂಬವರ ಭೋಗಕ್ಕೆ ಒಳಗುಮಾಡಿತ್ತು, ಭೋಗಿಗಳೆಂಬವರ ಯೋಗಿಗಳ ಮಾಡಿತ್ತು ಕಂಡೆ. ಇಂತಪ್ಪ ಮಾಯೆಯ ಗೆಲುವಡೆ ತ್ರೈಲೋಕದೊಳಗೆ ದೇವ ದಾನವ ಮಾನವರು ಮೊದಲಾದವರ ನಾನಾರನು ಕಾಣೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->