ಅಥವಾ

ಒಟ್ಟು 7 ಕಡೆಗಳಲ್ಲಿ , 4 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೀಮೆಯ ಮೀರಿದ ಸಂಬಂಧನೆ, ಸಂಬಂಧದಲ್ಲಿ ಸಮನಿಸದ ಸಂಯೋಗನೆ, ಎನ್ನ ಸಲಹುವ ಗುರು-ಲಿಂಗ-ಜಂಗಮ-ಪಾದೋದಕ-ಪ್ರಸಾದಕ್ಕೆ ಅರ್ಹನ ಮಾಡಿದೆ. ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀ ಬಸವನಾಗಿ ಬಂದು ನಿನ್ನವರಿಗೆ ಯೋಗ್ಯನ ಮಾಡಿ, ಭವವ ತಪ್ಪಿಸಿದೆ.
--------------
ಸಿದ್ಧರಾಮೇಶ್ವರ
ಧರ್ಮ ಅರ್ಥ ಕಾಮ ಮೋಕ್ಷವೆಂಬ ಚತುರ್ವಿಧ ಫಲಪದಂಗಳ ನಾನೊಲ್ಲೆನಯ್ಯಾ. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧ ಫಲಪದಂಗಳ ನಾನೊಲ್ಲೆನಯ್ಯಾ. ಅಣಿಮಾದ್ಯಷ್ಟಸಿದ್ಧಿಗಳ ನಾನೊಲ್ಲೆನಯ್ಯಾ. ಎಲೆ ಶಿವನೆ ನಾನೊಂದ ಬೇಡುವೆನಯ್ಯ. ನಿಮ್ಮ ಶರಣರು ಉಂಡುಳಿದುದ ಕೊಂಡು ಮಿಕ್ಕಿದ ಪರಮಪ್ರಸಾದಕ್ಕೆ ಯೋಗ್ಯನ ಮಾಡಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಲ್ಪಿತವ ಕಳೆದ, ಅಕಲ್ಪಿತವ ತಿಳುಹಿದ, ಮನವ ಮಾಣಿಸಿ ಘನವ ನೆಲೆಗೊಳಿಸಿದ. ತನುವ ಕೆಡಿಸಿ, ಅನುವ ಸ್ಥಾಪ್ಯವ ಮಾಡಿ, ಅಂತರಂಗದಲ್ಲಿ ಮಹಾಜ್ಞಾನವ ತುಂಬಿದ, ಬಹಿರಂಗದಲ್ಲಿ ಸದಾಚಾರವ ನೆಲೆಗೊಳಿಸಿದ. ನಿಮ್ಮ ನಿಲವನೆನಗೆ ಒರೆದೊರೆದು ಹೇಳಿ ತೋರಿಸಿ, ಎನ್ನ ನಿಮ್ಮ ಶ್ರೀಪಾದಕ್ಕೆ ಯೋಗ್ಯನ ಮಾಡಿದ. ಕೂಡಲಸಂಗಮದೇವಯ್ಯಾ, ನಿಮ್ಮ ಮಹಾಮನೆಯಲ್ಲಿ ಮಡಿವಾಳನೂ ನಾನೂ ಕೂಡಿ ಸುಖದಲ್ಲಿ ಇದ್ದೆವಯ್ಯಾ.
--------------
ಬಸವಣ್ಣ
ಶಿವಶಿವಾ, ಎನ್ನ ಮನದಾಳಾಪವನವಧರಿಸಯ್ಯ ಸ್ವಾಮಿ. ಎನಗೆ ಭಕ್ತಿ ಬೇಡ, ಎನಗೆ ಜ್ಞಾನ ಬೇಡ, ಎನಗೆ ವೈರಾಗ್ಯ ಬೇಡ, ಎನಗೆ ವಿರತಿಯು ಬೇಡ, ನಿಮ್ಮ ಶರಣರು ಉಟ್ಟ ಮೈಲಿಗೆಯ ಬಟ್ಟೆ ಉಗುಳಿದ ತಾಂಬೂಲ, ಒಕ್ಕು ಮಿಕ್ಕ ಪ್ರಸಾದವನೆ ಕರುಣಿಸಿ, ಅವರ ಪಡುಗ ಪಾದರಕ್ಷೆಯನೆ ಹಿಡಿವುದಕ್ಕೆ ಯೋಗ್ಯನ ಮಾಡಿ, ಅವರ ಕಡೆಯ ಬಾಗಿಲನೆ ಕಾಯುವಂತೆ ಮಾಡಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮನವಿಕಾರ ಸುಟ್ಟದನು ಮನವಿಕಾರದ ಭ್ರಮೆಯ ಹೋರಟೆಯಾಗದೆಂ ಬನುವಿನಿಂ ತ್ರಿಲೋಕಯೆಲ್ಲ ಭಂಗಿತರಾಗಿ ಜನನ ಮರಣಕೆ ಬರುವ ಮನವು ನಿರ್ಮನವಾಗಲವ ಸತ್ಯ ನಿತ್ಯ ಶರಣ. ಪದ :ಹರಿದು ಮರ್ಕಟನ ವಿಕಾರಕಿಂದಲಿ ಮೇಣು ಸುರೆ ಸವಿದವನ ವಿಕಾರವದರಿಂದ ಧ ತ್ತುರಿಯ ಸೇವಿಸಿದವನ ವಿಕಾರಯಿವು ತ್ರಿವಿಧಕೆ ಗೌರವಂ ಮನವಿಕಾರ ಚರಿಯ ಮದದ ಅಮಲು ತಲೆಗೇರಿ ತಾಮಸದಲಿಂ ಗಿರಿಯಂಧಕನವೋಲಿನಂತೆ ದೇವತಾ ಸತ್ಯ ಪುರುಷರುಂ ಶಿವಜ್ಞಾನ ಹೊಲಬನರಿಯದೆ ಕೆಟ್ಟುದನೇನ ಹೊಗಳ್ವೆ ನಾನು | 1 | ಹರಿಯ ಮುಂದುಗೆಡಿಸಿ ಅಜನ ಶಿರವ ಕಳೆಸಿ ಸುರನ ಮೈಯೋನಿಯಂ ಮಾಡಿ ದೇವರ್ಕಳಂ ನೆರೆ ಕೆಡಿಸಿ ಯತಿ ಸಿದ್ಧಸಾಧ್ಯರೆಲ್ಲರ ಸೆರೆಯ ಹಿಡಿದು ಭಂಗಿತರ ಮಾಡಿ ಧರೆಯ ಮನುಜರ ತಿಂದು ತೇಗಿ ಕಾಡುವ ಮನವ ನಿರಸನಮಾಡಿ ನಿರ್ಮೋಹಿಯಾಗಿಹ ಸತ್ಯ ಶರಣರಡಿಧೂಳಿಯ ಚಮ್ಮಾವುಗೆಯ ಪೊರೆವೆನೆನಗಿದೆ ಸತ್ಯ ಮುಕ್ತಿ ಕಂಡಾ |2| ಇಳೆಪತಿಗೆ ಮಂತ್ರಿ ತಾ ಮುಖ್ಯವಾದಂತೆ ಕಾಯ ದೊಳು ಚರಿಸುವ ಜೀವ ಪ್ರಾಣದ್ವಯ ದಶವಾಯು ಗಳು ಅಷ್ಟಮದ ಸಪ್ತವ್ಯಸನ ಅರಿವರ್ಗ ಚತುರಂತಃಕರಣವಿಷ್ಟೆಲ್ಲಕೆ ಸಲೆ ಮನಂ ಮುಖ್ಯವಾಗಿಯೂ ಪಾಪ ಅನ್ಯಾಯವ ಗಳಿಸಿ ಯಮನಿಂಗೆ ಗುರಿಮಾಡಿ ಬಂಧಿಸಿ ಜನರ ಕೊಲ್ಲಿಸುತಿಹ ವಿಧಿಗಂಜಿ ನಿಮ್ಮ ಮೊರೆಹೊಕ್ಕೆನೆಲೆ ಕಾಯೋ ಶಂಭುವೆ. | 3 | ಚಣಚಣಕ್ಕೆ ಪಾತಾಳಲೋಕಕೈದುವ ಮನಂ ಚಣಚಣಕ್ಕೆ ಆಕಾಶದತ್ತ ಹಾರುವ ಮನಂ ಚಣಚಣಕ್ಕೆ ಸಪ್ತಸಮುದ್ರವ ಚರಿಸಿಬರುವುದೀ ಮನಮರುತ ಸರ್ವಾಂಗದಿ ಚಣಕೊಂದು ಬುದ್ಧಿಯ ನೆನದು ಕಾಡುವ ಮನದ ಗುಣದಿಂದ ನಾ ಕರ್ಮಶರಧಿಯೊಳು ಮುಣಗಿದೆನು ತ್ರಿಣಯ ನೀ ಕೈವಿಡಿದು ತೆಗೆದು ರಕ್ಷಿಸು ಎನ್ನ ಕರುಣಾಳು ದುರಿತಹರನೆ |4 | ಮನದಿಂದೆ ನೊಂದೆ ನಾ ಮನದಿಂದೆ ಬೆಂದೆ ನಾ ಮನದಿಂದ ಕಂದಿ ಕುಂದಿಯೆ ಕುಸಿದು ಭವಗಿರಿಯ ನನುದಿನಂ ಸುತ್ತುತಿರ್ದೆನು ಅಂಧಕನ ತೆರದಿ ಮನದ ನಸು ಗುನ್ನಿ ಚುರಿಚಿತನವು ಸರ್ವಾಂಗವೆಲ್ಲವ ಕೊಂಡು ತಿನಿಸೆದ್ದು ಮನದ ಗಂಧೆಯ ತುರಿಸಿ ತುರಿಸನೇ ಹಂಬಲಿಸಿ ಕನಲುತಿರ್ದೆನು ಎನ್ನ ಗುಣವ ನೋಡದೆ ಕಾಯೋ ಕಾಯೋ ಕರುಣಾಳುವೆ |5| ಪಾಪಿಮನ ಠಕ್ಕಮನ ಸರ್ವರೊಳು ಕೋಪಿಮನ ಕುಕ್ಕಮನ ಕಾಕುಮನ ಜಾಪಿಮನ ಹೇವಮನ ಹೆಬಗಮನ ಗುಣಧರ್ಮಕರ್ಮದಿಂದ ತಾಪಸಬಡುತಿರ್ದೆ ಗಾಯವಡೆದ ಉರಗ ನಾಪರಿಯಲೆನ್ನ ನೆರಳಿಸಿ ಒರಲಿಸುವ ಮನದ ರೂಪನಳಿದು ಜ್ಞಾನವಿತ್ತು ಸಲವಯ್ಯಾ ಚಿದ್ರೂಪ ಚಿನ್ಮಯ ಶಂಭುವೆ. | 6 | ಕೂಳಮನ ಕುರಿಮನ ಸರ್ವಚಾಂ ಡಾಲಿಮನ ಪರಧನ ಪರಸ್ತ್ರೀಯರನ್ಯಕ್ಕೆ ಕೋಳುಗೊಂಬುವ ಹೆಡ್ಡಮನ ಜಿಡ್ಡುಮನ ಜಾಳುಮನ ಹಾಳುಮನದ ಪಾಳೆಯವು ಹಲವು ಪರಿಯ ಮನದ ಗಾಡಿಗೆ ಸಿಲ್ಕಿ ಕಾಲಕರ್ಮಕ್ಕೆ ಗುರಿಯಾದೆನಿದ ಪರಿಹರಿಸಿ ಶೂಲಿ ಸರಸಿಜನ ಕಪಾಲಿ ಶಿರಮಾಲಿ ರಕ್ಷಿಸು ಕರುಣಾಂಬುನಿಧಿ ಗಿರಿಜೇಶನೆ |7| ಅಂಗಗೂಡಿನೊಳು ಮನಪಕ್ಷಿ ಹೊರಗಿರುವ ಪ ಕ್ಕಂಗಳೆರಡರೊಳು ಉಡುಪತಿ ಭಾನುವಂ ಪಿಡಿದು ಜಂಗಿಟ್ಟು ಭೂಯ್ಯೋಮ ಮಧ್ಯದೊಳು ಚರಿಸುತಿರಲೆತಿ ಸಿದ್ಧ ಸಾಧ್ಯರೆಲ್ಲ ಭಂಗಬಡುವರು ಮನವೆಂಬ ಪಕ್ಷಿಯ ಮುರಿದು ನುಂಗಬಲ್ಲಡೆ ಸತ್ಯಶಿವಯೋಗಿ ಶರಣ ನಿ ರ್ಭಂಗ ನಿರ್ಲೇಪ ನಿರ್ಮನ ನಿರಾಭಾರಿಯಾಗಿಹರೆನ್ನ ಪ್ರಾಣಲಿಂಗ. | 8 | ಹರನ ಶ್ರೀಪಾದದೊಳು ಮನವನಿಟ್ಟಿಹ ಸತ್ಯ ಶರಣಬಸವೇಶ ಪ್ರಭುರಾಯ ಮೋಳಿಗೆ ಮಾರ ಗುರುಭಕ್ತ ನೆಂಬಣ್ಣ ದಾಸಿ ಕೇಶಯ್ಯನೋಹಿಲದೇವನುದುಟಯ್ಯ ಮರುಳಶಂಕರ ಮುಖ್ಯವಾದ ಪ್ರಮಥರ ದಿವ್ಯ ಚರಣದಲಿ ಮನವ ಮಗ್ನಿಸಿದ ದಾಸೋಹಿಗಳ ವರಪ್ರಸಾದಕ್ಕೆ ಯೋಗ್ಯನ ಮಾಡು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. | 9 |
--------------
ಹೇಮಗಲ್ಲ ಹಂಪ
ಗುರುವ ನರನೆಂದು ನುಡಿವ ಕುರಿಮಾನವರ ನೆರೆಹೊರೆಯಲ್ಲಿರಲಾಗದು. ದೊರೆಸಂಗವಾದರೂ ನುಡಿಸಲಾಗದು. ನುಡಿಸಿದರೆ ಮಹಾನರಕವಯ್ಯಾ ! ಗುರುವೆ ಪರಶಿವನು, ಗುರುವೆ ಪರಬ್ರಹ್ಮ, ಗುರುವು ಹರನಿಂದಲಧಿಕ. ಗುರುವಿನಿಂದ ಹರನ ಕಾಣ್ಬರಲ್ಲದೆ, ಹರನಿಂದ ಗುರುವ ಕಾಣಬಾರದು. ಅದು ಎಂತೆಂದರೆ : ಮತ್ರ್ಯಲೋಕಕ್ಕೆನ್ನ ಮಾನವಶರೀರಿಯ ಮಾಡಿ ಕಳುಹಿ, ಎನ್ನ ಮಾನವಜನ್ಮದ ಬಂಧನ ಕಳೆದು, ಗುರುವಾಗಿ ಬಂದು ಮುಕ್ತಿಯ ತೋರಿಸಿ ಕೈಲಾಸಕೆನ್ನ ಯೋಗ್ಯನ ಮಾಡಿದ. ಇಹದಲ್ಲಿ ಪುಣ್ಯ, ಪರದಲ್ಲಿ ಮುಕ್ತಿಯೆಂಬ ಇವನೆರಡು ಗುರುಪಾದದಲ್ಲಿಯೆ ಕಂಡೆನಯ್ಯಾ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಎನ್ನ ಕಾಯವ ಶುದ್ಧವ ಮಾಡಿದಾತ ಮಡಿವಾಳ, ಎನ್ನ ಮನವ ನಿರ್ಮಳವ ಮಾಡಿದಾತ ಮಡಿವಾಳ, ಎನ್ನಂತರಂಗವ ಬೆಳಗಿದಾತ ಮಡಿವಾಳ, ಎನ್ನ ಬಹಿರಂಗವ ಬಿಡಿಸಿದಾತ ಮಡಿವಾಳ. ಕೂಡಲಸಂಗಮದೇವಾ, ಎನ್ನ ನಿಮಗೆ ಯೋಗ್ಯನ ಮಾಡಿದಾತ ಮಡಿವಾಳ.
--------------
ಬಸವಣ್ಣ
-->