ಅಥವಾ

ಒಟ್ಟು 5 ಕಡೆಗಳಲ್ಲಿ , 3 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವರು ದೇವರು ಎಂಬಿರಿ ದೇವರಿಗೆ ಪ್ರಳಯವುಂಟೆ ? ದೇವರು ಪ್ರಳಯವಾದಡೆ ಜಗವು ಉಳಿಯಬಲ್ಲುದೆ ? ಎಲಾ ಮರುಳಗಳಿರಾ, ಕಲ್ಲು ದೇವರೆಂಬಿರಿ, ಕಲ್ಲು ದೇವರಾದಡೆ ವಜ್ರಾಯುಧದಿಂದ ಪ್ರಳಯವಾಗದೆ ? ಕಟ್ಟಿಗೆ ದೇವರೆಂಬಿರಿ, ಕಟ್ಟಿಗೆ ದೇವರೆಂದರೆ ಅಗ್ನಿಯಿಂದ ಪ್ರಳಯವಾಗದೆ ? ಮಣ್ಣು ದೇವರೆಂಬಿರಿ, ಮಣ್ಣು ದೇವರಾದಡೆ ಜಲದಿಂದ ಪ್ರಳಯವಾಗದೆ ? ನೀರು ದೇವರೆಂಬಿರಿ, ನೀರು ದೇವರಾದಡೆ ಅಗ್ನಿಯಿಂದ ಅರತುಹೋಗದೆ ? ಅಗ್ನಿ ದೇವರೆಂಬಿರಿ, ಅಗ್ನಿ ದೇವರಾದಡೆ ಜಲದಿಂದ ಪ್ರಳಯವಾಗದೆ ? ಇಂತೀ ದೇವರೆಂದು ನಂಬಿ ಪೂಜಿಸಿದ ಜೀವಾತ್ಮರು ಇರುವೆ ಮೊದಲು ಆನೆ ಕಡೆ ಎಂಬತ್ನಾಲ್ಕುಲಕ್ಷ ಯೋನಿದ್ವಾರದಲ್ಲಿ ರಾಟಾಳ ತಿರುಗಿದಂತೆ ಜನನಮರಣಗಳಿಂದ ಎಡೆಯಾಡುತಿಪ್ಪರು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ನಿರ್ಣಯವನು ಸ್ವಾನುಭಾವಜ್ಞಾನದಿಂ ತಿಳಿದು ಶಿವಜ್ಞಾನಿಗಳಾದ ಶಿವಶರಣರಿಗೆ, ಅಚ್ಚ ನಿಚ್ಚ ಸಮಯ ಏಕಪ್ರಸಾದಿಗಳೆಂದೆನ್ನಬಹುದು. ಭಕ್ತಾದಿ ಐಕ್ಯಾಂತಮಾದ ಷಟ್‍ಸ್ಥಲಬ್ರಹ್ಮ ಎಂದೆನ್ನಬಹುದು. ಅಂಗಸ್ಥಲ 44, ಲಿಂಗಸ್ಥಲ 57 ಇಂತೀ ಪಿಂಡಾದಿ ಜ್ಞಾನಶೂನ್ಯಾಂತಮಾದ ನೂರೊಂದುಸ್ಥಲ ಮೊದಲಾದ ಸರ್ವಾಚಾರಸಂಪನ್ನನೆಂದೆನ್ನಬಹುದು. ಇಂತೀ ಭೇದವನರಿಯದೆ ತಮ್ಮ ತಾವಾರೆಂಬುದು ತಿಳಿಯದಿರ್ದಂಥ ಮತಿಭ್ರಷ್ಟ ಹೊಲೆಮಾದಿಗರಿಗೆ ಅದೆಲ್ಲಿಯದೊ ಗುರುಲಿಂಗಜಂಗಮದ ತೀಥಪ್ರಸಾದಸಂಬಂಧ ? ಅದೆಲ್ಲಿಯದೋ ಅಚ್ಚ ನಿಚ್ಚ ಸಮಯ ಏಕಪ್ರಸಾದದಸಂಬಂಧ ? ಇಂತಪ್ಪ ಗುರುಲಿಂಗಜಂಗಮದ ತೀರ್ಥಪ್ರಸಾದಕ್ಕೆ ಅಂದೇ ಹೊರಗಾಗಿ ಮತ್ತೆ ಮರಳಿ ಇಂದು ನಾವು ಗುರುಲಿಂಗಜಂಗಮದ ತೀರ್ಥಪ್ರಸಾದ ಪ್ರೇಮಿಗಳೆಂದು, ಆ ತ್ರಿಮೂರ್ತಿಗಳ ತಮ್ಮಂಗದಿಂ ಭಿನ್ನವಿಟ್ಟು, ತ್ರಿಕಾಲಂಗಳಲ್ಲಿ ಸ್ನಾನವ ಮಾಡಿ, ಜಪ, ತಪ, ಮಂತ್ರ, ಸ್ತೋತ್ರಗಳಿಂದ ಪಾಡಿ, ಪತ್ರಿ, ಪುಷ್ಪ ಮೊದಲಾದುದರಿಂ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಅರ್ಚಿಸಿ, ನಿತ್ಯನೇಮದಿಂ ಶೀಲ ವ್ರತಾಚಾರಂಗಳಿಂದ ಸಕಲ ಕ್ರಿಯಗಳನಾಚರಿಸಿ ಭಿನ್ನಫಲಪದವ ಪಡದು, ಕಡೆಯಲ್ಲಿ ಎಂ¨ತ್ತುನಾಲ್ಕುಲಕ್ಷ ಯೋನಿದ್ವಾರದಲ್ಲಿ ರಾಟಣದಂತೆ ತಿರುಗುವ ಭವಭಾರಿಗಳಾದ ಜೀವಾತ್ಮರಿಗೆ ಪ್ರಸಾದಿಗಳೆಂದಡೆ ಮೆಚ್ಚರಯ್ಯಾ ನಿಮ್ಮ ಶರಣರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬಂದು ಬಂದದ್ದರಿಯರಿದೆ, ಹೋಗಿ ಹೋದದ್ದರಿಯದೆ, ಇದ್ದು ಇದ್ದದ್ದರಿಯದೆ, ನೊಂದು ನೊಂದದ್ದರಿಯದೆ, ಕೆಟ್ಟು ಕೆಟ್ಟದ್ದರಿಯದೆ, ಎಂಬತ್ನಾಲ್ಕುಲಕ್ಷ ಜೀವರಾಶಿ, ಯೋನಿದ್ವಾರದಲ್ಲಿ ತಿರುತಿರುಗಿ ಬಂದದ್ದನ್ನರಿಯದೆ, ಏನೂ ಏನರಿಯದ್ಹಾಂಗೆ ಅರಿತು ಅರಿಯದ್ಹಾಂಗೆ ಇರ್ದೆಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಶ್ರೀಗುರುಲಿಂಗಜಂಗಮದ ಲೀಲೆಯ ಧರಿಸಿ, ಪರಸ್ತ್ರೀಯಳೆಂಬ ಹಡಿಕೆಯ ಯೋನಿದ್ವಾರದಲ್ಲಿ ತೊಳಲುವ ಜಡಜೀವಿಡಂಬಕನಲ್ಲಿ ಸಮಯಾಚಾರವ ಮಾಡುವಾತಂಗೆ ಭವಿಜನ್ಮ ತಪ್ಪದು ನೋಡ! ತಾನಿದ್ದಲ್ಲಿಗೆ ಪ್ರಸಾದಪುಷ್ಪತೀರ್ಥದೆಡೆ ಪ್ರಸಾದವ ತರಿಸಿಕೊಂಡಾತಂಗೆ ಶುನಿಸೂಕರಜನ್ಮ ತಪ್ಪದು ನೋಡ! ಸಮಪಂಕ್ತಿಯಲ್ಲಿ ವಾಮನವಾದ ಉಕ್ಕಳವ ಕೊಟ್ಟುಕೊಂಡಾತಂ- ದೀಕ್ಷಾಹೀನ, ಆಚಾರಭ್ರಷ್ಟ! ತನ್ನ ಪವಿತ್ರಕರ್ತುವಾದ ಗುರುವಿನಾಜ್ಞೆಯ ಮೀರಿ ಗುರುನಿಂದ್ಯವ ಮಾಡುವ ಗುರುದ್ರೋಹಿ, ಪರದೈವ-ಪರದ್ರವ್ಯಾಪಹಾರಕನ ಕೂಡೆ ಪಾದೋದಕ-ಪ್ರಸಾದವ ಏಕಭಾಜನವ ಮಾಡಿದಾತಂU ಶತಸಹಸ್ರಜನ್ಮಾಂತರದಲ್ಲಿ ಕ್ರಿಮಿಕೀಟಕಜನ್ಮ ತಪ್ಪದು ನೋಡ! ಸತ್ಯಸದಾಚಾರದ ವರ್ಮಾವರ್ಮವ ಭೇದಿಸಿ, ಹರಗುರುವಚನೋಕ್ತಿಯಿಂದ ಪ್ರಮಾಣಿಸಿ, ಬುದ್ಧಿಯ ಹೇಳುವಾತನೆ ಮಹಾಪ್ರಭುವೆಂದು ಭಾವಿಸುವಾತನೆ ಸದಾಚಾರಿ ಸನ್ಮಾರ್ಗಿ ನೋಡ! ಇದ ಮೀರಿ ಆಜ್ಞೋಪದೇಶವ ಕೇಳದೆ ತನ್ನ ಮನಬಂದಂತೆ ಚರಿಸುವ ಭ್ರಷ್ಟನ ಮೋರೆಯ ಮೇಲೆ ಶರಣಗಣಂಗಳ ರಕ್ಷೆಯಿಂದ ಹೊಡದು, ಆ ಮೇಲೆ ಗಾರ್ದ[ಭ]ಜನ್ಮದಲ್ಲಿ ಜನಿಸೆಂದಾತನಂಬಿಗರ ಚೌಡಯ್ಯನು. ನೋಡ, ಸಂಗನ ಬಸವೇಶ್ವರ.
--------------
ಅಂಬಿಗರ ಚೌಡಯ್ಯ
ಗುರುವೆಂಬವನೇ ಹೊಲೆಯ. ಲಿಂಗಾಂಗಿ ಎಂಬವನೇ ಮಾದಿಗ. ಜಂಗಮವೆಂಬವನೇ ಸಮಗಾರ. ಈ ಮೂವರೊಳಗೆ ಹೊಕ್ಕು ಬಳಕೆಯ ಮಾಡಿದಾತನೇ ಭಕ್ತ. ಆ ಭಕ್ತನೆಂಬುವನೇ ಡೋರ. ಇಂತೀ ಚತುರ್ವಿಧ ಭೇದವ ತಿಳಿದು, ಪಾದೋದಕ ಪ್ರಸಾದವ ಕೊಡಬಲ್ಲರೆ ಗುರುಲಿಂಗಜಂಗಮವೆಂಬೆ. ಈ ನಿರ್ಣಯವ ತಿಳಿದು ಪಾದೋದಕ ಪ್ರಸಾದ ಕೊಳ್ಳಬಲ್ಲರೆ ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣೈಕ್ಯರೆಂಬ ಷಟ್‍ಸ್ಥಲಬ್ರಹ್ಮಿ ಎಂಬೆ. ಆತನೇ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ, ಏಕಪ್ರಸಾದಿ. ಇಂತೀ ಕ್ರಮವರಿತು ಪಾದೋದಕ ಪ್ರಸಾದವ ಕೊಳ್ಳಬಲ್ಲರೆ ಮೋಕ್ಷವಾಗುವುದಕ್ಕೆ ತಡವಿಲ್ಲವಯ್ಯ. ಈ ಭೇದವ ತಿಳಿಯದೆ ಅಯ್ಯಾ, ಹಸಾದ ಮಹಾಪ್ರಸಾದ ಪಾಲಿಸಿರೆಂದು, ಕರುಣಿಸಿರೆಂದು ಕೃಪೆ ಮಾಡಿ ಭೂತದೇಹಿಗಳೆದುರಿಗೆ ಪಾತಕಮನುಜರು ಅಡ್ಡಡ್ಡ ಬಿದ್ದು ಎದಿ ವಡ್ಡುಗಟ್ಟಿ ಮೊಳಕಾಲು ಗೂಡುಗಟ್ಟಿ ಹಣೆ ಬುಗುಟಿ ಎದ್ದು ಈ ಪರಿಯಲ್ಲಿ ಅಯ್ಯಾ ಪ್ರಸಾದ ಪಾಲಿಸೆಂದು ಪಡಕೊಂಡು ಲಿಂಗಕ್ಕೆ ತೋರಿ ತೋರಿ ತಮ್ಮ ಉದರಾಗ್ನಿ ಅಡಗಿಸಿಕೊಂಡು, ಕಡೆಯಲ್ಲಿ ಎಣ್ಣೆಯ ನಾತಕ್ಕೆ ಅಲಗ ನೆಕ್ಕುವ ಶ್ವಾನನ ಹಾಗೆ ತಮ್ಮ ನಾಲಿಗಿಯಲಿ ತಳಗಿ ತಾಬಾಣವ ನೆಕ್ಕಿ ನೆಕ್ಕಿ, ಆ ತಳಗಿ ತಾಬಾಣ ಸವೆದು ಸಣ್ಣಾಗಿ ಹೋದವಲ್ಲದೆ, ಇಂತಪ್ಪ ಮತಿಭ್ರಷ್ಟ ಹೊಲೆಯ ಮಾದಿಗರಿಗೆ ಪರಶಿವನ ಮಹಾಪ್ರಸಾದ ಸಾಧ್ಯವೇ? ಸಾಧ್ಯವಲ್ಲ. ಮುಂದೆ ಎಂಬತ್ತುನಾಲ್ಕುಲಕ್ಷ ಯೋನಿದ್ವಾರದಲ್ಲಿ ತಿರುಗಿ ತಿರುಗಿ ಭವದತ್ತ ಮುಖವಾಗಿ ನರಕವನೆ ಭುಂಜಿಸುವದು ಉಂಟೆಂದ ನಿಮ್ಮ ಶರಣ ವೀರಾಧಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->