ಅಥವಾ

ಒಟ್ಟು 97 ಕಡೆಗಳಲ್ಲಿ , 2 ವಚನಕಾರರು , 97 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಚಭೂತವಂಗವಾಗಿಪ್ಪ ಆತ್ಮಂಗೆ ಪಂಚೇಂದ್ರಿಯಂಗಳೇ ಮುಖಂಗಳು, ಪಂಚಕರಣಂಗಳೇ ಕೈಗಳು, ಪಂಚವಿಷಯಂಗಳೇ ಪೂಜೆ, ಪಂಚಪದಾರ್ಥವೇ ಭೋಗ. ಇದನೆಲ್ಲವ ನಿಜಮೂರ್ತಿಯಪ್ಪ ಘನಕ್ಕೆಯ್ದಿಸಬಲ್ಲಡೆ, ಆತ ಸರ್ವನಿರ್ವಾಣಿ, ಸಕಲನಿಷ್ಕಲಾತ್ಮಕನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಜ್ಞಾನ ಸದ್ಭಕ್ತಿ ಸನ್ನಹಿತವಾಗಿ, ಲಿಂಗ ಮುಂತಾಗಿ ಮಾಡಿದ ಕ್ರೀ ಲಿಂಗಕ್ರೀ. ಧ್ಯಾನ ಪೂಜೆ ಭಕ್ತಿಯರ್ಪಿತ ಪ್ರಸಾದ ಮುಕ್ತಿ- ಇವೆಲ್ಲವು ತನ್ನೊಳಗೆ, ಅಜ್ಞಾನ ಅಭಕ್ತಿ ಮರವೆ ಮುಂತಾದ ಕ್ರೀ ಅಂಗಕ್ರೀ, ಅದು ಹೊರಗು. ಇದು ಕಾರಣ, ಜ್ಞಾನ ಸದ್ಭಕ್ತಿ ಸನ್ನಹಿತವಾದುದೆ ಮುಕ್ತಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶಿವ ಶಿವ! ಮಹಾದೇವ ಶಿವನೇ ನೀನು ಸರ್ವಜ್ಞನಾಗಿ ಎನ್ನನೂ ನೀನು ಬಲ್ಲೆ. ಈ ಪರಿಯನು ಹರಿಬ್ರಹ್ಮದೇವದಾನವಮಾನವರು ಅರಿಯದೆ ಭ್ರಮಿಸುತ್ತಮಿಪ್ಪರು. ಈ ವಿದ್ಥಿಯನು ತಾತ್ಪಯ್ರ್ಯವೆಂದರಿದೆನಾಗಿ ಸದ್ಯೋನ್ಮುಕ್ತನು, ನಿರಂತರ ಪರಿಣಾಮಿ, ಪರಮಸುಖಸ್ವರೂ[ಪಿ] ನಾನೇ ಅಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ತಾನಾರೆಂದರಿವುದು ಭಕ್ತಿ. ಭಕ್ತಿಯೆಂಬುದು ಹಿಂದೋ ಮುಂದೋ? ಗುರುಲಿಂಗ ಜಂಗಮವೆಂದರಿಯದೆ ಮಾಡುವ ಭಕ್ತಿ ಅದೇ ಅನಾಚಾರ:ಅವರು ಪ್ರಸಾದಕ್ಕೆ ದೂರ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಮ್ಮ ಶರಣರಿಗಲ್ಲದಳವಡದು.
--------------
ಉರಿಲಿಂಗಪೆದ್ದಿ
ಜನಿತವಿಲ್ಲದೆ ಜನಿಸಿ ಸ್ವಯವಾದ ಹರನೇ ನೀನು ನಿರೂಪನೇರಿ ಜನಿಸಿ ಜನಿತವ ಬಗೆಯರಾಗಿ ಎಮ್ಮ ಪುರಾತನರೇ ನಿರೂಪರು, ಕುಲದಲ್ಲಿ ಹುಟ್ಟಿ ಕುಲವ ಬೆರೆಸರಾಗಿ ಎಮ್ಮ ಪುರಾತನರೇ ಕುಲಜರು. ಆದಿಲಿಂಗ ಅನಾದಿಶರಣ. ಹೆಸರಿಲ್ಲದ ದೆಶೆಗೇಡಿ ಲಿಂಗವ ವಶಕ್ಕೆ ತಂದು ಹೆಸರಿಟ್ಟು ಕರೆದರೆ ನೀನು ಸುಲಭನೇ? ಅಲ್ಲ. ನೀನು ಕುಲಗೇಡಿ, ನಿನ್ನನಾರು ಬಲ್ಲರು? ನೀನಗೋಚರ. ಹರನೇ, ನೀ ಬೇಡಿತ್ತ ಕೊಟ್ಟು ನೀ ಬಂದರೆ ನಿನ್ನನಾಗುಮಾಡಿದರಲ್ಲದೆ ಎಮ್ಮ ಪುರಾತನರು ನಿಮ್ಮಲ್ಲಿಗೆ ಬಂದು ದೈನ್ಯಬಟ್ಟು ಬೇಡಿದರಲ್ಲೈ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
`ಬಸವ, ಬಸವ, ಬಸವ' ಎನುತಿರ್ಪವರೆಲ್ಲರು ಬಸವನ ಘನವನಾರೂ ಅರಿಯರಲ್ಲ? ಅನಾದಿ ಪರಶಿವನಲ್ಲಿ ಅಂತರ್ಗತಮಾಗಿರ್ದ ಮಹಾಪ್ರಕಾಶವೆ ಬಹಿಷ್ಕರಿಸಿತ್ತು. ಆ ಚಿತ್ತೆ ಚಿದಂಗ ಬಸವ, ಚಿದಂಗ ಬಸವನಿಂದುದಯಿಸಿದ ಚಿದ್ವಿಭೂತಿಯನೊಲಿದು ಧರಿಸಿದ ಶರಣರೆಲ್ಲರು ಜ್ಯೋತಿರ್ಮಯಲಿಂಗವಪ್ಪುದು ತಪ್ಪದು ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾದ ಪ್ರಾಣಲಿಂಗಿಯ ಪ್ರಾಣಲಿಂಗಕ್ಕೆ, ಧ್ಯಾನಾಮೃತ ಪಂಚಾಕ್ಷರಂಗಳ ಪಂಚಾಮೃತದಿಂ ಮಜ್ಜನಕ್ಕೆರೆದು, ಆ ಲಿಂಗಕ್ಕೆ ಮನವೇ ಪುಷ್ಪ, ಬುದ್ಧಿಯೆ ಗಂಧ, ಚಿತ್ತವೇ ನೈವೇದ್ಯ. ಅಹಂಕಾರವಳಿದ ನಿರಹಂಕಾರದ ಆರೋಗಣೆಯ ಮಾಡಿಸಿ, ಪರಿಣಾಮದ ವೀಳ್ಯವನಿತ್ತು, ಸ್ನೇಹದಿಂದ ವಂದನೆಯಂ ಮಾಡಿ, ಆ ಪ್ರಾಣಲಿಂಗಕ್ಕೆ ಬಹಿರಂಗದ ಪೂಜೆಯ ಪರಿಯಲಿ ಅಂತರಂಗದ ಪೂಜೆಯ ಮಾಡುವುದು. ಬಹಿರಂಗದ ಪೂಜೆಯ ಪ್ರಾಣಲಿಂಗಕ್ಕೆ ಅಂತರಂಗದ ವಸ್ತುಗಳೆಲ್ಲವನ್ನು ತಂದು, ಬಹಿರಂಗದ ವಸ್ತುವಿನಲ್ಲಿ ಕೂಡಿ, ಅಂತರ್ಬಹಿರುಭಯ ಲಿಂಗಾರ್ಚನೆಯ ಮಾಡಲು, ಅಂತರಂಗ ಬಹಿರಂಗ ಭರಿತನಾಗಿಪ್ಪನಾ ಶಿವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಮಣ್ಣ ಬೆಲ್ಲವ ಮಾಡಿ, ಮಗುವಿನ ಕೈಯಲ್ಲಿ ಕೊಟ್ಟು, ಊರ ತಿರುಗುವ ತುಡುಗುಣಿಯಂತೆ. ಪ್ರಾಣಲಿಂಗವನರುಹುವ ಜ್ಞಾನಗುರುವಿನ ಕೈಯ ದೀಕ್ಷೆಯ ಪಡೆಯಲರಿಯದೆ, ಇಷ್ಟಲಿಂಗವನೊಬ್ಬ ಭ್ರಷ್ಟನ ಕೈಯಲೀಸಿಕೊಂಡು, ಅಲ್ಲಿ ಭಜಿಸಿ ಭ್ರಾಂತುಗೊಂಬ ಮಿಟ್ಟಿಯ ಭಂಡರನೇನೆಂಬೆ ಹೇಳಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಸೂಳೆ ಭಕ್ತೆಯಾದಡೆ ಮಿಂಡಜಂಗಮಕ್ಕಲ್ಲದೆ ಮಾಡಳು. ಬ್ರಾಹ್ಮಣ ಭಕ್ತನಾದಡೆ ಕುಲಕಂಜಿ ನೆಂಟರು ಇಷ್ಟರಿಗಲ್ಲದೆ ಮಾಡನು. ಶೂದ್ರ ಭಕ್ತನಾದಡೆ ನಚ್ಚುಮಚ್ಚಿನ ಜಂಗಮಕ್ಕಲ್ಲದೆ ಮಾಡನು. ಇದಕ್ಕೆ ಶ್ರುತಿ: ``ಓಂ ದಂಡಂ ದ್ವಿಜಂ ಕಿರಾತಂ [ಕುಲ]ತಂತ್ರಂ ಎಂದುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಷ್ಪ್ರಹನೆಂಬ ಜಂಗಮಕ್ಕೆ ಮಾಡುವರಾರನೂ ಕಾಣೆನಯ್ಯ.
--------------
ಉರಿಲಿಂಗಪೆದ್ದಿ
ಗುರುಲಿಂಗ ಪರಂಜ್ಯೋತಿರ್ಲಿಂಗವೆಂದರಿದವನು ಬಲ್ಲವನು, ಗುರುಲಿಂಗ ಪ್ರಾಣ ಏಕೀಭವಿಸಿದ ಲಿಂಗ, ಪರಂಜ್ಯೋತಿರ್ಲಿಂಗವೆಂದರಿದವನು ಬಲ್ಲವನು. ಈ ಮಹಾವಸ್ತುಗಳನರಿಯದವನು ಅರಿಯದವನು. ಈ ಮಹಾವಸ್ತುಗಳನರಿಯದವರನು ಅರಿದವನು ಅರಿಯದವನು, ಅರಿಯದವಂಗೆ ಪೂಜೆ ಎಂತಕ್ಕು ? ಪೂಜೆ ಇಲ್ಲದವಂಗೆ ಭಕ್ತಿಯಿಲ್ಲ, ಭಕ್ತಿ ಇಲ್ಲದವಂಗೆ ಗುರುಲಿಂಗಜಂಗಮಪ್ರಸನ್ನವೆಂತಪ್ಪುದು ? ಪ್ರಸನ್ನತೆಯ ಹಡೆಯದವಂಗೆ ಪ್ರಸಾದವಿಲ್ಲ, ಪ್ರಸಾದ ಪ್ರಸನ್ನತೆಯ ಹಡೆಯದವಂಗೆ ಮುಕ್ತಿ ಎಂತೂ ಇಲ್ಲ. ಇದನರಿದರಿವುದು, ಪ್ರಸನ್ನತೆಯಪ್ಪಂತೆ ನಡೆವುದು, ಪ್ರಸಾದವ ಹಡೆವುದು, ಭೋಗಿಸಿ ಮುಕ್ತರಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಭಕ್ತಸ್ಥಲ ಸಾಧ್ಯವಾಯಿತ್ತು ಸಂಗನಬಸವರಾಜದೇವರಿಗೆ. ಮಾಹೇಶ್ವರಸ್ಥಲ ಸಾಧ್ಯವಾಯಿತ್ತು ಮಡಿವಾಳಮಾಚಿತಂದೆಗಳಿಗೆ. ಪ್ರಸಾದಿಸ್ಥಲ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಗಳಿಗೆ. ಪ್ರಾಣಲಿಂಗಿಸ್ಥಲ ಸಾಧ್ಯವಾಯಿತ್ತು ಅನುಮಿಷದೇವರಿಗೆ. ಶರಣಸ್ಥಲ ಸಾಧ್ಯವಾಯಿತ್ತು ಅಲ್ಲಮಪ್ರಭುದೇವರಿಗೆ. ಐಕ್ಯಸ್ಥಲ ಸಾಧ್ಯವಾಯಿತ್ತು ಅಜಗಣ್ಣಗಳಿಗೆ. ಸರ್ವಾಚಾರಸ್ಥಲ ಸಾಧ್ಯವಾಯಿತ್ತು, ಚೆನ್ನಬಸವಯ್ಯಗಳಿಗೆ. ಎನಗೆ ಷಟಸ್ಥಲಸರ್ವಾಚಾರವೆ ಸಾಧ್ಯವಾಗಿ ಇಂತಿವರ ನೆನೆದು ಶುದ್ಧನಾದೆನು ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಪಂಚಾಕ್ಷರಿಯೆ ಸರ್ವಮಂತ್ರವೆಲ್ಲವಕ್ಕೆಯು, ಉತ್ಪತ್ತಿ, ಸ್ಥಿತಿ, ಲಯಸ್ಥಾನ, ಸರ್ವಕಾರಣವೆಲ್ಲವಕ್ಕೆಯು ಮೂಲ. ಅದೆಂತೆಂದಡೆ: ಸಪ್ತಕೋಟಿ ಮಹಾಮಂತ್ರಂ ಉಪಮಂತ್ರಸ್ತನೇಕತಃ ಪಂಚಾಕ್ಷರ ಪ್ರತಿಲೀಯಂತೇ ಪುನಸ್ತಸ್ಯವಸರ್ಗತಃ ತಸ್ಮಿನ್ ವೇದಶ್ಚ ಶಾಸ್ತ್ರಾಣಿ ಮಂತ್ರೇ ಪಂಚಾಕ್ಷರಿ ಸ್ಥಿತಂ ಎಂದುದಾಗಿ, ಇದು ಕಾರಣ ಶ್ರೀ ಪಂಚಾಕ್ಷರಿಯುಳ್ಳ ಸದ್ಭಕ್ತನೇ ವೇದವಿತ್ತು. ಆತನೇ ಶಾಸ್ತ್ರವಾನ್, ಆ ಮಹಾಮಹಿಮನೆ ಪುರಾಣಿಕನು, ಆತನೇ ಆಗಮಿಕನು, ಆತನೇ ಸರ್ವಜ್ಞನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ನಿಮ್ಮ ಶರಣನು ಲಿಂಗಭರಿತನು, ವಿಚಾರಿಸಿ, ಅರಿದು, ಧ್ಯಾನದಿಂದ ಜಪಿಸಿ, ಆ ಮಹಾವಸ್ತುವನು ಕಂಡು ಒಲಿದೊಲಿಸಿ, ಕೂಡಿ ಸುಖಿಸಿಹೆನೆಂಬನ್ನೆವರ ಶ್ರೀಗುರುಸ್ವಾಮಿಯ ಕರುಣಾಮೃತಸಾಗರ ಮೇರೆವರಿದು ವಿಚಾರಿಸಿ ಶಿವನಾಯಿತ್ತು, ಅರಿವು ಶಿವನಾಯಿತ್ತು; ಜ್ಞಾತೈ ಜ್ಞಾನ ಜ್ಞೇಯ ಶಿವನಾಯಿತ್ತು, ಜಪಮಂತ್ರ ಶಿವನಾಯಿತ್ತು, ಜಪಿಸುವ ಜಿಹ್ವೆ ಶಿವನಾಯಿತ್ತು, ಕಂಡೆಹೆನೆಂಬ ಕಣ್ಣು ಶಿವನಾಯಿತ್ತು. ಈ ಪರಿ ನೋಡ ನೋಡಲು ಮತ್ತೆ ಚೋದ್ಯ ಪ್ರಾಣಲಿಂಗವಾಗಿ ಸದ್ಗುರು ತಾನೆ ಕೃಪೆಮಾಡಿ ಕರಸ್ಥಲಕ್ಕೆ ಬಿಜಯಂಗೈದು ಪ್ರಾಣಲಿಂಗವಾದನು, ಕಾಯಲಿಂಗವಾದನು. ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನ ಭಾವವೆಲ್ಲ ಲಿಂಗವಾಯಿತ್ತು. ಸರ್ವಾಂಗಲಿಂಗವಾಗಿ ಸಲಹಿದನು. ಶ್ರೀಗುರುಲಿಂಗವು ಒಲಿದೊಲಿಸಿ ಕೂಡುವ ಪರಿ ಎಂತಯ್ಯಾ? ಒಲಿಸುವ ಪರಿ ದಾಸೋಹ, ಒಲಿದ ಪರಿ ಪ್ರಸಾದ, ಕೂಟದ ಪರಿ ನಿರ್ವಂಚಕತ್ವ, ಒಲಿದೊಲಿಸಿ ಕೂಡಿದ ಪರಿ ಪರಿಣಾಮವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂಬ ಹುಚ್ಚರನೇನೆಂಬೆನಯ್ಯಾ. ಜಂಗಮಪ್ರಸಾದದರಿವು ಸೋಂಕಲೊಡನೆ ಅಖಂಡಿತಪ್ರಸನ್ನಪ್ರಸಾದಿಯಪ್ಪುದು ತಪ್ಪದಯ್ಯಾ. ಶಿವಶಿವಾ, ಪ್ರಸಾದದ ಮಹಿಮೆಯನೇನೆಂದುಪಮಿಸಬಹುದಯ್ಯಾ ? ಪ್ರಸಾದವೆ ಗುರು, ಪ್ರಸಾದವೆ ಲಿಂಗ, ಪ್ರಸಾದವೆ ಜಂಗಮ, ಪ್ರಸಾದವೆ ಜ್ಞಾನಿ, ಪ್ರಸಾದವೆ ಪರಾತ್ಪರ, ಪ್ರಸಾದವೆ ಜ್ಞಾನಾತೀತ, ಪ್ರಸಾದವೆ ಸಚ್ಚಿದಾನಂದ, ಪ್ರಸಾದವೆ ನಿತ್ಯಪರಿಪೂರ್ಣ. [ನಿಮ್ಮ ಶರಣ] ಇಂತಪ್ಪ ಪ್ರಸಾದಿ ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ವಟಬೀಜವು ವಟವೃಕ್ಷಕೋಟಿಯನೊಳಕೊಂಡಿಪ್ಪಂತೆ, ಸಟೆಯಿಂದಲಾದಜಾಂಡಕೋಟಿಯನೊಳಕೊಂಡಿಹ ಲಿಂಗವೆ, `ಅಯಂ ಮೇ ಹಸ್ತೋ ಭಗವಾನ್' ಎಂದೆನಿಸುವ ಲಿಂಗವೆ, `ಚಕಿತಮಬ್ಥಿದತ್ತೇ ಶ್ರುತಿರಪಿ' ಎಂದೆನಿಸುವ ಲಿಂಗವೆ, ಎನ್ನ ಕರಸ್ಥಕ್ಕೆ ಬಂದು ಸೂಕ್ಷ್ಮವಾದೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->