ಅಥವಾ

ಒಟ್ಟು 256 ಕಡೆಗಳಲ್ಲಿ , 1 ವಚನಕಾರರು , 256 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಛಲಮದವೆಂಬುದು ತಲೆಗೇರಿ ಗುರುಹಿರಿಯರ ನೆಲೆಯನರಿಯದೆ ಮದಿಸಿಪ್ಪರಯ್ಯ. ರೂಪಮದ ತಲೆಗೇರಿ ಮುಂದುಗೊಂಡು ತಮ್ಮ ತನುವಿನ ರೂಪ ಚೆಲ್ವಿಕೆ ನೋಡಿ ಮರುಳಾಗಿ ಚಿದ್ರೂಪನ ನೆನವ ಮರೆದರಯ್ಯಾ. ಯವ್ವನಮದ ತಲೆಗೇರಿ ಮದಸೊಕ್ಕಿದಾನೆಯಂತೆ ಪ್ರಯಾಸಮತ್ತರಾಗಿ ಕಾಮನ ಬಲೆಯೊಳಗೆ ಸಿಲ್ಕಿ ಕಾಮಾರಿನೆನವ ಮರೆದರಯ್ಯಾ. ಧನಮದವೆಂಬುದು ತನುವಿನೊಳು ಇಂಬುಗೊಂಡು ಅರ್ಥಭಾಗ್ಯ ಕಾಡಿ ವ್ಯರ್ಥ ಸತ್ತಿತು ಲೋಕ. ವಿದ್ಯಾಮದವೆಂಬುದು ಬುದ್ಧಿಗೆಡಿಸಿ ನಾ ಬಲ್ಲವ ತಾ ಬಲ್ಲವನೆಂದು ತರ್ಕಿಸಿ ಪ್ರಳಯಕಿಳಿದರು. ರಾಜ್ಯಮದವೆದ್ದು ರಾಜ್ಯವನಾಡಿಸಿ ಬೇಡಿಸಿಕೊಂಡೆನೆಂದು ರಾಜರಾಜರು ಹತವಾದರು. ತಪಮದವೆದ್ದು ನಾ ತಪಸಿ ನಾ ಸಿದ್ಧ ನಾ ಯೋಗಿ ನನಗಾರು ಸರಿಯಿಲ್ಲವೆಂದು ಅಹಂಕಾರಕ್ಕೆ ಗುರಿಯಾಗಿ ಭವಕ್ಕೆ ಬಂದರು ಹಲಬರು. ಇಂತೀ ಅಷ್ಟಮದವೆಂಬ ಭ್ರಾಂತು[ವ] ತೊಲಗಿಸಿ ನಿಭ್ರಾಂತನಾಗಿರಬಲ್ಲರೆ ಶಿವಶರಣನೆಂಬೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕುಲ ಛಲ ರೂಪ ಯೌವ್ವನ ವಿದ್ಯೆ ಧನ ರಾಜ್ಯ ತಪಮದವೆಂಬ ಅಷ್ಟಮದಂಗಳ ಬಹಿರಂಗದಲ್ಲಿ ನೆನೆದು ಬರಿದೆ ಭ್ರಮೆಗೆ ಸಿಲ್ಕಿ ಬಳಲುತ್ತಿಪ್ಪರಯ್ಯ. ಅದು ಎಂತೆಂದಡೆ : ಅಂಧಕನ ಮುಂದಣ ಬಟ್ಟೆಯಂತೆ, ಹುಚ್ಚಾನೆಯ ಮುಂದಣ ಬ್ಥಿತ್ತಿಯಂತೆ, ಎನ್ನ ಅನ್ಯೋನ್ಯದ ಬಾಳುವೆಗೆ ಗುರಿಮಾಡಿ ಎನ್ನ ಕಾಡುತಿದ್ದೆಯಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ವಿಕಾರ ಈ ಜನ್ಮದ ಹೊರೆಯ ಕಳೆವುದೆಂದು, ಭೂಕಾರ ಭೂತ ಪಿಶಾಚಿಗಳ ಗ್ರಹಗಳ ನಿಟ್ಟೊರಸುವ ಅರಿಯೆಂದು, ತಿಕಾರ ಅಂತರಂಗದ ಒಳಹೊರಗೆ ಇಡಿದಿಹ ತಿಮಿರಕೆ ಜ್ಯೋತಿಸ್ವರೂಪವೆಂದು ಶ್ರೀ ವಿಭೂತಿಯ ಧರಿಸ ಕಲಿಸಿದನಯ್ಯಾ ಶ್ರೀಗುರು. ಪಂಚಗವ್ಯ ಗೋಮಯದಿಂದುದಯವಾದ ಶ್ರೀವಿಭೂತಿ ಪಂಚಭೂತದ ಪೂರ್ವಗ್ರಹವ ಕಳೆವುದೆಂದು ನಿರೂಪಿಸಿ ಧರಿಸಿದನಯ್ಯಾ. ಇಂತಪ್ಪ ಶ್ರೀ ವಿಭೂತಿಯ ಸಂತತ ಧರಿಸಿ ನಿಶ್ಚಿಂತನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನೀರ ನೆಳಲ ಮಧ್ಯದಲ್ಲಿ ಹಾರುವ ಭ್ರಮರನ ಗರಿಯ ಗಾಳಿಯಲ್ಲಿ ಮೂರುಲೋಕವೆಲ್ಲ ತಲೆಕೆಳಗಾದುದ ಕಂಡೆ. ನೀರನೆಳಲಂ ಕಡಿದು ಹಾರುವ ಭ್ರಮರನ ಗರಿಯ ಮುರಿದಲ್ಲದೆ ನಿರ್ಮನ ನಿರ್ಮಳ ನಿಶ್ಚಿಂತ ನಿಃಶಂಕ ನಿಃಕಳಂಕ ಶರಣನಲ್ಲ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುವೆ ಸುರತರುವೆ ಸಕಲಾಗಮದಿರವೆ ಮುಕ್ತಿಯಾಗರವೆ ಚಿದ್ಘನಗುರುವೆ ಚಿತ್ಪ್ರಕಾಶಮೂರ್ತಿಗುರುವೆ. ಶ್ರೀಗುರುವೆ ಶಾಂತಿಕಳಾ ಗುರುವೆ ವಿದ್ಯಾಗುರುವೆ ಮದ್ಗುರುವೆ ಜ್ಞಾನಗುರುವೆ ಪರಬ್ರಹ್ಮಗುರುವೆ ಪರಮಾನಂದಗುರುವೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ, ನಿಮ್ಮಡಿದಾವರೆಯೊಳಗೆನ್ನ ಮನವ ಭೃಂಗವ ಮಾಡಾ.
--------------
ಹೇಮಗಲ್ಲ ಹಂಪ
ಐದುಮುಖದಂಗನೆಗೆ ತನು ಮೂರು, ತದಂಗವೆರಡು, ಜೀವವೊಂದು, ಗುಣ ಇಪ್ಪತ್ತೈದು. [ವಂಶದ]ವರು ಇಪ್ಪತ್ತೈದುಮಂದಿಯ ಕೈವಿಡಿದು ಅಷ್ಟದಿಕ್ಕು ನವಖಂಡ ಜಂಬೂದ್ವೀಪವ ಮೇಲುಹೊದಿಕೆಯ ಮಾಡಿ, ಹೊದ್ದುಕೊಂಡು, ದೃಷ್ಟಜಗಕ್ಕೆ ಬಂದು ಕಷ್ಟಬಡುತಿದ್ದ ಭೇದವ ನೀನೆ ಬಲ್ಲೆ, ಉಳಿದರಿಗಸಾಧ್ಯ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಲೆಯ ಮನೆಯೊಳಗಣ ಕಿಚ್ಚು ಅಲೆದಾಡದ ಮುನ್ನ, ಊರ ಮುಂದೆ ನಾಲ್ವರು ಸತ್ತು ಒಳಗೆ ಬೇವುದ ಕಂಡೆ. ಊರು ಬೆಂದು, ಕಿಚ್ಚಿನ ಊನ್ಯವ ಕೇಳಬಂದ ರಕ್ಷಿ, ಹುಲಿಯನೇರಿಕೊಂಡು ಕಳೆದುಳಿದುದಕ್ಕೆ ತಾನೊಡತಿಯಾಗಿ ಊರುಂಬಳಿಯನುಂಬುದ ಕಂಡೆ. ಅತ್ತುದೊಂದಲ್ಲದೆ ಹೆಣ ಬಂದು ಕಚ್ಚದಿದೇನು ಚೋದ್ಯದ ದುಃಖ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ರಾಜಂಗೆ ಮಂತ್ರಿ ಮುಖ್ಯವಾದಂತೆ ಬಾಹ್ಯಪ್ರಾಣಕ್ಕೆ ಮನವೆ ಮುಖ್ಯ ನೋಡಾ. ಮನ ಮುಖ್ಯವಾಗಿ ಸರ್ವಪಾಪ ಅನ್ಯಾಯವ ಗಳಿಸಿ, ಕಾಲಂಗೆ ಗುರಿಮಾಡಿ, ಜನನ ಮರಣಕ್ಕೆ ತರಿಸಿ, ಮುನ್ನ ಕಾಡುತ್ತಿದೆ. ಮನವ ನಿರಸನವ ಮಾಡುವರೆನ್ನಳವೆ ? ನಿನ್ನಳವ ಎನ್ನೊಳಿತ್ತು ಮನ್ನಿಸಿ ಕಾಯಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಭಕ್ತಿಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಮಹೇಶ್ವರಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಪ್ರಸಾದಿಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಪ್ರಾಣಲಿಂಗಿಸ್ಥಲವೆಂತು ಅಳವಡುವುದಯ್ಯಾ ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಶರಣಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಐಕ್ಯಸ್ಥಲವೆಂತು ಅಳವಡುವುದಯ್ಯಾ ! ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯಸ್ಥಲವೆಂಬ ಷಡುಸ್ಥಲಕ್ಕೆ ಅಷ್ಟಾವರಣವೆ ಮುಖ್ಯ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಗಜೇಶ ಅಜಹರಿಸುರರೊಂದ್ಯ, ಜಗದಗಲಾತ್ಮ ಅಮೃತಕರ ಅಘಗಿರಿಗೊಜ್ರ ಅನಲಾಕ್ಷ ಅನಾಮಯ ಅಚಲ ಅಗಣಿತ ಅತಿಸತ್ಯ ಅಭವ ಅಭಂಗ ಅತಿಪರಾಕ್ರಮ ಆನಂದ ಅಪರಂಪಾರ ಆದಿಸ್ವಯಂಭೂ ಆಧ್ಯಾತ್ಮಪರಂಜ್ಯೋತಿ ಅಕಳಂಕ ಅಮಲ ಅದೃಶ್ಯ ಅಕಲ್ಪ ಅಭವ ಅರುಣೋದಯ ಅನುಪಮ ಅಘಟಿತ ಅಚರಿತ್ರ ಐಶ್ವರ್ಯ ಅದ್ಭುತ ಆದ್ಯ ಆರಾಧ್ಯ ಅಂಗಸಂಗ ಅಮರಗಣವಂದ್ಯ ರಕ್ಷಿಪುದೆಮ್ಮ ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪುರುಷನಿಂದ ಸತಿ ಹಿರಿಯಳಾದರೂ ಆಗಲಿ, ಹಸೆಹಂದರವನಿಕ್ಕಿ ಮದುವೆಯ ಮಾಡಿದ ಮೇಲೆ ಪುರುಷನಿಂದ ಕಿರಿಯಳು ನೋಡಾ. ಗುರುವಿಗಿಂದ ಶಿಷ್ಯ ಅರುಹುಳ್ಳಾತನಾದರೂ ಆಗಲಿ, ಶಿಷ್ಯನ ಭಾವಕ್ಕೆ ಗುರು ಅದ್ಥಿಕ ನೋಡಾ. ನಾನರುಹುಳ್ಳಾತ, ಗುರುವಿಗರುಹುವಿಲ್ಲೆಂದು ಜರೆದು ನುಡಿವ ನುಡಿ ಅಂಗದೊಳು ಹೊಳೆದರೆ ಕುಂಬ್ಥಿನಿಯ ಪಾಪದೊಳಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅತ್ತಿಯಹಣ್ಣಿಗಾಗಿ ಬಂದು ಸಿಕ್ಕಿದ ಪಿಕಳಿಯಂತೆ ವ್ಯರ್ಥ ಕಾಯರಸವಿಷಯಕ್ಕಾಸೆಗೈದು ಸತ್ತು ಸತ್ತು ಹುಟ್ಟಿ ಭವಕ್ಕೆ ಗುರಿಯಾಗಿ, ಮಾಯಾಬಲೆಯ ಸಂಸಾರಬಂಧನದೊಳು ಬಂದು ಸಿಲ್ಕಿದೆನಯ್ಯಾ. ಮಾಯೆಯ ಹರಿದು, ಸಂಸಾರಬಂಧನವ ಕೆಡಿಸಿ, ಭವರೋಗಕ್ಕೆ ವೈದ್ಯನ ಮಾಡೋ ಶಿವ ವಿಶ್ವಕುಟುಂಬಿ ಮಹಾದೇವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆಸತ್ತೆ ಸಂಸಾರಸಂಗಕ್ಕೆ, ಬೇಸತ್ತೆ ಸಂಸಾರಸಂಗಕ್ಕೆ. ಸಂಸಾರಸಂಗದಿಂದ ಓಸರಿಸಿ ಒಯ್ಯನೆ ಕಂದಿ ಕುಂದಿ, ಭವಗಿರಿಯ ಸುತ್ತುತ್ತಿದ್ದೆನಯ್ಯಾ. ಅಯ್ಯಾ, ಅಯ್ಯಾ ಎಂದು ಒಯ್ಯನೆ ಒದರಿದರೆ `ಓ' ಎನ್ನಲೊಲ್ಲೇಕೆಲೊ ಅಯ್ಯ ? ನೀ ಪಡೆದ ಸಂಸಾರ ಸುಖ ದುಃಖ, ನೀನೆ ಬೇಗೆಯನಿಕ್ಕಿ, ನೀನೊಲ್ಲೆನೆಂದರೆ ನಾ ಬಿಡೆ, ನಾ ಬಿಡೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕೂಪದ ತಡಿಯ ಹುಲ್ಲ ಮೇವ ಎರಳೆಯನೆಚ್ಚಲು ಬಂದ ವ್ಯಾಧನ ಬಾಣದಲೊಂದು ಅಚ್ಚ ಆಶ್ಚರ್ಯವ ಕಂಡೆನು. ಕರಿಯ ಮುಖವೈದು, ಬಿಳಿಯ ಮುಖವೈದು, ಮುಂದೈದು ಮುಖದ ಸಂಭ್ರಮವ ಕಂಡು ಎರಳೆ ಬೆದರಿ ಬಾವಿಯ ಬೀಳುತಿರ್ದಡಿದೇನು ಚೋದ್ಯವೋ ! ಚೋದ್ಯದ ಹಗರಣವ ಕಂಡು ಅಡವಿಯ ರಕ್ಷಿ ನಗುತಿದೆ ಇದೇನೋ ನಿನ್ನ ಮಾಯದ ವಿಗಡ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂತರಂಗದ ಅಷ್ಟಮದ ಅವಾವೆಂದರೆ ಹೇಳುವೆ ಕೇಳಿರಣ್ಣಾ : ಪೃಥ್ವಿಮದ ಸಲಿಲಮದ ಪಾವಕಮದ ಪವನಮದ ಅಂಬರಮದ ರವಿಮದ ಶಶಿಮದ ಆತ್ಮಮದವೆಂಬ ಅಷ್ಟಮೂರ್ತಿಯ ಮದಂಗಳು. ಇವರ ಗುಣಧರ್ಮಕರ್ಮವೆಂತೆಂದಡೆ, ಅದಕ್ಕೆ ವಿವರ ; ಪೃಥ್ವಿಮದವೆತ್ತಿದಲ್ಲಿ ತನುಗುಣಭರಿತನಾಗಿ, ಆಭರಣ ಅನುಲೇಪನ ತಾಂಬೂಲವಂ ಬಯಸುತ್ತಿಹನು. ಸಲಿಲಮದವೆತ್ತಿದಲ್ಲಿ ಸಂಸಾರಭರಿತನಾಗಿ, ಎನಗೆ ಬೇಕು, ಮನೆಗೆ ಬೇಕು, ಮಕ್ಕಳಿಗೆ ಬೇಕು ಎನುತಿಹನು. ಪಾವಕಮದವೆತ್ತಿದಲ್ಲಿ ಕಾಮರಸಭರಿತನಾಗಿ, ಕರಸಬೇಕು ನುಡಿಸಬೇಕು ಆಲಿಂಗಿಸಬೇಕು ಎನುತಿಹನು. ಪವನಮದವೆತ್ತಿದಲ್ಲಿ ಕೋಪಾಗ್ನಿಭರಿತನಾಗಿ, ಕೊಂದೇನು ತಿಂದೇನು ಸಾದ್ಥಿಸೇನು ಭೇದಿಸೇನು [ಎನುತಿಹನು]. ಶಶಿಮದವೆತ್ತಿದಲ್ಲಿ ಚಿಂತಾಭರಿತನಾಗಿ, ಆದೀತೊ ಆಗದೊ, ಇದ್ದೀತೊ ಇಲ್ಲವೊ ಎನುತಿಹನು. ಆತ್ಮಮದವೆತ್ತಿದಲ್ಲಿ ಅಹಂಕಾರಭರಿತನಾಗಿ, ಎನಗಿಂದು ಅದ್ಥಿಕರಿಲ್ಲ, ಎನಗಿಂದು ಇದಿರಿಲ್ಲವೆಂದು ಅಹಂಭಾವದಿಂದ ಅಹಂಕರಿಸುತ್ತಿಹನು. ಇಂತೀ ಅಷ್ಟಮೂರ್ತಿಮದಂಗಳ ಭ್ರಾಂತಿನ ಬಲೆಯೊಳಿಟ್ಟೆನ್ನನಗಲದಿರು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇನ್ನಷ್ಟು ... -->