ಅಥವಾ

ಒಟ್ಟು 37 ಕಡೆಗಳಲ್ಲಿ , 16 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಛಲಮದವೆಂಬುದು ತಲೆಗೇರಿ ಗುರುಹಿರಿಯರ ನೆಲೆಯನರಿಯದೆ ಮದಿಸಿಪ್ಪರಯ್ಯ. ರೂಪಮದ ತಲೆಗೇರಿ ಮುಂದುಗೊಂಡು ತಮ್ಮ ತನುವಿನ ರೂಪ ಚೆಲ್ವಿಕೆ ನೋಡಿ ಮರುಳಾಗಿ ಚಿದ್ರೂಪನ ನೆನವ ಮರೆದರಯ್ಯಾ. ಯವ್ವನಮದ ತಲೆಗೇರಿ ಮದಸೊಕ್ಕಿದಾನೆಯಂತೆ ಪ್ರಯಾಸಮತ್ತರಾಗಿ ಕಾಮನ ಬಲೆಯೊಳಗೆ ಸಿಲ್ಕಿ ಕಾಮಾರಿನೆನವ ಮರೆದರಯ್ಯಾ. ಧನಮದವೆಂಬುದು ತನುವಿನೊಳು ಇಂಬುಗೊಂಡು ಅರ್ಥಭಾಗ್ಯ ಕಾಡಿ ವ್ಯರ್ಥ ಸತ್ತಿತು ಲೋಕ. ವಿದ್ಯಾಮದವೆಂಬುದು ಬುದ್ಧಿಗೆಡಿಸಿ ನಾ ಬಲ್ಲವ ತಾ ಬಲ್ಲವನೆಂದು ತರ್ಕಿಸಿ ಪ್ರಳಯಕಿಳಿದರು. ರಾಜ್ಯಮದವೆದ್ದು ರಾಜ್ಯವನಾಡಿಸಿ ಬೇಡಿಸಿಕೊಂಡೆನೆಂದು ರಾಜರಾಜರು ಹತವಾದರು. ತಪಮದವೆದ್ದು ನಾ ತಪಸಿ ನಾ ಸಿದ್ಧ ನಾ ಯೋಗಿ ನನಗಾರು ಸರಿಯಿಲ್ಲವೆಂದು ಅಹಂಕಾರಕ್ಕೆ ಗುರಿಯಾಗಿ ಭವಕ್ಕೆ ಬಂದರು ಹಲಬರು. ಇಂತೀ ಅಷ್ಟಮದವೆಂಬ ಭ್ರಾಂತು[ವ] ತೊಲಗಿಸಿ ನಿಭ್ರಾಂತನಾಗಿರಬಲ್ಲರೆ ಶಿವಶರಣನೆಂಬೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸೊಲ್ಲಿಗೆ ಒಂದು ಖಂಡುಗ ನವಣೆ ನುಂಗಿತ್ತಯ್ಯಾ. ಆ ನವಣೆಯ ಹೊಯ್ದಳೆಯಬೇಕೆಂದಡೆ ಸ್ಥಲ ಸಾಲದಯ್ಯಾ- ಹಲಬರು ಛಲವಿಡಿದುವಿಡಿದು ಹೊಲಬುಗೇಡಿಯಾದರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹಲವು ಹಡಗವಾದರೇನಯ್ಯಾ ? ಸಮುದ್ರ ಒಂದೇ ನೋಡಾ ! ಹಲವು ಪಕ್ಷಿ ಇದ್ದರೇನಯ್ಯಾ ? ಹಾರುವ ಪವನ ಒಂದೇ ನೋಡಾ ! ಹಲವು ಉಡುರಾಜರಿದ್ದರೇನಯ್ಯಾ ? ಬೆಳಗಮಾಡಿ ತೋರುವ ಸೂರ್ಯ ಒಂದೇ ನೋಡಾ ! ಹಲಬರಿಗೆ ಹಲವು ಗುರುರೂಪಾದ ತಾ ಪರಮಾತ್ಮ ಒಬ್ಬನೆ ನೋಡಾ ! ಹಲಬರು ಕೈಯೊಳು ಬಿಲ್ಲ ಸೇರಿ ಹಲವಂಬಿಲೆಚ್ಚರದು ಎಚ್ಚಾತನ ಕೈಯೋಜೆ. ಇದಿರಿನಲ್ಲಿ ತೋರುವ ಗುರು ಒಬ್ಬನೆ ನೋಡಾ ! ಹಲವು ಲಿಂಗರೂಪಾದಾತ ಶ್ರೀಪರಮಾತ್ಮ ಒಬ್ಬನೆ ನೋಡಾ ! ಹಲಬರ ಕಣ್ಣಿಗೆ ಹಲವು ಜಂಗಮರೂಪಾಗಿ ತೋರುವಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ ! ಹಲಬರ ಹಣೆಯಲ್ಲಿಹ ದುರ್ಲಿಖಿತಗಳ ತೊಡೆದು ಶ್ರೀ ವಿಭೂತಿಯಾಗಿ ನಿಂದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ. ಹಲಬರ ಕೊರಳಲ್ಲಿ ಶ್ರೀ ರುದ್ರಾಕ್ಷಿಯಾಗಿ ನಿಂದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ ! ಹಲಬರ ಜಿಹ್ವೆಯ ಕೊನೆಯ ಮೊನೆಯಲ್ಲಿ ಶ್ರೀ ಪಂಚಾಕ್ಷರಿಯಾಗಿ ನಿಂದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ ! ಹಲವು ಶಿವಭಕ್ತಜನಂಗಳಿಗೆ ಪಾದೋದಕ ಪ್ರಸಾದವಾಗಿ ಮುಕ್ತಿಯ ತೋರಿದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ ! ಹಲಬರಿಗೆ ಹಲವು ರೂಪಾದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಪರಶಿವನೊಬ್ಬನೆ ಕಾಣಿರೋ !
--------------
ಹೇಮಗಲ್ಲ ಹಂಪ
ದ್ವಿಜರಿಗೆ ಕೊಟ್ಟು ಹಲಬರು ಕೆಟ್ಟರು, ಉದ್ಧರಿಸುವನೊಬ್ಬ, ಶಿವಶರಣ ಸಾಲದೆ ನಾರಾಯಣ ವೃದ್ಧಬ್ರಾಹ್ಮಣನಾಗಿ ಬಂದು ಬಲಿಯ ಭೂಮಿಯ ಬೇಡಿದ, ಕೊಟ್ಟ ಬಲಿ ಬಂಧನಕ್ಕೆ ಸಿಕ್ಕಿದ. ಈಶ ಭಕ್ತನಾಗಿ ಬಂದು ದಾಸನ ವಸ್ತ್ರವ ಬೇಡಿದ, ಕೊಟ್ಟ ದಾಸ ತವನಿಧಿಯ ಪಡೆದ. ಕಪಟದಿಂದ ನಾರಾಯಣ ಹಾರುವನಾಗಿ ಬಂದು ಕರ್ಣನ ಕವಚವ ಬೇಡಿದ, ಕೊಟ್ಟ ಕರ್ಣ ಕಳದಲ್ಲಿ ಮಡಿದ. ಕಾಮಾರಿ ಜಂಗಮವಾಗಿ ಬಂದು ಸಿರಿಯಾಳನ ಮಗನ ಬೇಡಿದ, ಕೊಟ್ಟ ಸಿರಿಯಾಳಸೆಟ್ಟಿ ಕಂಚಿಯಪುರ ಕೈಲಾಸಕ್ಕೊಯ್ದ. ನಾರಾಯಣ ಹಾರುವನಾಗಿ ಬಂದು ನಾಗಾರ್ಜುನನ ಶಿರವ ಬೇಡಿದ, ಕೊಟ್ಟ ನಾಗಾರ್ಜುನನ ಶಿರಹೋಯಿತ್ತು. ಶಿವನು ಜಂಗಮವಾಗಿ ಬಂದು ಸಿಂಧುಬಲ್ಲಾಳ ವಧುವ ಬೇಡಿದ, ಕೊಟ್ಟ ಸಿಂಧುಬಲ್ಲಾಳ ಸ್ವಯಲಿಂಗವಾದ. ಇದು ಕಾರಣ ಇಲ್ಲಿಯೂ ಲೇಸು, ಅಲ್ಲಿಯೂ ಲೇಸು; ಕೊಡಿರೇ, ನಮ್ಮ ಕೂಡಲಸಂಗನ ಶರಣರಿಗೆ.
--------------
ಬಸವಣ್ಣ
ಮಾಡಿ ಮಾಡಿ ಹೋದರು ಕೆಲಬರು, ನೋಡಿ ನೋಡಿ ಹೋದರು ಹಲಬರು. ನೀಡಿ ನೀಡಿ ಹೋದರು ಕೆಬರು, ನೀಡದೆ ನೋಡದೆ ಮಾಡದೆ ಹೋದವರಾರನೂ ಕಾಣೆ, ನಿಮ್ಮ ಹೃದಯದೊಳು [ಕಪಿಲಸಿದ್ಧ]ಮಲ್ಲಯ್ಯಾ,
--------------
ಸಿದ್ಧರಾಮೇಶ್ವರ
ಅಂಗೈಯಗಲದ ಪಟ್ಟಣದೊಳಗೆ ಆಕಾಶದುದ್ದ ಎತ್ತು ತಪ್ಪಿತ್ತು. ಅರಸಹೋಗಿ ಹಲಬರು ಹೊಲಬುದಪ್ಪಿ, ತೊಳಲಿ ಬಳಲುತ್ತೈದಾರೆ. ಆರಿಗೆ ಮೊರೆಯಿಡುವೆ, ಅಗುಸಿಯನಿಕ್ಕುವೆ. ಜಲಗಾರನ ಕರೆಸಿ, ಜಲವ ತೊಳೆಯಿಸಿ ಅಘಟಿತ ಘಟಿತ ನಿಜಗುರು ಭೋಗೇಶ್ವರಾ, ಅರಸಿಕೊಂಡು ಬಾರಯ್ಯಾ.
--------------
ಭೋಗಣ್ಣ
ತಿಳಿದೆ ನಾ ತಿಳಿದೆ ನಾ ಎಂದು ಹಲಬರು ಹೋದರು ಅಹಂಕಾರದಲ್ಲಿ. [ತಿಳಿಯೆ ನಾ]ಳಿಯೆ ನಾ ಎಂದು ಹಲಬರು ಹೋದರು ಮರವೆಯಲ್ಲಿ. ತಿಳಿದೆನೆಂಬುದು ತಿಳಿಯೆನೆಂಬುದು ಜ್ಞಾನದ ಮೈದೊಡಕು. ತಿಳಿಯೆ ಅರಿವು ಮರವೆಯೆಂಬುಭಯವ ತಿಳಿದು ತಿಳಿಯದಂತಿರೆ, ತಿಳಿನೀರ ನಳಿನಾಕ್ಷನುತ ಕಪಿಲಸಿದ್ಧಮಲ್ಲಿಕಾರ್ಜುನ ತಾನೆ.
--------------
ಸಿದ್ಧರಾಮೇಶ್ವರ
ಜಾಳೇಂದ್ರದೇಶದ ಅರಸು ಆನೆಯನೇರಿ, ನಾಯಕ ಪಾಯಕ ಮಾವತಿಗರ ತಳತಂತ್ರ ಮಾರ್ಬಲ ಸಹಿತ ರಾಜಬೀದಿಯೊಳು ಬರುತಿರಲು, ಹೆಜ್ಜೆಗಾಣದೆ ತಳಿತಕಾರೆಯಮೆಳೆಯೊಳಗಿಪ್ಪ ಬಿಜ್ಜು ಅರಸು, ಆನೆ ಮೊದಲಾದ ತಳತಂತ್ರ ಮಾರ್ಬಲನ ನುಂಗಿತ್ತ ಕಂಡೆ. ಎರಡೂರ ಬಟ್ಟೆ, ಒಂದಾದ ತಲೆವೊಲದಲ್ಲಿ ಒಬ್ಬ ತನ್ನ ತಲೆಯ ಕೊಯ್ದು ಮುಂದಿರಿಸಿಕೊಂಡು ಮುಂಡದಲಿ ಹೇನ ಕಳವುದ ಕಂಡೆ. ಅಂಗವ ಕೈಯಲ್ಲಿ ಹಿಡಿದುಕೊಂಡು ಅರಸಿ ಬಳಲುತ್ತಿರೆ ಹಲಬರು. ನಿಜಗುರು ಭೋಗೇಶ್ವರನ ಶರಣ ಚೆನ್ನಬಸವಣ್ಣನ ಕರುಣವುಳ್ಳವರಿಗಲ್ಲದೆ ಮಿಕ್ಕಿನ ಜಡಮತಿಗಳಿಗೆಂತು ಸಾಧ್ಯವಪ್ಪುದು ಕೇಳಿರಣ್ಣಾ.
--------------
ಭೋಗಣ್ಣ
ಭೂತ ಭೂತ ಹೊಡಯಿತೆಂದು ಬಾಯಿಗೆ ಬಂದ ಹಾಗೆ ಕೆಲದಾಡಿ ಹಲಬರು ಮಂತ್ರಿಸಿ ಥೂಥೂ ಎಂದು ಉಗುಳಿ, ಛೀ ಛೀ ಎಂದು ಉಗುಳಿ, ಜರಿದು ಝಂಕಿಸಿ ಲಜ್ಜೆಗೆಡಿಸಿಕೊಂಬ ಪಾತಕ ಕರ್ಮಿಗಳಿಗ್ಯಾಕೊ ಶಿವಸ್ತೋತ್ರ, ಶಿವಭಕ್ತಿ? .................................................ಬೆಂದು ನಾರು ಬೇರು................................................................. ..............
--------------
ಅಂಬಿಗರ ಚೌಡಯ್ಯ
ಸಾಕಾರವಿಡಿದು ಪರಬ್ರಹ್ಮ, ನಿರಾಕಾರವಿಡಿದು ಪರಬ್ರಹ್ಮವೆಂಬಿರಿ. ಪರಬ್ರಹ್ಮವ ನುಡಿವಿರಿ, ಪರಬ್ರಹ್ಮವನರಿದಿಹೆವೆಂಬಿರಿ, ಅರಿಹಿಸಿಹೆವೆಂಬಿರಿ, ಆನೆ ಪರಬ್ರಹ್ಮವೆಂಬಿರಿ, ಪರಬ್ರಹ್ಮವನರಿಯದೆ ನುಡಿವಿರಿ, ಬ್ರಹ್ಮದೊಡಕು ಅರಿದು ಕಂಡಿರಣ್ಣಾ. ಈ ಬ್ರಹ್ಮದೊಡಕಿಂದ ಮುನ್ನೊಮ್ಮೆ ದೇವಜಾತಿಗಳು ಋಷಿಜನಂಗಳು ಬ್ರಹ್ಮನನು, ಪರಬ್ರಹ್ಮವ ಬೆಸಗೊಳಲು ಅಹಂ ಬ್ರಹ್ಮವೆಂದು ತಲೆಯ ಹೋಗಾಡಿಕೊಂಡುದು ಸರ್ವಪುರಾಣಪ್ರಸಿದ್ಧ, ಇನ್ನೂ ತಲೆಯ ಮೋಟು ಕಾಣಬರುತ್ತದೆ. ಬ್ರಹ್ಮನ ಶಿರ ಪರಬ್ರಹ್ಮದ ಕೈಯಲ್ಲಿದೆ. ಆನೆ ಪರಬ್ರಹ್ಮವೆಂದು ಸನತ್ಕುಮಾರ ಒಟ್ಟೆಯಾದುದು ಸ್ಕಂದ ಪುರಾಣಪ್ರಸಿದ್ಧ. ಅವರಂತಾಗದೆ, ಪರಬ್ರಹ್ಮದ ನೆಲೆಯ ಕೇಳಿರಣ್ಣಾ: ಲಿಂಗವೇ ಪರಬ್ರಹ್ಮವೆಂದು ಅಥರ್ವಣ ಹೇಳುತ್ತದೆ, `ಏಕೋ ರುದ್ರಸ್ಸ ಈಶಾನಃ ಸ ಭಗವಾನ್ ಸ ಮಹೇಶ್ವರೋ ಮಹಾದೇವ ಇತಿ ಈ ಪ್ರಕಾರದಲೆ ಯಜುರ್ವೇದ ಹೇಳುತ್ತಿದ್ದಿತ್ತು. ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣ ಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮಃ ಈ ಪ್ರಕಾರದಲ್ಲಿ ಶಿವಸಂಕಲ್ಪೋಪನಿಷತ್ ಹೇಳುತ್ತಿದೆ. ಋತಂ ಸತ್ಯಂ ಪರಂ ಬ್ರಹ್ಮಪುರುಷಂ ಕೃಷ್ಣ ಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ತನ್ಮೇ ಮನಶ್ಶಿವಸಂಕಲ್ಪಮಸ್ತು ಎಂದುದಾಗಿ ಲಿಂಗವೇ ಪರಬ್ರಹ್ಮ. ಮುನ್ನೊಮ್ಮೆ ಹರಿಬ್ರಹ್ಮರ ಸಂವಾದದಲ್ಲಿ ಉರಿಲಿಂಗ ಉದ್ಭವವಾದಲ್ಲಿ ಹರಿಬ್ರಹ್ಮಾದಿಗಳು ಸ್ತೋತ್ರವ ಮಾಡಿದರು. ಲೈಂಗ್ಯ ಪುರಾಣದಲ್ಲಿ, ಜ್ವಾಲಾಮಾಲಾವೃತಾಂಗಾಯ ಜ್ವಲನಸ್ತಂಭರೂಪಿಣೇ ನಮಶ್ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ಇದು ಮುನ್ನೊಮ್ಮೆ ಬ್ರಹ್ಮಕಾರಣ ಲಿಂಗವೇ ಪರಬ್ರಹ್ಮ, ಶಿವನೇ ಪರಬ್ರಹ್ಮವೆಂದು ಮತ್ತೆ ಯಜುರ್ವೇದ ನುಡಿಯುತ್ತಿದೆ. ಈಶಾನಸ್ಸರ್ವವಿದ್ಯಾನಾಮೀಶ್ವರಸ್ಸರ್ವಭೂತಾನಾಂ ಬ್ರಹ್ಮಾಧಿಪತಿ ಬ್ರಹ್ಮಣೋ[s]ಧಿಪತಿಬ್ರ್ರಹ್ಮಾ ಶಿವೋ ಮೇ[s]ಸ್ತು ಸದಾಶಿವೋಂ ಆದಿತ್ಯ ಪುರಾಣದಲೂ ಮಹಾಪುರುಷ ಆದಿತ್ಯ ಹೇಳುತ್ತಿದ್ದಾನೆ: ಪರಬ್ರಹ್ಮಾ ಚ ಈಶಾನ ಏಕೋ ರುದ್ರಸ್ಸ ಏವ ಚ ಭಗವಾನ್ ಮಹೇಶ್ವರಸ್ವಾಕ್ಷಾನ್ಮಹಾದೇವೋ ನ ಸಂಶಯಃ ಯಸ್ಯಾಂತಸ್ಥಾನಿ ಭೂತಾನಿ ಯೇನೇದಂ ಧಾರ್ಯತೇ ಜಗತ್ ಬ್ರಹ್ಮೇತಿ ಯಂ ಜಹುರ್ವೇದಾಃ ಸರ್ವೇ ತಂ ಶರಣಂ ವ್ರಜೇತ್ ಕೂರ್ಮ ಈಶ್ವರಗೀತೆಯಲ್ಲಿ, ಆವ್ಯಕ್ತಂ ಕಾರಣಂ ಪ್ರಾಹುರಾನಂದಂ ಜ್ಯೋತಿರಕ್ಷರಂ ಅಹಮೇವ ಪರಬ್ರಹ್ಮ ಮತ್ತೋ[s]ನ್ಯಂ ಹಿ ನ ವಿದ್ಯತೇ ಅಹಂ ತತ್ಪರಮಂ ಬ್ರಹ್ಮ ಪರಮಾತ್ಮಾ ಸನಾತನಃ ಮಹಾಪುರುಷ ಮನು ಮಾನವಪುರಾಣದಲ್ಲೂ ಹೇಳಿದನು: ಋತಂ ಸತ್ಯಂ ಪರಬ್ರಹ್ಮಪುರುಷಂ ಸೋಮವೀಶ್ವರಂ ಊಧ್ರ್ವರೇತಂ ಸಮುತ್ಪತ್ತಿಸ್ಥಿತಿಸಂಹಾರಕಾರಣಂ ವಿಶ್ವರೂಪಂ ವಿರೂಪಾಕ್ಷಂ ಚಂದ್ರಮೌಳಿಂ ಘೃಣಾನಿಧಿಂ ಹರಣ್ಯಬಾಹುಮದ್ವಂದ್ವಂ ಹಿರಣ್ಯಪತಿಮೀಶ್ವರಂ ಅಂಬಿಕಾಯಾಃ ಪತಿಂ ಸಾಕ್ಷಾದುಮಾಯಾಃ ಪತಿಮಕ್ರಿಯಂ ಪರತತ್ವಂ ಸಮಾಖ್ಯಾತಂ ಶಿವಂ ಧ್ಯಾಯಂತಿ ಸಂತತಂ ತೈತ್ತಿರೀಯ ಶ್ರುತಿ, `ಸದ್ವಿಪ್ರಾಹಿ..... ಎಂದುದಾಗಿ, ಬಹಳ ಬಹಳ ಚಕ್ಷು, ಬಹಳ ಬಹಳ ಮುಖನು, ಬಹಳ ಬಹಳ ಬಾಹು, ಬಹಳ ಪಾದನು, ಇಂತಹ ಬಹಳ ಲಿಂಗವೆ, ಬ್ರಹ್ಮ ಕಾಣಿರಣ್ಣಾ. `ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ, ಬಹಳಕ್ಕೆ ಬಹಳ, ಮಹಾಬಹಳ ಲಿಂಗವೆ ಬಹಳಬ್ರಹ್ಮ ಕಾಣಿರಣ್ಣಾ. ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ, ಮನೋವಾಕ್ಕಾಯ ನಾದಬಿಂದುಕಳೆಗೆ ಅತೀತನಾದ ಮಹಾಬಹಳ ಲಿಂಗವನು ಶ್ರೀಗುರು ನಿರೂಪಿಸಿ ಕೊಟ್ಟನಾಗಿ ಈ ಲಿಂಗವೇ ಪರಬ್ರಹ್ಮ ಕಾಣಿರಣ್ಣಾ. ಇದು ಕಾರಣ, ಪರಬ್ರಹ್ಮಲಿಂಗವೆಂದು ಧ್ಯಾನಿಸಿ ಪೂಜಿಸಿ ಮಹಾನಂದ ಪರಮುಕ್ತಿಯನೈದಿದರು ಪೂರ್ವದಲ್ಲಿ ದೇವಜಾತಿಗಳು ಹಲಬರು, ಇದು ಪುರಾಣ ಪ್ರಸಿದ್ಧ. ಕಲಿಯುಗದಲ್ಲಿ ದೃಷ್ಟ: ಬಸವರಾಜದೇವರು ಮೊದಲಾದ ಅಸಂಖ್ಯಾತ ಮಾಹೇಶ್ವರರು ಇದನರಿದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವೆ ಪರಬ್ರಹ್ಮವೆಂದು ಅರಿದು ಧ್ಯಾನಿಸಿ ಪೂಜಿಸಿ ಮಹದಾನಂದಮುಕ್ತಿಯನೈದಿದರಣ್ಣಾ.
--------------
ಉರಿಲಿಂಗಪೆದ್ದಿ
ಆದಿನಿರಾಳ, ಮಧ್ಯನಿರಾಳ, ಊಧ್ರ್ವನಿರಾಳ ಅಂತೆ ನಿನ್ನ ಪರಿಯಯ್ಯಾ. ಅನಾಮಯಶೂನ್ಯನೆಂದು ಹೊಗಳುತ್ತೈದಾರೆ ನಿನ್ನ ಹಲಬರು, ನೀನು ಭಕ್ತಕಾರಣ ಪರಶಿವಮೂರ್ತಿಯೆಂಬುದನರಿಯರಾಗಿ. ಎಲೆ ಅಯ್ಯಾ, ಸುಚಿತ್ತವಾದ ಲೋಕಂಗಳಲ್ಲಿ ನೀನು ಉರುತರ ನಿತ್ಯನೆಂಬುದನರಿಯರು ಕಾಣಾ ಎಲೆ ಅಯ್ಯಾ, ಅಯ್ಯ ನಿನ್ನ ಅನಾಹತ ಪಟ್ಟಣದಲ್ಲಿ ಶೂನ್ಯಕಾಯನೆಂಬ ಮಹಾಗಣೇಶ್ವರನ ಮನೆಯಲ್ಲಿ ಪದನಾಶನೆಂಬ ಯೋಗಿಯಾಗಿ ಬಂದು, ಫಲಕ್ಕೆ ಬಿತ್ತಲಿದ್ದ ಬೀಜಂಗಳ ನೀನು ಸಂಗ್ರಹಿಸಿ ಸ್ವಯಂಪಾಕವ ಮಾಡಿ, ಆತ ಕಿಂಕಿಲದಿಂ ಸದ್ಭಾವವೆಂದೆಂಬ ಪರಿಯಾಣದಲ್ಲಿ ಅಷ್ಟಪಾದಂಗಳನುಳ್ಳ ಆಧಾರವಂ ತಂದಿಟ್ಟು ಮಥಿತ ಮರ್ಧನ, ಸುಚಿತ್ತ ಸುಗುಣಂಗಳೆಂಬ ಓಗರವಂ ತಂದು ಎನಗೆ ಬಡಿಸಲಾಗಿ, ನಿತ್ಯವೆಂಬ ದೀಪ್ತಿಯ ಬೆಳಗಿನಲ್ಲಿ ಸುಚಿತ್ತಂ ಆರೋಗಣೆಯಂ ಮಾಡಿ, ರೇತೋದಾರನೆಂಬ ಗಣೇಶ್ವರ ಲೆಕ್ಕ ಮೂವತ್ತಾರು ಸಾವಿರ ಪಟ್ಟಣಂಗಳಲ್ಲಿ ಪ್ರವೇಶಿಸಿ ಬಂದ ಕಾಲದಲ್ಲಿ, ನಿನ್ನ ಸುಮತಿ ಪ್ರಸನ್ನತೆ ಪರಿಣಾಮ ಪ್ರಯೋಗವೆಂಬ ಪ್ರಸಾದ ಸ್ವೀಕಾರಂ ಮಾಡಲ್ಕಾಗಿ, ಆತನ ಮೂರರಿಂ ಮೇಲೆ ಹತ್ತರಿಂದೊಳಗೆ ಇದ್ದಂಥ ಹಲವೆಲ್ಲವೂ ಏಕೀಭವಿಸಿದವು. ಆತ ನಿತ್ಯನಾದ, ಆತ ಫಲಕ್ಕೆ ಪದಕ್ಕೆ ಭವಕ್ಕೆ ತುರೀಯ ಸಿದ್ಧ ತ್ವಮಸಿಯನೆಯ್ದಿ ಸಂದು ಹರಿದ, ಹಂಗು ಹರಿದ, ಆನಂದವೆಂಬ ಶ್ವೇತಜಲದಲ್ಲಿ ಚಂದ್ರಕಾಂತದ ಮಂಟಪವನಿಕ್ಕಿ, ಅರ್ಚನೆ ಪೂಜನೆ ವ್ಯವಹರಣೆಯೆಂಬವನತಿಗಳೆದು ಸದ್ಧಲಿಂಗಾರ್ಚನೆಯ ಮಾಡಿ ಸುಖಸಂಯೋಗದಲ್ಲಿ ಎರಡಿಲ್ಲದೆ ಮೂರ್ಚಿತವೋಗೈದಾನೆ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ವೃಥಾ ಸತಿ ಸುತ ಪಿತ ಮಾತೆಯರ ಮದ ತಲೆಗೆ ಹತ್ತಿ, ಉಮ್ಮತ್ತದ ಕಾಯ ಸವಿದ ಕಪಿಯಂತೆ, ಹುಮ್ಮಸದಿಂದುಲಿದು, ಧರ್ಮದಾಯಗುಣವಿಲ್ಲದೆ ಕರ್ಮಕೆ ಗುರಿಯಾಗಿ ಕೆಟ್ಟರು ಹಲಬರು. ಮತ್ಸರದ ಮಾಯದ ಬಲೆಯಲ್ಲಿ ಹುಚ್ಚುಗೊಂಡಿಪ್ಪರು. ಅದು ಎಂತೆಂದೊಡೆ : ಗುರುವಿನೆಡೆಗೆ ಮತ್ಸರ, ಲಿಂಗದೆಡೆಗೆ ಮತ್ಸರ, ಜಂಗಮದೆಡೆಗೆ ಮತ್ಸರ, ಹಿರಿಯರೆಡೆಗೆ ಮತ್ಸರ ಮಾಡಿ, ಭವವೆಂಬ ಮಾರಿಯ ಅಣಲೊಳಗೆ ಸಿಕ್ಕಿದರಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಊರೊಳಗೈವರು ಮಕ್ಕಳು. ಹಲಬರು ಆಡಹೋಗಿ ಅಡವಿಯ ಹೊಕ್ಕರಲ್ಲಯ್ಯಾ. ನೋಡಹೋದವರು ಕಣ್ಣುಗೆಟ್ಟು ಕಾಡ ಕೂಡಿದರಲ್ಲಯ್ಯಾ. ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ ವ್ಯರ್ಥರಾದರಲ್ಲಯ್ಯಾ.
--------------
ಆದಯ್ಯ
ಅರ್ಕನ ಅದ್ಭುತದಲ್ಲಿ ಕೆಟ್ಟರು ಹಲಬರು, ತಪ್ಪುಕರಾದರು ಹಲಬರು. ಬಿಂದು ಬಿಂದುವನೆ ಕೂಡಿ ಲಿಂಗಲೀಯವಾಯಿತ್ತು. ನಿಂದನು ಗುಹೇಶ್ವರನೆನ್ನೊಳಗೆ ಭರಿತನಾಗಿ.
--------------
ಅಲ್ಲಮಪ್ರಭುದೇವರು
ಮೃತ್ಯುವೆಂಬ ಪಟ್ಟಣದಲ್ಲಿ ಒಂದು ಚಿತ್ರವ ಕಂಡೆ. ಆಡು ಆನೆಯ ನುಂಗಿದ ಕಂಡೆ. ಗುಂಗಾಡಿ ಹುಲಿಯ ನುಂಗಿದ ಕಂಡೆ. ಹಂದಿ ಶುನಿಗಳ ಕಚ್ಚಿ ಹರಿದಾಡುವದ ಕಂಡೆ. ಗಗನದೊಳಗಣ ಚಂದ್ರನ ಭೂಮಿಯೊಳಗಣ ಸರ್ಪ ನುಂಗಿದ್ದ ಕಂಡೆ. ಕೋತಿ ಕುದುರೆಯನೇರಿ ಹರಿದಾಡುವದ ಕಂಡೆ. ಅರಸಿನ ಮಗ ಹೊಲತಿಯ ಸಂಗ ಮಾಡುವದ ಕಂಡೆ. ಅಷ್ಟರಲ್ಲಿಯೇ ಒಂದು ಇರುವೆ ಹುಟ್ಟಿ, ಅರಸಿನ ಮಗನ ನುಂಗಿ, ಹೊಲತಿಯ ಕೊಂದು, ಆನೆ ಆಡಿಗೆ ಕಚ್ಚಿ, ಹುಲಿ ಗುಂಗಾಡಿಯ ನುಂಗಿ, ಗಗನದ ಚಂದ್ರನವಗ್ರಹಿಸಿ, ಸರ್ಪನ ಕೊಂದು, ಹಂದಿ, ನಾಯಿ ಕುದುರೆ, ಕೋತಿಯ ಹತಮಾಡಿ, ಮೃತ್ಯುವೆಂಬ ಪಟ್ಟಣವ ಸುಟ್ಟು, ಇರುವೆಯ ಗರ್ಭದಲ್ಲಿ ಇಬ್ಬರು ಹತವಾದರು. ಇಬ್ಬರು ಹತವಾದಲ್ಲಿ ಹಲಬರು ಹತವಾದರು. ಈ ಭೇದವ ತಿಳಿಯಬಲ್ಲರೆ ಅಂಗಲಿಂಗಿ ಪ್ರಾಣಲಿಂಗಿ ಸರ್ವಾಂಗಲಿಂಗಿ ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->