ಅಥವಾ

ಒಟ್ಟು 34 ಕಡೆಗಳಲ್ಲಿ , 21 ವಚನಕಾರರು , 29 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಬತ್ತುನಾಲ್ಕು ಲಕ್ಷ ಜೀವಜಂತುವಿನೊಳಗಿಪ್ಪ ಆತ್ಮನು ಏಕಾತ್ಮನೊ, ಹಲವಾತ್ಮನೊ, ಬಲ್ಲಡೆ ನೀವು ಹೇಳಿರೆ? ಅನಂತಕೋಟಿಬ್ರಹ್ಮಾಂಡದೊಳಗಿಪ್ಪ ಬ್ರಹ್ಮವು ಏಕಬ್ರಹ್ಮವೊ, ಅನಂತಬ್ರಹ್ಮವೊ, ಬಲ್ಲಡೆ ನೀವು ಹೇಳಿರೆ? ಬ್ರಹ್ಮಾಂಡವೊಂದು ತತ್ತಿ ಒಡೆದು, ಬಹಿರಾವರಣವಾದಲ್ಲಿ ಆ ಬ್ರಹ್ಮವು ಹೋಗಿ ಮತ್ತೊಂದು ಬ್ರಹ್ಮಾಂಡದಲ್ಲಿ ಹೊಕ್ಕುದ ಕಂಡಡೆ, ಕಂಡು ಬಲ್ಲವರು ನೀವು ಹೇಳಿರೆ. ಗಂಧರ್ವಪಟ್ಟಣದಲ್ಲಿ ಹುಟ್ಟುವ ಬಹು ಬಣ್ಣವ ಬಲ್ಲರೆ ಬಲ್ಲ. ಆಕಾಶಕ್ಕಡರಿದ ವಿಹಂಗನ ಮಾರ್ಗವ ಬಲ್ಲರೆ ಬಲ್ಲ. ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜವ ಬಲ್ಲರೆ ಬಲ್ಲ.
--------------
ಆದಯ್ಯ
ಗುರುಭಕ್ತರಾದವರು ತ್ರಿಕಾಲದಲ್ಲಿ ಹರಸ್ಮರಣೆಯಲ್ಲದೆ ಹರಿಯೆಂದು ನುಡಿಯಲಾಗದು. ಹರಿ ಶಬ್ದವ ಕೇಳಲಾಗದು, ಹರಿಯ ರೂಪವ ನೋಡಲಾಗದು. ಅದೇನು ಕಾರಣವೆಂದೊಡೆ : ಪೂರ್ಣಾಯುಷ್ಯವು, ವಿಮಲಮತಿಯು, ಸತ್ಕೀರ್ತಿಯು, ಮಹಾಬಲವು, ಕೆಟ್ಟು ಹೋಗುತ್ತಿಹುದು ನೋಡಾ ! ಅದೆಂತೆಂದೊಡೆ :ಬ್ರಹ್ಮಾಂಡಪುರಾಣೇ ``ನ ಪ್ರದೋಷೇ ಹರಿಂ ಪಶ್ಯೇತ್ ಯದಿ ಪಶ್ಯೇತ್ ಪ್ರಮಾದತಃ | ಚತ್ವಾರಿ ತಸ್ಯ ನಶ್ಯಂತಿ ಆಯುಃ ಪ್ರಜ್ಞಾ ಯಶೋ ಬಲಮ್ ||'' ಎಂದುದಾಗಿ, ಸತ್ತು ಹುಟ್ಟುವ ಹರಿಗೆ ಇನ್ನೆತ್ತಣ ದೇವತ್ವ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಸ್ತೋತ್ರವೆಂಬುದು ನೀನು ಮಾಡಲಾದವು ಕಂಡಯ್ಯಾ. ಮೂರ್ತಿಯೆಂಬುದು ನೀನು ನೆನೆಡಾದುದು ಕಂಡಯ್ಯಾ. ಆ ಮೂರ್ತಿಯೆಂಬುದು ನಿನ್ನ ಸ್ವಭಾವವು ಕಂದಯ್ಯಾ. ಎನ್ನ ಹೃತ್ಕಮಲದೊಳಗೆ ಹುಟ್ಟುವ ಸ್ಮರಣೆ ನಿನ್ನ ಗತಿ ನೋಡಯ್ಯಾ. ಕಪಿಲಸಿದ್ಧಮಲ್ಲನಾಥಯ್ಯಾ, ಬಾಣ ಮಯೂರ ಹಲಾಯುಧರಿಗೆಂತೊಲಿದೆ ಹೇಳಯ್ಯಾ.
--------------
ಸಿದ್ಧರಾಮೇಶ್ವರ
ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ. ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ. ಆಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ. ಪುಷ್ಪದ ನೇಮವ ಹಿಡಿದಾತ ತುಂಬಿಯಾಗಿ ಹುಟ್ಟುವ ... ಇವು ಷಡುಸ್ಥಲಕ್ಕೆ ಹೊರಗು. ನಿಜಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ಇನ್ನು ಮುಂದೆ ಹೇಳಿದ ನಿರ್ಮಲಾವಸ್ಥೆಯ ದರ್ಶನವದೆಂತೆಂದಡೆ : ಹೀಂಗೆ ಪಂಚಮಲಂಗಳ ತೋರಿದ ಜ್ಞಾನಶಕ್ತಿಗೂ ಮೊದಲು ಪೂರ್ಣಬೋಧವಾಗಿ ನಿಂದ ಠಾವು ನಿರ್ಮಲಜಾಗ್ರ ನೋಡಾ. ಮುಂದೆ ಹೇಳಿದ ಪೂರ್ಣಬೋಧ ನಿರ್ವಿಕಾರ ಹುಟ್ಟುವ ಬಗೆಗೂ ಮೊದಲ ಠಾವು ನಿರ್ಮಲಸ್ವಪ್ನ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹುಟ್ಟುವುದೇ ಬಂಧ, ಸಾವುದೇ ಮೋಕ್ಷ ಎಂಬ ಅರೆಮರುಳುಗಳನೇನೆಂಬೆನಯ್ಯಾ. ಸಾವ ಹುಟ್ಟುವ ಬಂಧದಲ್ಲಿ ಮೋಕ್ಷ ಉಂಟೇ ? ಸಂಚಿತ ಪ್ರಾರಬ್ಧ ಆಗಾಮಿ ಸವೆದು ಅಷ್ಟಭೋಗಂಗಳು ತೀರಿ, ಹುಟ್ಟುಹೊಂದು ಬಿಟ್ಟುದೇ ಮೋಕ್ಷ. ಅಂತಪ್ಪ ಮೋಕ್ಷ ಸಿದ್ಧಿಯಪ್ಪಡೆ ಸೌರಾಷ್ಟ್ರ ಸೋಮೇಶ್ವರಲಿಂಗವ ಕೈವಿಡಿದಲ್ಲದಾಗದು.
--------------
ಆದಯ್ಯ
ಹುಟ್ಟುವ ಕರಣಂಗಳ ಮುರಿದು, ತಟ್ಟುಮುಟ್ಟುಗಳಿಗೆ ಸಿಲ್ಕದೆ, ಬಟ್ಟಬಯಲ ಘಟ್ಟಿಗೊಳಿಸಿದ ಶರಣಂಗೆ ಇಹಲೋಕವೆಂದಡೇನಯ್ಯ? ಪರಲೋಕವೆಂದಡೇನಯ್ಯ? ಇಹಪರಕೆ ಸಿಲ್ಕದೆ ನಿಶ್ಚಿಂತ ನಿರಾಳನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೀಜ ಹುಟ್ಟುವ ತಿರುಳು ಒಳಗಿದ್ದಲ್ಲಿ, ಮೇರಳ ಸಿಪ್ಪೆ ಮುಚ್ಚಿಯಲ್ಲದೆ ಅಂಕುರದ ತಿರುಳಿಗೆ ಆದಿಯಿಲ್ಲ. ತಿರುಳು ಅಂಕುರ ನಾಸ್ತಿಯಾದಲ್ಲಿ ಸಿಪ್ಪೆ ಹುಟ್ಟುವುದಕ್ಕೆ ಉಭಯದ ತತ್ತಿಲ್ಲದಾಗದು. ಅಲ್ಲಾ ಎಂದಡೆ ಕ್ರೀವಂತರೊಪ್ಪರು, ಅಹುದೆಂದಡೆ ಅಮಲಿನ ಮಲಿನವಾಗದು. ದಗ್ಧವಾದ ಪಟ ಸಾಭ್ರಕ್ಕೊದಗದು. ಒಂದೆಂದು ಎರಡ ಕೂಡಿ ಸಂದನಳಿದಲ್ಲಿ ಲೆಕ್ಕ ನಿಂದಿತ್ತು. ಸದಾಶಿವಮೂರ್ತಿಲಿಂಗವೆಂದಲ್ಲಿ ಉಭಯನಾಮ ಲೀಯವಾಯಿತ್ತು.
--------------
ಅರಿವಿನ ಮಾರಿತಂದೆ
ಬೀಜವಿಲ್ಲದೆ ಬಿತ್ತು ಹುಟ್ಟುವ ತೆರನಾವುದು ? ತೊಟ್ಟಿಲ್ಲದೆ ಹಣ್ಣು ಇಪ್ಪ ತೆರನಾವುದು ? ಇಷ್ಟವಿಲ್ಲದೆ ಚಿತ್ತ ಅಪ್ಪುವ ಠಾವಾವುದು ? ಇಂತೀ ಭೇದದಲ್ಲಿ ಭೇದಕನಾಗಿ ಎರಡಳಿದು ವೇದ್ಥಿಸಿ ನಿಂದಲ್ಲಿಯೆ ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯ ಸ್ಥಲ.
--------------
ಬಿಬ್ಬಿ ಬಾಚಯ್ಯ
ಜಂಗಮಸೇವೆಯ ಚಿತ್ತ ಶುದ್ಧವಾಗಿ ಮಾಡುವಲ್ಲಿ ಗುರುಸೇವೆ ಸಂದಿತ್ತು. ಜುಗಮಸೇವೆಯ ಚಿತ್ತಶುದ್ಧವಾಗಿ ಮಾಡಲಾಗಿ ಲಿಂಗಪೂಜೆ ಸಂದಿತ್ತು. ಜಂಗಮದಾಸೋಹದಿಂದ ಸರ್ವ ಪದವಾಯಿತ್ತು. ಆ ಗುಣವನರಿದು ಹರಿಯಲಾಗಿ ಬಟ್ಟಬಯಲು ಕಾಣಬಂದಿತ್ತು. ಹುಟ್ಟುವ ಹೊಂದುವ ನೆಲೆ ಇತ್ತಲೆ ಉಳಿಯಿತ್ತು. ಚನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗವನರಿಯಲಾಗಿ.
--------------
ನುಲಿಯ ಚಂದಯ್ಯ
ತಟ್ಟು ಕುಂಚ ಕಮಂಡಲಂಗಳೆಂಬ ಲೋಚು ಮುಟ್ಟಿಯ ಹಿಡಿದು, ಭೂತಕಾಯವಾಗಿ ತಿರುಗುವ ಆತನನರಿಯದ ಬೌದ್ಧಕಾರಿಗಳು ಕೇಳಿರೊ. ಜಾಗ್ರಸ್ವಪ್ನಸುಷುಪ್ತಿಯಲ್ಲಿ ತಟ್ಟುಗೆಡೆಯದ ತಟ್ಟಲ್ಲದೆ ಹಾಸಿಕೆಯಲ್ಲ. ಮನ ಬುದ್ಧಿ ಚಿತ್ತ ಅಹಂಕಾರ ಎಂಬಿವು ಕೂಡಿ, ಸುಚಿತ್ತವೆಂಬರಿವು ಹಿಂಗದ ಕೋಲಿನಲ್ಲಿ ಕಟ್ಟಿ, ಮೂರಂಗವ ತೊಡೆವುದು ಕುಂಚ. ಹುಟ್ಟುವ ಅಂಡ, ಜನಿಸುವ ಯೋನಿ, ಮರಣದ ಮರವೆಯೆಂಬೀ ಗುಣವ ಅರಿತು, ಕೀಳುವುದು ಮಂಡೆಯ ಲೋಚು. ಹಿಂಗರಿತು ಕರಿಗೊಂಡು, ಭವವಿರೋಧವಂ ಗೆದ್ದು, ಅಘನಾಶನನ ಅಂಗದ ಮೇಲೆ ಇಂಬಿಟ್ಟು, ಹೆರೆಹಿಂಗದ ಸಂಗವೆ ತಾನಾಗಿ, ಆತ ಮಂಗಳಮಯ ಗುರುಮೂರ್ತಿ, ಎನ್ನಂಗದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಆಸೆಗೆ ಹುಟ್ಟಿದ ಭಾಷೆಹೀನ ವೇಷಧಾರಿಗಳು ಸಹಜವನೆತ್ತ ಬಲ್ಲರಯ್ಯಾ ? ಭಕ್ತಿ ಯುಕ್ತಿ ವಿರಕ್ತಿಯ ಪಥವನರಿಯದೆ ಸತ್ತು ಹುಟ್ಟುವ ಮುಕ್ತಿಗೇಡಿಗಳೆತ್ತ ಬಲ್ಲರಯ್ಯಾ ಲಿಂಗದ ನಿಜವ ? ಅರ್ಥವ ಹಿಡಿದು, ಅರಿವ ಮರೆದು, ಕರ್ತುಗಳಾಪ್ಯಾಯನವರಿಯದ ಅನುಮಾನಭರಿತ ಅಧಮರುಗಳೆತ್ತ ಬಲ್ಲರಯ್ಯಾ ಗುರುನಿರಂಜನ ಚನ್ನಬಸವಲಿಂಗ ಶರಣರ ಘನವ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾಯಾಯೋನಿಯಲ್ಲಿ ಹುಟ್ಟುವ ಮರುಳರೆಲ್ಲರು ಮಹಾಜ್ಞಾನಿಗಳಪ್ಪರೆ ? ಕಾಮವಿಕಾರಕ್ಕೆ ತಿರುಗುವ ಜೀವಗಳ್ಳರು ಅನಾದಿವಸ್ತುವನರಿವರೆ ? ಮಾತಿನಲ್ಲಿ ಮಹಾಜ್ಞಾನಿಗಳೆಂಬ ವೇಷಧಾರಿಗಳ ಕಂಡು ನಾಚುವೆ ಕಾಣಾ ಅಮುಗೇಶ್ವರಾ
--------------
ಅಮುಗೆ ರಾಯಮ್ಮ
ಹುಟ್ಟುವ ಜೀವಿಗಳೆಲ್ಲರೂ ಹಲವು ತೆರದ ಘಟದಲ್ಲಿ ಬಂದು ತಮ್ಮ ಕ್ಷುತ್ತುವ ಕೊಂಬಂತೆ ಮತ್ರ್ಯದಲ್ಲಿ ಬಂದವರೆಲ್ಲರೂ ನಿಶ್ಚಯರಪ್ಪರೆ? ಬಚ್ಚತ ಹರಿಯಜ ರುದ್ರರು ಮೊದಲಾದವರೆಲ್ಲರೂ ಸಿಕ್ಕಿದರೇಕೆ ಮಾಯೆಗೆ? ಇದರಚ್ಚಿಗವ ಕಂಡು ನಾನು ಭಕ್ತನೆಂದಡೆ ತಪ್ಪ ಸಾಧಿಸುವ ಕಾಮಹರಪ್ರಿಯ ರಾಮನಾಥಾ.
--------------
ತಳವಾರ ಕಾಮಿದೇವಯ್ಯ
ಪೃಥ್ವಿ ಆಕಾಶಮಧ್ಯದಲ್ಲಿ ಉತ್ಪತ್ತಿಯಾದ ಸಕಲ ಪ್ರಾಣಿಗಳ ಶಿವನೆಂದು ಭಾವಿಸಲಾಗದು. ಅದೇನು ಕಾರಣವೆಂದೊಡೆ : ಆ ಸಕಲ ಪ್ರಾಣಿಗಳು ಶಿವನಾದಡೆ ಮದಮತ್ಸರಂಗಳಿಂದೆ ಒಂದನೊಂದು ಕೊಂದು ಕೂಗಿ ತಿಂದು ತೇಗಲೇತಕೊ ? ಆ ಸಕಲ ಪ್ರಾಣಿಗಳು ಶಿವನಾದಡೆ ಜಾತಿ ವರ್ಣಾಶ್ರಮ ಕುಲಗೋತ್ರ ನಾಮಸೀಮೆ ಬಂದ ಬಟ್ಟೆಗೆ ಬಡಿದಾಡಲೇತಕೊ ? ಆ ಸಕಲ ಪ್ರಾಣಿಗಳು ಶಿವನಾದಡೆ ಹಮ್ಮು ಬಿಮ್ಮು ಗರ್ವ ಅಹಂಕಾರ ಹೆಮ್ಮೆ ಹಿರಿತನಕೆ ಹೊಡೆದಾಡಿ ಮಡಿದು ಹೋಗಲೇತಕೊ ? ಆ ಸಕಲ ಪ್ರಾಣಿಗಳು ಶಿವನಾದಡೆ ಮಲತ್ರಯಂಗಳ ಬಲೆಯಲ್ಲಿ ಸಿಲ್ಕಿ ಭವಭವಂಗಳಲ್ಲಿ ತೊಳಲಿ ಬಳಲಿ ಬೆಂಡಾಗಲೇತಕೊ ? ಇದು ಕಾರಣ, ಅನಾದಿಸಂಸಿದ್ಧವಾದ ಪರಮ ಜಂಗಮಲಿಂಗವೇ ಶಿವನಲ್ಲದೆ ಭವಭವಂಗಳಲ್ಲಿ ಸತ್ತು ಹುಟ್ಟುವ ಸಕಲ ಪ್ರಾಣಿಗಳ ಶಿವನೆಂದಡೆ ಅಘೋರನರಕ ತಪ್ಪದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->