ಅಥವಾ

ಒಟ್ಟು 64 ಕಡೆಗಳಲ್ಲಿ , 24 ವಚನಕಾರರು , 63 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಮ್ಮ ನೆನೆವುತ್ತಿದ್ದಿತ್ತು_ನೆನೆವ ಮುಖವಾವುದೆಂದರಿಯದೆ, ಪೂಜೆಯ ಪೂಜಿಸುತ್ತಿದ್ದಿತ್ತು_ಪೂಜೆಯ ಮುಖವಾವುದೆಂದರಿಯದೆ; ಆಡಿ ಹಾಡಿ ಬೇಡುತ್ತಿದ್ದಿತ್ತು_ಬೇಡುವ ಮುಖವಾವುದೆಂದರಿಯದೆ; ಕಾಯದಲ್ಲಿ ಇಲ್ಲ, ಜೀವದಲ್ಲಿಇಲ್ಲ, ಭಾವದಲ್ಲಿ ಇಲ್ಲ; ಭರಿತವು ಅದು ತಾನಪ್ಪುದು. ತಾನಲ್ಲದುದೇನ ಹೇಳುವೆ ಕೌತುಕವ? ಗುಹೇಶ್ವರನೆಂಬ ಹೆಸರೊಳಗಿದ್ದುದ ಬೆಸಗೊಂಬವರಿಲ್ಲ ನಿರಾಳದ ಘನವ !
--------------
ಅಲ್ಲಮಪ್ರಭುದೇವರು
ಗಗನದ ಮೇಲೊಂದು ಸರೋವರ; ಆ ಜಲದಲ್ಲಿ ಮುಖವ ತೊಳೆದು ಹೂವ ಕೊಯ್ವವರೆಲ್ಲರೂ; ದೇವರಿಗೆ ಮುಖಮಜ್ಜನವನೆರೆದು, ಪೂಜಿಸಿ ಹೊಡವಂಟಡೆ ಒಮ್ಮೆ ನಾಯಕನರಕ ತಪ್ಪದಲ್ಲಾ! ದೇವಲೋಕದ ಪ್ರಮಥರ ಲಜ್ಜೆಯನೇನ ಹೇಳುವೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಮಿಂಚುಬುಳು ಒಮ್ಮೆ ಪ್ರಚಂಡ ತೇಜೋಮಯ ಸೂರ್ಯಂಗೆ ಸರಿಯಾದಂದು, ಹರಿ ಹರಂಗೆ ಸರಿಯಹನು. ಕಹಿಬೇವಿನ ಕೊರಡು ಬಾವನ್ನ ಶ್ರೀಗಂಧಕ್ಕೆ ಸರಿಯಾದಂದು, ವಿರಿಂಚಿ ಗಿರೀಶಂಗೆ ಸರಿಯಹನು. ಅಜ್ಞಾನ ಸುಜ್ಞಾನಕ್ಕೆ ಸರಿಯಾದಂದು, ವಜ್ರಪಾಣಿ ಮೊದಲಾದ ದೇವ ದಾನವ ಮಾನವರು ಶೂಲಪಾಣಿಗೆ ಸರಿಯಹರು. ಏನ ಹೇಳುವೆ, ಅಜ್ಞಾನಿ ಜನರ ಅಜ್ಞಾನಪ್ರಬಲ ಚೇಷ್ಟೆಯನು ? ಅದೆಂತೆಂದಡೆ: ಖದ್ಯೋತೋಯದಿ ಚಂಡಭಾನು ಸದೃಶಸ್ತುತ್ಯೋ ಹರಿಃ ಶಂಭುನಾ ಕಿಂ ಕಾಷ್ಠಂ ಹರಿಚಂದನೇನ ಸದೃಶಂ ತುಲ್ಯೋಹಮೀಶೇನ ಚ | ಅಜ್ಞಾನಂ ಯದಿ ವೇದನೇನ ಸದೃಶಂ ದೇವೇನ ತುಲ್ಯೋ ಜನಾ ಕಿಂ ವಕ್ಷ್ಯೇ ಸುರಪುಂಗವಾ ಅಹಮಹೋಮೋಹಸ್ಯದುಶ್ಚೇಷ್ಟಿತಂ ನಿಮಗೆ ಸರಿಯೆಂಬವರಿಗೆ ನರಕವೆ ಗತಿಯಯ್ಯಾ, ಬಸವಪ್ರಿಯ ಕೂಡಲಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಅಂತರಂಗದ ಅಷ್ಟಮದ ಅವಾವೆಂದರೆ ಹೇಳುವೆ ಕೇಳಿರಣ್ಣಾ : ಪೃಥ್ವಿಮದ ಸಲಿಲಮದ ಪಾವಕಮದ ಪವನಮದ ಅಂಬರಮದ ರವಿಮದ ಶಶಿಮದ ಆತ್ಮಮದವೆಂಬ ಅಷ್ಟಮೂರ್ತಿಯ ಮದಂಗಳು. ಇವರ ಗುಣಧರ್ಮಕರ್ಮವೆಂತೆಂದಡೆ, ಅದಕ್ಕೆ ವಿವರ ; ಪೃಥ್ವಿಮದವೆತ್ತಿದಲ್ಲಿ ತನುಗುಣಭರಿತನಾಗಿ, ಆಭರಣ ಅನುಲೇಪನ ತಾಂಬೂಲವಂ ಬಯಸುತ್ತಿಹನು. ಸಲಿಲಮದವೆತ್ತಿದಲ್ಲಿ ಸಂಸಾರಭರಿತನಾಗಿ, ಎನಗೆ ಬೇಕು, ಮನೆಗೆ ಬೇಕು, ಮಕ್ಕಳಿಗೆ ಬೇಕು ಎನುತಿಹನು. ಪಾವಕಮದವೆತ್ತಿದಲ್ಲಿ ಕಾಮರಸಭರಿತನಾಗಿ, ಕರಸಬೇಕು ನುಡಿಸಬೇಕು ಆಲಿಂಗಿಸಬೇಕು ಎನುತಿಹನು. ಪವನಮದವೆತ್ತಿದಲ್ಲಿ ಕೋಪಾಗ್ನಿಭರಿತನಾಗಿ, ಕೊಂದೇನು ತಿಂದೇನು ಸಾದ್ಥಿಸೇನು ಭೇದಿಸೇನು [ಎನುತಿಹನು]. ಶಶಿಮದವೆತ್ತಿದಲ್ಲಿ ಚಿಂತಾಭರಿತನಾಗಿ, ಆದೀತೊ ಆಗದೊ, ಇದ್ದೀತೊ ಇಲ್ಲವೊ ಎನುತಿಹನು. ಆತ್ಮಮದವೆತ್ತಿದಲ್ಲಿ ಅಹಂಕಾರಭರಿತನಾಗಿ, ಎನಗಿಂದು ಅದ್ಥಿಕರಿಲ್ಲ, ಎನಗಿಂದು ಇದಿರಿಲ್ಲವೆಂದು ಅಹಂಭಾವದಿಂದ ಅಹಂಕರಿಸುತ್ತಿಹನು. ಇಂತೀ ಅಷ್ಟಮೂರ್ತಿಮದಂಗಳ ಭ್ರಾಂತಿನ ಬಲೆಯೊಳಿಟ್ಟೆನ್ನನಗಲದಿರು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನುಡಿದೆಹೆನೆಂಬ ಉಲುಹಿನ ಗಲಭೆಯ ತೋಟಿ ಬಿಡದು. ಉತ್ತಮ ಮಧ್ಯಮ ಕನಿಷ್ಠವೆಂಬುವ ತಿರುಗಿ ಕಂಡೆಹೆನೆಂಬ ಕಾಲಿನ ಎಡೆಯಾಟ ಬಿಡದು. ಎನಗೆ ಗರ್ವ ಮೊದಲಾದಲ್ಲಿ ನಿಮಗೆ ಗರ್ವ ವೆಗ್ಗಳವಾಯಿತ್ತು. ಈ ಉಭಯ ತೋಟಿಯ ನಾನಿನ್ನಾರಿಗೆ ಹೇಳುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಚತುರ್ವಿಂಶತಿತತ್ವಕೂಡಿ ಶರೀರ ಹೇಗಾಯಿತ್ತೆಂದಡೆ, ಹೇಳುವೆ ಕೇಳಿರಣ್ಣಾ : ಆ ಆಕಾಶ ಆಕಾಶವ ಬೆರಸಲು ಜ್ಞಾನ ಹುಟ್ಟಿತ್ತು. ಆ ಆಕಾಶ ವಾಯುವ ಬೆರಸಲು ಮನ ಹುಟ್ಟಿತ್ತು. ಆಕಾಶ ಅಗ್ನಿಯ ಬೆರಸಲು ಅಹಂಕಾರ ಹುಟ್ಟಿತ್ತು. ಆಕಾಶ ಅಪ್ಪುವ ಬೆರಸಲು ಬುದ್ಧಿ ಹುಟ್ಟಿತ್ತು. ಆಕಾಶ ಪೃಥ್ವಿಯ ಬೆರಸಲು ಚಿತ್ತ ಹುಟ್ಟಿತ್ತು. ಇಂತಿವು ಕರಣಚತುಷ್ಟಯಂಗಳುತ್ಪತ್ತಿಯೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಾಡುವ ಮಾಟದವರೆಲ್ಲರೂ ಆರೈಕೆಗೊಂಬವರಿಲ್ಲದಿರೆ, ಕೋಡಗ ಸತ್ತ ಜೋಗಿಯಂತಾದರು. ಆಗಮ ಹೇಳುವ ಅಣ್ಣಗಳೆಲ್ಲರೂ ಕೊಡುವರಿಲ್ಲದಿರೆ, ಹಾವ ಹಿಡಿದ ಕೋಡಗದಂತಾದರು. ನಾನಿನ್ನಾರ ಕೇಳುವೆ, ಇನ್ನಾರಿಗೆ ಹೇಳುವೆ. ನಾನಂಜುವೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಹೆಸರಿಡಬಾದ ಲಿಂಗವ ಹೆಸರಿಟ್ಟು ಎನ್ನ ಕರಸ್ಥಲಕ್ಕೆ ತಂದು ಕರತಳಾಮಳಕದಂತೆ ಮಾಡಿ ಎನ್ನ ಕರಸ್ಥಲಕ್ಕೆ ಕ್ರಿಯಾಲಿಂಗವ ಕೊಟ್ಟ. ಶ್ರೀಗುರು ಚೆನ್ನ ಬಸವಣ್ಣ ಹೆಸರಿಟ್ಟ ಲಿಂಗದ ಹೆಸರ ಹೇಳುವೆ ಕೇಳಯ್ಯಾ. ಕಂಜಕರ್ಣಿಕೆಯ ಹಣೆಯಲ್ಲಿ ವಿಹತ್ತವಸವೆಂದು ಬರೆದ ಐದಕ್ಷರವೆ ಆತನ ಪ್ರಣವನಾಮ. ಅವ್ಯಯ ಕರದೊಳಿಪ್ಪ ಆರಕ್ಷರ ಆತನ ದ್ವಿತೀಯ ನಾಮ. ಅವ್ಯಯ ಆನಂದ ಮಸ್ತಕದೊಳಿಪ್ಪ ಅಕ್ಷರವೆ ಆತನ ಆಚಾರ್ಯನಾಮ. ಎಂತೀ ನಾಮತ್ರಯಂಗಳನರಿದು ಧ್ಯಾರೂಢನಾಗಿ ಮಾಡುವರು ಎತ್ತಾನಿಕೊಬ್ಬರು. ಈ ಬಸವಣ್ಣ ಮೊದಲಾದ ಪುರಾತರು ಆ ಅವ್ಯಯ ಅನುಮತದಿಂದ ಲಿಂಗಾರ್ಚನೆಯ ಮಾಡಿ ನಿತ್ಯ ನಿಜನಿವಾಸಿಗಲಾದರು. ಆ ಶರಣರ ಅನುಮತದರಿವಿನ ಉಪದೇಶವ ಕೇಳಿ, ಎನಗಿನ್ನಾವುದು ಹದನವಯ್ಯಾ ಎಂಬ ಚಿಂತೆಯ ಬಿಟ್ಟು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೈಯಲ್ಲಿ ಪಿಡಿದೆನು.
--------------
ಸಿದ್ಧರಾಮೇಶ್ವರ
ಬೆಕ್ಕಿನ ತಲೆಯ ಗಿಳಿ ತಿಂದಿತ್ತು. ಕತ್ತೆ ಕುದುರೆಯ ರೂಪಾಯಿತ್ತು. ಮತ್ಸ್ಯ ಸಮುದ್ರವ ಕುಡಿದು, ಕೆರೆಯ ತಪ್ಪಲ ನೀರಿಗಾರದೆ ಸತ್ತಿತ್ತು ನೀರಕ್ಕದೆ. ಈ ಬಚ್ಚಬಯಲ ಇನ್ನಾರಿಗೆ ಹೇಳುವೆ, ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಮನೆ ಮಡದಿ ಮಕ್ಕಳು ದ್ರವ್ಯ ಬಂಧುಬಳಗವೆಂಬುದು ಸಂಸಾರವಲ್ಲ ಕಾಣಿರೋ. ಸಂಸಾರವಾವುದೆಂದರೆ ಹೇಳುವೆ ಕೇಳಿರಣ್ಣ. ತನುವೆಂಬುದೆ ಮನೆ, ಪ್ರಾಣನಾಯಕನೆಂಬುವನೆನ್ನೊಡೆಯ, ಶರೀರಮಾಯೆಯೆಂಬುವಳೆ ಹೆಣ್ಣು, ಪಂಚಭೂತವೆ ಮಕ್ಕಳು ಕಾಣಿರಣ್ಣ. ಪಂಚೇಂದ್ರಿಯಮುಖದಲ್ಲಿ ಬಳಸುತಿಪ್ಪ ವಿಷಯವೆ ದ್ರವ್ಯಕಾಣಿರೊ. ಅರುವತ್ತಾರುಕೋಟಿ ಕರಣದೊಳಿಂಬುಗೊಂಡಿಪ್ಪುದೆ ಬಂಧುಬಳಗ. ಇಂತಪ್ಪ ಸಂಸಾರವನರಿಯದೆ, ತಮ್ಮ ತಿಂದು ತೇಗುವುದನರಿಯದೆ, ಹೋರಾಟದ ಸಂಸಾರವ ಕಂಡರೆ ಸಂಸಾರವೆಂದು ನುಡಿಯುತಿಪ್ಪರಯ್ಯ. ಈ ಸಂಸಾರಮಾಯೆಯ ಕಳೆದಿಪ್ಪವರೆನ್ನ ಪ್ರಾಣಲಿಂಗ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಎನ್ನ ಆಪತ್ತು, ಸುಖ-ದುಃಖವನಿನ್ನಾರಿಗೆ ಹೇಳುವೆ ಶರಣಸ್ಥಲದವರಿಗೆ ಹೇಳಿದಡೆ ಮಚ್ಚರ ! ಸವತಿ-ಸಕ್ಕರೆ, ಬೇವು-ಬೆಲ್ಲ ಉಂಟೆ! ಇನ್ನಾರಿಗೆ ಹೇಳುವೆ! ಕೂಡಲಸಂಗಮದೇವಾ, ಜಂಗಮವಾಗಿ ಬಂದು ಎನ್ನ ಮನದ ಸೂತಕವ ಕಳೆಯಾ. 390
--------------
ಬಸವಣ್ಣ
ಕಾಯದಲಾದ ಮೂರ್ತಿಯಲ್ಲ, ಜೀವದಲಾದ ಮೂರ್ತಿಯಲ್ಲ, ಪ್ರಾಣದಲಾದ ಮೂರ್ತಿಯಲ್ಲ, ಪುಣ್ಯದಲಾದ ಮೂರ್ತಿಯಲ್ಲ, ಮುಕ್ತಿಯಲಾದ ಮೂರ್ತಿಯಲ್ಲ, ಯುಗದಲಾದ ಮೂರ್ತಿಯಲ್ಲ, ಜುಗದಲಾದ ಮೂರ್ತಿಯಲ್ಲ, ಇದೆಂತಹ ಮೂರ್ತಿಯೆಂದುಪಮಿಸುವೆ ? ಕಾಣಬಾರದ ಕಾಯ ನೋಡಬಾರದ ತೇಜ, ಉಪಮಿಸಬಾರದ ನಿಲವು. ಕಾರಣವಿಡಿದು ಕಣ್ಗೆ ಗೋಚರವಾದ ಸುಖವನು ಏನೆಂದು ಹೇಳುವೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಸ್ಥಿತಿ ಹರಿಯದಾದಡೆ, ಹರಹರಿಸುವಲ್ಲಿ ಪರಿಹರಿಸಿಕೊಂಡುದಿಲ್ಲ. ಲಯಕ್ಕೆ ರುದ್ರನಾದಡೆ, ತನ್ನೊಲುಮೆಯ ಸತಿಯ, ಲಯವ ಮಾಡಿದುದಿಲ್ಲ. ಇದನಿನ್ನಾರಿಗೆ ಹೇಳುವೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
--------------
ಸಗರದ ಬೊಮ್ಮಣ್ಣ
ಮನಕೆ ತೋರದು ನೆನೆವಡನುವಲ್ಲ, ಘನಕ್ಕೆ ಘನವನೇನ ಹೇಳುವೆ ? ಆರರಿಂದ ಮೀರಿದುದ, ಬೇರೆ ತೋರಲಿಲ್ಲದುದ, ದೇವ ದಾನವ ಮಾನವರ ಬಲ್ಲತನದ ಬಗೆಯ ಮೀರಿದುದನೇನ ಹೇಳುವೆ ? ಆದಿ ಮಧ್ಯಾಂತ ಶೂನ್ಯಂ ಚ ವ್ಯೋಮಾವ್ಯೋಮ ವಿವರ್ಜಿತಂ | ಧ್ಯಾನಜ್ಞಾನ ದಯಾದೂಧ್ರ್ವಂ ಶೂನ್ಯಲಿಂಗಮಿತಿ ಸ್ಮøತಂ || ಇಂತೆಂದುದಾಗಿ, ಅರಿಯಬಾರದು, ಕುರುಹ ತೋರದು, ತೆರಹಿಲ್ಲದ ಘನಮಹಾಲಿಂಗ ಕಲ್ಲೇಶ್ವರನ ನಿಜ.
--------------
ಹಾವಿನಹಾಳ ಕಲ್ಲಯ್ಯ
ಎನ್ನ ಸಮಗ್ರಾಹಕ ಶೀಲಸಂಪಾದಕರನಲ್ಲದೆ ಎನ್ನ ಕಣ್ಣಿನಲ್ಲಿ ನೋಡೆ, ಜಿಹ್ವೆಯಲ್ಲಿ ನೆನೆಯೆ, ಮಿಕ್ಕಾದ ತಟ್ಟುವ ಮುಟ್ಟುವ ತಾಗುವ ಸೋಂಕುವ ನಾನಾ ಗುಣಂಗಳಲ್ಲಿ ಶೋದ್ಥಿಸಿಯಲ್ಲದೆ ಬೆರೆಯೆ. ಕೊಂಬಲ್ಲಿ ಕೊಡುವಲ್ಲಿ ಎನ್ನ ವ್ರತಾಚಾರವ ಅಂಗೀಕರಿಸಿದವರಲ್ಲಿಗಲ್ಲದೆ ಹೋಗೆ. ಇದಕ್ಕೆ ದೃಷ್ಟವ ನೋಡಿಹೆನೆಂದಡೆ ತೋರುವೆ. ಶ್ರುತದಲ್ಲಿ ಕೇಳಿಹೆನೆಂದಡೆ ಹೇಳುವೆ. ಅನುಮಾನದಲ್ಲಿ ಅರಿದಿಹೆನೆಂದಡೆ ಎನ್ನ ಆಚಾರದ ಆತ್ಮನ ಎನ್ನ ಕೈಯಲ್ಲಿ ಹಿಡಿದು ನಿಮ್ಮ ಕೈಯಲ್ಲಿ ಕೊಡುವೆ. ಈ ಭಾಷೆಗೆ ತಪ್ಪೆನೆಂದು ಕಟ್ಟಿದೆ ತೊಡರುವ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ, ಎನಗೆ ಸರಿ ಇಲ್ಲ ಎಂದು ಎಲೆದೊಟ್ಟು ನುಂಗಿದೆ.
--------------
ಅಕ್ಕಮ್ಮ
ಇನ್ನಷ್ಟು ... -->