ಅಥವಾ

ಒಟ್ಟು 26 ಕಡೆಗಳಲ್ಲಿ , 15 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಚ್ಚಿದಾನಂದ ಬ್ರಹ್ಮೋಪದೇಶ ಭಕ್ತಮಹೇಶ್ವರರು ಪರಮಪಾತಕಸೂತಕಂಗಳ ಬಾಹ್ಯಾಂತರಂಗದಲ್ಲಿ ಹೊದ್ದದೆ, ಸತ್ಯಶರಣರು ಮಾಡುಂಡುದೊಂದು ಕಾಯಕ, ಬೇಡುಂಡುದೊಂದು ಕಾಯಕದಿಂದ ಗಳಿಸಿದಂಥ ಪದಾರ್ಥಗಳ, ಗುರುಚರಪರಸ್ಥಿರಕ್ಕೆ ಷಟ್‍ಸ್ಥಲಸಂಬಂಧಗಳಿಂದ, ಷಡ್ವಿಧಮಂತ್ರಗಳ ಸೊಮ್ಮಿನಿಂ ಸಂತೃಪ್ತರಾಗಿರ್ಪುದು. ಆ ನಿಲುಕಡೆಯೆಂತೆಂದಡೆ : ಶ್ರುತಿಗುರುಸ್ವಾನುಭವ ಸಾಕ್ಷಿಯಾಗಿ, ಶ್ರೀಗುರುಲಿಂಗಜಂಗಮವೆ ಪರಾತ್ಪರವೆಂದು ಕಂಡು, ಷಡುಸ್ಥಲಮಾರ್ಗವಿಡಿದು, ತನ್ನ ನಿಜವ ತಾನರಿಯದೆ, ಭವಿಶೈವ ಬ್ಥಿನ್ನ ಕರ್ಮಿಗಳಂತೆ ಭಾವಭ್ರಮೆಗೆಟ್ಟು, ಹೊಲಬುದಪ್ಪಿ, ಭೋಗಾಪೇಕ್ಷಿತರಾಗಿ, ಹಲವು ಶಾಸ್ತ್ರೋಪದೇಶವಿಡಿದು, ಕಾಶಿ ರಾಮೇಶ್ವರ ಕಂಚಿ ಕಾಳಹಸ್ತಿ ಪಂಪಾಕ್ಷೇತ್ರ ಗೋಕರ್ಣ ಶ್ರೀಶೈಲಾದಿಯಾದ ತೀರ್ಥಯಾತ್ರೆ, ವೀರಣ್ಣ ಬಸವಣ್ಣ ಮಲ್ಲಣ್ಣ ಹಾವಿಗೆ ದಂಡಾಗ್ರ ಗಿಳಿಲು ಶಂಖ ಭಸ್ಮಗುಂಟಿಕೆ ತೀರ್ಥದಗುಂಬ ಹಾದಿಬೆನವ ಹಳ್ಳದ ಬೆನವ ವಾಸರದಯ್ಯ ವಿನಾಯಕ ಶಕ್ತಿ ಗಣೇಶ ಚಂಡಿ ಚಾಮುಂಡಿಯಲ್ಲಿ ಏಕನಾತಿ ಹಿರಿಹೊಳೆ ಜಟ್ಟಿಂಗ ತೆಪ್ಪದಾರತಿ ಪಂಚಪಾಂಡವರು ಬನ್ನಿಮಹಾಂಕಾಳಿ ತುಳಸಿ ಬಿಲ್ವವೃಕ್ಷ ಸಮಾದ್ಥಿ ಗದ್ದುಗೆ ಪುರಾಣ ವಚನಾರ್ಥಪುಸ್ತಕ ಲೆಕ್ಕದ ಓಹಿ ಕತ್ತಿ ಕಂಡೇಪೂಜೆ, ಊರಬೀರ ಪೀರ ಗೋರಿ ಸತ್ತವರ ತಿಥಿ ಚಿತ್ತಹೊಲೆ ಕರ್ಮದ ಗಂಗೆ ಗುಗ್ಗುಳ ಗೌರೀನೋಂಪಿ ದೀಪಹರಕೆ ಪೂಜೆ ಕರಿಯಸೀರೆ ಊರ ಮಾರಿದೇವತೆ ಅಂಬಲಿ ಮಜ್ಜಿಗೆ ಕುಂಭ ಹೊಸ್ತಲ ಮದುವೆಯಕಂಭ ಕುಂಭ ಸರಕಿನಗಂಟು ಮಹತ್ವ ಮೆರೆದವರ ಪಾದಮುದ್ರೆ ಕಡೆಯಾದವಕ್ಕೆ, ತನ್ನ ಕಾಯ ವಾಚ ಮನದಲ್ಲಿ ಹೊಳೆದು, ಪಿತ-ಮಾತೆ ಸತಿ-ಸುತ ಒಡಹುಟ್ಟಿದವರು ಸೇವಕ ಕಡೆಯಾದವರಿಂದೆ ತನ್ನ ಮನೆಯಲ್ಲಿ ಮಾಡಿದ ಎಡೆ ವಾರಮೃತ್ಯೋದಕ, ಪಾದೋದಕಸಂಬಂಧವಾದ, ವಿಭೂತಿ-ಗಂಧಾಕ್ಷತೆ-ಪುಷ್ಪ-ಪತ್ರಿ ಧೂಪ-ದೀಪ ಹಣ್ಣು-ಕಾಯಿ ವಸ್ತ್ರಾಭರಣ-ಪಂಚಕಳಸ ಕಾಣಿಕೆ ಮೊದಲಾದ ಬ್ಥಿನ್ನವ ಕರ್ಮಕ್ರಿಯಾಚಾರಲಿಂಗಬಾಹ್ಯರಾದ ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರ ಪಾಶುಪತ ಕಾಳಾಮುಖಿ ಯೋಗಿ-ಜೋಗಿ ಶ್ರವಣ-ಸನ್ಯಾಸಿ ಯತಿ-ವ್ರತಿ ಮನು-ಮುನಿ ಗರುಡ-ಗಂಧರ್ವ ಯಕ್ಷ-ರಾಕ್ಷಸ ಸಿದ್ಧ-ಸಾಧ್ಯರುಪದೇಶವಿಡಿದು ಚರಲಿಂಗೋದಯಘನಪಾದತೀರ್ಥವರ್ಪಿಸಿ, ನೈವೇದ್ಯ ಮಾಡಿಸುವಂಥಾದ್ದೆ ಅನಾಚಾರ. ಇದೇ ಭವಿಮಾಟಕೂಟ ಅಸತ್ಯದ ನಡೆನುಡಿಯ ವಿಚಾರದ ಪ್ರಥಮಪಾತಕ. ಇದಕ್ಕೆ ಹರನಿರೂಪ ಸಾಕ್ಷಿ : ``ಶಿವಾಚಾರಸುಸಂಪನ್ನಃ ಕೃತ್ವ್ದಾನ್ಯದೈವಸ್ಯ ಪೂಜನಂ | ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್ || ಅನಾಚಾರಿಕೃತಂ ಪಾಕಂ ಲಿಂಗನೈವೇದ್ಯಕಿಲ್ಬಿಷಂ | ಲಿಂಗಾಚಾರಿಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ || ತದ್ದಿನಂ ದಿನದೋಷೇಣ ಶೋಣಿತಂ ಸುರಾಮಾಂಸಯೋಃ | ಏಕಭುಕ್ತೋಪವಾಸೇನ ನರಕೇ ಕಾಲಮಕ್ಷಯಂ || ಸೌಮೇ ಭೌಮೇ ವ್ಯತಿಪಾತೇ ಸಂಕ್ರಾಂತಿಶಿವರಾತ್ರಿಯೋ | ಶೈವಕರ್ಮೋಪವಾಸಿನಾಂ ನರಕೇ ಕಾಲಮಕ್ಷಯಂ || ಕಾರ್ತೀಕಮಾಘಶ್ರಾವಣ ಶೈವಪೂಜಾವಿಶೇಷತಃ | ವೀರಶೈವಸ್ತಥಾ ಕೃತ್ವಾ ಸನ್ತಶ್ಟ ಪ್ರಾಕೃತೈಃ ಸಮಾಃ || ಸ್ಥಾವರಾರ್ಪಿತನೈವೇದ್ಯಾತ್ ನ ತೃಪ್ತಿರ್ಮಮ ಪಾರ್ವತಿ | ಜಂಗಮಾರ್ಪಿತನೈವೇದ್ಯಾತ್ ಮಮ ತೃಪ್ತಿಶ್ಚ ಸರ್ವದಾ || ಸತ್ಪಾತ್ರದತ್ತವಿತ್ತಸ್ಯ ತದ್ಧನಂ ಸ್ವಧನಂ ಸುಖಂ | ಅಪಾತ್ರದತ್ತ ವಿತ್ತಸ್ಯ ತದ್ಧನಂ ಸ್ವಸುಖಂ ಭವೇತ್ || ಚರಸ್ಯ ಗಮನೋ ನಾಸ್ತಿ ಭಕ್ತಸ್ಯ ಗೃಹಮಾಚರೇತ್ | ಅನ್ಯಗೃಹಂ ಗಮಿಷ್ಯಂತಿ ಸದ್ಯೋ ಗೋಮಾಂಸಭಕ್ಷಣಮ್ || ಇಷ್ಟಲಿಂಗಮವಿಶ್ವಸ್ಯ ಅನ್ಯದೈವಮುಪಾಸತೇ | ಶ್ವಾನಯೋನಿ ಶತಂ ಗತ್ವಾ ಚಾಂಡಾಲಗೃಹಮಾಚರೇತ್ || ಬಹುಲಿಂಗಪೂಜಕಸ್ಯ ಬಹುಭಾವಗುರುಸ್ತಥಾ | ಬಹುಪ್ರಸಾದಂ ಭುಂಜಂತಿ ವೇಶ್ಯಾಪುತ್ರಸ್ತಥೈವ ಚ || ಅಭಕ್ತಜನಸಂಗಶ್ಚ ಮಂತ್ರಸ್ಯ ಚ ಆಗಮಃ | ಅನ್ಯದೈವಪರಿತ್ಯಾಗಃ ಲಿಂಗಭಕ್ತಸ್ಯ ಲಕ್ಷಣಂ || ಲಿಂಗಧಾರಕಭಕ್ತಾನಾಂ ಲಿಂಗಬಾಹ್ಯಸತೀಸುತಾಃ | ಆಲಿಂಗಿತಾ ಚುಂಬಿತಾಶ್ಚ ರೌರವಂ ನರಕಂ ವ್ರಜೇತ್ ||'' ಇಂತೆಂಬ ಹರಗುರುವಾಕ್ಯಪ್ರಮಾಣವದಾಗಿ, ಸದ್ಭಕ್ತಶರಣಗಣಾರಾಧ್ಯರು ಭೂಪ್ರತಿಷ್ಠಾದಿಗಳ ಹೊದ್ದಿದಡೆ, ಭವಬಂಧನವಪ್ಪದು ತಪ್ಪದು. ಅದು ಕಾರಣವಾಗಿ ಗುರುಮಾರ್ಗಿಕರು ಹೊದ್ದದೆ, ಭವಸಾಗರವ ದಾಂಟಿ, ನಿರ್ಧರದಿಂದಿಪ್ಪುದೊಂದು ನರಗುರಿಗಳ ಪ್ರಥಮಪಾತಕನಿರಸನ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಊರೊಳಗಣ ದೇವಾಲಯದಲ್ಲಿ ಐವರು ಹೊಲೆಯರು ಹೊಕ್ಕು, ದೇವರ ಪೂಜಿಸುತ್ತೈದಾರೆ. ಹೊಲೆಯರು ಮುಟ್ಟಿ ದೇವಾಲಯ ಹೊರಗಾಯಿತ್ತು, ದೇವರೊಳಗದೆ. ಕುಲಜರು ಹೊಲಬುದಪ್ಪಿ ಹೊಲೆ ಒಳಗಾಯಿತ್ತು, ಅರ್ಕೇಶ್ವರಲಿಂಗವನರಿದ ಕಾರಣ.
--------------
ಮಧುವಯ್ಯ
ಆಗಮಪುರುಷರಿರಾ, ನಿಮ್ಮ ಆಗಮ ವಾಯವಾಗಿ ಹೋಯಿತ್ತಲ್ಲಾ. ವಿದ್ಯಾಪುರುಷರಿರಾ ನಿಮ್ಮ ವಿದ್ಯೆ ಅವಿದ್ಯೆಯಾಗಿ ಹೋದಲ್ಲಿ, ಬರುಮುಖರಾಗಿ ಇದ್ದಿರಲ್ಲಾ. ವೇದಪುರುಷರಿರಾ ನಿಮ್ಮ ವೇದ ಹೊಲಬುದಪ್ಪಿ ಹೋದಲ್ಲಿ, ವೇದವೇ ದೈವವೆಂದು ಕೆಟ್ಟಿರಲ್ಲಾ. ಪುರಾಣಪುರುಷರಿರಾ ನಿಮ್ಮ ಪುರಾಣ ವಿಚಾರಭ್ರಷ್ಟವಾಗಿ ಹೋದಲ್ಲಿ, ನೀವು ಒಡನೆ ಭ್ರಷ್ಟರಾಗಿ ಹೋದಿರಲ್ಲಾ. ಶಾಸ್ತ್ರಪುರುಷರಿರಾ, ನಿಮ್ಮ ಶಾಸ್ತ್ರದ ಮಹಾಪಥ ಹೊನಲಲ್ಲಿ ಹೋದಲ್ಲಿ ಭಕ್ತದೇಹಿಕದೇವನೆಂದರಿಯದೆ ಕೆಟ್ಟಿರಲ್ಲಾ. `ಯತ್ರ ಶಿವಸ್ತತ್ರ ಮಾಹೇಶ್ವರ'ನೆಂದು ಹೇಳಿತ್ತು ಮುನ್ನ, ಅಂತು ಭಕ್ತ, ನಿತ್ಯ ಸತ್ಯ ಸನ್ನಹಿತ ಗುಹೇಶ್ವರಾ_ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಹಿಡಿದು ಬಂದು ಹೊಡದಾಡಿ ಹೊಲಬುದಪ್ಪಿ ಮಡಿದು ಹೋಗುವ ಮರುಳು ಭೂತಗಳು ಮನೆ ಗ್ರಾಮ ದೇಶಂಗಳೆಲ್ಲ ತುಂಬಿ ಸೂಸುತಲಿಪ್ಪುದು. ನಾನಿವರ ನೆರೆಹೊರೆಗಂಜಿ ಅರಸಿ ಕಂಡು ಮೊರೆಹೊಕ್ಕು ಬದುಕಿದೆ ಶಾಂತ ಐವರ್ಣಸಂಜ್ಞೆದೇವನ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಯಾಧಾರಕ್ಕೆ ಮೂಲ ತಾ ಬಸವಣ್ಣ. ಹೋದನೈ ಭಕ್ತಿಯೊಳಗೆ ಹೊಲಬುದಪ್ಪಿ. ಊರನರಿಯದ ಗ್ರಾಮ, ಹೊಲಬುದಪ್ಪಿದ ಸೀಮೆ; ಆತನಾನತದಿಂದಾನು ನೀನಾದೆನೈ. ಬಸವಣ್ಣ ಬಸವಣ್ಣ ಬಸವಣ್ಣ ಎಂಬ ನಾಮಾಕ್ಷರದೊಳಗೆ ದೆಸೆಗೆಟ್ಟೆನೈ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸ್ಥಾವರವಾಗಿ ಭೂಮಿಯಲ್ಲಿ ಪೂಜಿಸಿಕೊಂಬುದು ಶೈವಲಿಂಗ. ಚರವಾಗಿ ಭೂಮಿಯಲ್ಲಿ ಪೂಜಿಸಿಕೊಂಬುದು ಇಷ್ಟಲಿಂಗ. ಅರಿವಿನ ಮನದ ಕೊನೆಯಲ್ಲಿ ನಿತ್ಯನಿವಾಸವಾಗಿ ಪೂಜಿಸಿಕೊಂಬುದು ವೀರಶೈವಲಿಂಗ ಇಂತೀ ಲಿಂಗತ್ರಯದ ಆದಿ ಆಧಾರವನರಿಯದೆ ಹೋದರಲ್ಲಾ ಹೊಲಬುದಪ್ಪಿ ಇನ್ನಾರಿಗೆ ಹೇಳುವೆ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ
--------------
ಘಟ್ಟಿವಾಳಯ್ಯ
ಆಚಾರ ವಿಚಾರವೆಂದರಿಯರು. ಅಂತರಂಗ ಬಹಿರಂಗವೆಂದರಿಯರು. ಸತ್‍ಕ್ರಿಯೆ ಸಮ್ಯಕ್‍ಜ್ಞಾನವೆಂದರಿಯರು. ಕಾಯಜೀವದ ಕರ್ಮಕತ್ತಲೆಯಲ್ಲಿ ಬಿದ್ದು ಕರಣಮಥನ ಕರ್ಕಶದಿಂದೆ ಹೊಡೆದಾಡಿ ಹೊತ್ತುಗಳೆದು ಹೊಲಬುದಪ್ಪಿ ಸತ್ತುಹೋಗುವ ವ್ಯರ್ಥಜೀವಿಗಳ ಭಕ್ತಮಾಹೇಶ್ವರರೆಂದಡೆ ಭವ ಹಿಂಗದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮನ ಮಲೆಯ ಮಂದಿರದಲ್ಲಿ, ಹೊಲಬಿನ ಹಾದಿಯ ತಪ್ಪಿದರೆಲ್ಲರು. ಕಾಯವೆಂಬ ಪಟ್ಟಣ ಜೀವಸುಪಾಯವೆಂಬ ಪಥ. ಪಯಣದಲ್ಲಿ ಹೊಲಬುದಪ್ಪಿ, ವಿಷಯವೆಂಬ ಗಹನದಲ್ಲಿ ಬಳಸಿ ಆಡುತ್ತಿದ್ದಾರೆ. ಎನಗಿನ್ನು ಅಸುವಿನ ಪಥವ ಹೇಳು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ನಿಷ್ಕಳಾತ್ಮನನು ಅರ್ಚಿಸೇನೆಂದೆಂಬೆ ಆ ನಿಷ್ಕಳವನರ್ಚಿಸುವ ಪರಿ ಹೇಂಗೊ? ಎಲೆ ಅಯ್ಯಾ: ನೀನು ಸಕಲದೊಳಗೆ ಇದ್ದು ನಿಷ್ಕಳವ ಭೇದಿಸಿ ಪೂರತನಾದೆನೆಂಬೆ. ನೀನೀ ಬೀಡಲಿರದ್ದು ಒಬ್ಬಳ ಸಂಗವನೈವರು ಮಾಡುವಲ್ಲಿ ಕಾಬ ಪರಿಯ ಹೇಗೊ? ಗುರು ಕರಣವುಳ್ಳವಂಗಲ್ಲದೆ. ಅನಾಹತಲೋಕದಲ್ಲಿ ವಿಶ್ರಮಿಸುವಲ್ಲಿ, ಮೂಲ ತೊಡಗಿ ಸಾದಾಖ್ಯಪರಿಯಂತರ ಹೊಲಬುದಪ್ಪಿ ಬಪ್ಪಾಗ ಕಂಡವರಾರೊ ನಿನ್ನ ಪರಿಯ, ಗುರು ಕರಣವುಳ್ಳವಂಗಲ್ಲದೆ. ಆಧಾರ ಮೂಲ ಮಧ್ಯ ಅಪರಸ್ಥಾನ ಹೃತ್ಸರೋಜದೊಳಿರ್ದ ಕನ್ನಿಕೆ ಬೆಳಗುಗೊಡನಂ ಹೊತ್ತು ಸೂಸೀಯದೆ ಮೂವತ್ತಾರು ಮನೆಯನು ನೋಡಿ ಸಾವಿರಂಗ ಪ್ರತಿಷೆ*ಯ ಮಾಡಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ಇದ್ದೆಸೆಯನಿದ್ದೆಸೆಯಾದಳು.
--------------
ಸಿದ್ಧರಾಮೇಶ್ವರ
ಅಜ್ಞಾನವೆಂಬ ಕತ್ತಲೆ ಆವರಿಸಿತ್ತಯ್ಯ ಜಗವೆಲ್ಲವ. ಅಂಧಕಾರದ ಗುಹೆಯೊಳಗಿರ್ದವರಂತಿರ್ದರಯ್ಯ ಜೀವರೆಲ್ಲ. ಹೊಲಬುದಪ್ಪಿ ತಿಳಿವಿಲ್ಲದೆ ಕಳವಳಗೊಳುತ್ತಿರ್ದರಯ್ಯ. ಅಡವಿಯ ಹೊಕ್ಕ ಶಿಶುವಿನಂತೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಕರುಣವಾಗುವನ್ನಕ್ಕ, ಬಳಲುತ್ತಿರ್ದರಯ್ಯ ಹೊಲಬರಿಯದೆ.
--------------
ಸ್ವತಂತ್ರ ಸಿದ್ಧಲಿಂಗ
ಘನಲಿಂಗದೇವರು ಘನಲಿಂಗದೇವರೆಂದು ನುಡಿದುಕೊಂಬ ಬಿನುಗು ಹೊಲೆಯರನೇನೆಂಬೆನಯ್ಯಾ ! ಹೊಟ್ಟೆಯಕಿಚ್ಚಿಗೆ ಒಟ್ಟಿದ ಬಣವೆಯ ಸುಟ್ಟಾತ ಘನಲಿಂಗದೇವರೆ ? ಕೊಟ್ಟಾತ ಒಳಗು, ಕೊಡದಾತ ಹೊರಗೆಂದು ಕಟ್ಟಿದಲಿಂಗವ ಮೆಟ್ಟಿ ಮೆಟ್ಟಿ ಹರಿವಾತ ಘನಲಿಂಗದೇವರೆ ? ಒಡೆಯನ ವೇಷವ ಧರಿಸಿ ಒಡಲ ಕಿಚ್ಚಿಗೆ ತುಡುಗನಾಯಂತೆ ಕಡಿದು ಕನ್ನವನಿಕ್ಕುವಾತ ಘನಲಿಂಗದೇವರೆ ? ಅಹುದಾದುದನಲ್ಲಮಾಡಿ ಅಲ್ಲವಾದುದ ಅಹುದುಮಾಡಿ ಅಧರ್ಮ ಅನ್ಯಾಯದಲ್ಲಿ ಹೊಡೆದಾಡಿ ಹೊಲಬುದಪ್ಪಿ ಮಡಿದುಹೋಗುವ ಬಾಯಬಡಕ ಭ್ರಷ್ಟಮಾದಿಗರ ಘನಲಿಂಗದೇವರೆಂದಡೆ ಅಘೋರನರಕ ತಪ್ಪದಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಅಂಗೈಯಗಲದ ಪಟ್ಟಣದೊಳಗೆ ಆಕಾಶದುದ್ದ ಎತ್ತು ತಪ್ಪಿತ್ತು. ಅರಸಹೋಗಿ ಹಲಬರು ಹೊಲಬುದಪ್ಪಿ, ತೊಳಲಿ ಬಳಲುತ್ತೈದಾರೆ. ಆರಿಗೆ ಮೊರೆಯಿಡುವೆ, ಅಗುಸಿಯನಿಕ್ಕುವೆ. ಜಲಗಾರನ ಕರೆಸಿ, ಜಲವ ತೊಳೆಯಿಸಿ ಅಘಟಿತ ಘಟಿತ ನಿಜಗುರು ಭೋಗೇಶ್ವರಾ, ಅರಸಿಕೊಂಡು ಬಾರಯ್ಯಾ.
--------------
ಭೋಗಣ್ಣ
ಹಲವು ದೇವರುಗಳ ಭಜಿಸಿ ಹೊಲಬುದಪ್ಪಿ ಹೋದರೆಲ್ಲ. ದೇವರುದೇವರೆಂದರೇನು? ಒಮ್ಮರ ದೇವರೇ? ವಿಶ್ವಾಧಿಪತಿ ಶಿವನೊಬ್ಬನೆ ದೇವನಲ್ಲದೆ, ಉಳಿದವರೆಲ್ಲ ದೇವರೆ? ಬ್ರಹ್ಮ ದೇವರೆಂಬಿರೇ? ಬ್ರಹ್ಮನ ಶಿರವ ಹರ ಚಿವುಟಿದ. ವಿಷ್ಣು ದೇವರೆಂಬಿರೇ? ಹತ್ತವತಾರದಲ್ಲಿ ಹರನಿಂದ ಹತಿಸಿಕೊಂಡ. ಇಂದ್ರ ದೇವರೆಂಬಿರೇ? ಇಂದ್ರನ ಮೈಯೆಲ್ಲಾ ಭಗವಾಗಿ ನಿಂದೆಗೊಳಗಾದ. ಚಂದ್ರ ದೇವರೆಂಬಿರೇ? ಕುಂದ ಹೆಚ್ಚ ತಾಳಿ ಕ್ಷಣಿಕನಾದ. ಸೂರ್ಯ ದೇವರೆಂಬಿರೇ? ಸೂರ್ಯ ಕುಷ*ರೋಗದಿಂದ ಭ್ರಷ್ಟಾದ. ಇನ್ನುಳಿದ ದೇವತೆಗಳು ಭಂಗಬಟ್ಟುದಕ್ಕೆ ಕಡೆಯಿಲ್ಲ. ``ಸರ್ವದೇವ ಪಿತಾ ಶಂಭುಃ ಭರ್ಗೋಃ ದೇವಸ್ಯ ಧೀಮಹಿ' ಎಂದುದಾಗಿ, ಸರ್ವದೇವರುಗಳ ಉತ್ಪತ್ಯ ಸ್ಥಿತಿ ಲಯಂಗಳ ಮಾಡುವ ಕರ್ತ ಶಿವನೊಬ್ಬನೇ ದೇವನೆಂದು ನುಡಿದೆನು ನಡೆದೆನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲದೆ ಇಲ್ಲವೆಂದು.
--------------
ಸ್ವತಂತ್ರ ಸಿದ್ಧಲಿಂಗ
ಒಂದು ದ್ವಾರದಲ್ಲಿ ಬಂದ ಆತ್ಮಂಗೆ, ಹಲವು ದ್ವಾರದಲ್ಲಿ ಉಂಟೆಂದು, ಹೊಲಬುದಪ್ಪಿ ನುಡಿದವರ ನೋಡಾ. ವಾಯು ಒಂದಲ್ಲದೆ ಶತವಾಯುವಿಲ್ಲೆಂದೆ, ಇಂದ್ರಿಯ ಒಂದಲ್ಲದೆ ಐದಿಲ್ಲವೆಂದೆ. ಕರಣ ಒಂದಲ್ಲದೆ ನಾಲ್ಕಿಲ್ಲವೆಂದೆ, ಮದ ಒಂದಲ್ಲದೆ ಎಂಟಿಲ್ಲವೆಂದು. ವ್ಯಸನ ಒಂದಲ್ಲವೆ ಏಳಿಲ್ಲವೆಂದೆ, ಆಧಾರ ಒಂದಲ್ಲದೆ ಷಡಾಧಾರವಿಲ್ಲವೆಂದೆ. ಒಂದು ಬೀಜದಲ್ಲಿ ಅದ ಹಣ್ಣಿನ ರುಚಿಗೆ, ನಾನಾ ಫಲದ ರಸದ ರುಚಿ ಉಂಟೆ? ಆ ಬೀಜ ಮೊಳೆತಲ್ಲಿ ಏಕರೂಪವಾಗಿ ತಲೆದೋರಿತ್ತು. ಬಲಿದು ಮತ್ತೆ ಹಲವುರೂಪಾಗಿ ಪಲ್ಲವಿಸಿತ್ತು. ನೆಲೆಯ ಕಡಿದ ಮತ್ತೆ ರೂಪೆಲ್ಲ ನೆಲೆಯೊಳಡಗಿದವು. ಸೆಲೆಸಂದ ಹೊನ್ನಿಂಗೆ ಒಟ್ಟವುಂಟೆ? ಬಲುಹು ಮುರಿದವಂಗೆ ರಣದ ಸುದ್ದಿಯೇಕೋ? ಜಲದಲ್ಲಿ ಮುಳುಗಿದವಂಗೆ ಇಳೆಯವರ ಸುದ್ದೀಯೇಕೋ? ಇದು ಕಾರಣ, ನಾನಾ ವರ್ಣದ ಹೇಮವ ಭಾವಿಸಿ, ಒಂದರಲ್ಲಿ ಕಡೆಗಾಣಿಸಿದ ಮತ್ತೆ ಭಾವನೆಯ ಬಣ್ಣ ಒಂದಲ್ಲದೆ ಮತ್ತೆ ಭಾವಿಸಲಿಲ್ಲವಾಗಿ, ಅರಿದಲ್ಲಿ ಜ್ಞಾನ, ಮರೆದಲ್ಲಿ ಅಜ್ಞಾನ, ನಾನಾರೆಂಬುದನರಿದಲ್ಲಿಯೆ ಒಂದು ಗುಣ ನಿಂದಿತ್ತು. ತನ್ನ ಮರೆದಲ್ಲಿಯೆ ನಾನಾ ಸಂಚಲನವಾಯಿತ್ತು, ಇದಕ್ಕಿದೇ ದೃಷ್ಟ. ದೇಹವಿಡಿದುದಕ್ಕೆರಡಿಲ್ಲದೆ ಮೀರಲಿಲ್ಲವಾಗಿ, ಜಗವನರಿವುದಕ್ಕೆ ದಿವರಾತ್ರಿಯದೆ ಮೀರಿ ತೋರಲಿಲ್ಲವಾಗಿ, ಸಂಸಾರ ಹರಿವುದಕ್ಕೆ ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲವಾಗಿ.
--------------
ಮೋಳಿಗೆ ಮಾರಯ್ಯ
ಸಂಸಾರವೆಂಬ ಮಹಾಘೋರಾರಣ್ಯದಲ್ಲಿ ಹೊಲಬುಗೆಟ್ಟು, ನೆಲೆಯ ಕಾಣದೆ ಹೋದರು. ನಿಜದ ಹೊಲಬುದಪ್ಪಿ ಬಳಲುತ್ತಿದ್ದಾರೆ ನೋಡಯ್ಯ. ಇರುಳುಹಗಲೆನ್ನದೆ ಸಂಸಾರದಲ್ಲಿ ಸಾವುತ್ತಿದ್ದಾರೆ ನೋಡಯ್ಯ. ಇಂತಪ್ಪ ಸಂಸಾರಾರಣ್ಯದಲ್ಲಿ, ಹೊಲಬುಗೆಟ್ಟು ನೆಲೆಯ ಕಾಣದೆ ಹೋದರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮನರಿಯದೆ.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->