ಅಥವಾ

ಒಟ್ಟು 29 ಕಡೆಗಳಲ್ಲಿ , 15 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊಸ ಮದುವೆ ಹಸೆಯುಡುಗದ ಮುನ್ನ, ಹೂಸಿದ ಅರಿಸಿನ ಬಿಸಿಲಿಂಗೆ ಹರಿಯದ ಮುನ್ನ, ತನು ಸಂಚಲವಡಗಿ ಮನವು ಗುರುಕಾರುಣ್ಯವ ಪಡೆದು ಹುಸಿಯಿಲ್ಲದಿರ್ದಡೆ ಭಕ್ತನೆಂಬೆ! ಹಿಡಿಹಿಂಗಿಲ್ಲದಿರ್ದಡೆ ಮಾಹೇಶ್ವರನೆಂಬೆ! ತನುವಿಲ್ಲದಿರ್ದಡೆ ಪ್ರಸಾದಿಯೆಂಬೆ! ಜೀವವಿಲ್ಲದಿರ್ದಡೆ ಪ್ರಾಣಲಿಂಗಿಯೆಂಬೆ! ಆಶೆಯಿಲ್ಲದಿರ್ದಡೆ ಶರಣನೆಂಬೆ! ಈ ಐದರ ಸಂಪರ್ಕ ನಿರ್ಭೋಗವಾದಡೆ ಐಕ್ಯನೆಂಬೆ! ಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯನೆಂಬೆ! ಈ ಹೀಂಗಾದ ದೇಹವನಿರಿದಡರಿಯದು ತರಿದಡರಿಯದು. ಬೈದಡರಿಯದು; ಹೊಯ್ದಡರಿಯದು. ನಿಂದಿಸಿದಡರಿಯದು; ಸ್ತುತಿಸಿದಡರಿಯದು. ಸುಖವನರಿಯದು; ದುಃಖವನರಿಯದು. ಇಂತಿವರ ತಾಗು ನಿರೋಧವನರಿಯದಿರ್ದಡೆ ಅವರ ಮಹಾಲಿಂಗ ಗಜೇಶ್ವರನೆಂಬೆ.
--------------
ಗಜೇಶ ಮಸಣಯ್ಯ
ಹಿರಣ್ಯಚ್ಛೆಯ ಹೆಚ್ಚಿ ನುಡಿವರು ನಿನ್ನಂಗವಪ್ಪರೆ ಅಯ್ಯಾ? ಅಪ್ಪರಪ್ಪರು ಹೊನ್ನು ಹೆಣ್ಣು ಮಣ್ಣು ತ್ರಿವಿಧವ ಬಿಟ್ಟವರು. ಅಪ್ಪರಪ್ಪರು ಸತ್ಪಾತ್ರ-ಅಪಾತ್ರವೆಂದರಿದವರು. ಅಪ್ಪರಪ್ಪರು ಸದಾಚಾರ, ನಿಹಿತಾಚಾರ, ಗುರುಚರಭಕ್ತಿ, ಸ್ವಾನುಭಾವದೀಕ್ಷೆ ಸಮನಿಸಿದವರು. ನಿನ್ನಂಗ ಎಲ್ಲರಂತಲ್ಲ ಹೊಸ ಪರಿ ಎಲೆ ಅಯ್ಯಾ. ಮಸ್ತಕದಲ್ಲಿ ಪೂಜೆಯ ಮಾಡಿ ಅದ ನಿರ್ಮಾಲ್ಯವೆಂದು ತ್ಯಜಿಸಿ, ಮರಳಿ ಪಡೆದು ನಿನಗೆ ಪಾತ್ರವಾದರು. ಅಪ್ಪುದಕ್ಕನುಮಾನವೆ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸಾರಂಗದ ತುದಿಯಲ್ಲಿ ಧಾರೋದ್ರಿಜವ ತುಂಬಿದರು. ಮೇರು ಮಂದಿರದ ಮೇಲೆ ಮನೆಯ ಮಾಡಿದರಾರೋ? ತಿದಿಯ ಹರಿವೆ, ಮನೆಯ ಸುಡುವೆ, ನಿಲುವೆ ಹೊಸ ಪರಿಯರಿಯಾ! ಎನ್ನ ಪರಿಯ ಹಿಂದೆ ಕೇಳಿದ್ದು ಮನೆಯೊಳಗಣ ಬೂದಿಯ ಭಸ್ಮವಾಗಿ ಧರಿಸಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಮಸಿಯಿಲ್ಲದ ಗೂಡಿನೊಳಗೆ ಹೊಸಬಣ್ಣದ ಪಕ್ಷಿಯ ಗೂಡನೈದೆ ಭಸ್ಮವ ಮಾಡಿ ನುಂಗಿ, ಶಿಶು ತಾಯ ಬೆಸಲಾಗಲಾ ತಾಯಿ ಶಿಶುವನೆ ನುಂಗಲಾ ಶಿಶು ಕೋಪದಿಂದಲಾ ತಾಯ ಐದೆ ನುಂಗಿ, ಹೊಸ ದೇಶದಿಂದೊಬ್ಬನಾರಯ್ಯ ಬಂದಾತ ಪೆಸರಿಲ್ಲದಂತಿಪ್ಪರನೈದೆ ನುಂಗಿ, ಬಸವ ಚೆನ್ನಬಸವ ಅನುಮಿಷ ಗುಹೇಶ್ವರ ಸಹಿತವಾಗಿ ಶಿಶುವಿನ ಕರಸ್ಥಲದಲ್ಲಿ ಸುಖಿಯಾದರು.
--------------
ಅಲ್ಲಮಪ್ರಭುದೇವರು
ಹರಕರವಿಯ ಹುರಿಯಿಲ್ಲದ ದಾರದಲ್ಲಿ ಹೊಲಿದು, ಹೊಲಿದ ಕೂಲಿಯ ಕೊಡುವರು. ಊರನಾಶ್ರಯಿಸಿ ಅರಣ್ಯದಲ್ಲಿ ಚರಿಸುವರು. ಹರಕರವಿಯ ಹೊಲಿಯದೆ ಹುರಿಗೂಡಿದ ದಾರವ ಬಿಚ್ಚದೆ ಹರಿಯದೆ ಹೊಸ ಅರಿವೆಯ ಹೊಲಿದು, ಹೊಲಿದ ಕೂಲಿಯ ಕೊಳ್ಳದವರು ಊರನಾಶ್ರಯಿಸಿ ಅರಣ್ಯದಲ್ಲಿ ಚರಿಸದೆ ಬಯಲುಭೂಮಿಯಲ್ಲಿ ಚರಿಸಿ ಆರಿಗೂ ಸಿಕ್ಕದೆ ಇರ್ಪರು ನೋಡೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹುಸಿಯಿಲ್ಲದ ಗೂಡಿನೊಳಗೆ, ಹೊಸ ಬಣ್ಣದ ಹಕ್ಕಿಯ ಭಸ್ಮವ ಮಾಡಿ ಆ ಗೂಡನೆಯ್ದೆ ನುಂಗೆ, ಶಿಶು ತಾಯ ಬೆಸಲಾಗಿ, ತಾಯಿ ಶಿಶುವ ನುಂಗೆ, ಶಿಶು ಕೋಪದಿಂದ ತಾಯನೆಯ್ದೆ ನುಂಗೆ, ಹೊಸ ದೇಶದಿಂದೊಬ್ಬನಾರಯ್ಯ ಬಂದಾತ ಹೆಸರಿಲ್ಲದಂತಿಬ್ಬರನೆಯ್ದೆ ನುಂಗೆ ಬಸವ ಚನ್ನಬಸವ ಅನಿಮಿಷ ಗುಹೇಶ್ವರ ಸಹಿತ ಶಿಶುವಿನ ಕರಸ್ಥಲದಲ್ಲಿಯೆ ಸುಖಿಯಾದರು !
--------------
ಅಲ್ಲಮಪ್ರಭುದೇವರು
ಊರ ಹೊರಗೊಂದು ಹೊಸ ಕೇಲನಿಕ್ಕಿದೆ. ಅದು ದಾನವರ ಕೇಲಲ್ಲ, ಮಾನವರ ಕೇಲಲ್ಲ, ಆತುರವೈರಿ ಮಾರೇಶ್ವರನ ಹೊಂದಿಕೆಯ ಕೇಲು.
--------------
ನಗೆಯ ಮಾರಿತಂದೆ
ಪಿಸಿತ ನಡುವೆ ಇದ್ದ ಕಿರಾತಂಗೆ ಹೊಸ ವಾಸನೆಯ ಬಲ್ಲನೆ? ಸಕಲವ್ಯಾಪಾರದಲ್ಲಿ ಮೂಡಿ ಮುಳುಗುವವ ಸುಖದ ತದ್ರೂಪರ ಬಲ್ಲನೆ? ವಿಕಳತೆಗೊಂಡು ಅಖಿಳರ ಕೂಡಿ ಸುಖದುಃಖದಲ್ಲಿ ಬೇವವಂಗೆ ಅಕಳಂಕತನವುಂಟೆ? ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪಶ್ಚಿಮದ ಗಿರಿಯಲ್ಲಿ ಚಿತ್‍ಸೂರ್ಯನುದಯವಾದುದ ಕಂಡೆ. ಸುತ್ತಿ ಮುತ್ತಿದ ಕತ್ತಲೆಯೆಲ್ಲ ಅತ್ತಿತ್ತ ಹರಿದು ಹೋದುದ ಕಂಡೆ. ಹತ್ತು ದಿಕ್ಕಿನ ಒಳಹೊರಗೆಲ್ಲ ಬೆಳಗಿನ ಮೊತ್ತವೇ ತುಂಬಿದುದ ಕಂಡೆ. ಮುಚ್ಚಿದ ಕಮಲಂಗಳೆಲ್ಲ ಬಿಚ್ಚಿ ಅರಳಾಗಿ ಹೊಚ್ಚ ಹೊಸ ಗಂಧ ದೆಸೆದೆಸೆಗೆ ಎಸೆದುದ ಕಂಡೆ. ಇಂತಿದರ ಕುಶಲವ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಸುನಗೆಯ ಢಾಳದಲ್ಲಿ ಎಸೆದಿಪ್ಪ ನನ್ನ ನಲ್ಲನೆ. ಹೊಸ ಕುಸುಮದ ಕಾಣಿಕೆಯ ತಂದೆನು; ಶಿಶುವೆಂದು ಮನ್ನಿಸಿದ ಶಿಶು ಸಸಿಯ ಫಲಕ್ಕೆ ಮೂಲಸ್ವಾಮಿಯಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಹೊಸ ಮುತ್ತಿನ ಸುಪ್ಪಾಣಿಯಂತೆ ಲಿಂಗೈಕ್ಯವು. ಸ್ಫಟಿಕದ ಘಟದೊಳಗಣ ಪ್ರಭೆಯಂತೆ ಲಿಂಗೈಕ್ಯವು. ವಾಯುವಿನ ಸಂಚದ ಪರಿಮಳದ ನಿಲವಿನಂತೆ ಲಿಂಗೈಕ್ಯ ಸಂಬಂಧವದು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕುಸುಮ ಗಂಧ[ವ] ಉಪದೃಷ್ಟದಿಂದ ಹೊರೆವಂತೆ, ಕಿಸಲಯದ ಘೃತ, ಅದು ತನ್ನ ಎಸಳದಿಂದ ಬಂಧ ಬಿಡುವಂತೆ, ರಸಿಕರ ವಿವೇಕವ ಹೊಸ ನವನೀತದಲ್ಲಿ ನಿಶಿತ ಅಳಕವ ತೆಗೆದಂತೆ, ಆವಾವ ಸ್ಥಲವ ವೇಧಿಸಿದಲ್ಲಿ, ಭಾವಕ್ಕೆ ಭ್ರಮೆಯಿಲ್ಲದೆ, ಉಭಯಕ್ಕೆ ನೋವು ಇಲ್ಲದೆ, ಭಾವ ನಿರ್ಭಾವವಾಗಬೇಕು. ಆತ ಷಟ್ಸ್ಥಲವೇದಿ, ಉಭಯಸ್ಥಲಭರಿತ, ಸರ್ವಸ್ಥಲಸಂಪೂರ್ಣ, ಸರ್ವಭಾವ ಲೇಪ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಉಭಯಸ್ಥಲಲೇಪವಾದ ಶರಣ.
--------------
ಮೋಳಿಗೆ ಮಾರಯ್ಯ
ಅಯ್ಯ ! ಪೂರ್ವವನಳಿದು ಪುನರ್ಜಾತನಾದ ಸತ್ಯಸದ್ಧರ್ಮಸ್ವರೂಪ ತಚ್ಛಿಷ್ಯನು ಶ್ರೀಗುರುಲಿಂಗಜಂಗಮದ ವೇಧಾ_ಮಂತ್ರ_ಕ್ರಿಯಾದೀಕ್ಷೆಯ ಪಡೆದು, ಅಷ್ಟಾವರಣದ ನೆಲೆಕಲೆಗಳ ತಿಳಿದು, ಪಂಚಾಚಾರ ಮೊದಲಾಗಿ ಸರ್ವಾಚಾರ ಸಂಪತ್ತಿನ ವಿವರ ತಿಳಿದು, ನೂರೊಂದು ಸ್ಥಲದ ಆಚರಣೆ_ಇನ್ನೂರಹದಿನಾರು ಸ್ಥಲದ ಸಂಬಂಧವನರಿದು, ಷಟ್ಸ್ಥಲ ಮಾರ್ಗವಿಡಿದು, ಶ್ರೀಗುರುಲಿಂಗ ಜಂಗಮಕ್ಕೆ ತನು_ಮನ_ಧನವಂಚನೆಯಿಲ್ಲದೆ ನಿರ್ವಂಚಕನಾಗಿ, ಭಕ್ತಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಕಾಯಕ[ವ ಮಾಡಿ] ಮಹೇಶ್ವರಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಭಿಕ್ಷವ ಮಾಡಿ, (ಬೇಡಿ?) ಬಂದ ಪದಾರ್ಥವ ಸಮರ್ಪಿಸಿ, ಪರದ್ರವ್ಯದಲ್ಲಿ ರಿಣಭಾರನಾಗದೆ, ಸತ್ಯಶುದ್ಧ ನಡೆನುಡಿಯಿಂದಾಚರಿಸಿ, ಶ್ರದ್ಧಾದಿ ಸಮರಸಾಂತ್ಯಮಾದ ಸದ್ಭಕ್ತಿಯ ತಿಳಿದು ಅನಾದಿಕುಳ ಸನ್ಮತವಾದ ದಶವಿಧ ಪಾದೋದಕ, ಏಕಾದಶ ಪ್ರಸಾದದ ವಿಚಾರ ಮೊದಲಾದ ಅರ್ಪಿತಾವಧಾನವ, ಪರಿಪೂರ್ಣಮಯ ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ, ಅಚ್ಚ ಪ್ರಸಾದಿಸ್ಥಲದ ಶರಣತ್ವವ ಪಡೆದು, ಸತ್ಯಸದಾಚಾರವುಳ್ಳ ಸದ್ಗುರುಲಿಂಗಜಂಗಮದ ನಿಜನಿಷ*ತ್ವಮಂ ತಿಳಿದು, ದಂತಧಾವನಕಡ್ಡಿ ಮೊದಲು Põ್ಞಪ ಕಟಿಸೂತ್ರ ಕಡೆಯಾದ ಸಮಸ್ತ ಪದಾರ್ಥವ ಗುರು_ಲಿಂಗ_ಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುದ ಹಾರೈಸಿ, ಕೊಂಡು ಇಂತು ಅಂತರಂಗ ಪರಿಪೂರ್ಣವಾಗಿ ನಿಂದ ಸಮಯದಲ್ಲಿ, ಸ್ವಯ_ಚರ_ಪರಲೀಲೆಯ ಧರಿಸಿ ಜಂಗಮಾಕೃತಿಯಿಂದ ಬಂದ ಗುರುಲಿಂಗಜಂಗಮದ ವೃತ್ತಸ್ಥಾನವಾದ ಮೊಳಪಾದ ಪರಿಯಂತರವು ತೊಳದು ಬಹುಗುಣಿಯಲ್ಲಿ ಮಡಗಿಕೊಂಡು, ಹೊಸಮನೆ, ಹೊಸಧನ, ಧಾನ್ಯ ಭಾಂಡಭಾಜನ, ಹೊಸ ಅರುವೆ_ಆಭರಣ, ಜನನಿಜಠರದಿಂದಾದ ಅಂಗಾಂಗ, ಕಾಯಿಪಲ್ಯ, ಉಚಿತಕ್ರಿಯೆ ಮೊದಲಾಗಿ ಅರಿದಾಚರಿಸುವದು ನೋಡ ! ಆ ಮೇಲೆ ಗುರುಲಿಂಗಜಂಗಮದ ಪ್ರಕ್ಷಾಲನೆ ಮಾಡಿದ ಪಾದವನ್ನು ಮೂರು ವೇಳೆ ಅಡಿಪಾದವ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳ್ಯಕ್ಕೆ ದಶಾಂಗುಲಿಗಳ ಒಂದು ವೇಳೆ ಸ್ಪರ್ಶನವ ಮಾಡಿದ ಉದಕವನ್ನು ಭಾಂಡಭಾಜನದಲ್ಲಿ ತುಂಬಿ ಸ್ವಪಾಕವ ಮಾಡುವುದು. ಆ ಸಮಯದಲ್ಲಿ ಬಿಂದುಮಾತ್ರ [ವಾದರೂ] ಇಷ್ಟಲಿಂಗ ಬಾಹ್ಯವಾದ ಭವಿಜನ್ಮಾತ್ಮರಿಗೆ ಹಾಕಲಾಗದು. ಇನ್ನು ಜಂಗಮದ ಅಂಗುಷ* ಎರಡು_ಅಂಗುಲಿ ಎಂಟರಲ್ಲಿ ತನ್ನ ತರ್ಜನಿ ಬೆರಳಿಂದ ಮೊದಲಂತೆ ಪಾದೋದಕವ ಮಾಡಿ, ಬಟ್ಟಲಲ್ಲಿ ಮಡಗಿ, ಪೂರ್ವದಲ್ಲಿ ಭಾಂಡದೊಳಗೆ ತುಂಬಿದ ಗುರುಪಾದೋದಕದಿಂದ ವಿಭೂತಿ ಘಟ್ಟಿಯ ಅಭಿಷೇಕವ ಮಾಡಿ, ಈ ಬಟ್ಟಲಲ್ಲಿ ಮಡಗಿದ ಲಿಂಗಪಾದೋದಕದಲ್ಲಿ ಮಿಶ್ರವ ಮಾಡಿ, ಇಪ್ಪತ್ತೊಂದು ಪ್ರಣಮವ ಲಿಖಿಸಿ ಶ್ರೀಗುರುಲಿಂಗಜಂಗಮವು ತಾನು ಮಂತ್ರಸ್ಮರಣೆಯಿಂದ ಸ್ನಾನ_ಧೂಳನ_ಧಾರಣವ ಮಾಡಿ, ಲಿಂಗಾರ್ಚನೆ ಕ್ರಿಯೆಗಳ ಮುಗಿಸಿಕೊಂಡು, ಆ ಮೇಲೆ ತೀರ್ಥವ ಪಡಕೊಂಬುವಂಥ ಲಿಂಗಭಕ್ತನು ಆ ಜಂಗಮಲಿಂಗಮೂರ್ತಿಯ ಸಮ್ಮುಖದಲ್ಲಿ ಗರ್ದುಗೆಯ ರಚಿಸಿಕೊಂಡು, ಅಷ್ಟಾಂಗಯುಕ್ತನಾಗಿ ಶರಣಾರ್ಥಿ ಸ್ವಾಮಿ ! ಜಂಗಮಲಿಂಗಾರ್ಚನೆಗೆ ಅಪ್ಪಣೆಯ ಪಾಲಿಸಬೇಕೆಂದು ಬೆಸಗೊಂಡು, ಆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು ಆ ಕ್ರಿಯಾಜಂಗಮಮೂರ್ತಿಯ ಕರಕಮಲದಲ್ಲಿ ನೆಲಸಿರುವ ಪರಾತ್ಪರ ಜ್ಞಾನಜಂಗಮ ಲಿಂಗಮೂರ್ತಿಗೆ ಅಷ್ಟವಿಧಾರ್ಚನೆ_ಷೋಡಶೋಪಚಾರಂಗಳ ಸಮರ್ಪಿಸಿ, ಆ ಮೇಲೆ, ತನ್ನ ವಾಮಕರದಂಗುಲಿ ಮಧ್ಯದಲ್ಲಿ ಷಡಕ್ಷರಂಗಳ ಲಿಖಿಸಿಕೊಂಡು ಅರ್ಚಿಸಿ, ತನ್ನ ಹೃನ್ಮಂದಿರಾಲಯದಲ್ಲಿ ನೆಲಸಿರುವ ಜ್ಯೋತಿರ್ಮಯ ಇಷ್ಟಮಹಾಲಿಂಗವ ನಿರೀಕ್ಷಿಸಿ ಆ ಪರಶಿವಜಂಗಮಲಿಂಗದೇವನ ಚರಣಾಂಗುಷ*ವ, ತನ್ನ ವಾಮಕರಸ್ಥಲದಲ್ಲಿ ಸುತ್ತು ಚಿತ್ತಾನಂದ ನಿತ್ಯಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪವಾದ ಪ್ರಾಣಲಿಂಗವೆಂದು ಭಾವಿಸಿ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯಗಳ ಮಾಡಿ, ಆಮೇಲೆ ಇಷ್ಟಲಿಂಗಜಪಪ್ರಣಮ ಒಂದು ವೇಳೆ ಪ್ರಾಣಲಿಂಗ ಜಪಪ್ರಣಮ ಒಂದು ವೇಳೆ ಭಾವಲಿಂಗ ಜಪಪ್ರಣಮ ಒಂದು ವೇಳೆ ಪ್ರದಕ್ಷಿಣವ ಮಾಡಿ ಜಂಗಮಸ್ತೋತ್ರದಿಂದ ಶರಣು ಮಾಡಿ ಪೂಜೆಯನಿಳುಹಿ, ಪಾತ್ರೆಯಲ್ಲಿರುವ ಗುರುಪಾದೋದಕದಲ್ಲಿ ಬಿಂದುಯುಕ್ತವಾಗಿ ಮೂಲ ಪ್ರಣಮವ ಲಿಖಿಸಿ ಬಲದಂಗುಷ*ದಲ್ಲಿ ನೀಡುವಾಗ ಷಡಕ್ಷರಿಮಂತ್ರವ ಆರು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ಅನಾದಿಗುರುವೆಂದು ಭಾವಿಸುವುದು. ಎಡದಂಗುಷ*ದ ಮೇಲೆ ನೀಡುವಾಗ ಪಂಚಾಕ್ಷರವ ಐದು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ಅನಾದಿಲಿಂಗವೆಂದು ಭಾವಿಸುವುದು. ಎರಡಂಗುಷ*ದ ಮಧ್ಯದಲ್ಲಿ ನೀಡುವಾಗ ಒಂಬತ್ತಕ್ಷರವ ಒಂದು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ತ್ರಿಕೂಟಸಂಗಮ ಅನಾದಿಜಂಗಮವೆಂದು ಭಾವಿಸುವುದು. ಈ ಪ್ರಕಾರದಲ್ಲಿ ನೀಡಿದ ಮೇಲೆ ದ್ರವವನಾರಿಸಿ, ಭಸ್ಮಧಾರಣವ ಮಾಡಿ, ಒಂದೆ ಪುಷ್ಪವ ಧರಿಸಿ, ನಿರಂಜನ ಪೂಜೆಯಿಂದ ಪ್ರದಕ್ಷಣವ ಮಾಡಿ, ನಮಸ್ಕರಿಸಿ, ಆ ತೀರ್ಥದ ಬಟ್ಟಲೆತ್ತಿ ಆ ಜಂಗಮಲಿಂಗಕ್ಕೆ ಶರಣಾರ್ಥಿಯೆಂದು ಅಭಿವಂದಿಸಿ. ಅವರು ಸಲಿಸಿದ ಮೇಲೆ ತಾನು ಗರ್ದುಗೆಯ ಬಿಟ್ಟೆದ್ದು, ಪರಾತ್ಪರ ಬ್ರಹ್ಮಸ್ವರೂಪ ಜಂಗಮ ತೀರ್ಥದ ಸ್ತೋತ್ರವ ಮಾಡಿ, ಅಷ್ಟಾಂಗ ಹೊಂದಿ ಶರಣುಹೊಕ್ಕು, ನಿಮ್ಮ ಪ್ರಸಾದೋದಕಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿ ! ಎಂದು ಬೇಡಿಕೊಂಡು ಬಂದು ಮೊದಲ ಹಾಂಗೆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು ಆ ಜಂಗಮ ಮೂರ್ತಿಗಳು ಸಲಿಸಿದೋಪಾದಿಯಲ್ಲಿ ತಾನು ಸಲಿಸುವುದು. ಆಮೇಲೆ ಷಟ್ಸ್ಥಲಭಕ್ತ ಮಹೇಶ್ವರರು ಅದೇ ರೀತಿಯಲ್ಲಿ ಸಲಿಸುವುದು. ಉಳಿದ ಷಟ್ಸ್ಥಲಮಾರ್ಗವರಿಯದ ಲಿಂಗಧಾರಕಶಿಶುವಾಗಿಲಿ, ಶಕ್ತಿಯಾಗಲಿ, ದೊಡ್ಡವರಾಗಲಿ ಆ ಗರ್ದುಗೆಯ ತೆಗೆದು ಲಿಂಗಕ್ಕೆ ಅರ್ಪಿಸಿಕೊಳ್ಳಬೇಕಲ್ಲದೆ ಬಟ್ಟಲೆತ್ತಲಾಗದು. ಅದೇನು ಕಾರಣವೆಂದಡೆ, ಅವರಿಗೆ ಇಪ್ಪತ್ತೊಂದು ದೀಕ್ಷೆ, ಷಟ್ಸ್ಥಲಮಾರ್ಗ, ಸರ್ವಾಚಾರ ಸಂಪತ್ತಿನಾಚರಣೆ ಮುಂದಿದ್ದರಿಂದ ಅವರು ಬಟ್ಟಲೆತ್ತಲಾಗದು. ಹೀಂಗೆ ಸಮಸ್ತರು ಸಲಿಸಿದ ಮೇಲೆ ಕೊಟ್ಟು_ಕೊಂಡ, ಭಕ್ತ_ಜಂಗಮವು ಇರ್ವರು ಕೂಡಿ ಮುಕ್ತಾಯವ ಮಾಡಿದಲ್ಲಿಗೆ ದಶವಿಧ ಪಾದೋದಕವಾಗುವುದು. ಆ ಮೇಲೆ ಗುರುಪಾದೋದಕದಿಂದ ಪಾಕವ ಮಾಡಿದ ಭಾಂಡಭಾಜನಂಗಳು ತಾಂಬೂಲ ಪದಾರ್ಥ ಮುಂತಾಗಿ ಇರ್ವರು ಕೂಡಿ ಮೌನಮಂತ್ರ ಧ್ಯಾನದಿಂದ ಹಸ್ತಸ್ಪರ್ಶನವ ಮಾಡಿ. ಶುದ್ಧ ಪ್ರಸಾದವೆಂದು ಭಾವಿಸಿ, ಬಹುಸುಯಿದಾನದಿಂದ ಸಮಸ್ತ ಜಂಗಮಭಕ್ತ ಮಹೇಶ್ವರ ಶರಣಗಣಾರಾಧ್ಯರಿಗೆ ಎಡೆಮಾಡಿ, ಅಷ್ಟಾಂಗ ಹೊಂದಿ, ಎಡಬಲ ಗಣತಿಂಥಿಣಿಯ ನೋಡಿ, ನಿರೀಕ್ಷಿಸಿ, ಶರಣಾರ್ಥಿ ! ಸ್ವಾಮಿ ! ಮಹಾಲಿಂಗಾರ್ಪಿತವ ಮಾಡಬೇಕೆಂದು ಅಭಿವಂದಿಸಿ, ಪತಿವ್ರತತ್ವದಿಂದ ಜಂಗಮಕ್ಕೆ ನಿರ್ವಂಚಕನಾಗಿ, ಭಕ್ತ_ಜಂಗಮವೆಂಬ ಉಭಯನಾಮವಳಿದು ಕ್ಷೀರ ಕ್ಷೀರ ಬೆರೆತಂತೆ ನಿರಾಕಾರ_ ನಿಶ್ಯಬ್ಧಲೀಲೆ ಪರಿಯಂತರವು ಶ್ರೀಗುರುಲಿಂಗಜಂಗಮಪಾದೋದಕಪ್ರಸಾದವ ಸಪ್ತವಿಧಭಕ್ತಿಯಿಂದ ಸಾವಧಾನಿಯಾಗಿ ಆಚರಿಸುವಾತನೆ ಜಂಗಮಭಕ್ತನಾದ ಅಚ್ಚಪ್ರಸಾದಿಯೆಂಬೆ ಕಾಣಾ ! ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಮೈಗೆ ಕಾಹ ಹೇಳುವರಲ್ಲದೆ, ಮನಕ್ಕೆ ಕಾಹ ಹೇಳುವರೆ ಅಣಕದ ಮಿಂಡನ ಹೊಸ ಪರಿಯ ನೋಡಾ ! ಕೂಡಲಸಂಗಮದೇವನೆನ್ನ ಮನವ ನಂಬದೆ ತನ್ನಲ್ಲಿದ್ದ ಲೇಸ ಕಾಹ ಹೇಳಿದನು.
--------------
ಬಸವಣ್ಣ
ಮಹಾಮಲೆಯಲ್ಲಿ ಕೊಲುವ ವ್ಯಾಘ್ರನ ನಾಲಗೆಯ ತುದಿಯಲ್ಲಿ, ಒಂದು ಮೊಲ ಹುಟ್ಟಿತ್ತು. ಆ ಮೊಲಕ್ಕೆ ಮೂರು ಕಾಲು, ತಲೆಯಾರು, ಬಾಯಿ ಐದು. ಒಂದು ಬಾಯಿ ಎಲ್ಲಿ ಅಡಗಿತ್ತೆಂದರಿಯೆ. ಆರು ತಲೆಗೆ ಒಂದು ಕಣ್ಣು, ಅರೆ ನಾಲಗೆ, ಕಿತ್ತಿ ಹತ್ತಾಗಿ ಹರಿದಾಡುತ್ತದೆ. ಎಸುವರ ಕಾಣೆ, ಬಲೆಗೊಳಗಾಗದು. ಆ ಶವಕವ ಹೊಸ ಕೋಳಿ ನುಂಗಿತ್ತು, ನುಂಗಿದ ಕೋಳಿಯ ಶರಣ ನುಂಗಿದ. ಆ ಶರಣಸನ್ಮತವಾಗಿ ಪ್ರಣವ ನುಂಗಿತ್ತು. ಆ ನುಂಗಿದ ಪ್ರಣವವ ಅದರಂಗವನರಿದಡೆ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->